ಶಂಕರಾಚಾರ್ಯ ವಿರಚಿತ ನಾರಾಯಣ ಸ್ತೋತ್ರ : ಕನ್ನಡ ಅರ್ಥಸಹಿತ

ಆದಿ ಶಂಕರಾಚಾರ್ಯರು ರಚಿಸಿರುವ ನಾರಾಯಣ ಸ್ತುತಿಗಳಲ್ಲಿ ಈ ಸ್ತೋತ್ರವು ಅತ್ಯಂತ ಮಧುರ ಹಾಗೂ ಸುಲಲಿತವಾದದ್ದು. ಈ ಸ್ತೋತ್ರವನ್ನು ಪ್ರತಿದಿನವೂ ಮುಂಜಾನೆ ಪಠಿಸಿದಲ್ಲಿ ಮನಸ್ಸಿಗೆ ಶಾಂತಿ, ಉಂಟಾಗಿ ಎಲ್ಲ ದುಷ್ಟ ಶಕ್ತಿಗಳು ದೂರಾಗುವುದು ಹಾಗೂ ಆರೋಗ್ಯ ಮತ್ತು ಅಭ್ಯುದಯವು ದೊರಕುವುದು ಎಂದು ಹೇಳಲಾಗಿದೆ.

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ
ಕರುಣಾಪಾರಾವಾರ ವರುಣಾಲಯಗಂಭೀರ ನಾರಾಯಣ
ಘನನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ

ತಾತ್ಪರ್ಯ :
ಹೇ ದಯಾಸಾಗರನೇ ಎಲ್ಲ ದೇವರುಗಳಲ್ಲಿ ಸಾಗರದಂತೆ ಭವ್ಯವಾದ ನಾರಾಯಣನೇ ! ದಟ್ಟವಾದ ಮೋಡಗಳಂತೆ ಕಂಗೊಳಿಸುವ ಹೇ ದೇವನೆ ! ಕಲಿಯುಗದ ಹಾನಿಕಾರಕ ಹಾಗೂ ನೀಚತನವನ್ನು ನಾಶಮಾಡುವ ಹೇ ದೇವನೆ !

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ
ಪೀತಾಂಬರಪರಿಧಾನ ಸುರಕಲ್ಯಾಣನಿಧಾನ ನಾರಾಯಣ

ತಾತ್ಪರ್ಯ :
ಯಮುನಾ ನದಿಯ ದಡದಲ್ಲಿ ಗೋಪಾಲಕರೊಂದಿಗೆ ಆಟ ಪಾಟಗಳೊಂದಿಗೆ ನಲಿದಾಡಿದ ಹಾಗೂ ಸಾಗರ ಮಥನದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ನಾಲ್ಕನೇ ರತ್ನವಾದ ಕೌಸ್ತುಭಮಣಿಯಿಂದ ಕೂಡಿದ ಮಾಲೆಯನ್ನು ಧರಿಸಿರುವ ಓ ! ನಾರಾಯಣನೇ !
ದೈವತ್ವವನ್ನು ಪ್ರತಿನಿಧಿಸುವ ಹಳದಿ ಬಣ್ಣದ ರೇಷ್ಮೆ ವಸ್ತ್ರವನ್ನು ಧರಿಸಿ ಎಲ್ಲ ದೇವಾನು ದೇವತೆಗಳಿಗೆ ಸದಾಚಾರಗಳ ಭಂಡಾರನಾದ ಓ ! ನಾರಾಯಣನೇ !

ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ

ತಾತ್ಪರ್ಯ :
ಮಹಾಲಕ್ಷ್ಮಿಯನ್ನು ಸಂಕೇತಿಸುವ ರಕ್ತವರ್ಣದ ಗುಂಜ ಮಣಿಗಳಿಂದ ಕೂಡಿದ ಮುದ್ದಾದ ಹಾರವನ್ನು ಧರಿಸಿರುವ ಹಾಗೂ ಬೇಕೆಂದಾಗ ಅದೃಷ್ಯ ಮಾನವನ ರೂಪವನ್ನು ಧರಿಸುವ ಹೇ ದೇವ ದೇವನೇ ! ಓ ! ನಾರಾಯಣ !
ಬೃಂದಾವನದಲ್ಲಿನ ರಾಧೆಯ ತುಟಿಗಳಿಂದ ಹೊರಸೂಸುವ ಜೇನನ್ನು ಸವಿದು ಆನಂದಿಸಿದ ಹಾಗೂ ಚಂದ್ರವಂಶದ ರಾಜಕುವರನೇ! ಓ ! ನಾರಾಯಣನೇ !

ಮುರಲೀಗಾನವಿನೋದ ವೇದಸ್ತುತಭೂಪಾದ ನಾರಾಯಣ
ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ

ತಾತ್ಪರ್ಯ :
ಕೊಳಲಿನಿಂದ ಸುಶ್ರಾವ್ಯವಾದ ಗಾಯನವನ್ನು ಹೊರಡಿಸಿ ಅದರಿಂದ ಆನಂದತುಂದಿಲನಾದ ಹೇ ದೇವನೇ ! ನಿನ್ನ ಪವಿತ್ರ ಪಾದ ಪದ್ಮಗಳನ್ನು ವೇದಗಳೇ ವೈಭವಯುತವಾಗಿ ಹೊಗಳಿ ಸ್ತುತಿಸಿರುವುದು ಓ ನಾರಾಯಣನೇ ! ವರ್ಣ ವೈವಿಧ್ಯಮಯ ನೀಲಿ ಬಣ್ಣದ ಸುಂದರ ನವಿಲಿಗರಿಯನ್ನು ಧರಿಸಿರುವ ಹೇ ದೇವನೇ ! ವಿಷಪೂರಿತ ಕಾಳಿಂಗ ಸರ್ಪದ ಹೆಡೆಯ ಮೇಲೇರಿ ನರ್ತಿಸಿದ ಹೇ ದೇವನೇ! ನಾರಾಯಣನೇ !

ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ
ಜಲರುಹದಲನಿಭನೇತ್ರ ಜಗದಾರಂಭಕಸೂತ್ರ ನಾರಾಯಣ

ತಾತ್ಪರ್ಯ :
ಕಮಲ ಪುಷ್ಪವನ್ನೆ ಆಭರಣವನ್ನಾಗಿ ಧರಿಸಿರುವ ಹಾಗೂ ಪದ್ಮ ಪುತ್ರಿ ರುಕ್ಮಿಣಿಯ ರಮಣನೇ ಓ, ದೇವ ! ನಾರಾಯಣನೇ ! ಪದ್ಮಪುಷ್ಪದಂಥಹ ನೇತ್ರವುಳ್ಳವನೇ ವಿಶ್ವ ಸೃಷ್ಟಿಗೇ ಕಾರಣನೇ ಓ ದೇವ ! ನಾರಾಯಣನೇ !

ಪಾತಕರಜನೀಸಂಹರ ಕರುಣಾಲಯ ಮಾಮುದ್ಧರ ನಾರಾಯಣ
ಅಘ ಬಕಹಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ

ತಾತ್ಪರ್ಯ :
ದುಷ್ಕರ್ಮಗಳ ಕತ್ತಲಿನ ಕೂಪವನ್ನು ನಾಶಮಾಡುವ ಓ ದೇವನೇ ! ನಿನ್ನ ಕರುಣೆಯಿಂದ ನನ್ನನ್ನು ಉದ್ಧರಿಸುವ ನಾರಾಯಣನೇ ! ನಿನ್ನ ಸೋದರಮಾವನಾದ ಕಂಸನು ಕಳುಹಿಸಿದ ಅಘಾಸುರ ಹಾಗೂ ಭಗಾಸುರರನ್ನು ಸಂಹರಿಸಿದವನೇ ಹಾಗೂ ಕಂಸನ ಪರಮ ವೈರಿಯೇ ಮುರಾಸುರನ ವೈರಿಯೇ ಓ ಕೇಶವಾ ಕೃಷ್ಣಾ ನಾರಾಯಣನೇ !

ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ
ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ

ತಾತ್ಪರ್ಯ :
ಬಂಗಾರದಂತೆ ಝಗ ಝಗಿಸುವ ಹಳದಿ ಬಣ್ಣದ ಪೀತಾಂಬರವನ್ನು ಧರಿಸಿರುವ ಓ ದೇವನೇ ! ಲಕ್ಷ್ಮೀರಮಣ ನಾರಾಯಣನೇ ಕೃಪೆದೋರಿ ನನ್ನನ್ನು ರಕ್ಷಿಸು. ಓ ದೇವನೇ ದಶರಥ ರಾಜಕುಮಾರನೇ ಅಸುರರ ದರ್ಪವನ್ನು ನಾಶಮಾಡಿದವನೇ ಹೇ ನಾರಾಯಣನೇ !

ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ
ಸರಯೂತೀರವಿಹಾರ ಸಜ್ಜನ ಋಷಿಮಂದಾರ ನಾರಾಯಣ

ತಾತ್ಪರ್ಯ :
ಗೋವರ್ಧನ ಪರ್ವತವನ್ನು ಉದ್ಧರಿಸಿದ ಓ ದೇವನೇ ! ಗೋಪಿಕಾ ಸ್ತ್ರೀಯರ ಚಿತ್ತ ಚೋರನೇ ಹೇ ನಾರಾಯಣನೇ ! ಓ ದೇವನೇ! ಸರಯೂ ನದಿ ತೀರದಲ್ಲಿ ಆಡಿ ಬೆಳೆದವನೇ ಸಜ್ಜನರ ಆಸೆಗಳನ್ನು ಪೂರೈಸುವ ವೃಕ್ಷದಂತಿರುವ ಓ ದೇವನೇ ನಾರಾಯಣನೇ !

ವಿಶ್ವಾಮಿತ್ರಮಖತ್ರ ವಿವಿಧಪರಾಸುಚರಿತ್ರ ನಾರಾಯಣ
ಧ್ವಜವಜ್ರಾoಕುಶಪಾದ ಧರಣೀಸುತಸಹಮೋದ ನಾರಾಯಣ

ತಾತ್ಪರ್ಯ :
ವಿಶ್ವಾಮಿತ್ರರ ಯಾಗವನ್ನು ರಕ್ಷಿಸಿ ಪರಿಪೂರ್ಣಗೊಳಿಸಿದ ಅನೇಕ ಉತ್ತಮ ಚರಿತ್ರೆಯುಳ್ಳ ನಾರಾಯಣನೇ ! ಪಾದಗಳಲ್ಲಿ ಧ್ವಜ ಹಾಗೂ ಧ್ವಜ ಸ್ತಂಭದ ಚಿನ್ಹೆಯುಳ್ಳ ಹೇ ದೇವನೇ ! ಭೂದೇವಿಯ ಮಗಳಿಂದ ಆನಂದವನ್ನು ಪಡೆದ ಹೇ ದೇವನೇ ನಾರಾಯಣನೇ!

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಕೃತಿಲೀಲ ನಾರಾಯಣ
ದಶರಥವಾಗ್ಧೃತಿಭಾರ ದಂಡಕವನಸಂಚಾರ ನಾರಾಯಣ

ತಾತ್ಪರ್ಯ :
ಜನಕರಾಜನ ಪುತ್ರಿಗಾಗಿ ಕಾದುಕೊಂಡಿದ್ದ ಓ ದೇವನೇ ! ಜೀವನ ನಾಟಕದ ಆಟಗಳನ್ನು ನೋಡಿ ಆನಂದಿಸಿದ ದೇವನಿಗೆ ಜಯವಾಗಲಿ ಜಯವಾಗಲಿ ನಾರಾಯಣನೇ ! ದಶರಥ ರಾಜನ ಮಾತನ್ನು ಪಾಲಿಸಿದ ಓ ದೇವನೇ ! ದಟ್ಟವಾದ ದಂಡಕವನವನ್ನೆಲ್ಲ ಬರೀ ಕಾಲ್ನಡಿಗೆಯಲ್ಲಿ ಸಂಚರಿಸಿದ ಓ ದೇವನೇ ನಾರಾಯಣನೇ !

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ
ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ

ತಾತ್ಪರ್ಯ :
ಕಂಸನ ಆಸ್ಥಾನದಲ್ಲಿ ಮುಷ್ಟಿಯುದ್ಧದಲ್ಲಿ ದುಷ್ಟ ಮುಷ್ಟಿಕ ಹಾಗೂ ಚಾಣೂರರನ್ನು ಸಂಹಾರ ಮಾಡಿದ ಓ ದೇವನೇ ! ಋಷಿ ಮುನಿಗಳ ಮನಸ್ಸಿನಲ್ಲಿ ನೆಲೆಸಿರುವ ಓ ದೇವನೇ ! ನಾರಾಯಣನೇ ! ಪರಾಕ್ರಮಿ ವಾಲಿಯನ್ನು ಸಂಹಾರ ಮಾಡಿ ಸುಗ್ರೀವನಿಗೆ ಸಹಾಯ ಮಾಡಿದ ಓ ದೇವನೇ ! ನಾರಾಯಣನೇ !

ಮಾಂ ಮುರಲೀಕರ ಧೀವರಪಾಲಯ ಪಾಲಯ ಶ್ರೀಧರ ನಾರಾಯಣ
ಜಲನಿಧಿ ಬಂಧನ ಧೀರ ರಾವಣಕಂಠವಿದಾರ ನಾರಾಯಣ

ತಾತ್ಪರ್ಯ :
ಕೊಳಲನ್ನು ಕೈಯಲ್ಲಿ ಹಿಡಿದಿರುವ ಓ ಶೌರಿಯೇ ಲಕ್ಷ್ಮೀರಮಣನೇ ಸಹಾಯ ಮಾಡು ಸಹಾಯ ಮಾಡು ನಾರಾಯಣನೇ. ಸಾಗರದ ಮೇಲೆ ಸೇತುವೆ ನಿರ್ಮಿಸಿದ ಓ ದೇವನೇ ! ರಾವಣನ ದಶ ಶಿರಗಳನ್ನು ತರಿದ ನಾರಾಯಣನೇ !

ತಾಟಕಮರ್ದನ ರಾಮ ನಟಗುಣವಿವಿಧ ಸುರಾಮ ನಾರಾಯಣ
ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ

ತಾತ್ಪರ್ಯ :
ತಾಟಕಿಯ ಅಹಂಕಾರವನ್ನು ಸಂಹರಿಸಿದ ಓ ದೇವನೇ ! ದೇವಾನು ದೇವತೆಗಳು ಗಾನ ನಾಟ್ಯಗಳಿಂದ ವರ್ಣಿಸಲ್ಪಡುವ ಓ ದೇವನೇ ನಾರಾಯಣನೇ ! ಗೌತಮ ಪತ್ನಿ ಅಹಲ್ಯೆಯಿಂದ ಪೂಜಿಸಲ್ಪಟ್ಟ ಹೇ ದೇವನೇ ಕರುಣಾಪೂರಿತ ದೃಷ್ಟಿಯುಳ್ಳವನೇ ನಾರಾಯಣನೇ !

ಸಂಭ್ರಮಸೀತಾಹಾರ ಸಾತಕೇತಪುರವಿಹಾರ ನಾರಾಯಣ
ಅಚಲೋಧೃತಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ

ತಾತ್ಪರ್ಯ :
ಜನಕರಾಜನ ಪ್ರೀತಿಯ ಪುತ್ರಿಯ ಮನವನ್ನು ಕದ್ದ ಓ ದೇವನೇ ! ಅಯೋಧ್ಯಾ ನಿವಾಸಿಯೇ ನಾರಾಯಣನೇ, ಪರ್ವತವನ್ನೇ ಮೇಲೆತ್ತಲು ಶಕ್ಯನಾದ ಓ ದೇವನೇ ! ಸದಾ ಭಕ್ತರನ್ನು ಆಶೀರ್ವದಿಸಲು ಉತ್ಸುಕನಾಗಿರುವ ಓ ದೇವನೇ ! ನಾರಾಯಣನೇ !

ನೈಗಮಗಾನವಿನೋದ ರಕ್ಷಿತ ಸುಪ್ರಹ್ಲಾದ ನಾರಾಯಣ
ಭಾರತ ಯತಿವರಶಂಕರ ನಾಮಾಮೃತಮಖಿಲಾಂತರ ನಾರಾಯಣ

ತಾತ್ಪರ್ಯ :
ಸಾಮಗಾನ ಪ್ರಿಯನಾದ ಓ ದೇವನೇ ! ಹಿರಣ್ಯ ಕಶಿಪುವಿನ ಪುತ್ರನಾದ ಪ್ರಹ್ಲಾದನನ್ನು ರಾಕ್ಷಸರಿಂದ ರಕ್ಷಿಸಿದವನೇ ಓ ನಾರಾಯಣನೇ ! ಆದಿ ಶಂಕರರು ರಚಿಸಿದ ಈ ಹರಿಯ ನಾಮದ ಅಮೃತ ಸಾರವು ಜಗತ್ತಿನ ಸಮಸ್ತರಿಗೂ ಶುಭವನ್ನುಂಟುಮಾಡಲಿ.

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ

ತಾತ್ಪರ್ಯ :
ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ !

Leave a Reply