ಬ್ರಾಹ್ಮೀ ಮುಹೂರ್ತದ ಮಹತ್ವ ಮತ್ತು ಲಾಭಗಳೇನು ಗೊತ್ತೆ?

ಪ್ರತಿ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ ಎನ್ನುತ್ತದೆ ಪೂರ್ವಜರ ಜ್ಞಾನ. ಯಾರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಚಟುವಟಿಕೆಗಳನ್ನು ನಡೆಸುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆ ಅನ್ನುತ್ತದೆ ಆಯುರ್ವೇದ.

ರಾತ್ರಿಯ ಅಂತಿಮ ಜಾವ(ಪ್ರಹರ)ವೇ ಬ್ರಹ್ಮ ಅಥವಾ ಬ್ರಾಹ್ಮೀ ಮುಹೂರ್ತ. ಶಾಸ್ತ್ರಗಳ ಪ್ರಕಾರ ಮುಂಜಾನೆಯ 4.24ರಿಂದ 5.10ರವರೆಗಿನ ಸಮಯ. ಸರಳವಾಗಿ ಗುರುತಿಸುವುದಾದರೆ, ಉಷೆ ಮೂಡುವ  ಜಾವ.

ನಮ್ಮ ಪ್ರಾಚೀನ ಋಷಿಮುನಿಗಳು ಈ ಸಮಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಈ ಸಮಯದಲ್ಲಿ ಧ್ಯಾನ, ಯೋಗ, ಜಪ, ಪೂಜೆ ಮುಂತಾದವನ್ನು ನಡೆಸಿದರೆ ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗಿದೆ. ಪ್ರತಿ ದಿನ ಬ್ರಾಹ್ಮೀ ಮುಹೂರ್ತದಲ್ಲಿ
ಏಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ ಎನ್ನುತ್ತದೆ ಪೂರ್ವಜರ ಜ್ಞಾನ. ತಮ್ಮ ಮುಂದಿನ ಪೀಳಿಗೆ ಈ ಮುಹೂರ್ತದ ಲಾಭ ಪಡೆಯಲೆಂದು ಅದರ ಪ್ರಯೋಜನಗಳನ್ನು ಹೇಳಿದ್ದರ ಜೊತೆಗೇ, ಅದನ್ನು ಬಿಟ್ಟುಕೊಟ್ಟರೆ ಆಗುವ ನಷ್ಟವನ್ನೂ ಹೇಳಿ ಕಿವಿ ಹಿಂಡಿದ್ದಾರೆ. “ಬ್ರಹ್ಮಮುಹೂರ್ತೇ ಯಾ ನಿದ್ರಾ ಸಾ ಪುಣ್ಯಕ್ಷಯಕಾರಿಣೀ” – ಬ್ರಹ್ಮಮುಹೂರ್ತದಲ್ಲಿ ಯಾರು ನಿದ್ರೆ ಮಾಡುತ್ತಾರೋ ಅವರ ಪುಣ್ಯಫಲಗಳು ನಾಶವಾಗುತ್ತವೆ ಎಂದು ಹೆದರಿಸಿದ್ದಾರೆ.

ಈ ಕಾಲಮಾನದ ನಾವು ಅದೆಷ್ಟು ಪುಣ್ಯ ಸಂಚಯ ಮಾಡಿರುವೆವೋ ನಮಗೆ ತಿಳಿದಿಲ್ಲ. ಆದರೆ ಬ್ರಾಹ್ಮೀ ಮುಹೂರ್ತದಲ್ಲಿ ಏಳದೆ ಸೂರ್ಯನ ಕಿರಣ ಮನೆಯೊಳಗೆ ಬರುವ ತನಕ ನಿದ್ರಿಸುವ ನಾವು ಸಾಕಷ್ಟು ಕಳೆದುಕೊಳ್ಳುವದಂತೂ ಹೌದು. ಅವುಗಳಲ್ಲಿ ಆರೋಗ್ಯ, ಲವಲವಿಕೆ, ಹೆಚ್ಚುವರಿ ಸಮಯ, ಶುದ್ಧಗಾಳಿ ಸೇವನೆ ಮುಖ್ಯವಾದವು.

ಯಾರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಚಟುವಟಿಕೆಗಳನ್ನು ನಡೆಸುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆ ಅನ್ನುತ್ತದೆ ಆಯುರ್ವೇದ. ನಿದ್ರೆ ಮುಗಿಸಿ ಎದ್ದ ಶರೀರಕ್ಕೆ ಶುದ್ಧ ತಂಗಾಳಿ ಹೊಸ ಚೈತನ್ಯ ತುಂಬುತ್ತದೆ. ಈ ಅವಧಿಯಲ್ಲಿ ಯಾವ ಅಡೆತಡೆಗಳೂ ಇರದೆ ಏಕಾಗ್ರತೆ ಸುಲಭಸಾಧ್ಯವಾಗುತ್ತದೆ. ನಾವು ಓದುವ, ಅಭ್ಯಾಸ ಮಾಡುವ ಸಂಗತಿಗಳು ಸುಲಭವಾಗಿ ಮನವರಿಕೆಯಾಗುತ್ತವೆ. ಆದ್ದರಿಂದ ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತವೆಂದು ಹೇಳಲಾಗಿದೆ.

ಸಾಮಾನ್ಯವಾಗಿ ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಾಹ್ಮೀ ಮುಹೂರ್ತದ ಸಮಯದಲ್ಲೇ. ವಿಗ್ರಹಕ್ಕೆ ಅಲಂಕಾರ ಮಾಡಿ ಮೊದಲ ಪೂಜೆಯನ್ನೂ ಈ ಮುಹೂರ್ತದಲ್ಲಿ ನಡೆಸಲಾಗುತ್ತದೆ. ಈ ಸಂಪ್ರದಾಯಕ್ಕೆ ಉದಾಹರಣೆಯಾಗಿ ರಾಮಾಯಣದ ಪ್ರಸಂಗವನ್ನು ಹೇಳಲಾಗುತ್ತದೆ. ಲಂಕೆ ತಲುಪಿದ್ದ ಆಂಜನೇಯ, ಸೀತೆಯನ್ನು ಹುಡುಕಿ ಅಲೆಯುತ್ತಾ ಅಶೋಕವನ ಹೊಕ್ಕಿದ್ದು ಬ್ರಾಹ್ಮೀ ಮುಹೂರ್ತದಲ್ಲೇ. ಆ ಹೊತ್ತಿಗಾಗಲೇ ಅಲ್ಲಿ ವೇದಮಂತ್ರಗಳು ಮೊಳಗುತ್ತಿದ್ದು, ಯಜ್ಞಾಕಾರ್ಯಾದಿಗಳೂ ನಡೆಯುತ್ತಿದ್ದವು ಅನ್ನುತ್ತದೆ ವಾಲ್ಮೀಕಿ ರಾಮಾಯಣ.

ಆಧ್ಯಾತ್ಮಿಕ ಲಾಭ ಬಯಸುವವರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಶೌಚಾದಿಗಳ ನಂತರ ಒಂದು ಲೋಟ ನೀರು ಕುಡಿದು ಧ್ಯಾನ ಅಥವಾ ಜಪಕ್ಕೆ ಕುಳಿತುಕೊಳ್ಳಬೇಕು. ಈ ಅವಧಿಯಲ್ಲಿ ಧ್ಯಾನ, ಅದರಲ್ಲೂ ಅಂತರಂಗ ಧ್ಯಾನ ಹೆಚ್ಚು ಫಲ ಕೊಡುತ್ತದೆ. ಏಕಾಗ್ರತೆ ಸಿದ್ಧಿಸುವುದು ಮಾತ್ರವಲ್ಲ, ಆ ಅವಧಿಯಲ್ಲಿನ್ನೂ ನಿಮ್ಮ ದೈನಂದಿನ ಜಂಜಡಗಳ ಹೊರೆ ಇಲ್ಲದೆ ಖಾಲಿ ಇರುವುದರಿಂದ ನಿಮ್ಮೊಳಗೆ ನೀವು ಮುಳುಗಲು ಸಹಾಯವಾಗುತ್ತದೆ. ನಿಮ್ಮ ಶುದ್ಧರೂಪದೊಡನೆ ವಿಹರಿಸಲು ಸಾಧ್ಯವಾಗುತ್ತದೆ.

ಲೌಕಿಕ ಲಾಭಕ್ಕೆ ಈ ಹೊತ್ತಿನಲ್ಲಿ ವರ್ಕೌಟ್, ಜಾಗಿಂಗ್, ವಾಕಿಂಗ್, ಏರೋಬಿಕ್ಸ್, ಯೋಗಾಸನ, ಸಂಗೀತಾಭ್ಯಾಸ, ನೃತ್ಯಾಭ್ಯಾಸ, ವಿದ್ಯಾಭ್ಯಾಸ – ಯಾವುದನ್ನಾದರೂ ಮಾಡಿ. ಈ ಜಾವದಲ್ಲಿ ನಡೆಸುವ ಈ ಯಾವುದೇ ಕಾರ್ಯ ನಿಮಗೆ ಉಳಿದೆಲ್ಲ ಜಾವಗಳಿಗಿಂತ ಹೆಚ್ಚು ಫಲ ನೀಡದೆ ಹೋದರೆ ಮತ್ತೆ ಹೇಳಿ!

 

Leave a Reply