ನಾವು ಕಾಮಕ್ರೋಧಾದಿಗಳಿಂದ ಹೊರಗೆ ಬರಬೇಕೆಂದು ಯೋಚಿಸುವುದು ಅಷ್ಟು ಸರಿಯಾದ ವಿಧಾನವಲ್ಲ. ಅವುಗಳನ್ನು ನಮ್ಮಿಂದ ಹೊರಗೆ ಕಳುಹಿಸಬೇಕೆಂದು ಯೋಚಿಸುವುದು ಸರಿಯಾದ ವಿಧಾನ ~ ಚಿತ್ಕಲಾ
“ಕಾಮ, ಕ್ರೋಧ, ಲೋಭಗಳಿಂದ ಹೊರಬರಲು ಯಾವ ಮಾರ್ಗವಿದೆ?” ಈ ಪ್ರಶ್ನೆಯನ್ನು ಬಹಳಷ್ಟು ಜನ ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಮೊದಲು, ಕೆಲವು ಪ್ರಶ್ನೆ ಕೇಳಲು ಬಯಸುತ್ತೇನೆ.
ನೀವು ಕಾಮ ಕ್ರೋಧಾದಿಗಳ ಒಳಗೆ, ಎಷ್ಟರಮಟ್ಟಿಗೆ ಕಳೆದುಹೋಗಿದ್ದೀರಿ?
ಕಾಮ, ಕ್ರೋಧ ಮತ್ತು ಲೋಭವೆಂದರೆ ನಿಮ್ಮ ಪ್ರಕಾರ ಏನು?
ಅದರಿಂದ ಹೊರಗೆ ಬರಲು ನೀವು ಎಷ್ಟು ತೀವ್ರವಾಗಿ ಬಯಸುತ್ತಿದ್ದೀರಿ?
ಮತ್ತು ಕೊನೆಯದಾಗಿ,
ನಿಮಗೆ ಹೊರಗೆ ಬರಬೇಕೆಂದು ಅನ್ನಿಸಲು ಕಾರಣವೇನು?
– ಈ ಪ್ರಶ್ನೆಗಳಿಗೆ ನೀವು ಉತ್ತರ ಕಂಡುಕೊಳ್ಳುವ ಪ್ರಕ್ರಿಯೆಯೇ ಅವುಗಳಿಂದ ಹೊರಗೆಬರುವ ಪ್ರಕ್ರಿಯೆಯೂ ಆಗುತ್ತದೆ.
ವಾಸ್ತವದಲ್ಲಿ, ನಾವು ಕಾಮಕ್ರೋಧಾದಿಗಳಿಂದ ಹೊರಗೆ ಬರಬೇಕೆಂದು ಯೋಚಿಸುವುದೇ ಸರಿಯಾದ ವಿಧಾನವಲ್ಲ. ಅವುಗಳನ್ನು ನಮ್ಮಿಂದ ಹೊರಗೆ ಕಳುಹಿಸಬೇಕೆಂದು ಯೋಚಿಸುವುದು ಸರಿಯಾದ ವಿಧಾನ.
“ಅವುಗಳಿಂದ ನಾವು ಹೊರಗೆ ಬರಬೇಕು” ಎಂದು ಹೇಳುವ ವಿಧಾನದಲ್ಲಿ ಪಲಾಯನವಾದ ಅಡಗಿದೆ. ನಮ್ಮನ್ನು ಕಾಮಾದಿಗಳು ಹಿಡಿದುಕೊಂಡಿವೆ ಎನ್ನುವ ಯೋಚನೆ ನಮ್ಮಲ್ಲಿರುತ್ತದೆ. ಆದ್ದರಿಂದಲೇ ಅದರಿಂದ ಹೊರಗೆ ಬರಬೇಕು ಅನ್ನುವ ಯೋಚನೆ ಮಾಡುತ್ತೇವೆ. ವಾಸ್ತವ ಹಾಗಿಲ್ಲ. ನಾವು ಕಾಮಾದಿಗಳ ಒಳಗಿಲ್ಲ, ನಮ್ಮೊಳಗೆ ಕಾಮಾದಿಗಳನ್ನು ತುಂಬಿಕೊಂಡಿರುತ್ತೇವೆ. ಆದ್ದರಿಂದ ನಾವು ಅವುಗಳನ್ನು ಹೊರಹಾಕುವ ಬಗೆಯನ್ನು ಹುಡುಕಬೇಕು. ಹೀಗೆ ಯೋಚಿಸಿದಾಗ ಮುಂದಿನ ಕೆಲಸ ಸುಲಭ. ಈಗ ಹಿಡಿದಿಟ್ಟುಕೊಂಡಿರುವ ಕೈಗಳು ನಮ್ಮವು. ಎಲ್ಲಿಯವರೆಗೆ ನಾವು ಹಿಡಿದಿಟ್ಟುಕೊಂಡಿರುವ ಕೈಗಳು ಬೇರೆಯೆಂದು ಯೋಚಿಸುತ್ತ ಇರುತ್ತೇವೆಯೋ ಅಲ್ಲಿಯವರೆಗೆ ನಾವು ಸೆಣಸಬೇಕಿರುವುದು ಬೇರೆಯವರೊಂದಿಗೆ ಎಂದು ಭಾವಿಸುತ್ತಾ ಇರುತ್ತೇವೆ. ಆಗ ನಮ್ಮ ಸೋಲಿನ ಹೊಣೆಯಿಂದ ತಪ್ಪಿಸಿಕೊಳ್ಳುವುದು ಸುಲಭ.
ನಾವು ಸೆಣೆಸಬೇಕಿರುವುದು ನಮ್ಮೊಂದಿಗೇ ಆಗಿದೆ. ಇಲ್ಲಿ ಸೋತರೆ, ಸೋಲು ನಮ್ಮದೇ. ಅದರ ಸಂಪೂರ್ಣ ಹೊಣೆಯೂ ನಮ್ಮದೇ.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಈಗ ಕಾಮಾದಿಗಳನ್ನು ನಮ್ಮಿಂದ ಹೊರಗೆ ಹಾಕುವುದು ಹೇಗೆಂದು ಚರ್ಚಿಸೋಣ.
ನಿಮ್ಮ ದೇಹದಲ್ಲಿ ವಿಷಾಹಾರ ಸೇರಿಕೊಂಡರೆ ಏನು ಮಾಡುತ್ತೀರಿ? ಮೊದಲನೆಯದಾಗಿ ಬೆರಳು ಗಂಟಲಿಗೆ ಇಳಿಸಿಕೊಂಡು ವಾಂತಿ ಮಾಡಲು ಪ್ರಯತ್ನಿಸುತ್ತೀರಿ. ಅದು ಪರಿಣಾಮಕಾರಿಯಾಗದೆ ಹೋದರೆ, ಉಪ್ಪು ನೀರು ಕುಡಿದು ವಮನದಿಂದ ಹೊರಹಾಕಲು ಯತ್ನಿಸುತ್ತೀರಿ. ಅಷ್ಟಾದರೂ ಹೊರಹೋಗದೆ ಇದ್ದರೆ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತೀರಿ. ಅಲ್ಲವೆ?
ಜಠರದಲ್ಲಿ ಸೇರಿಕೊಂಡ ವಿಷಾಹಾರದಂತೆಯೇ ನಮ್ಮಲ್ಲಿ ಕಾಮಾದಿಗಳು ಮಿತಿಮೀರಿದಾಗ ಅದರ ದುಷ್ಪರಿಣಾಮಗಳು ನಮಗೇ ಗೋಚರಿಸತೊಡಗುತ್ತವೆ. ಆಗ ನಮಗೆ ಅವುಗಳನ್ನು ಹೊರಹಾಕಬೇಕೆಂದು ಅನ್ನಿಸತೊಡಗುತ್ತದೆ. ಮೊದಲ ಹಂತವಾಗಿ ನಾವು ನಮ್ಮದೇ ತಿಳಿವಳಿಕೆಯನ್ನು ಅನುಸರಿಸಿನೋಡಬೇಕು. ನಾವು ತುಂಬಿಟ್ಟುಕೊಂಡಿರುವ ಕಾಮಾದಿಗಳು ನಮ್ಮ ವ್ಯಕ್ತಿತ್ವವನ್ನು, ನಮ್ಮ ಸಂಬಂಧಗಳನ್ನು, ಬದುಕನ್ನು ಹಾಳು ಮಾಡುತ್ತಿದೆ ಎಂದು ನಮಗೆ ಅರಿವಾದ ಕೂಡಲೇ ನಾವು ಅವುಗಳನ್ನು ಹೊರಗೆ ಹಾಕುವ ಪ್ರಯತ್ನ ಮಾಡಬೇಕು. ಮನಸ್ಸನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಈ ಚಿಂತನೆಗಳ ದಿಕ್ಕನ್ನು ಬದಲಿಸಿಕೊಳ್ಳಬೇಕು.
ನಿಮ್ಮಲ್ಲಿ ಕಾಮ ಹೆಚ್ಚಾಗಿದ್ದರೆ, ಕಾಮದ ಹಂಬಲವನ್ನು ತಗ್ಗಿಸಿಕೊಳ್ಳುವಂತೆ ದೀರ್ಘ ಪ್ರಯಾಣ, ದೇಹವನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಕಸರತ್ತುಗಳು ಇಲ್ಲಿ ಉತ್ತಮ ಆಯ್ಕೆಯಾಗುತ್ತವೆ. ಯಾವ ಕಾರಣಕ್ಕೂ ಏಕಾಕಿಯಾಗಿ ಇರಬೇಡಿ; ಒಬ್ಬರೇ ಇದ್ದರೂ ಸುತ್ತಾಟದಲ್ಲಿರಿ.
ನಿಮ್ಮಲ್ಲಿ ಲೋಭ ಹೆಚ್ಚಾಗಿದ್ದರೆ, ಸಂಪತ್ತಿನ ಸಂಚಯದ ವಿರುದ್ಧ ಮಾರ್ಗದಲ್ಲಿ ನಡೆಯಲು ಯತ್ನಿಸಿ. ಕಾಮವನ್ನಾದರೂ ಹೊರಗೆ ಹಾಕಬಹುದು, ಲೋಭವನ್ನು ಹಾಕುವುದು ಕಷ್ಟ. ಮೊದಲನೆಯದಾಗಿ ನಮ್ಮ ಲೋಭ ನಮಗೆ ಅರಿವಿಗೇ ಬರುವುದಿಲ್ಲ. ಅರಿವಿಗೆ ಬಂದರೆ ಅದು ನಮ್ಮ ಹೆಚ್ಚುಗಾರಿಕೆಯೇ ಸರಿ.
ಲೋಭನೆಯನ್ನು ತಗ್ಗಿಸಲು ನಮಗೆ ದಾನದ ‘ಅಹಂಕಾರ’ ತಕ್ಕಮಟ್ಟಿಗೆ ನೆರವಾಗುತ್ತದೆ. ದಾನ ನೀಡುವುದು ಸದ್ವಿಚಾರವೇನೋ ಸರಿಯೇ. ಆದರೆ, ಅಲ್ಲಿ ಅಹಂಕಾರಕ್ಕೆ ಆಸ್ಪದವಿರುತ್ತದೆ. ಅಹಂಕಾರ ಎಲ್ಲ ಸಂದರ್ಭದಲ್ಲೂ ಕೆಡುಕನ್ನೇ ತರಬೇಕೆಂದಿಲ್ಲ. ದಾನ ನೀಡುವ ಪ್ರಕ್ರಿಯೆಯಲ್ಲಿ ಹೊಮ್ಮುವ ಅಹಂಕಾರ ನಮ್ಮ ಲೋಭವನ್ನು ಮಣಿಸುತ್ತದೆ. ನಂತರ ಈ ಅಹಂಕಾರವನ್ನೂ ಹೊರಗೆ ಹಾಕಿ ನೀವು ನಿಶ್ಚಿಂತರಾಗಬಹುದು.
ನಿಮ್ಮಲ್ಲಿ ಕ್ರೋಧವಿದ್ದರೆ, ಧ್ಯಾನ ಮತ್ತು ಮೌನ ನಿಮಗೆ ಸಹಾಯ ಮಾಡುತ್ತವೆ. ಕ್ರೋಧ ನಿಮ್ಮ ಅಸಹಾಯಕತೆಯ ಪ್ರತೀಕ. ನಿಮ್ಮ ಹೇಡಿತನದಿಂದಾಗಿ ನೀವು ಕ್ರೋಧವನ್ನು ತುಂಬಿಕೊಂಡಿರುತ್ತೀರಿ. ಸನ್ನಿವೇಶಗಳನ್ನು, ಸವಾಲುಗಳನ್ನು, ವೈಫಲ್ಯಗಳನ್ನು ಎದುರಿಸಲು ನೀವು ಶಕ್ತರಾದರೆ, ನೀವು ಕ್ರೋಧವನ್ನು ಹೊರಹಾಕಲಿಕ್ಕೂ ಶಕ್ತರಾಗುತ್ತೀರಿ.
ಇವು ನಿಮ್ಮ ಪ್ರಯತ್ನಗಳಾದವು. ಈ ಹಂತದಲ್ಲಿ ನೀವು ಯಶಸ್ವಿಯಾಗದೆ ಹೋದರೆ, ಸತ್ಸಂಗ, ಸಾಮಾಜಿಕ ಕ್ಷೇತ್ರದ ಸಾಧಕರ ಸಹವಾಸ, ಆಧ್ಯಾತ್ಮಿಕ ಮಾರ್ಗದರ್ಶನ ಮೊದಲಾದವುಗಳನ್ನು ಪ್ರಯತ್ನಿಸಬಹುದು. ಇವೆಲ್ಲ ಚಿಕಿತ್ಸೆಯ ವಿವಿಧ ಹಂತಗಳು. ಈ ಚಿಕಿತ್ಸೆಗೆ ಒಳಗಾಗಲು ನಿಮಗೆ ತೀವ್ರ ಇಚ್ಛೆ, ಬದ್ಧತೆ ಮತ್ತು ಕಠಿಣ ಪರಿಶ್ರಮಗಳು ಬೇಕಾಗುತ್ತವೆ.
ಮನಸ್ಸಿದ್ದರೆ ಮಾರ್ಗವೂ ಇದೆ, ಅಲ್ಲವೆ?