“ನಮ್ಮ ಬಳಿ ಅಗತ್ಯಕ್ಕಿಂತ ಜಾಸ್ತಿ ವಸ್ತು ಇದ್ದಾಗ ನಾವು ಅದನ್ನು ಬೇರೆಯವರಿಗೆ ಕೊಟ್ಟೇಕೊಡುತ್ತೇವೆ. ಇದು ಮನುಷ್ಯ ಗುಣ. ಹೀಗೆ ನಮ್ಮ ಬಳಿ ಪ್ರೀತಿ ಜಾಸ್ತಿಯಾದಾಗ ನಾವಾಗೆ ಬೇರೆಯವರಿಗೆ ಕೊಡುತ್ತೇವೆ. ನಾವು ಎಂದಿಗೂ ಪ್ರೀತಿಯನ್ನು ಕೊಡುವರಾಗಿರಬೇಕೇ ಹೊರತು ಪ್ರೀತಿಯನ್ನು ಬೇಡುವ ಭಿಕ್ಷುಕರಾಗಬಾರದು” ಅನ್ನುತ್ತಾರೆ ಓಶೋ ರಜನೀಶ್ | ದ ಬುಕ್ ಆಫ್ ಮ್ಯಾನ್ ; ಕನ್ನಡ ಸಾರಾಂಶ ~ ಪ್ರಣವ ಚೈತನ್ಯ
ಒಬ್ಬ ಮನುಷ್ಯ ತನ್ನನ್ನು ತಾನು ಪ್ರೀತಿಸಿಕೊಂಡರೆ ಮಾತ್ರ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸಲು ಸಾಧ್ಯ ಅನ್ನುತ್ತಾರೆ ಓಶೋ ರಜನೀಶ್. ಆದರೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು ಹೇಗೆ? ಕೆಲವರಿಗೆ ಇದನ್ನು ಅರ್ಥ ಮಾಡಿಕೊಳ್ಳುವುದೇ ಬಹಳ ಕಷ್ಟಕರವಾಗಿ ತೋರುತ್ತದೆ.
ಹುಟ್ಟುವ ಪ್ರತಿ ಮಗುವಿಗೂ ತನ್ನ ಮೇಲೆ ತನಗೆ ಬಹಳ ಪ್ರೀತಿ ಇರುತ್ತದೆ. ಆದರೆ ಆ ಮಗು ಬೆಳೆಯುತ್ತಾ ಹೋದಂತೆ ಜಾತಿ, ಧರ್ಮಗಳು ಆ ಪ್ರೀತಿಯನ್ನು ನಾಶಮಾಡುತ್ತದೆ. ಒಂದು ಮಗು ತನ್ನನ್ನೇ ತಾನು ಪ್ರೀತಿಸಿಕೊಳ್ಳತೊಡಗಿದರೆ ದೇವರನ್ನು ಯಾರು ಪ್ರೀತಿಸುವರು? ಆದ್ದರಿಂದ ಈ ಸಮಾಜ ಮಗುವಿಗೆ ದೇವರನ್ನು ಪೂಜಿಸುವುದು ಕಲಿಸುತ್ತದೆ ವಿನಹಃ ತನ್ನನ್ನು ತಾನು ಹೇಗೆ ಪ್ರೀತಿಸಿಕೊಳ್ಳಬೇಕು ಎಂದು ಕಲಿಸಿಕೊಡುವುದಿಲ್ಲ. ಇದರಿಂದ ಮಗುವಿಗೆ ತನ್ನ ಮೇಲಿನ ಪ್ರೀತಿ ತಾನಾಗೆ ಕಡಿಮೆಯಾಗುತ್ತ ಹೋಗುತ್ತದೆ.
ಯಾವಾಗ ಮನುಷ್ಯನು ತನ್ನನ್ನು ಬಿಟ್ಟು ಬೇರೆಯದನ್ನು ಪ್ರೀತಿಸಲು ಶುರು ಮಾಡುತ್ತಾನೋ ಆಗ ಅವನು ಮಾನಸಿಕ ಬಡವನಾಗ ತೊಡಗುತ್ತಾನೆ. ಉದಾಹರಣೆಗೆ, ಮಗು ಬೆಳೆಯುತ್ತಾ ಹೋದಂತೆ ತನ್ನ ಅಪ್ಪ, ಅಮ್ಮ, ಗುರು, ತನ್ನ ಸಂಗಾತಿ ಹಾಗು ದೇವರಿಗೆ ಪ್ರೀತಿಯನ್ನು ತೋರಿಸತೊಡಗಿದರೆ, ಆ ಪ್ರೀತಿಯನ್ನು ಪೋಷಿಸಿಕೊಳ್ಳಲು ಅವರ ಮೇಲೆ ಅವಲಂಬಿತವಾಗತೊಡಗುತ್ತದೆ. ಇದರಿಂದ ಅದು ಮಾನಸಿಕವಾಗಿ ಕುಗ್ಗತೊಡಗುತ್ತದೆ. ಕ್ರಮೇಣ ತನ್ನ ಕಣ್ಣಿಗೆ ತಾನೆ ಹೊರಗಿನವರಂತೆ ಕಾಣತೊಡಗುತ್ತದೆ. ಇತರರಲ್ಲಿ ಪ್ರೇಮಕ್ಕಾಗಿ ಯಾಚಿಸುತ್ತಾ ಭಿಕ್ಷುಕರಂತೆ ಆಗಿಹೋಗುತ್ತದೆ.
ಮಗು ಹುಟ್ಟಿದಾಗ ತನಗೆ ತಾನೆ ರಾಜನಾಗಿರುತ್ತದೆ. ತನ್ನನ್ನು ತಾನು ಬಹಳ ಪ್ರೀತಿಸಿಕೊಳ್ಳುತ್ತಿರುತ್ತದೆ. ಕ್ರಮೇಣ ಆ ಪ್ರೀತಿಯನ್ನು ತನ್ನ ಅಪ್ಪ, ಅಮ್ಮ ಹಾಗು ತನ್ನ ಸುತ್ತ ಇರುವರೊಡನೆ ಹಂಚಿಕೊಳ್ಳತೊಡಗುತ್ತದೆ.
ಇದು ಪ್ರೀತಿಯಲ್ಲ. ಇದು ಈ ಕೆಟ್ಟ ಸಮಾಜದ ನಿಯಮ. ತನ್ನನ್ನೇ ತಾನು ಪ್ರೀತಿಸಿಕೊಳ್ಳಲಾಗದ ಮಗು ಬೇರೆಯವರನ್ನು ಹೇಗೆ ಪ್ರೀತಿಸುತ್ತದೆ? ಇದನ್ನು ಯಾರೂ ಯೋಚನೆ ಮಾಡುವುದಿಲ್ಲ. ಈ ಸಮಾಜಕ್ಕೆ ಬೇರೆಯವರಿಂದ ಪ್ರೀತಿ ಪಡೆಯಲೇಬೇಕು ಎಂಬುದೊಂದು ಕೆಟ್ಟ ಚಟ ಎಂದೇ ಹೇಳಬಹುದು.
ಯೋಚಿಸಿ ನೋಡಿ. ಪ್ರೇಮಿಗಳು ಏಕೆ ಯಾವಾಗಲೂ ಜಗಳವಾಡುತ್ತಿರುತ್ತಾರೆ? ಏಕೆಂದರೆ ನಮಗೆ ಬೇರೆಯವರ ಪ್ರೀತಿ ಸಿಕ್ಕಾಗ ಅದು ನಮಗೇನು ಬೇಕೋ ಅದನ್ನು ಕೊಡುವುದಿಲ್ಲ. ಏಕೆಂದರೆ ನಿನಗೇನು ಬೇಕೆನ್ನುವುದು ಬೇರೆಯವರಿಗೆ ತಿಳಿದಿರುವುದಿಲ್ಲ. ಹೀಗಾಗಿ ಆ ಪ್ರೇಮಿಗಳಿಗೆ ತಮಗೇನು ಬೇಕೋ ಅದು ಸಿಗುವುದಿಲ್ಲ. ಹೀಗಾಗಿ ಅವರು ಖಾಲಿ ಡಬ್ಬಗಳಂತಾಗುತ್ತಾರೆ. ಆದ್ದರಿಂದಲೇ ಸದಾ ವಡವಡ ಎಂದು ಸದ್ದು ಮಾಡುತ್ತಾ ಜಗಳಕ್ಕಿಳಿಯುತ್ತಾರೆ.
ಯಾವಾಗ ಒಂದು ಮಗು ಸರಿ ದಾರಿಯಲ್ಲಿ ಬೆಳೆದು ತನ್ನನ್ನು ತಾನು ಪ್ರೀತಿಸುವುದು ಕಲಿಯುತ್ತದೋ ಆಗ ಅದು ತುಂಬಾ ಆನಂದವಾಗಿ ಇರುತ್ತದೆ. ಅದರ ಬಳಿ ಬಹಳ ಪ್ರೀತಿ ಇರುತ್ತದೆ. ನಮ್ಮ ಬಳಿ ಅಗತ್ಯಕ್ಕಿಂತ ಜಾಸ್ತಿ ವಸ್ತು ಇದ್ದಾಗ ನಾವು ಅದನ್ನು ಬೇರೆಯವರಿಗೆ ಕೊಟ್ಟೇಕೊಡುತ್ತೇವೆ. ಇದು ಮನುಷ್ಯ ಗುಣ. ಹೀಗೆ ನಮ್ಮ ಬಳಿ ಪ್ರೀತಿ ಜಾಸ್ತಿಯಾದಾಗ ನಾವಾಗೆ ಬೇರೆಯವರಿಗೆ ಕೊಡುತ್ತೇವೆ. ನಾವು ಎಂದಿಗೂ ಪ್ರೀತಿಯನ್ನು ಕೊಡುವರಾಗಿರಬೇಕೇ ಹೊರತು ಪ್ರೀತಿಯನ್ನು ಬೇಡುವ ಭಿಕ್ಷುಕರಾಗಬಾರದು.
ಎಲ್ಲಿ ತನ್ನನ್ನು ತಾನು ಹೆಚ್ಚು ಪ್ರೀತಿಸಿಕೊಳ್ಳುವರು ಇರುತ್ತಾರೊ, ಅಲ್ಲಿ ಹೆಚ್ಚು ಆನಂದವಿರುತ್ತದೆ.
ದೇವರನ್ನು ಪ್ರೀತಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಸತ್ತಮೇಲಿನ, ಯಾರೂ ಎಂದೂ ನೋಡಿರದ ಸ್ವರ್ಗಕ್ಕೆ ಹೋಗಿ ಮಾಡುವುದಾದರೂ ಏನು? ನಾವು ಬದುಕಿರುವಷ್ಟು ದಿವಸ ನಮ್ಮನ್ನು ನಾವು ಪ್ರೀತಿಸಿಕೊಂಡರೆ ಭೂಮಿಯಲ್ಲೆ ಸ್ವರ್ಗವನ್ನು ಕಾಣಬಹುದು. ಯಾವಾಗ ಭೂಮಿಯಲ್ಲಿರುವ ಎಲ್ಲಾ ಜನರು ತಮ್ಮನ್ನು ತಾವು ಪ್ರೀತಿಸುವುದು ಕಲಿಯುತ್ತಾರೊ, ಆಗ ಯಾರಿಗೂ ಯಾರೂ ಭಾರವಾಗುವುದಿಲ್ಲ; ಯಾರಿಂದ ಯಾರಿಗೂ ತೊಂದರೆಯಾಗುವುದಿಲ್ಲ, ಈ ಭೂಮಿಯೇ ನಮ್ಮ ಪಾಲಿನ ಅತಿ ಸುಂದರ ಸ್ವರ್ಗವಾಗುತ್ತದೆ.
ಇದು ಎಂದು ಓಶೋ ‘ದ ಬುಕ್ ಆಫ್ ಮ್ಯಾನ್’ನಲ್ಲಿ ಬಹಳ ಸರಳವಾಗಿ ಹಾಗು ಸೊಗಸಾಗಿ ಹೇಳಿರುವ ಪಾಠ.
1 Comment