ಗೀತ ಗೋವಿಂದದ ಕೃಷ್ಣ ಜನ ಸಾಮಾನ್ಯರ ಕೃಷ್ಣನಾಗಿದ್ದ. ಅವನು ಎಲ್ಲರ ಹೆಗಲ ಮೇಲೆ ಕೈ ಹಾಕಿ ನಡೆಯಬಲ್ಲ ಸಖನಾಗಿದ್ದ. ಅವನು ಕಣ್ಣು – ಹೃದಯಗಳ ಅಳತೆ ಮೀರಿದ ವಿಶ್ವರೂಪಿಗಿಂತ ಹೆಚ್ಚಾಗಿ ಗೋಪಬಾಲನೂ ರಾಧಾ ಲೋಲನೂ ಆಗಿದ್ದ. ಇಂಥಾ ಕೃಷ್ಣನಲ್ಲಿ ಭಕ್ತಿಯನ್ನಿಟ್ಟುಕೊಂಡು, ಜಗತ್ತನ್ನು ಪ್ರೀತಿಸುವುದು ಸಾಧ್ಯವಾಗತೊಡಗಿದಾಗಲೇ ಸಮಾಜ ತನ್ನ ಸಂಕುಚಿತ ಮನಸ್ಥಿತಿಯಿಂದ ಮಗ್ಗಲು ಬದಲಿಸಿದ್ದು.
ಮೌಲಿಕವಾದ ಒಂದು ಕೃತಿ ಸಂಸ್ಕೃತಿಯ ಮೇಲೆ ಎಷ್ಟೆಲ್ಲ ಬಗೆಯ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಗೀತಗೋವಿಂದ ಒಂದು ಅದ್ಭುತ ಉದಾಹರಣೆ. 12ನೇ ಶತಮಾನದಲ್ಲಿ ಆಗಿಹೋದ ಜಯದೇವ ಕವಿಯ ಈ ಕೃತಿಯು ಕೃಷ್ಣ ರಾಧೆಯರ ಪ್ರೇಮಗಾಥೆಯನ್ನು ಮುಖ್ಯ ವಸ್ತುವಾಗಿ ಹೊಂದಿದೆ. ಪ್ರೇಮವೆಂದರೇನೆ ಅಲ್ಲಿ ಲಾಲಿತ್ಯವಿರುತ್ತದೆ. ಇನ್ನದು ರಾಧಾಕೃಷ್ಣರ ಪ್ರೇಮ ಎಂದ ಮೇಲೆ ಅತ್ಯಂತ ಮಧುರ ಕಾವ್ಯವಾಗಿರಲಿಕ್ಕೇ ಬೇಕು. ಹಾಗೆಯೇ ಇದೆ ಗೀತಗೋವಿಂದ ಕಾವ್ಯ.
ಗೀತಗೋವಿಂದವು ತನ್ನ ನಿರೂಪಣಾ ಕ್ರಮ, ಶೈಲಿಗಳಿಂದ ಬಹಳ ಬೇಗ ಜನಮಾನಸಕ್ಕೆ ಆಪ್ತವಾಯಿತು. ಇಲ್ಲಿ ಜಯದೇವ ಸಾಕಷ್ಟು ಸ್ವಾತಂತ್ರ್ಯ ವಹಿಸಿ, ತನ್ನ ಒಳಗಣ್ಣು ತೋರಿಸಿಕೊಟ್ಟಂತೆ ಕಥಿಸಿದ್ದಾನೆ. ಮೂಲ ಭಾಗವತದಲ್ಲಿ ಇಲ್ಲದ ಬಹಳಷ್ಟು ವಿವರಗಳು ಕವಿಯ ಕಲ್ಪನಾ ಮೂಸೆಯಿಂದ ಹೊಮ್ಮಿ ಬಂದಿದೆ. ಗೋಪಿಯರ, ಅದರಲ್ಲೂ ರಾಧೆಯೊಂದಿಗಿನ ಕೃಷ್ಣ ರಾಸವು ಕವಿಯ ಕೌಶಲ್ಯದಿಂದ ತಾತ್ವಿಕ ಚಿಂತನೆಯೂ ಆಗಿ ಮೂಡಿಬಂದಿದೆ. ಆದ್ದರಿಂದ ಗೀತಗೋವಿಂದವನ್ನು`ಹೃದಯವಂತರ ಭಗವದ್ಗೀತೆ’ ಅನ್ನಲಡ್ಡಿಯಿಲ್ಲ. ಬುದ್ಧಿವಂತರಿಗೆ ಭಗವದ್ಗೀತೆಯ ಮೂಲಕ ತಿಳಿವು ದೊರೆತರೆ, ಭಾವ ಪ್ರಧಾನ ವ್ಯಕ್ತಿಗಳು ಗೀತಗೋವಿಂದದ ಓದಿನಲ್ಲೇ ತಿಳಿವು ಪಡೆಯಬಲ್ಲರು, ಭಗವಂತನ ಸಾಯುಜ್ಯ ಅನುಭವಿಸಬಲ್ಲರು.
ಸಂಸ್ಕೃತ ಮೂಲದಲ್ಲಿರುವ ಈ ಕೃತಿಯು ಓದಲಿಕ್ಕೂ ಸರಳ, ಸುಂದರ. ಸುಲಲಿತವಾಗಿ ಓದಿಸಿಕೊಂಡು ಹೋಗುವ, ಉತ್ಕೃಷ್ಟ ಸಾಹಿತ್ಯದ ದ್ವಿಪದಿಗಳು ಇದರ ಜೀವಾಳ. ಈ ಕೃತಿಯು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದೆ. ಅಷ್ಟು ಮಾತ್ರವಲ್ಲ, ಇಂಗ್ಲಿಷ್, ಜರ್ಮನ್ ಸೇರಿದಂತೆ ಜಗತ್ತಿನ ಕೆಲವು ಭಾಷೆಗಳಿಗೂ ಅನುವಾದಗೊಂಡು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಗೀತ ಗೋವಿಂದ ಒಂದು ಸಾಮಾಜಿಕ ಚಳವಳಿಗೂ ಬೆಂಬಲವಾದ ಕೃತಿ. ಹನ್ನೆರಡನೇ ಶತಮಾನದಲ್ಲಿ ಚಿಗುರೊಡೆದು ಹಬ್ಬಿದ ಭಕ್ತಿ ಚಳವಳಿಗೆ ಇದು ಸಾಕಷ್ಟು ಇಂಬು ನೀಡಿತು. ಏಕೆಂದರೆ ಗೀತ ಗೋವಿಂದದ ಕೃಷ್ಣ ಜನ ಸಾಮಾನ್ಯರ ಕೃಷ್ಣನಾಗಿದ್ದ. ಅವನು ಎಲ್ಲರ ಹೆಗಲ ಮೇಲೆ ಕೈ ಹಾಕಿ ನಡೆಯಬಲ್ಲ ಸಖನಾಗಿದ್ದ. ಅವನು ಕಣ್ಣು – ಹೃದಯಗಳ ಅಳತೆ ಮೀರಿದ ವಿಶ್ವರೂಪಿಗಿಂತ ಹೆಚ್ಚಾಗಿ ಗೋಪಬಾಲನೂ ರಾಧಾ ಲೋಲನೂ ಆಗಿದ್ದ. ಇಂಥಾ ಕೃಷ್ಣನಲ್ಲಿ ಭಕ್ತಿಯನ್ನಿಟ್ಟುಕೊಂಡು, ಜಗತ್ತನ್ನು ಪ್ರೀತಿಸುವುದು ಸಾಧ್ಯವಾಗತೊಡಗಿದಾಗಲೇ ಸಮಾಜ ತನ್ನ ಸಂಕುಚಿತ ಮನಸ್ಥಿತಿಯಿಂದ ಮಗ್ಗಲು ಬದಲಿಸಿದ್ದು.
ಗೀತ ಗೋವಿಂದದಲ್ಲಿ ಗೋಪಿಕೆಯರ ಭಕ್ತಿ ಪ್ರೇಮದ ಅಭಿವ್ಯಕ್ತಿಯೇ ಆಗಿದೆ. ಇದನ್ನು ಮಧುರ ಭಕ್ತಿ ಎನ್ನಲಾಗುತ್ತದೆ. ಭಕ್ತಿ ಚಳವಳಿಯ ಮೂಲ ಸ್ರೋತವೂ ಮಧುರ ಭಕ್ತಿಯೇ ಆಗಿದೆ. ಮುಖ್ಯವಾಗಿ ಇದನ್ನು ರಾಧಾ ಪಂಥ, ಬಾವುಲ್ ಹಾಗೂ ಚೈತನ್ಯ ಪಂಥಗಳಲ್ಲಿ ಗುರುತಿಸಬಹುದು. ಗೀತ ಗೋವಿಂದದಲ್ಲಿ ಕೃಷ್ಣನಿಗಿಂತ ರಾಧೆಯ ಪಾತ್ರಕ್ಕೇ ಹೆಚ್ಚಿನ ಪ್ರಾಮುಖ್ಯತೆ. ಇಲ್ಲಿ ಕೃಷ್ಣ ಪ್ರೇಮಿಸಲ್ಪಡುವವನು. ಪ್ರೇಮಿಸುವ ಗೋಪಿಕೆಯರೇ ಕೃತಿಯನ್ನು ಮುಂದಕ್ಕೊಯ್ಯುವ ಶಕ್ತಿಯಂತೆ. ಈ ಅಂಶವು ಭಕ್ತರಿಗೂ ಅನ್ವಯ. ಏಕೆಂದರೆ ಭಕ್ತಿಯ ವಿಷಯ ಬಂದಾಗ ಭಕ್ತ ಹಾಗೂ ಪರಮಾತ್ಮನಿಗಿಂತ ಭಕ್ತಿಯೆಂಬ ಭಾವವೇ ಮೇಲುಗೈಯಾಗುತ್ತದೆ.
ಗೀತ ಗೋವಿಂದದ ಮತ್ತೊಂದು ಮುಖ್ಯ ಅಂಶವೆಂದರೆ ಸಂಗೀತ, ನೃತ್ಯ ಹಾಗೂ ಚಿತ್ರ ಕಲೆಗಳ ಮೇಲೆ ಅದು ಬೀರಿದ ಪ್ರಭಾವ. ಸಂಗೀತಕ್ಕಳವಡಿಸಿದ ಈ ಕೃತಿಯ ವಿವಿಧ ಭಾಗಗಳು ಜನಮನ ಸೂರೆಗೊಂಡಿವೆ. ಹಾಗೆಯೇ ಭರತ ನಾಟ್ಯ, ಕಥಕ್ ಹಾಗೂ ಒಡಿಸ್ಸಿ ಪ್ರಕಾರಗಳ ನೃತ್ಯಗಳು ಗೀತಗೋವಿಂದವನ್ನು ಅಭಿನಯಿಸಿವೆ. ನಾಟಕ, ಏಕಪಾತ್ರಾಭಿನಯಗಳ ಪ್ರಯೋಗವೂ ಆಗಿದೆ. ಚಿತ್ರ ಕಲಾ ಪ್ರಕಾರದಲ್ಲಂತೂ ಇದರ ಪ್ರಯೋಗ ಬಹುರಂಜಿತ. ಮುಘಲಾಯ್, ಕಾಂಗ್ರಾ ಹಾಗೂ ಮಿನಿಯೇಚರ್ ಶೈಲಿಯ ಕಲಾಪ್ರಕಾರಗಳು ಗೀತಗೋವಿಂದದ ವಿವಿಧ ಕಥಾನಕಗಳನ್ನು ನಿರೂಪಿಸಿ ದೇಶವಿದೇಶಗಳ ನೋಡುಗರನ್ನು ಆಕರ್ಷಿಸಿವೆ.
ಸಹಜವೇ…. ಕೃಷ್ಣ ಎಂದರೇನೆ ಸರ್ವಾಕರ್ಷಕ. ಅವನ ವಸ್ತುವಿಷಯಗಳ ನವಿರು ನಿರೂಪಣೆಯುಳ್ಳ ಗೀತಗೋವಿಂದಕ್ಕೆ ದಕ್ಕಿರುವ ಮನ್ನಣೆ ಅವನ ಪೂಜೆಗೆ ಸಮರ್ಪಿತವಾದ ಅಕ್ಷರ ಮಾಲೆಯಂತೆ ಅನ್ನಿಸುತ್ತದೆ.
(ಲೇಖನದೊಂದಿಗೆ ಬಳಸಿದ ಚಿತ್ರ : ಗೀತಗೋವಿಂದವನ್ನು ನಿರೂಪಿಸುವ ಪ್ರಾಚೀನ ಒಡಿಶಾದ ತಾಳಪತ್ರ ಕಲಾಕೃತಿ. ಕೃಪೆ: ಇಂಟರ್’ನೆಟ್)