ಬಾಲಕ ನಚಿಕೇತ ಯಮನಿಗೆ ಕೇಳಿದ ಪ್ರಶ್ನೆಗಳೇನು ಗೊತ್ತೆ?

ಅತಿಥಿಯಾದ ನಚಿಕೇತನನ್ನು ಮೂರು ದಿನ ಕಾಯಿಸಿದುದಕ್ಕಾಗಿ ಯಮ ಕ್ಷಮೆ ಬೇಡಿದ. ಪ್ರಾಯಶ್ಚಿತ್ತಕ್ಕಾಗಿ ಮೂರು ವರ ನೀಡುವೆ, ಬೇಕಾದ್ದನ್ನು ಕೇಳು ಎಂದ. ಅದಕ್ಕೆ ಪ್ರತಿಯಾಗಿ ನಚಿಕೇತ ಯಮಧರ್ಮನಲ್ಲಿ ಆತ್ಮವಿದ್ಯೆಯನ್ನು ಬೇಡಿದ. ಈ ಸಂದರ್ಭದಲ್ಲಿ ಯಮ – ನಚಿಕೇತರ ನಡುವೆ ನಡೆದ ಸಂವಾದ ಕಠೋಫನಿಷತ್ತಿನಲ್ಲಿ ಬರುತ್ತದೆ.

ವಾಜಶ್ರವಸ ಒಬ್ಬ ಸಂಪ್ರದಾಯನಿಷ್ಠನೂ ಕರ್ಮಠನೂ ಆಗಿದ್ದ ಋಷಿ.  ಗುರುಕುಲ ನಡೆಸುತ್ತಿದ್ದ ವೇದ ಪಂಡಿತ. ಆತನ ಮಗ ನಚಿಕೇತ ಅಧ್ಯಯನಶೀಲನೂ ವಿನಯ ಸಂಪನ್ನನೂ ಆಗಿದ್ದ.

ವಾಜಶ್ರವಸ ಒಮ್ಮೆ ವಿಶ್ವಜಿತ್ ಯಾಗ ನಡೆಸಿದ. ಯಾಗದ ನಂತರ ಶಾಸ್ತ್ರ ಹೇಳುವಂತೆ ಎಲ್ಲವನ್ನೂ ದಾನ ಕೊಟ್ಟು ಕೆಲ ಮುದಿಹಸುಗಳಷ್ಟೇ ಉಳಿದಿದ್ದವು. ಅವನ್ನೂ ದಾನ ಮಾಡತೊಡಗಿದ. ಆದರೆ ಬಾಲಕ ನಚಿಕೇತನಿಗೆ ಇದು ಸಹಿಸಲಾಗಲಿಲ್ಲ. ತಮ್ಮಲ್ಲಿದ್ದ ಒಳ್ಳೆಯದನ್ನಷ್ಟೇ ದಾನವಾಗಿ ಕೊಡಬೇಕೆಂಬುದು ಆತನ ತಿಳಿವು. ಆದರೆ ತಂದೆ ಮುದಿಹಸುಗಳನ್ನು ದಾನ ಕೊಡುತ್ತಿದ್ದಾನಲ್ಲ ಎಂಬ ಕಸಿವಿಸಿ. 

ತಂದೆಗೆ ಇದನ್ನು ತಿಳಿಹೇಳಲು ನಚಿಕೇತ ಬಹಳ ಪ್ರಯತ್ನಿಸಿದ. ಆದರೆ ಮಗನ ಮಾತನ್ನು ಅವನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. “ನಮ್ಮಲ್ಲಿರುವುದೆಲ್ಲವನ್ನೂ ದಾನ ಕೊಡಬೇಕು. ನೀನು ಸುಮ್ಮನಿರು” ಎಂದು ಗದರಿ ಸುಮ್ಮನಾಗಿಸಿದ. ಇದರಿಂದ ಬೇಸತ್ತ ನಚಿಕೇತ  ‘ನನ್ನನ್ನು ಯಾರಿಗೆ ದಾನ ಕೊಡುತ್ತೀಯೆ?’ ಎಂದು ಪದೇ ಪದೇ ಕೇಳುತ್ತಾ ಕಾಡತೊಡಗಿದ. ಇದರಿಂದ ಕಿರಿಕಿರಿಗೊಂಡು  ಸಿಟ್ಟುಗೊಂಡ ವಾಜಶ್ರವಸ, ‘ಯಮನಿಗೆ’ ಎಂದುಬಿಟ್ಟ! ತನ್ನ ತಂದೆಯ ಮಾತು ಹುಸಿ ಆಗಬಾರದೆಂದು ನಚಿಕೇತ “ಹಾಗಾದರೆ  ನನ್ನನ್ನು ವಿಧ್ಯುಕ್ತವಾಗಿ ಯಮನಿಗೆ ದಾನ ನೀಡು” ಎಂದು ಪಟ್ಟುಹಿಡಿದ. ಹೀಗೆ ನಚಿಕೇತ ಯಮಲೋಕಕ್ಕೆ ಹೊರಟಾಗಲೇ ವಾಜಶ್ರವಸನಿಗೆ ತನ್ನ ತಪ್ಪಿನ ಅರಿವಾಗಿದ್ದು. ಆದರೇನು? ಕೊಟ್ಟ ಮಾತು ಹಿಂಪಡೆಯುವಂತಿಲ್ಲ. ಒಲ್ಲದ ಮನಸ್ಸಿನಿಂದ ಮಗನನ್ನು ಬೀಳ್ಕೊಟ್ಟ.

ಬಾಲಕ ನಚಿಕೇತ ಯಮಲೋಕ ತಲುಪಿದಾಗ ಯಮ ಧರ್ಮ ಅರಮನೆಯಲ್ಲಿ ಇರಲಿಲ್ಲ. ಮೂರು ದಿನ ಕಳೆಯಿತು. ನಚಿಕೇತ ಹೊಸ್ತಿಲಲ್ಲೇ ಕುಳಿತು ಕಾಯುತ್ತಿದ್ದ. ನಾಲ್ಕನೇ ದಿನ ಯಮ ಬಂದ. ಹೊಸ್ತಿಲ ಮೇಲೆ ತೇಜಸ್ವಿ ಬಾಲಕ ಕುಳಿತಿರುವುದನ್ನು ಕಂಡು ಬೆರಗಾದ. ಅತಿಥಿಯಾಗಿ ಬಂದ ನಚಿಕೇತನನ್ನು ತಾನು ಮೂರು ದಿನ ಕಾಯಿಸಿದುದಕ್ಕಾಗಿ ಕ್ಷಮೆ ಬೇಡಿದ. ಪ್ರಾಯಶ್ಚಿತ್ತಕ್ಕಾಗಿ ಮೂರು ವರ ನೀಡುವೆ, ಬೇಕಾದ್ದನ್ನು ಕೇಳು ಎಂದ. ಅದಕ್ಕೆ ಪ್ರತಿಯಾಗಿ ನಚಿಕೇತ ಯಮಧರ್ಮನಲ್ಲಿ ಆತ್ಮವಿದ್ಯೆಯನ್ನು ಬೇಡಿದ. ಈ ಸಂದರ್ಭದಲ್ಲಿ ಯಮ – ನಚಿಕೇತರ ನಡುವೆ ನಡೆದ ಸಂವಾದ ಕಠೋಫನಿಷತ್ತಿನಲ್ಲಿ ಬರುತ್ತದೆ. ಇದು ಕೃಷ್ಣಯಜುರ್ವೇದದ ಕಠ ಶಾಖೆಗೆ ಸೇರಿದೆ. ಸಾಕ್ಷಾತ್ ಯಮನಿಂದಲೇ ಅಧ್ಯಾತ್ಮ ದೀಕ್ಷೆ ಪಡೆದ ನಚಿಕೇತನ ಈ ಕಥೆ ತೈತ್ತಿರೀಯ ಬ್ರಾಹ್ಮಣ, ಮಹಾಭಾರತದ ಅನುಶಾಸನ ಪರ್ವ (109) ಸಭಾಪರ್ವ (4)ದಲ್ಲೂ ಉಲ್ಲೇಖಗೊಂಡಿದೆ.

ಯಮ – ನಚಿಕೇತರ ಸಂವಾದ

Yamaraja and Brahman child sketch RTP 2

ನಚಿಕೇತ – ಯಾವ ವಿಧದ ಶರೀರದಿಂದ ಬ್ರಹ್ಮಜ್ಞಾನವನ್ನು ಪಡೆಯಬಹುದು ?
ಯಮಧರ್ಮ – ಮನುಷ್ಯಶರೀರವೆಂಬುದು ಒಂದು ನಗರ. ಆ ನಗರದ ಮಧ್ಯಭಾಗವೇ ಹೃದಯ. ಆ ಹೃದಯದಲ್ಲಿ ವಾಸಿಸುವವನೇ ಬ್ರಹ್ಮ.ಈ ರಹಸ್ಯವನ್ನು ಅರಿತು ಮನುಷ್ಯರು ಯಾವಾಗಲೂ ಭಗವಂತನ ಧ್ಯಾನ ಹಾಗೂ ಚಿಂತನೆಯನ್ನು ಮಾಡುತ್ತಿರಬೇಕು. ಅಂತಹ ಮನುಷ್ಯರು ಯಾವಾಗಲೂ ದುಃಖಿಗಳಾಗಿರಲು ಸಾಧ್ಯವಿಲ್ಲ. ಸದಾ ಪರಮಾತ್ಮನನ್ನೇ ಭಜಿಸುವ ಜನರು ದೇಹಾವಸಾನದ ನಂತರ ಜನ್ಮ-ಮೃತ್ಯು ಬಂಧನಗಳಿಂದ ದೂರವಾಗುತ್ತಾರೆ.

ನಚಿಕೇತ – ಆತ್ಮ ಸಾಯುತ್ತದೆಯೇ ಅಥವಾ ಸಾಯಿಸುತ್ತದೆಯೇ ?
ಯಮಧರ್ಮ – ಯಾರು ಆತ್ಮವನ್ನು ಸಾಯುತ್ತದೆ ಅಥವಾ ಸಾಯಿಸುತ್ತದೆಯೆಂದು ತಿಳಿಯುತ್ತಾರೋ ಅಂತವರು ಆತ್ಮಜ್ಞಾನಿಗಳಾಗಲು ಸಾಧ್ಯವಿಲ್ಲ. ಅವರು ಪರಮಮೂರ್ಖರು. ಆತ್ಮಕ್ಕೆಸಾವಿಲ್ಲ, ಯಾರನ್ನೂ ಸಾಯಿಸುವುದೂ ಇಲ್ಲ.

ನಚಿಕೇತ – ಹೃದಯದಲ್ಲಿರುವ ಪರಮಾತ್ಮನನ್ನು ಅರಿಯುವುದು ಹೇಗೆ ?
ಯಮಧರ್ಮ – ಮನುಷ್ಯನ ಹೃದಯವೇ ಬ್ರಹ್ಮಸ್ಥಾನ.ಬ್ರಹ್ಮನನ್ನು ಅರಿಯುವ ವಿಶೇಷವಾದ ಅಧಿಕಾರವಿದ್ದರೆ ಅದು ಮನುಷ್ಯನಿಗೆ ಮಾತ್ರ. ಆತ ಮನುಷ್ಯನ ಹೃದಯದಲ್ಲಿ ಅಂಗುಷ್ಟದ ಗಾತ್ರದಲ್ಲಿ ವಾಸಿಸುತ್ತಾನೆ. ತನ್ನ ಹೃದಯದಲ್ಲಿಯೇ ಪರಮಾತ್ಮನಿರುವುದನ್ನು ಜ್ಞಾನದಿಂದ ಅರಿಯಬೇಕು. ಹಾಗೇ ಇನ್ನೊಬ್ಬರ ಹೃದಯದಲ್ಲೂ ಭಗವಂತನಿದ್ದಾನೆಂಬ ಅರಿವು ಹೊಂದಿರಬೇಕು. ಆಗ ಮಾತ್ರ ಮನುಷ್ಯ ದ್ವೇಷ ಅಸೂಯೆ ರಾಗ ಕಾಮ ಕ್ರೋಧ ಲೋಭ ಮೋಹವೇ ಮೊದಲಾದ ದುರ್ಗುಣಗಳಿಂದ ಮುಕ್ತನಾಗಲು ಸಾಧ್ಯ.

ನಚಿಕೇತ – ಆತ್ಮದ ಸ್ವರೂಪವೇನು ?
ಯಮಧರ್ಮ – ಶರೀರ ನಾಶವಾದರೂ ಆತ್ಮಕ್ಕೆ ನಾಶವಿಲ್ಲ. ಭೋಗವಿಲಾಸಗಳನ್ನು ಬಯಸುವ, ಅನಿತ್ಯವಾಗಿರುವ, ನಾಶವಾಗುವ ಈ ಜಡಶರೀರದೊಂದಿಗೆ ಆತ್ಮಕ್ಕೆ ಯಾವುದೇ ಸಂಬಂಧವಿಲ್ಲ. ಆತ್ಮವು ಅನಂತ, ಅನಾದಿ ಹಾಗೂ ನಿರಾಕಾರ. ಅದಕ್ಕೆ ಯಾವ ಗುಣದೋಷಗಳೂ ಇಲ್ಲ;  ಕಾರ್ಯ ಕಾರಣಗಳಾಗಲೀ ಜನನ ಮರಣಗಳಾಗಲೀ ಇರುವುದಿಲ್ಲ.

ನಚಿಕೇತ –ಒಬ್ಬ ವ್ಯಕ್ತಿಗೆ ಆತ್ಮ –  ಪರಮಾತ್ಮದ ಜ್ಞಾನವೇ ಇಲ್ಲವೆಂದು ಇಟ್ಟುಕೊಳ್ಳೋಣ. ಅಂತವರ
ಗತಿ ಏನು? ಅವರು ಎಂತಹ ಫಲಗಳನ್ನು ಪಡೆಯುತ್ತಾರೆ ?
ಯಮಧರ್ಮ – ಮಳೆಯ ನೀರಿನ ರುಚಿ ಹಾಗೂ ರೂಪ ಒಂದೇ. ಆದರೆ ಭೂಮಿ ಅಥವಾ ಪರ್ವತದ ಮೇಲೆ ಬಿದ್ದಾಗ ನೀರಿನ ರುಚಿ ಹಾಗೂ ರೂಪ ವ್ಯತ್ಯಾಸವಾಗುತ್ತದೆ. ಹಾಗೇ ಮನುಷ್ಯನ ಉದ್ದೇಶ ಮೋಕ್ಷವೊಂದೇ. ಆದರೆ ವ್ಯಕ್ತಿಯ ಜ್ಞಾನದ ಪ್ರಕಾರ ಬದಲಾಗುತ್ತದೆ. ಕೆಲವರು ಆಸ್ತಿಕರಾಗುತ್ತಾರೆ, ಕೆಲವರು ನಾಸ್ತಿಕರಾಗುತ್ತಾರೆ. ಆತ್ಮಜ್ಞಾನವುಳ್ಳವರು ಮೋಕ್ಷವನ್ನು ಪಡೆದರೆ, ಅಜ್ಞಾನಿಗಳು ಜನ್ಮಮರಣ ಚಕ್ರದಲ್ಲಿ ನಿಲುಕಿ ಜನ್ಮಜನ್ಮಾಂತರದವರೆಗೂ ಯಾತನೆಯನ್ನು ಅನುಭವಿಸುತ್ತಲೇ ಇರುತ್ತಾರೆ.

ನಚಿಕೇತ – ಬ್ರಹ್ಮನ ಸ್ವರೂಪ ಹೇಗಿದೆ ? ಅವನು ಎಲ್ಲಿ ಪ್ರಕಟನಾಗುತ್ತಾನೆ ?
ಯಮಧರ್ಮ – ಪ್ರಾಕೃತಿಕ ಗುಣಗಳಿಂದ ಅನ್ಯನಾಗಿರುವವನೇ ಬ್ರಹ್ಮ. ಆತ ಸ್ವಯಂಪ್ರಕಟನಾಗುವ ಸಾಮರ್ಥ್ಯವುಳ್ಳವ. ಆತನ ಇನ್ನೊಂದು ಹೆಸರು ವಸು. ಆತ ಸದಾ ಸರ್ವತ್ರ ಚಲಿಸುತ್ತಲೇ ಇರುತ್ತಾನೆ. ಯಜ್ಞದ ಅಗ್ನಿಯ ರೂಪದಲ್ಲಿ, ಎಲ್ಲ ಮನುಷ್ಯರಲ್ಲಿ, ಶ್ರೇಷ್ಟ
ದೇವತೆಗಳಲ್ಲಿ, ಪಿತೃದೇವತೆಗಳಲ್ಲಿ, ಆಕಾಶದಲ್ಲಿ, ಸತ್ಯದಲ್ಲಿ, ಧರ್ಮ, ನ್ಯಾಯ – ನೀತಿಗಳಲ್ಲಿ, ನೀರಿನಲ್ಲಿ, ಶಂಖದಲ್ಲಿ, ಮರಗಿಡಗಳಲ್ಲಿ, ಬೀಜ-ಧಾನ್ಯಗಳಲ್ಲಿ, ಔಷಧಿಗಳಲ್ಲಿ, ಪರ್ವತದಲ್ಲಿ, ನದಿಗಳಲ್ಲಿ ಸರ್ವತ್ರ ವ್ಯಾಪಕನಾಗಿರುವವನೇ ಬ್ರಹ್ಮ. ಅಣುವಿನಲ್ಲಿ ಅಣು, ಮಹತ್ತಿನಲ್ಲಿ ಮಹತ್ತಾಗಿರುವವನೇ ಬ್ರಹ್ಮ.

ನಚಿಕೇತ – ಆತ್ಮ ನಿವೃತ್ತಿಯಾದ ನಂತರ ಶರೀರದಲ್ಲಿ ಏನಿರುತ್ತದೆ ?
ಯಮಧರ್ಮ – ಯಾವಾಗ ಶರೀರದಿಂದ ಆತ್ಮ ನಿವೃತ್ತಿಯಾಗುವುದೋ ಅದರ ಜೊತೆಗೆ ಪ್ರಾಣ ಹಾಗೂ ಇಂದ್ರಿಯಜ್ಞಾನಗಳು ಹೊರಟುಹೋಗುತ್ತವೆ. ಮೃತಶರೀರದಲ್ಲಿ ಯಾವ ಅಂಶವೂ ಇರುವುದಿಲ್ಲ. ಶರೀರ ಅಚೇತನಾವಸ್ಥೆಯನ್ನು ಹೊಂದುತ್ತದೆ

ನಚಿಕೇತ – ಮರಣದ ನಂತರ ಆತ್ಮಕ್ಕೆ ಯಾವ ಸ್ಥಾನ ಸಿಗುತ್ತದೆ ?
ಯಮಧರ್ಮ – ವ್ಯಕ್ತಿಯ ಕರ್ಮಾನುಸಾರ ಪಾಪ ಪುಣ್ಯಗಳ ನಿಶ್ಚಯವಾಗುತ್ತದೆ. ಅದರ ಆಧಾರವಾಗಿ ಆತ್ಮಕ್ಕೆ ಪುನಃ ಮನುಷ್ಯ ಅಥವಾ ಪಶುಗಳ ರೂಪ ಸಿಗುತ್ತದೆ. ಮರುಜನ್ಮ ನಿಶ್ಚಯವಾಗುತ್ತದೆ. ಯಾರು ಅತಿಹೆಚ್ಚು ಪಾಪಗಳನ್ನು ಮಾಡಿದ್ದಾರೋ ಅವರು ಹೀನಯೋನಿಗಳಲ್ಲಿ ಜನಿಸುತ್ತಾರೆ. ಪುಣ್ಯಕಾರ್ಯಗಳು ಅಧಿಕವಾಗಿದ್ದರೆ ಜನನ – ಮರಣ ಚಕ್ರದಿಂದ ಬಿಡುಗಡೆ ಸಿಗುತ್ತದೆ.

ನಚಿಕೇತ  ಪರಮಾತ್ಮನ ಸ್ವರೂಪವೇನು ?
ಯಮಧರ್ಮ – ಪರಬ್ರಹ್ಮನ ಸ್ವರೂಪ ಪ್ರಣವ – ಅಂದರೆ “ಓಂ”. ಇದು ಅವಿನಾಶಿ ಹಾಗೂ ಪರಮಾತ್ಮನ ಸ್ವರೂಪ. ಪರಮಾತ್ಮನನ್ನು ಅರಿಯಲು, ಸಾಕ್ಷಾತ್ಕರಿಸಿಕೊಳ್ಳಲು ಇರುವ ಅಂತಿಮಮಾರ್ಗವಿದು. ಸಕಲ ವೇದಗಳಲ್ಲೂ, ಮಂತ್ರಗಳಲ್ಲೂ ಈ ರಹಸ್ಯವನ್ನು ತಿಳಿಸಲಾಗಿದೆ. ಜಗತ್ತಿನಲ್ಲಿ ಪರಮಾತ್ಮನ ಸ್ವರೂಪವನ್ನು ತಿಳಿಯಲು ಪ್ರಣವವೇ ಉತ್ತಮ ಉಪಾಯವಾಗಿದೆ.

 

 

 

2 Comments

Leave a Reply