ಬೆಳಗಿನಲ್ಲಿ ಭಗವಂತನನ್ನು ಸ್ಮರಿಸುವ 3 ಸ್ತೋತ್ರಗಳು ~ ನಿತ್ಯಪಾಠ

ಪ್ರತಿದಿನ ಬೆಳಗ್ಗೆ ಪರಮಸತ್ಯವನ್ನು ಸ್ಮರಿಸಬೇಕು, ಅದರ ಮಹತ್ವವನ್ನು ಭಜಿಸಬೇಕು ಮತ್ತು ಗೌರವಪೂರ್ಣವಾಗಿ ನಮಿಸಬೇಕು. ಈ ಪರಮಸತ್ಯ ಬೇರೆಲ್ಲೋ ಇರುವಂಥದ್ದಲ್ಲ, ಅದು ನಿಮ್ಮೊಳಗಿನ ಆತ್ಮತತ್ತ್ವವೇ ಆಗಿದೆ…..

ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮತತ್ತ್ವಂ
ಸಚ್ಚಿತ್ಸುಖಂ ಪರಮಹಂಸಗತಿಂ ತುರೀಯಮ್
ಯತ್ ಸ್ವಪ್ನಜಾಗರಸುಷುಪ್ತಮವೈತಿ ನಿತ್ಯಂ
ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತಸಂಘಃ || 1 ||  

ಭಾವಾರ್ಥ : ಈ ಬೆಳಗು ಮುಂಜಾನೆಯಲ್ಲಿ, ನನ್ನ ಮನದ ಅಂತರಾಳದಲ್ಲಿ ಹುದುಗಿರುವ ಆತ್ಮವನ್ನು ಸ್ಮರಿಸುತ್ತೇನೆ. ಆ  ಮಹಾನ್ ಸತ್ಯವು ಪರಮಯೋಗಿಗಳ ಗುರಿಯಾದ ನಿದ್ರೆ ಕನಸು ಅಥವಾ ಎಚ್ಚರಗಳಿಗೂ ಮಿಗಿಲಾದ ತುರೀಯಾವಸ್ಥೆಯ ಸುಖವನ್ನು ನೀಡುವುದು. ನಾನು ಪಂಚಭೂತಗಳಾದ ಅಗ್ನಿ ವಾಯು ಜಲ ಆಕಾಶ ಮತ್ತು ಭೂಮಿ – ಈ ಯಾವುದೂ ಅಲ್ಲ, ಬದಲಾಗಿ ನಾನು ನಿಷ್ಕಳಂಕ ಬ್ರಹ್ಮ ಎಂಬ ಅರಿವೇ ಆತ್ಮತತ್ತ್ವವಾಗಿದೆ.  

*

ಪ್ರಾತರ್ಭಜಾಮಿ ಮನಸಾಂ ವಚಸಾಮಗಮ್ಯಂ
ವಾಚೋ ವಿಭಾಂತಿ ನಿಖಿಲಾ ಯದನುಗ್ರಹೇಣ
ಯಂ ನೇತಿ ನೇತಿ ವಚನೈರ್ನಿಗಮಾ ಅವೋಚುಃ
ತಂ ದೇವದೇವಮಜಮಚ್ಯುತಮಾಹುರಗ್ರ್ಯಮ್ || 2 ||

ಭಾವಾರ್ಥ : ಮಾತು, ಮನಸ್ಸು, ಕಣ್ಣುಗಳಿಗೆ ನಿಲುಕದ; ತನ್ನ ಅನುಗ್ರಹ ಮಾತ್ರದಿಂದ ಎಲ್ಲ ಮಾತುಗಳನ್ನೂ ಬೆಳಗಿಸುವ; “ಇದು ಅದಲ್ಲ, ಇದು ಅದಲ್ಲ” ಎಂಬ ನಿರಾಕರಣೆಯ ಮೂಲಕ ಅನ್ವೇಷಿಸಲ್ಪಡುವ; ದೇವ ದೇವನಾದ ಅಚ್ಯುತನೆಡೆಗೆ ಕರೆದೊಯ್ಯುವ ಪರಮ ಸತ್ಯವನ್ನು ಈ ಬೆಳಗು ಮುಂಜಾನೆಯಲ್ಲಿ ಭಜಿಸುತ್ತೇನೆ.

**

ಪ್ರಾತರ್ನಮಾಮಿ ತಮಸಃ ಪರಮರ್ಕವರ್ಣಂ
ಪೂರ್ಣಂ ಸನಾತನಪದಂ ಪುರುಷೋತ್ತಮಾಖ್ಯಮ್
ಯಸ್ಮಿನ್ನಿದಂ ಜಗದಶೇಷಮಶೇಷಮೂರ್ತೌ
ರಜ್ಜ್ವಾಂ ಭುಜಂಗಮ್ ಇವ ಪ್ರತಿಭಾಸಿತಂ ವೈ || 3 ||

ಭಾವಾರ್ಥ : ಸ್ವತಃ ಸೂರ್ಯನಂತೆ ಹೊಳೆಯುವ, ಅಂಧಕಾರಕ್ಕೆ ಅತೀತವಾಗಿರುವ, ಪೂರ್ಣವೂ ಶಾಶ್ವತವೂ ಆದ, ಭಗವಂತನ ಆಜ್ಞಾನುವರ್ತಿಯಾದ, ಸಮಸ್ತ ಸೃಷ್ಟಿಯ ಮೂಲವಾದ; ಹಗ್ಗ – ಹಾವುಗಳನ್ನು (ಎಂತಹ ಅಂಧಕಾರದಲ್ಲೂ) ಸ್ಪಷ್ಟವಾಗಿ ಗುರುತಿಸಬಲ್ಲ, (ಅಂದರೆ, ಹಗ್ಗ ಕಂಡು ಹಾವೆಂಬ ಭ್ರಮೆಗೆ ಒಳಗಾಗದಿರುವ) ಪರಮೋಚ್ಚ ಜ್ಞಾನಕ್ಕೆ ನಾನು ಈ ಬೆಳಗು ಮುಂಜಾನೆಯಲ್ಲಿ ನಮಸ್ಕರಿಸುತ್ತೇನೆ.

1 Comment

Leave a Reply