ದೈನಂದಿನ ಬದುಕಿಗೆ ಭಗವದ್ಗೀತೆಯ ಸೂತ್ರಗಳು

ಭಗವದ್ಗೀತೆಯು ಲೌಕಿಕ – ಪರಮಾರ್ಥಗಳೆರಕ್ಕೂ ಸಲ್ಲುವ ಧಾರ್ಮಿಕ ಸಾಹಿತ್ಯವಾಗಿದೆ. ಯಾವುದೇ ರಚನೆ – ಬೋಧನೆ – ನಿರ್ಣಯಗಳು ಎಷ್ಟೇ ಸಾರ್ವಕಾಲಿಕವಾಗಿದ್ದರೂ ಆಯಾ ಕಾಲದ ಅಗತ್ಯವನ್ನೂ ಚಿಂತನೆಯನ್ನೂ ಹೊತ್ತುಕೊಂಡಿರುತ್ತದೆ. ಭಗವದ್ಗೀತೆಯ ಜ್ಞಾನಸಾಗರದಲ್ಲಿ ಮುತ್ತುಗಳನ್ನು ಆಯ್ದುಕೊಳ್ಳುವ ಸಹನೆ ಮತ್ತು ಶ್ರದ್ಧೆ ನಮ್ಮದಾಗಿರಬೇಕಷ್ಟೆ : ಆನಂದಪೂರ್ಣ

ಧುನಿಕ ಧಾವಂತದ ಬದುಕಿನಲ್ಲಿ ಮಾನವನ ಮುಖ್ಯ ಸಮಸ್ಯೆ ಎಂದರೆ ನಿರ್ವಹಣೆಯದ್ದು. ನಾವು ಇಂದು ಯಾವುದನ್ನೂ ಸರಿಯಾಗಿ, ಸಮರ್ಥವಾಗಿ ನಿರ್ವಹಿಸಲಾಗದ ಅಶಕ್ತ ಸ್ಥಿತಿಯಲ್ಲಿದ್ದೇವೆ. ನಾವು ನಮ್ಮ ಆರ್ಥಿಕತೆಯನ್ನು ನಿರ್ವಹಿಸಲಾರೆವು. ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲಾರೆವು. ಸಂಬಂಧಗಳಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲಾರೆವು. ಸಮಯ ನಿರ್ವಹಣೆಯಂತೂ ನಮ್ಮ ಕೈಮೀರಿದ ಸಂಗತಿ. ಎಲ್ಲ ಬಿಡಿ, ನಮ್ಮ ಕೋಪವನ್ನು ಕೂಡ ನಾವು ನಿರ್ವಹಿಸಿಕೊಳ್ಳಲಾರೆವು.
ಇವುಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಭಗವದ್ಗೀತೆಯನ್ನು ಅಭ್ಯಾಸ ಮಾಡಿದರೆ, ನಮಗೆ ಈ ಎಲ್ಲವನ್ನೂ ನಿರ್ವಹಿಸುವ ಸಮಗ್ರ ಸೂತ್ರವೊಂದು ದೊರಕುತ್ತದೆ. ವಸ್ತುತಃ ಕೃಷ್ಣನು ಅರ್ಜುನನಿಗೆ ಇದನ್ನು ಹೇಳುತ್ತಿರುವಂತೆ ಕಂಡರೂ ಪ್ರತಿಯೊಬ್ಬರೂ ಇದನ್ನು ತಮ್ಮ ತಮ್ಮ ಸದ್ಯದ ಸಮಸ್ಯೆಗೆ ಪರಿಹಾರವಾಗಿ ಆಲಿಸಬಹುದಾಗಿದೆ.
ದೈನಂದಿನ ಬದುಕನ್ನು ಸುಂದರವಾಗಿಸಿಕೊಳ್ಳಲು ಅಗತ್ಯವಿರುವ ಸಂಪನ್ಮೂಲ ನಿರ್ವಹಣೆ, ಆದ್ಯತೆಗಳು, ನೀತಿ ನಿಯಮಾವಳಿಗಳು ಹಾಗೂ ಅವುಗಳನ್ನು ಜಾರಿಗೊಳಿಸುವುದು – ಈ ಎಲ್ಲವಕ್ಕೂ ಭಗವದ್ಗೀತೆ ಮಾರ್ಗದರ್ಶನ ನೀಡುತ್ತದೆ.

ತಮ್ಮ ದೌರ್ಬಲ್ಯವನ್ನು ಸಂಪೂರ್ಣವಾಗಿ ಮರೆತು ದಿಟ್ಟ ಪ್ರಯತ್ನ ಮಾಡಲು ಮುಂದಾದವರು ಮಾತ್ರ ಗೆಲ್ಲುತ್ತಾರೆ. ಕೃಷ್ಣನು ಅರ್ಜುನನಿಗೆ ಗೀತೆಯನ್ನು ಬೋಧಿಸುವುದು ಈ ಅಂಶವನ್ನು ಮನದಟ್ಟು ಮಾಡಲೆಂದೇ. ನಿರ್ವಹಣಾ ಕೌಶಲ್ಯವಿದ್ದವರಲ್ಲಿ ಮಾತ್ರ ಆಲೋಚನೆ ಹಾಗೂ ಕಾರ್ಯಾಚರಣೆಗಳ ನಡುವೆ ಉತ್ತಮ ಸೌಹಾರ್ದ ಮೂಡಿಸಿಕೊಳ್ಳಲು, ಹಾಗೂ ಈ ಮೂಲಕ ಸಾಧನೆಯ ಗುರಿ ತಲುಪಲು ಸಾಧ್ಯವಾಗುತ್ತದೆ. ಯೋಜನೆ, ಕಾರ್ಯಾಚರಣೆ, ಉತ್ಪತ್ತಿ ಹಾಗೂ ಮಾರುಕಟ್ಟೆ – ಈ ಪ್ರಕ್ರಿಯೆಯಲ್ಲಿ ಗೀತೆಯ ಬೋಧನೆಗಳನ್ನು ಮಾರ್ಗದರ್ಶಿಯಾಗಿ ಬಳಸಿಕೊಳ್ಳಬಹುದು. 

ಗೀತಾಚಾರ್ಯನು ವೀರಯೋಧನಿಗೆ “ಹೇಡಿಯ ಹಾಗೆ ಕೂರಬೇಡ, ಎದ್ದು ಯುದ್ಧ ಮಾಡು” ಎಂದು ಹೇಳುವ ಸಂದರ್ಭದಲ್ಲಿ ಪ್ರತಿಯೊಂದು ಅಂಶವೂ ಆತನಿಗೆ ಪ್ರತಿಕೂಲವಾಗಿಯೇ ಇರುತ್ತವೆ. ಆ ಎಲ್ಲ ಅನಾನುಕೂಲಗಳ ನಡುವೆಯೂ ಕರ್ತವ್ಯ ಪ್ರಜ್ಞೆ ತೋರುವಂತೆ ಕೃಷ್ಣನು ಅರ್ಜುನನನ್ನು ಪ್ರೇರೇಪಿಸುತ್ತಾನೆ.
“ಮಾ ಶುಚಃ” – ಶೋಕಿಸುತ್ತ ಕೂರಬೇಡ, ಸಮಯ ಪೋಲು ಮಾಡಬೇಡ.. ಇದು ಇವುಗಳಲ್ಲಿ ಮೊದಲ ಪ್ರಮುಖ ಅಂಶ. ನಾವು ಶೋಕಿಸುವುದರಲ್ಲಿ ಸಮಯ ಕಳೆದಷ್ಟೂ ಎದುರಾಳಿಯು ಬಲವಾಗುತ್ತ ಹೋಗುತ್ತಾನೆ. ಮಾನಸಿಕ ಸಿದ್ಧತೆಯೊಂದು ಸಮರ್ಪಕವಾಗಿ ಇದ್ದುಬಿಟ್ಟರೆ, ಭೌತಿಕ ಕೊರತೆಗಳನ್ನೂ ಮೀರಿ ಹೋರಾಡಬಹುದು ಎಂದು ಕೃಷ್ಣ ಹುರಿದುಂಬಿಸುತ್ತಾನೆ. ಯಾವುದಾದರೊಂದು ಕೆಲಸ ಕೈಗೊಳ್ಳಲು ನೂರೊಂದು ‘ಇಲ್ಲ’ಗಳಿಂದಲೇ ಶುರು ಮಾಡಿ ಅಂಜಾಣಿಸುತ್ತ ಸಾಗುವ ಇಂದಿನ ತಲೆಮಾರಿಗಂತೂ ಕೃಷ್ಣನ ಈ ಮಾತುಗಳು ಕತ್ತಲು ಹರಿವ ಮಿಂಚಿನಂತಿವೆ.

ಈ ನಿಟ್ಟಿನಲ್ಲಿ ನಾವು ಭಗವದ್ಗೀತೆಯಿಂದ ಗ್ರಹಿಸಬಹುದಾದ ಎರಡು ಸರಳ ಸೂತ್ರಗಳು ಹೀಗಿವೆ:  
• ಸರಿಯಾದ ಕ್ರಮ ಅನುಸರಿಸಿ ಕೆಲಸ ಮಾಡುವುದರಿಂದ ಸಾಮರ್ಥ್ಯ ಹೆಚ್ಚುತ್ತದೆ.
• ಕೆಲಸಗಳನ್ನು ಸರಿಯಾದ ಕ್ರಮದಲ್ಲಿ ಮಾಡುವುದೇ ಒಂದು ಸಾಮರ್ಥ್ಯ.
– ಇಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸುವುದರಿಂದ ನಮ್ಮ ಕಾರ್ಯಕ್ಷಮತೆ ಹೆಚ್ಚುತ್ತದೆ ಅನ್ನುವ ಸೂಚನೆ ನೀಡುತ್ತಲೇ; ಹಾಗೆ ಸರಿಯಾದ ಕ್ರಮಗಳನ್ನು ಅನುಸರಿಸುವುದು ಕೂಡಾ ಒಂದು ಸಾಮರ್ಥ್ಯವೇ ಆಗಿದೆ ಎಂದು ಗೀತೆ ಹೇಳುತ್ತದೆ.

ಸಮರ್ಥರಾದವರು ಮಾತ್ರವೇ ಸರಿ ತಪ್ಪುಗಳ ಅಂತರವನ್ನೂ ಗುರಿಯ ಸಾಧ್ಯಾಸಾಧ್ಯತೆಗಳನ್ನೂ ಗುರುತಿಸಬಲ್ಲರು ಎಂಬುದು ಗೀತೆಯ ಮಾತು. ಹಾಗೆಂದೇ ಗೀತಾಚಾರ್ಯನು ಮೊಟ್ಟಮೊದಲಿಗೆ ಅರ್ಜುನನಲ್ಲಿ ಆತನು ಸರಿಯಾದ್ದನ್ನೆ ಮಾಡಲಿದ್ದಾನೆ ಎಂಬ ಭರವಸೆ ತುಂಬುತ್ತಾನೆ. ರಣಾಂಗಣದಲ್ಲಿ ಬಂಧುಗಳೊಡನೆ ಹೋರಾಡುತ್ತಿರುವುದು (ಧರ್ಮಸ್ಥಾಪನೆಯ) ಉದ್ದೇಶ ಸಾಧನೆಗೆ ಅಗತ್ಯವಾಗಿದೆ. ಅವರೊಂದಿಗೆ ಯುದ್ಧಕ್ಕೆ ತೊಡಗಿರುವ ಕ್ರಮ ಸರಿಯಾಗಿಯೇ ಇದೆ. ಇದರಿಂದ ಸಂಕಲ್ಪವನ್ನು ಸಮರ್ಥವಾಗಿ ಈಡೇರಿಸಿಕೊಳ್ಳಬಹುದು ಎನ್ನುವುದು ಕೃಷ್ಣನ ಹಿತನುಡಿ.

ನಾವು ಯಾವುದೇ ಕೆಲಸವನ್ನು ಮಾಡಲು ಹೊರಟಾಗ ಅದರ ಅಗತ್ಯ, ಪ್ರಕ್ರಿಯೆ ಹಾಗೂ ಪರಿಣಾಮ – ಈ ಮೂರನ್ನೂ ಮೊದಲು ಅವಲೋಕಿಸಬೇಕು. ಮತ್ತು ಅದಕ್ಕೆ ತಕ್ಕಂತೆ ನಮ್ಮ ಇತರೆಲ್ಲ ಚಿಂತನೆಗಳನ್ನು ಬದಿಗೊತ್ತಿ ಕಾರ್ಯಸಾಧನೆಯನ್ನೆ ಮೊದಲ ಆದ್ಯತೆಯಾಗಿ ಕೈಗೆತ್ತಿಕೊಳ್ಳಬೇಕು ಅನ್ನುತ್ತದೆ ಗೀತೆ.

“ನಾನು ನನ್ನ ಕೆಲಸವನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲೆ?” ಬಹತೇಕರ ಮನಸ್ಸಿನಲ್ಲಿ ಈ ಒಂದು ಪ್ರಶ್ನೆ ಕಾಡುತ್ತಿರುತ್ತದೆ. ಇದಕ್ಕೆ ಭಗವದ್ಗೀತೆಯಿಂದ ಪಡೆಯಬಹುದಾದ ಉತ್ತರ – “ಎಲ್ಲಕ್ಕಿಂತ ಮೊದಲು ನಿನ್ನನ್ನು ನೀನು ನಿರ್ವಹಿಸಿಕೊಳ್ಳಲು ಪ್ರಯತ್ನಿಸು” ಎಂಬುದಾಗಿದೆ.

ಮನೋವಿಜ್ಞಾನಿ ಗೀತಾಚಾರ್ಯ
ಗೀತಾಚಾರ್ಯ ಕೃಷ್ಣನನ್ನು ಮನೋವಿಜ್ಞಾನಿ ಎಂದೂ ಧಾರಾಳವಾಗಿ ಕರೆಯಬಹುದು. ಈತ ಸಮರ ಸಮ್ಮುಖದಲ್ಲಿ ನಿಂತು, ಸಮಾಧಾನಚಿತ್ತನಾಗಿ ತನ್ನ ದೀರ್ಘ ಕಾಲದ ಗೆಳೆಯನ ಮನೋವ್ಯಥೆಯನ್ನು ಹೋಗಲಾಡಿಸುತ್ತಾನೆ. ಆ ಅವಧಿಯಲ್ಲಿ ಯಾವುದನ್ನು ಮಾಡಲೇಬೇಕಿತ್ತೋ ಆ ಕೆಲಸವನ್ನು ಮಾಡುವಂತೆ ಆತನ ಮನಸ್ಸನ್ನು ಅಣಿಗೊಳಿಸುತ್ತಾನೆ. ನನ್ನಿಂದ ಇದು ಸಾಧ್ಯವಿಲ್ಲ ಅನ್ನುವ ಕೀಳರಿಮೆಯಿಂದಲೂ; ಎತ್ತಿ ಆಡಿಸಿದ ಅಜ್ಜ, ದೊಡ್ಡಪ್ಪ ಮೊದಲಾದವರೊಡನೆ ಹೋರಾಡಲು ಹೊರಟಿದ್ದೇನೆ ಅನ್ನುವ ತಪ್ಪಿತಸ್ಥ ಭಾವನೆಯಿಂದಲೂ ದುರ್ಬಲನಾಗುವ ಅರ್ಜುನನಿಗೆ ಆತನ ನಿಜ ಸಾಮರ್ಥ್ಯವನ್ನು ತೋರಿಸಿಕೊಡುತ್ತಾನೆ ಕೃಷ್ಣ. 
ಇಲ್ಲಿ ಆತ ಮಾಡುವುದು ಅಪ್ಪಟ ಕೌನ್ಸೆಲಿಂಗ್. ಈ ನಿಟ್ಟಿನಲ್ಲಿ ಗೀತೆ ಒಂದು ಆಪ್ತಸಲಹೆ ಸೆಷನ್ನಿನ ಸಂಭಾಷಣೆ. ಕೃಷ್ಣ ಹಂತಹಂತವಾಗಿ ಅರ್ಜುನನ ಸಮಸ್ಯೆಯನ್ನು ತಿಳಿಯಾಗಿಸುತ್ತಾ ಅವನಲ್ಲಿ ಆತ್ಮವಿಶ್ವಾಸ ತುಂಬುತ್ತಾನೆ. ಮುಖ್ಯವಾಗಿ ತಪ್ಪಿತಸ್ಥ ಭಾವನೆಯನ್ನು ಹೋಗಲಾಡಿಸುತ್ತಾನೆ. ಎಲ್ಲ ಹೇಳಿಯಾದ ಮೇಲೆ ತನ್ನ ಕೌನ್ಸೆಲಿಂಗ್ ಆತನ ಮೇಲೆ ಪ್ರಭಾವ ಬೀರಿದೆಯೋ ಇಲ್ಲವೋ ಪರೀಕ್ಷಿಸಲು, “ಇಷ್ಟೆಲ್ಲ ಹೇಳಿದ್ದೇನೆ. ನೀನು ನಿನಗೆ ಯಾವುದು ಸರಿಯೆಂದು ತೋಚುತ್ತದೆಯೋ ಅದನ್ನು ಮಾಡು” ಎನ್ನುತ್ತಾನೆ! 
ಕೊನೆಯಲ್ಲಿ ಅರ್ಜುನ ಗಾಂಡೀವ ಮೇಲೆತ್ತಿ ಯುದ್ಧ ಸನ್ನದ್ಧನಾಗುವ ಮೂಲಕ ಕೃಷ್ಣನ ಆಪ್ತಸಲಹೆಗಳು ಪ್ರಭಾವ ಬೀರಿದ್ದನ್ನು ಖಾತ್ರಿ ಪಡಿಸುತ್ತಾನೆ.

ಅರ್ಜುನ ವಿಷಾದ ಯೋಗದಲ್ಲಿ ಅಸ್ವಸ್ಥನ ತೊಳಲಾಟಗಳ ವಿವರವಿದೆ. ಇಲ್ಲಿ ಅರ್ಜುನ ತನ್ನ ದೃಷ್ಟಿಯಿಂದ ಸಂದರ್ಭವನ್ನು ಅವಲೋಕಿಸಿ ಅದನ್ನೊಂದು ಸಮಸ್ಯೆ ಎಂಬಂತೆ ನೋಡುತ್ತಾನೆ. ಆದರೆ ಸಮಸ್ಯೆ ಇರುವುದು ಸಂದರ್ಭದಲ್ಲಿ ಅಲ್ಲ, ನಿನ್ನ ಗ್ರಹಿಕೆಯಲ್ಲಿ ಎಂದು ಮನದಟ್ಟು ಮಾಡುವ ಮೂಲಕ ಅರ್ಜುನನನ್ನು ಸಮಸ್ಯೆಯ ಊಹೆಯಿಂದ ಬಿಡಿಸುತ್ತಾನೆ ಕೃಷ್ಣ. ಗೊಂದಲಕ್ಕೆ ಸಿಲುಕಿ ವಿಷಾದ ಪಡುವ ಅರ್ಜುನನಿಗೆ ಸರಿಯಾದ ಆಯ್ಕೆಯನ್ನು ತೋರಿಸಿಕೊಡುತ್ತಾನೆ. ಇದು ಸೈಕಾಲಜಿಸ್ಟರ ಕೆಲಸ ಅಲ್ಲವೆ?

ಒಬ್ಬ ಸೈಕೋಥೆರಪಿ ವಿದ್ಯಾರ್ಥಿಗೆ ಈ ಕೃಷ್ಣಾರ್ಜುನ ಸಂವಾದ ಒಂದು ಅತ್ಯುಪಯುಕ್ತ ಕೇಸ್ ಸ್ಟಡಿಯಾಗಬಲ್ಲದು. ಮಾನಸಿಕ ಸ್ವಾಸ್ಥ್ಯ ಕದಡಿದ ವ್ಯಕ್ತಿಯ ಹಿನ್ನೆಲೆ, ಸಂದರ್ಭದ ಹಿನ್ನೆಲೆ ಮೊದಲಾದವುಗಳನ್ನು ಗುರುತಿಸಿ, ಅವನು ವಿಶ್ಲೇಷಿಸಿ, ಗುರುವಿನಂತೆ, ಗೆಳೆಯನಂತೆ, ಸರ್ವಶಕ್ತನಂತೆ – ಹೀಗೆ ನಾನಾ ವಿಧಾನಗಳಿಂದ ಆತನಲ್ಲಿ ಸ್ಥೈರ್ಯ ತುಂಬುವ ಪ್ರಕ್ರಿಯೆ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ನಮ್ಮ ಎಲ್ಲ ಪ್ರಶ್ನೆಗಳಿಗೂ ಭಗವದ್ಗೀತೆಯಲ್ಲಿ ಉತ್ತರವಿದೆ ಎಂದಲ್ಲ. ಅದು ನಮ್ಮ ದೈನಂದಿನ ಬದುಕಿನ ಚಿಕ್ಕಪುಟ್ಟ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಹೇಳಲ್ಪಟ್ಟಿರುವುದಲ್ಲ. ಆದರೆ, ಖಂಡಿತವಾಗಿಯೂ ನಮ್ಮ ದೈನಂದಿನ ಸಮಸ್ಯೆಗಳಿಗೆ, ನಿರ್ವಹಣೆಗೆ ಭಗವದ್ಗೀತೆಯಿಂದ ಉತ್ತರವನ್ನೂ ಮಾರ್ಗದರ್ಶನವನ್ನೂ ಪಡೆದುಕೊಳ್ಳಬಹುದು. 

Leave a Reply