ತಿಳಿವು ಘಟಿಸುವ ಘಳಿಗೆಯೇ ಜ್ಞಾನೋದಯ

lotus

ಈವರೆಗೆ ಜ್ಞಾನೋದಯ ಹೊಂದಿದವರೆಲ್ಲರೂ ಹುಟ್ಟು – ಬೆಳವಣಿಗೆಯೊಂದಿಗೆ ತಮ್ಮ ಸುತ್ತ ಕಟ್ಟಿಕೊಂಡ ಗೋಡೆ – ಮಾಡುಗಳನ್ನು ಭಂಜಿಸುವ ಪ್ರಯತ್ನ ನಡೆಸಿದವರೇ. ಆ ಪ್ರಯತ್ನದ ಕೊನೆಯ ಉಳಿಪೆಟ್ಟು ಬಿದ್ದ ಘಳಿಗೆಯೇ ಜ್ಞಾನೋದಯದ ಘಟನೆ ~ ಚೇತನಾ ತೀರ್ಥಹಳ್ಳಿ

ವಾಸ್ತವದಲ್ಲಿ ಕತ್ತಲೆಂಬುದಿಲ್ಲ. ಇರುವುದೇನಿದ್ದರೂ ಬೆಳಕಿನ ಗೈರು ಹಾಜರಿಯಷ್ಟೆ. ಬೇಕಿದ್ದರೆ ಪರಿಶೀಲಿಸಿ. ಕತ್ತಲು ತುಂಬಿದ ಕೋಣೆಯಲ್ಲಿ ಒಂದು ದೀಪದ ಕುಡಿ ಬೆಳಕು ತರಬಲ್ಲದು. ಆದರೆ ಬೆಳಕೇ ಬೆಳಕಾಗಿರುವ ಕಡೆ ಕತ್ತಲನ್ನು ತಂದು ತುಂಬಲು ಸಾಧ್ಯವಿಲ್ಲ. ಬೆಳಕನ್ನು ತಡೆದು, ಕೃತಕವಾಗಿ ಕತ್ತಲನ್ನು ಸೃಷ್ಟಿಸಬಹುದು. ಆದರೆ ಕತ್ತಲನ್ನು ತಂದೆರಚಲು ಸಾಧ್ಯವಿಲ್ಲ.
ಹಾಗೆಯೇ ಆತ್ಮವಿಸ್ಮೃತಿಯೂ ಶಾಶ್ವತವಲ್ಲ. ನಾವದನ್ನು ಸೃಷ್ಟಿಸಿಕೊಂಡಿದ್ದೇವಷ್ಟೆ. ಸ್ಮೃತಿಯ ಬಾಗಿಲುಗಳನ್ನು ಮುಚ್ಚಿ, ಕೃತಕವಾದ ಮರೆವನ್ನು ತುಂಬಿಕೊಂಡಿದ್ದೇವೆ. ಯಾವ ಘಳಿಗೆಯಲ್ಲಾದರೂ ಮಾಡು ಬಿರಿಬಿದ್ದು ಬೆಳಕು ತೂರಬಹುದು. ಯಾವ ಘಳಿಗೆಯಲ್ಲಾದರೂ ಸಾಕ್ಷಾತ್ಕಾರ ಘಟಿಸಬಹುದು. ನಮ್ಮ ಆತ್ಮರೂಪದ ಅರಿವು ಉಂಟಾಗಿ ಜ್ಞಾನೋದಯ ಉಂಟಾಗಬಹುದು.

ಇದು ಹೇಗೆಂದರೆ, ಬ್ರಹ್ಮಾಂಡದ ಉಗಮ ಕಾಲದಿಂದಲೂ ಗುರುತ್ವಾಕರ್ಷಣೆ ಇದ್ದೇ ಇತ್ತು. ಪ್ರತಿ ದಿನವೂ ಸೇಬಿನ ಮರದ ಕೆಳಗೆ ಕೂತು ಚಿಂತಿಸುತ್ತಿದ್ದ ನ್ಯೂಟನ್ ಒಂದು ದಿನ ತಲೆಯ ಮೇಲೆ ಸೇಬು ಕಳಚಿ ಬಿದ್ದಾಗ ಗುರುತ್ವಾಕರ್ಷಣ ತತ್ತ್ವವನ್ನು ಕಂಡುಕೊಂಡ. ಅವನು ಆ ತತ್ತ್ವ ಕಂಡುಕೊಂಡ `ದ್ರಷ್ಟಾರ’ನಾದ. ತನಗಾದ ವೈಜ್ಞಾನಿಕ ದರ್ಶನವನ್ನು ವಿವರಿಸಲು ಒಂದು ಸೂತ್ರ ಬರೆದಿಟ್ಟ. ದಿನವೂ ಸ್ನಾನ ಮಾಡುತ್ತಿದ್ದನಲ್ಲವೆ ಆರ್ಕಿಮಿಡೀಸ್? ಆದರೆ ದೊರೆಯ ಕಿರೀಟ ಶುದ್ಧ ಚಿನ್ನದ್ದೋ ಅಲ್ಲವೋ ಎಂದು ಕಂಡುಕೊಳ್ಳಲು ಅಸ್ತಿತ್ವವೇ ಸೂಕ್ತ ಸಂದರ್ಭ ಒದಗಿಸಿಕೊಡಬೇಕಾಯಿತು. ಅದನ್ನು ಕಂಡುಹಿಡಿಯುವ ಸೂತ್ರ ಹೊಳೆದದ್ದು ಸ್ನಾನದ ಟಬ್ಬಿನಲ್ಲಿ. ಆ ಘಳಿಗೆಯಲ್ಲೇ ಅವನು ಆನಂದೋನ್ಮತ್ತನಾಗಿ `ಯುರೇಕಾ ಯುರೇಕಾ…’ ಎಂದು ಕೂಗುತ್ತಾ ಅರಮೆನಗೋಡಿದ್ದು.

ಪ್ರತಿಯೊಬ್ಬರೂ ಇಂಥದೊಂದು ತಿಳಿವಿನ ಹೊಳಹಿಗೆ ತೆರೆದುಕೊಳ್ಳಬಲ್ಲರು. ಆದರೆ ನಾವು ಕಟ್ಟಿಕೊಂಡ ಗೋಡೆ, ನಾವು ಹೊದೆದುಕೊಂಡ ಛಾವಣಿ ಎಷ್ಟು ಟೊಳ್ಳು – ಎಷ್ಟು ಗಟ್ಟಿ ಅನ್ನುವುದರ ಮೇಲೆ ಅದು ನಿರ್ಧಾರವಾಗುತ್ತದೆ. ಈವರೆಗೆ ಜ್ಞಾನೋದಯ ಹೊಂದಿದವರೆಲ್ಲರೂ ಹುಟ್ಟು – ಬೆಳವಣಿಗೆಯೊಂದಿಗೆ ತಮ್ಮ ಸುತ್ತ ಕಟ್ಟಿಕೊಂಡ ಗೋಡೆ – ಮಾಡುಗಳನ್ನು ಭಂಜಿಸುವ ಪ್ರಯತ್ನ ನಡೆಸಿದವರೇ. ಆ ಪ್ರಯತ್ನದ ಕೊನೆಯ ಉಳಿಪೆಟ್ಟು ಬಿದ್ದ ಘಳಿಗೆಯೇ ಜ್ಞಾನೋದಯದ ಘಟನೆ. ಆ ಕೊನೆಯ ಪೆಟ್ಟು ಯಾವಾಗ ಬೀಳುತ್ತದೆಯೆಂದು ಊಹಿಸಲಾಗುವುದಿಲ್ಲ. ಅದು ಘಟಿಸಬೇಕಷ್ಟೆ.
ಈ ಮಾತಿಗೆ ಪುಷ್ಟಿ ನೀಡುವ ಮೂವರು ಸಾಧಕರ ವೃತ್ತಾಂತಗಳು ಇಲ್ಲಿವೆ.

ಋಷಭದೇವನ ಜ್ಞಾನೋದಯ
ರಾಜಾ ಋಷಭದೇವನು ವಿಪರೀತ ಚಿಂತಿತನಾಗಿದ್ದ. ಅವನಿಗೆ ಐಹಿಕ ಭೋಗಗಳು ಬೇಡವೆನ್ನಿಸಿದ್ದರೂ ತನ್ನ ರಾಜ್ಯದ ಉಸ್ತುವಾರಿ ನೋಡಿಕೊಳ್ಳಲು ತನಗಿಂತ ಸಮರ್ಥ ಇಲ್ಲವೆನ್ನುವ ಕೊರಗು ಕಾಡುತ್ತಿತ್ತು. ಈ ಎಲ್ಲದರಿಂದ ವಿಮುಖನಾಗಿ ತನ್ನ ಪಾಡಿಗೆ ತಾನು ಇದ್ದುಬಿಡಬೇಕೆಂದು, ಆದರೆ ಅದು ಸಾಧ್ಯವಾಗುತ್ತಿಲ್ಲವೆಂದು ಯೋಚಿಸುತ್ತ ಹೇಗೋ ರಾಜ್ಯಭಾರ ನಿಭಾಯಿಸುತ್ತಿದ್ದ. ಅವನ ಈ ಮಿತಿಮೀರಿದ ಆಲೋಚನೆಗಳಿಂದಾಗಿ ಅವನಿಗೆ ತಲೆನೋವು ಉಂಟಾಯಿತು. ಅದು ದೈಹಿಕವಾದ ತಲೆನೋವು ಅಲ್ಲವಾದ್ದರಿಂದ ಅದಕ್ಕೆ ಮದ್ದು ನೀಡಲು ಯಾವ ವೈದ್ಯರಿಂದಲೂ ಸಾಧ್ಯವಾಗಲಿಲ್ಲ.

ಅಂತಃಪುರ ಪರಿವಾರ ಚಿಂತೆಗೆ ಬಿದ್ದಿತು. ಅವನ ರಾಣಿಯರೆಲ್ಲರೂ ಒಟ್ಟಾಗಿ ಪತಿಸೇವೆಯಲ್ಲಿ ತೊಡಗಿದರು. ಆವನಿಗೆ ಬಿಸಿ ಪಾನೀಯಗಳನ್ನು ನೀಡುವುದು, ಹಿತವಾದ ಸಂಗೀತ ಕೇಳಿಸುವುದು – ಹೀಗೆ ಪಾಳಿಯಂತೆ ಅವರು ರಾಜನ ದೇಖರೇಖಿಯಲ್ಲಿ ತೊಡಗಿದರು.
ಒಮ್ಮೆ ರಾಣಿಯೊಬ್ಬಳು ಅವನ ತಲೆ ಒತ್ತುತ್ತ ಕುಳಿತಿದ್ದಳು. ಅವಳು ತೊಟ್ಟಿದ್ದ ಬಳೆಗಳು ಗಲಗಲಿಸಿ ಅವನ ನಿದ್ರೆಗೆ ಭಂಗ ತರುತ್ತಿದ್ದವು. ಅವನು ರಾಣಿಗೆ ಬಳೆ ಕಳಚುವಂತೆ ಹೇಳಿದ. ಆಕೆ ಕೆಲವಷ್ಟು ಕಳಚಿ. ಕೆಲವಷ್ಟು ಉಳಿಸಿಕೊಂಡಳು. ಮತ್ತೆ ಗಲಗಲ ಶಬ್ದ… ಅವಳು ಮತ್ತಷ್ಟನ್ನು ಕಳಚಿ ಎರಡೂ ಕೈಗೂ ಎರಡೆರಡು ಬಳೆ ಇಟ್ಟುಕೊಂಡಳು. ಆದರೆ ಅವು ಕೂಡ ಲಘುವಾಗಿ ಸದ್ದು ಮಾಡುತ್ತಿದ್ದವು. ಕೊನೆಗೆ ರಾಣಿ ಅವನ್ನೂ ಕಳಚಿ ಒಂದೊಂದೇ ಬಳೆ ಉಳಿಸಿಕೊಂಡಳು. ಸದ್ದು ನಿಂತಿತು.

ಋಷಭದೇವ ಗಮನಿಸಿದ. ಸದ್ದು ನಿಂತಿತ್ತು. ಅವನ ಆಂತರ್ಯದಲ್ಲೂ ನಿಶ್ಶಬ್ದ ಆವರಿಸಿತ್ತು. ಆ ಹೊತ್ತು ಅವನಿಗೆ ತಿಳಿವು ಘಟಿಸಿತ್ತು. `ಹೆಚ್ಚು ಹೇರಿಕೊಂಡಷ್ಟೂ ಸದ್ದು… ನಮ್ಮಷ್ಟಕ್ಕೆ ನಾವು ಉಳಿದರೆ ಶಾಂತಿ’ ಎಂದವನು ಕಂಡುಕೊಂಡ. ಮರುಕ್ಷಣವೇ ಸಂತೋಷದಿಂದ ರಾಣಿಯನ್ನು ತಬ್ಬಿ, ವಂದಿಸಿ ಅರಮನೆ ತೊರೆದು ಹೊರಟುಬಿಟ್ಟ.

ಸನಾಯಿಯ ಘಟನೆ
ಸೂಫೀ ಸಂತ ಸನಾಯಿ ಮೂಲತಃ ಒಬ್ಬ ಕವಿಯಾಗಿದ್ದು, ಸುಲ್ತಾನ ಮಹಮೂದನ ಆಸ್ಥಾನದಲ್ಲಿದ್ದ. ದೊರೆಯನ್ನು ಹೊಗಳಿ `ಕಸೀದಾ’ (ಸ್ತುತಿ ಗೀತೆ) ಬರೆಯುವುದು ಅವನ ಉದ್ಯೋಗವಾಗಿತ್ತು.

ಎಂದಿನಂತೆ ಸನಾಯಿ ದರ್ಬಾರಿನಲ್ಲಿ ಕಸೀದಾ ಹಾಡಿ ನದಿಯ ಕಡೆಗೆ ಹೊರಟಿದ್ದ. ದಾರಿಯಲ್ಲಿ ಅವನು ಪಾನಗೃಹವೊಂದನ್ನು ಹಾದುಹೋಗಬೇಕಿತ್ತು. ಅದರ ಖಾಯಂ ಗ್ರಾಹಕರಲ್ಲೊಬ್ಬನ ಹೆಸರು ಲಾಯೇಖ್ವಾರ್. ಆತ ಸನಾಯಿ ಸಮೀಪಿಸುವ ಹೊತ್ತಿಗೆ ಸರಿಯಾಗಿ, ಆತನನ್ನು ಗಮನಿಸದೆ ಸಾಕಿಯನ್ನು (ಮದ್ಯ ತುಂಬಿಕೊಡುವ ಪರಿಚಾರಿಕೆ) ಕುರಿತು, `ಸಾಕೀ, ಸುಲ್ತಾನ್ ಮಹಮ್ಮೂದನ ಕುರುಡಿನ ಹೆಸರಲ್ಲೊಂದು ಬಟ್ಟಲು ಮಧು ತುಂಬಿಕೊಡು’ ಅನ್ನುತ್ತಿದ್ದ. ಸಾಕಿಯು ಅವನನ್ನು ಸುಮ್ಮನಾಗಿಸುತ್ತಾ, `ಓ! ಮಹಮ್ಮೂದರು ನಮ್ಮ ಬಾದಷಹ. ಅವರ ಬಗ್ಗೆ ಹೀಗೆಲ್ಲ ಮಾತಾಡಬಾರದು’ ಅಂದಳು. ಅದಕ್ಕೆ ಪ್ರತಿಯಾಗಿ ಲಾಯೇಖ್ವಾರ್, `ಅವನೆಂಥ ಬಾದಷಾಹ್? ತನ್ನ ದೇಶದೊಳಗಿನ ಜನರನ್ನೆ ಅಂಕೆಯಲ್ಲಿಟ್ಟುಕೊಳ್ಳಲಾಗದವ, ಪರದೇಶಿಗಳನ್ನು ಗೆಲ್ಲಲು ಹೊರಟಿದ್ದಾನೆ’ ಎನ್ನುತ್ತ ಮಧುಬಟ್ಟಲನ್ನು ಎತ್ತಿ ಗಟಗಟನೆ ಕುಡಿದ.
ಅನಂತರ ಮತ್ತೆ, `ಸಾಕಿ, ಈಗ ದರ್ಬಾರೀ ದಾಸ ಸನಾಯಿಯ ಹೆಸರಲ್ಲಿ ಬಟ್ಟಲು ತುಂಬಿಕೊಡು’ ಅಂದ. ಆಗ ಸಾಕಿಯು, `ಸನಾಯಿಯ ಹೆಸರಲ್ಲೆ? ಆತನ ಕವಿತೆಗಳೇ ಒಂದು ನಶೆ. ಅವನು ಉತ್ಕೃಷ್ಟ ಕವಿ. ಹಾಗೆಲ್ಲ ಅವನ ಹೆಸರು ಇಲ್ಲಿ ತರಕೂಡದು’ ಅಂದಳು. ಅದಕ್ಕೆ ಲಾಯೆಖ್ವಾರ್ ಪರಿಹಾಸ್ಯದ ನಗೆ ನಗುತ್ತ, `ಮೂರ್ಖ ಮಹಮ್ಮೂದನ ಗುಣಗಾನ ಮಾಡುವ ಗುಲಾಮನಾತ. ಏನೋ ಒಂದಷ್ಟು ಇಲ್ಲದ್ದನ್ನು ರಮ್ಯವಾಗಿ ಗೀಚಿಟ್ಟುಕೊಂಡಿರುತ್ತಾನೆ. ಅದೇ ಸವಕಲು ಹಾಡನ್ನು ಹಾಡುತ್ತ ಇರುತ್ತಾನೆ. ಅವನೆಂಥ ಕವಿ? ಈ ಗುಲಾಮಿತನಕ್ಕೆ ತಾನು ಹುಟ್ಟಿಕೊಂಡಿದ್ದೇನೆ ಅಂದುಕೊಂಡಿದ್ದಾನೆ. ವಾಸ್ತವದಲ್ಲಿ ತಾನೇಕೆ ಹುಟ್ಟಿದ್ದೇನೆ ಅನ್ನುವ ಅರಿವಾದರೂ ಅವನಿಗೆ ಇದೆಯೆ?’ ಎಂದುಬಿಟ್ಟ.

ಲಾಯೇಖ್ವಾರನ ಮಾತುಗಳು ಸನಾಯಿಯ ಎದೆ ನಾಟಿದವು. ಆತ ನದಿಯಿಂದ ಮರಳಿ ದರ್ಬಾರಿಗೆ ಹೋಗಲೇ ಇಲ್ಲ. ಸೂಫೀ ಗುರುವೊಬ್ಬನ ಮಾರ್ಗದರ್ಶನದಲ್ಲಿ ತಾನೊಬ್ಬ ದರವೇಶಿಯಾದ. ಅಧ್ಯಾತ್ಮ ಕವಿಯಾಗಿ ಮನ್ನಣೆಯನ್ನೂ ಶಿಷ್ಯವರ್ಗವನ್ನೂ ಹೊಂದಿದ.

ತೆರೆದುಕೊಂಡಿತು ದಾವ್…
ಲಾವೋ ತ್ಸು, ಚೀನಾದ ಮಹಾ ದಾರ್ಶನಿಕ. ಝೆನ್ ಕವಲಿನ ಅನುಭಾವಿ ಸಂತ. ಅವನು ತನ್ನ ಸ್ವಂತ ತಿಳಿವನ್ನಾಧರಿಸಿ ತನ್ನದೇ ಆದ ದಾರಿಯೊಂದನ್ನು ಹಾಕಿಕೊಂಡ. ಅದನ್ನು `ದಾವ್’ ಎಂದು ಕರೆದ. ದಾವ್ ಎಂದರೇನೇ `ದಾರಿ’. ಪ್ರತಿಯೊಬ್ಬರೂ ತಮ್ಮ ದಾರಿ ತಾವೇ ಹುಡುಕಿಕೊಳ್ಳಬೇಕು ಎಂದವನು ಪ್ರತಿಪಾದಿಸಿದ.

ಲಾವೋತ್ಸು ಅಧ್ಯಾತ್ಮ ಪಥದ ಯಾನ ಶುರುವಿಟ್ಟು ಬಹಳ ಸಮಯವೇ ಆಗಿತ್ತು. ಶಿಶಿರ ಕಾಲದ ಒಂದು ಮಧ್ಯಾಹ್ನ ಆತ ಮರದ ಕೆಳಗೆ ವಿಶ್ರಮಿಸುತ್ತಿದ್ದ. ಅದಾಗಲೇ ಅವನಿಗೆ ಖಾಲಿತನದ ರುಚಿ ಹತ್ತಿತ್ತು. ಏನನ್ನೂ ಯೋಚಿಸದೆ, ಶುಭ್ರವಾಗಿ, ಪ್ರಕೃತಿಯನ್ನು ದಿಟ್ಟಿಸುತ್ತ ಕುಳಿತಿದ್ದ. ತೊಟ್ಟು ಕಳಚಿದ ಎಲೆಯೊಂದು ತೊನೆಯುತ್ತ ಅವನ ಕಣ್ಮುಂದೆ ಸುಳಿಯಿತು. ಗಾಳಿ ಬೀಸಿದಂತೆ ಅದರ ಚಲನೆ. ಸುರುಳಿ ಸುತ್ತಿ, ಲಘುವಾಗಿ ಹುಲ್ಲು ಹಾಸಿನ ಮೇಲೆ ಇಳಿಯಿತು.
`ನೆಲೆ ಕಳಚಿದ ಎಲೆ ಮುಂದೇನು ಎಂದು ಯೋಚಿಸುತ್ತದೆಯೇ? ಅಸ್ತಿತ್ವ ಅದರ ಕಾಳಜಿ ವಹಿಸುತ್ತೆ. ಕಾಲದ ಹರಿವಿನ ಜೊತೆಗೆ ಅದು ಸದ್ಯಕ್ಕೆ ಹುಲ್ಲು ಹಾಸಿನ ಮೇಲೆ ನೆಲೆಸಿದೆ. ಮತ್ತೆ ಹರಿವಿನ ಜೊತೆಗೇ ಅದರ ಭವಿಷ್ಯವೂ ನಿರ್ಧಾರವಾಗುತ್ತೆ!’

ತಿಳಿವು ಹೊಳೆಯಿತು. ದಾವ್ ತೆರೆದುಕೊಂಡಿತು. ತನ್ನೆಲ್ಲ ಗ್ರಹಿಕೆಯನ್ನೂ ಜನರ ಆಗ್ರಹದ ಮೇರೆಗೆ ಬರೆದಿಟ್ಟ ಲಾವೋ ತ್ಸು, ಯಾರ ಕೈಗೂ ಸಿಗದಂತೆ ಮರೆಯಾದ. ತನ್ನ ದಾರಿಯಲ್ಲಿ ನಡೆದು ತಿಳಿವಿನ ತುದಿ ಮುಟ್ಟಿದ.

 

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. ಏನು ಹೇಳಲಿ ಜ್ಞಾನದ ಮೂಲಕ ಆಧ್ಯಾತ್ಮಿಕ ಜೀವನದ ಸಾಧನೆಯ ಈ ಎರಡು ಕಥೆಗಳು ಮಂತ್ರಮುಗ್ದಗೊಳಿಸಿವೆ… ನೆಲದ ಕಥೆ ಒಂದಾದರೆ ಝೆನ್ ನ ಕಥೆ ಜೀವನದ ಮತ್ತೊಂದು ಅನುಭಾವದ ದಾರಿಯಾಗಿದೆ… ಎರಡೂ ಕರೆದು ಕೊಂಡು ಹೋಗುವುದು ಮಾತ್ರ ಒಂದೇ ದಿಕ್ಕಿಗೆ ಅದೇ ಆತ್ಮದ ಜಾಗ್ರತಿ ಚೇತನದ ಶಕ್ತಿಯತ್ತ…!!!

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.