ಕೋಪ ಬಂದಿದೆಯೇ? ಕನ್ನಡಿ ಮುಂದೆ ನಿಲ್ಲಿ!

ನಮಗೆ ಕೋಪ ಬಂದಾಗ ನಾವು ಮಾಡಬೇಕಾಗಿರುವುದು ಇಷ್ಟೆ, ಒಮ್ಮೆ ಕನ್ನಡಿಯ ಮುಂದೆ ಹೋಗಿ ನಮ್ಮನ್ನು ನಾವು ನೋಡಿಕೊಳ್ಳಬೇಕು, ಆಗ ನಾವು ಕೋಪದಿಂದ ಎಷ್ಟು ಮೂರ್ಖರಾಗಿದ್ದೇವೆ ಎಂದು ನಮಗೆ ತಿಳಿಯುತ್ತದೆ. ಹಾಗೇ ಒಮ್ಮೆ ನಗುವೂ  ಬರುತ್ತದೆ. ಇದು ಸತ್ಯ….! ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು

ಮನುಷ್ಯನಿಗೆ ಎಲ್ಲಾ ತರಹದ ಬಾವನೆಗಳು ಇರುತ್ತವೆ, ಬಾವನೆಗಳೆಂದರೆ ಸಂತೋಷ, ಕೋಪ, ಹೊಟ್ಟೆಕಿಚ್ಚು, ಕೋಪ ಇತ್ಯಾದಿಗಳು. ಆದರೆ ಈ ಎಲ್ಲಾ ಬಾವನೆಗಳಲ್ಲಿ ಕೋಪ ಬಹಳ ವಿಷೇಶವಾದದು. ಕೋಪವು ಮನುಷ್ಯನಿಗೆ ದೇವರು ಕೊಟ್ಟ ವರವೂ ಹೌದು, ಶಾಪವೂ ಹೌದು. ಕೋಪದಿಂದ ಮನುಷ್ಯ ಸುಟ್ಟುಹೋಗುತ್ತಾನೆ ಎಂದು ಕೆಲವರು ಹೇಳುತ್ತಾರೆ. ಆದರೆ ಕೋಪವನ್ನು ನಿಯಂತ್ರಿಸಿ ಅದನ್ನು ಬಳಸಿಕೊಳ್ಳುವುದನ್ನು ಕಲಿತರೆ ಮನುಷ್ಯನು ಅತ್ಯಂತ ಸಂತೋಷವಾಗಿ ಹಾಗು ಯಶಸ್ವಿಯಾಗಿ ಬದುಕಬಹುದು.

ಕೋಪವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ಅಥವಾ ಕೋಪವನ್ನೇ ಮಾಡಿಕೊಳ್ಳದೆ ಬದುಕಲು ಸಾಧ್ಯವಿಲ್ಲ. ಕೋಪ ಮಾಡಿಕೊಳ್ಳುವುದು ಒಳ್ಳೆಯದೇ. ಅದು ನಮ್ಮೊಳಗಿನ ಅಸಹನೆ, ಅಸಹಾಯಕತೆ ಮತ್ತು ಭಾವನೆಗಳನ್ನು ಹೊರಹಾಕುತ್ತದೆ. ಆದರೆ ಕೋಪವು ಬಹಳ ಜಾಸ್ತಿಯಾದರೆ ಮನುಷ್ಯನು ಅತ್ಯಂತ ಕೆಟ್ಟವನಾಗುತ್ತಾನೆ. ಅತ್ಯಂತ ವಿಕೃತನಾಗುತ್ತಾನೆ, ಕೋಪದಲ್ಲಿ ಮನುಷ್ಯನು ಏನು ಬೇಕಾದರೂ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾನೆ.

ಆದರೆ ಅವನಿಗೆ ತಿಳಿಯದೇ ಈ ಸಾಮರ್ಥ್ಯವು ಎಲ್ಲಿಂದ ಬರುತ್ತದೆ? ಕೋಪದಿಂದ ಮನುಷ್ಯ ಅಷ್ಟು ವಿಕೃತನು ಹೇಗೆ ಆಗುತ್ತಾನೆ? ಒಬ್ಬ ಮನುಷ್ಯನಿಗೆ ಕೋಪ ಬಂದಾಗ ಅವನ ನರನರದಲ್ಲಿರುವ ಶಕ್ತಿಗಳೆಲ್ಲ ಎದ್ದೇಳುತ್ತವೆ. ನಮ್ಮ ತಲೆ ಅತ್ಯಂತ ಕೆಟ್ಟ ಸ್ಥಿತಿಗೆ ಹೋಗುತ್ತದೆ. ನಮ್ಮ ಮುಷ್ಟಿಗಳು ಬಿಗಿಯಾಗುತ್ತವೆ. ನಮಗೆ ಯಾರ ಮೇಲೆ ಅಥವಾ ಯಾವುದರ ಮೇಲೆ ಕೋಪ ಬಂದಿರುತ್ತದೆಯೋ ಅವರನ್ನು ವಿಧವಿಧವಾಗಿ ದಂಡಿಸುವ ಆಲೋಚನೆ ನಮ್ಮ ಮನಸ್ಸಿನಲ್ಲಿ ಹುಟ್ಟುತ್ತದೆ, ನಮ್ಮ ಮನಸ್ಸು ವಿಕೃತವಾಗುತ್ತದೆ.

ಇಂತಹ ಕೋಪ ನಮಗೆ ಬಂದಾಗ ನಾವು ಮಾಡಬೇಕಾಗಿರುವುದು ಇಷ್ಟೆ, ಒಮ್ಮೆ ಕನ್ನಡಿಯ ಮುಂದೆ ಹೋಗಿ ನಮ್ಮನ್ನು ನಾವು ನೋಡಿಕೊಳ್ಳಬೇಕು, ಆಗ ನಾವು ಕೋಪದಿಂದ ಎಷ್ಟು ಮೂರ್ಖರಾಗಿದ್ದೇವೆ ಎಂದು ನಮಗೆ ತಿಳಿಯುತ್ತದೆ. ಹಾಗೇ ಒಮ್ಮೆ ನಗುವೂ  ಬರುತ್ತದೆ. ಇದು ಸತ್ಯ. ಕೋಪವು ನಮ್ಮಲ್ಲಿ ತುಂಬಾ ಶಕ್ತಿಯನ್ನು ತರುತ್ತದೆ ಆ ಶಕ್ತಿಯನ್ನೇ ನಾವು ಬಳಕೆ ಮಾಡಿಕೊಂಡರೆ ನಮಗೆ ಅದರಿಂದ ಬಹಳ ಲಾಭವಿದೆ. ಒಬ್ಬ ಮನುಷ್ಯನು ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸೋತು ತನ್ನ ಮೇಲೆ ತಾನೆ ಕೋಪಿಸಿಕೊಂಡು ಛಲದಿಂದ ಮತ್ತೆ ದುಡಿದು ದಂತಕಥೆಗಳಾಗಿದ್ದು ನಮ್ಮ ಇತಿಹಾಸದಲ್ಲಿ ಎಷ್ಟೋ ನಡೆದಿದೆ. ಹೀಗಾಗಿ ಕೋಪವು ನಮಗೆ ಒಳಿತನ್ನು ಮಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಕೋಪವು ಮನುಷ್ಯನಿಗೆ ಒಳಿತನ್ನೂ ಮಾಡುತ್ತದೆ, ಕೆಟ್ಟದನ್ನೂ ಮಾಡುತ್ತದೆ. ಆದರೆ ಅದರ ಪರಿಣಾಮ ತಂದುಕೊಳ್ಳುವುದು ಮನುಷ್ಯನ ಕೈಯಲ್ಲಿಯೇ ಇದೆ. ನಾವು ಕೋಪವನ್ನು ಹೇಗೆ ಬಳಸಿಕೊಳ್ಳುತ್ತೇವೋ ಹಾಗೆ ನಮ್ಮ ಜೀವನವು ಸಾಗುತ್ತದೆ.

ಆದ್ದರಿಂದ, ಕೋಪವನ್ನು ಅಡಗಿಸುವ ಅಥವಾ ಆ ಕೋಪವು ವಿಕೃತಿಗೆ ಬದಲಾಗುವ ಮುನ್ನವೆ ನಾವು ಬುದ್ದಿವಂತರಾಗಿ ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ ಕೋಪವನ್ನು ಒಳಗೇ ಅಡಗಿಸಿಟ್ಟರೆ ಮನುಷ್ಯನು ರಾಕ್ಷಸನಾಗುತ್ತಾನೆ. ಬೇರೆಯವರ ಮೇಲೆ ಆ ಕೋಪವನ್ನು ತೋರಿಸಿದರೆ ಆ ಮನುಷ್ಯರಿಗೆ ತೊಂದರೆ ಮಾಡುತ್ತಾನೆ. ಹೀಗಾಗಿ ಕೋಪವನ್ನು ಅಡಗಿಸುವುದಲ್ಲ, ವಿಕೃತಿಗೆ ತಿರುಗುವಂತೆ ಮಾಡುವುದಲ್ಲ, ಅದನ್ನು ನಮ್ಮ ಬೆಳವಣಿಗೆಗೆ ಬಳಸಿಕೊಳ್ಳುವುದನ್ನು ನಾವು ಅತ್ಯಂತ ಬೇಗನೆ ಕಲಿಯಬೇಕಾಗಿದೆ.

Leave a Reply