ಒಂದು ಮುಂಜಾನೆ ಒಬ್ಬ ಶಿಷ್ಯ ಝೆನ್ ಮಾಸ್ಟರ್ ನನ್ನು ಪ್ರಶ್ನೆ ಮಾಡಿದ.
“ಮಾಸ್ಟರ್ ದೇವರಿದ್ದಾನೆಯೆ ?”
“ಹೌದು ಇದ್ದಾನೆ” ಮಾಸ್ಟರ್ ಉತ್ತರಿಸಿದ.
ಮಧ್ಯಾಹ್ನದ ಊಟ ಆದ ಮೇಲೆ ಇನ್ನೊಬ್ಬ ಶಿಷ್ಯ ಅದೇ ಪ್ರಶ್ನೆ ಕೇಳಿದ.
“ಮಾಸ್ಟರ್ ದೇವರಿದ್ದಾನೆಯೆ ?”
“ಇಲ್ಲ, ದೇವರಿಲ್ಲ” ಮಾಸ್ಟರ್ ಉತ್ತರಿಸಿದ.
ಸಂಜೆ ಮತ್ತೊಬ್ಬ ಶಿಷ್ಯ ಅದೇ ಪ್ರಶ್ನೆ ಕೇಳಿದ.
“ಮಾಸ್ಟರ್ ದೇವರಿದ್ದಾನೆಯೆ ?”
“ಅದು ನೀನು ನಿರ್ಧರಿಸಬೇಕಾದ ವಿಷಯ” ಮಾಸ್ಟರ್ ಉತ್ತರಿಸಿದ.
ಬೆಳಿಗ್ಗೆಯಿಂದ ಮಾಸ್ಟರ್ ನನ್ನು ಗಮನಿಸುತ್ತಿದ್ದ ಶಿಷ್ಯನೊಬ್ಬ ಸಿಟ್ಟಿನಿಂದ ಕೇಳಿದ.
“ಎಂಥ ಅಸಂಗತ ಇದು ಮಾಸ್ಟರ್? ಒಂದೇ ಪ್ರಶ್ನೆಗೆ ಯಾಕೆ ಮೂರು ಬೇರೆ ಬೇರೆ ಉತ್ತರ ಕೊಟ್ಟಿರಿ ?”
ಮಾಸ್ಟರ್ ಉತ್ತರಿಸಿದ.
“ಏಕೆಂದರೆ ಆ ಮೂವರೂ ಒಬ್ಬರಿಗಿಂತ ಒಬ್ಬರು ಭಿನ್ನ.
ಮೂದಲನೇಯವ, ನಾನು ಹೇಳಿದ್ದನ್ನು ನಂಬುತ್ತಾನೆ.
ಎರಡನೇಯವ, ಏನಾದರು ಮಾಡಿ ನಾನು ಹೇಳಿದ್ದು ಸುಳ್ಳು ಎನ್ನುವುದನ್ನ ಸಿದ್ಧ ಮಾಡುತ್ತಾನೆ.
ಮೂರನೇಯವ , ತನಗೆ ದೊರಕಿರುವ ಆಯ್ಕೆಯ ಅಧಿಕಾರದ ಬಗ್ಗೆ ಮಾತ್ರ ನಂಬಿಕೆ ಇಟ್ಟುಕೊಳ್ಳುತ್ತಾನೆ.”
ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ