ಯಾವುದು ಪೂಜೆ? ಯಾವುದು ಪೂಜೆಯಲ್ಲ? ~ ಶಂಕರಾಚಾರ್ಯರ ವಿವರಣೆ : ನಿತ್ಯಪಾಠ

ಪೂಜೆ ಎಂದರೇನು ಎಂದು ತಮ್ಮ ‘ಪರಾ ಪೂಜಾ ಸ್ತೋತ್ರ’ದಲ್ಲಿ ಶಂಕರಾಚಾರ್ಯರು ಯಾವುದು ಪೂಜೆಯಾಗಲಾರದು ಎಂಬುದನ್ನು ಪ್ರಶ್ನೆಗಳನ್ನು ಕೇಳುವ ಮೂಲಕ ವಿವರಿಸಿದ್ದಾರೆ. ಹಾಗೆಯೇ ಯಾವುದು ಪೂಜೆ ಎಂಬುದನ್ನು ‘ಶಿವಮಾನಸ ಪೂಜಾ’ ಸ್ತೋತ್ರದಲ್ಲಿ ಹೇಳಿದ್ದಾರೆ.

lach

ಪೂಜೆ ಎಂದರೇನು? ಧೂಪ ದೀಪ, ಆರತಿ, ಅಲಂಕಾರ ಇವೆಲ್ಲ ನಮ್ಮ ಸಂತೋಷಕ್ಕಾಗಿ ನಾವು ಹುಟ್ಟುಹಾಕಿದ ಆಚರಣೆಗಳು. ವಾಸ್ತವದಲ್ಲಿ ಸತ್ಕರ್ಮಗಳೇ ಪೂಜೆ ಪುನಸ್ಕಾರ ಎಲ್ಲವೂ ಅನ್ನುತ್ತಾರೆ ಜ್ಞಾನಿಗಳು.

ಪೂಜೆ ಎಂದರೇನು ಎಂದು ತಮ್ಮ ಪರಾಪೂಜಾಸ್ತೋತ್ರದಲ್ಲಿ ಶಂಕರಾಚಾರ್ಯರು ಯಾವುದು ಪೂಜೆಯಾಗಲಾರದು ಎಂಬುದನ್ನು ಪ್ರಶ್ನೆಗಳನ್ನು ಕೇಳುವ ಮೂಲಕ ವಿವರಿಸಿದ್ದಾರೆ.

“ಅಖಂಡ, ಸಚ್ಚಿದಾನಂದಸ್ವರೂಪ, ನಿರ್ವಿಕಲ್ಪ, ಅದ್ವಿತೀಯಭಾವನಾಗಿರುವ ಭಗವಂತನ ಪೂಜೆಯನ್ನು ನೀವು ಹೇಗೆ ಮಾಡುತ್ತೀರಿ? ಸರ್ವವ್ಯಾಪಿಯಾಗಿರುವ ಭಗವಂತನನ್ನು ಪ್ರತ್ಯೇಕವಾಗಿ ಆವಾಹನೆ ಮಾಡುವ ಅಗತ್ಯವಿದೆಯೇ? ಸ್ವತಃ ಮೂಲಾಧಾರವಾಗಿರುವ ಅವನಿಗೆ ನೀವು ಆಸನವನ್ನು ನೀಡಬಲ್ಲಿರಾ? ನಿರ್ಮಲಸ್ವರೂಪಿಯಾಗಿರುವ ಭಗವಂತನಿಗೆ ಅರ್ಘ್ಯ, ಆಚಮನ, ಸ್ನಾನಾಭಿಷೇಕಗಳ ಅಗತ್ಯವಿದೆಯೇ? ಯಾರು ಚಿದಂಬರನೋ ಅವನಿಗೆಂಥ ವಸ್ತ್ರ ನೀಡುವಿರಿ!? ಅಗೋತ್ರನಿಗೆ ಯಜ್ಞೋಪವೀತ ನೀಡುವುದಾದರೂ ಹೇಗೆ? ನಿರ್ಲೇಪನಿಗೆ ಗಂಧಚಂದನವೇಕೆ? ನಿರ್ವಸಿತನಿಗೆ ಪತ್ರೆ – ಪುಷ್ಪಗಳೇಕೆ? ನಿರಾಕಾರನಿಗೆ ಅಲಂಕಾರವೇಕೆ? ನಿರಂಜನನಿಗೆ ಧೂಪವೇಕೆ? ಸರ್ವಸಾಕ್ಷಿಗೆ ದೀಪವೇಕೆ? ನಿಜಾನಂದ ತೃಪ್ತನಿಗೆ ನೈವೇದ್ಯ ಬೇಕೆ? ಸ್ವಯಂಪ್ರಕಾಶನಿಗೆ ಆರತಿ ಬೇಕೆ? ಆದಿ-ಅಂತ್ಯವಿಲ್ಲದ, ಅನಂತನಾಗಿರುವವನಿಗೆ ಪ್ರದಕ್ಷಿಣೆಯೇಕೆ? ವೇದಶಾಸ್ತ್ರಗಳೂ ಯಾರ ಸ್ವರೂಪವನ್ನು ಅರಿಯದೇ “ನೇತಿ ನೇತಿ” ಎನ್ನುತ್ತಿವೆಯೋ ಅಂಥವನನ್ನು ಹೇಗೆ ಸ್ತುತಿಸುತ್ತೀರಿ?” ಎಂದು ಕೇಳುತ್ತಾರೆ ಶಂಕಾರಾಚಾರ್ಯ.

(ಮೂಲಪಾಠವನ್ನು ಇಲ್ಲಿ ನೋಡಿ : https://aralimara.com/2018/02/09/stotra/)

“ಸತ್”ಎಂಬುದು ಎಲ್ಲೆಡೆಯೂ ಇದೆ. ಸತ್ಕರ್ಮದಲ್ಲಿ “ಸತ್” ಅಡಗಿದೆ. ಇದನ್ನರಿತು ಸದಾ ಸತ್ಕರ್ಮಗಳನ್ನೇ ಆಚರಿಸಬೇಕು. ಸತ್ಕರ್ಮಗಳನ್ನು ಆಚರಿಸದೆ ಎಷ್ಟು ದೊಡ್ಡ ಪೂಜೆ ಮಾಡಿದರೂ ಅದು ವ್ಯರ್ಥ.

“ಶಿವಮಾನಸ ಪೂಜಾ” ಸ್ತೋತ್ರದಲ್ಲಿ ಪೂಜೆ ಎಂದರೇನೆಂದು ಶ್ರೀ ಶಂಕರರು ವಿವರಿಸುವುದು ಹೀಗೆ:

ಆತ್ಮಾ ತ್ವಂ ಗಿರಿಜಾಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹೇ
ಪೂಜಾ ತೇ ವಿವಿಧೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ |
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವೋ ಗಿರಾ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ! ತವಾರಾಧನಮ್ || ಶಿವಮಾನಸ ಪೂಜಾ | 4 ||

“ನಮ್ಮ ಶರೀರವೇ ಒಂದು ಮಂದಿರ. ಆತ್ಮ ಸ್ವಯಂ ಪರಶಿವ. ಪ್ರಕೃತಿ ಸ್ವರೂಪಿಣಿ ಪಾರ್ವತಿಯೇ
ಬುದ್ಧಿ. ಪ್ರಾಣವೇ ಸಹಯೋಗಿ. ಸತ್ಕಾರ್ಯೇ ಪೂಜೆ. ನಿದ್ರೆಯೇ ಸಮಾಧಿಸ್ಥಿತಿ. ಸಂಚಾರವೇ ಪ್ರದಕ್ಷಿಣೆ. ಪ್ರತಿಯೊಂದು ಮಾತೂ ಪರಮಾತ್ಮನ ಸ್ತುತಿ. ನಾವು ಮಾಡುವ ಪ್ರತಿಯೊಂದು ಕಾರ್ಯವೂ ಪರಮಾತ್ಮನ ಆರಾಧನೆ” ಎಂದು ಶಂಕರಾಚಾರ್ಯರು ಹೇಳುತ್ತಾರೆ.

ಆದ್ದರಿಂದ, ನಮ್ಮನ್ನು ನಾವು ಎಷ್ಟು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುತ್ತೇವೋ, ಬಾಳುವೆ ನಡೆಸುತ್ತೇವೋ ಅಷ್ಟು ನಮ್ಮ ಪೂಜೆ ಫಲಪ್ರದವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ಎಷ್ಟು ದೀಪ ಬೆಳಗಿದರೂ, ಅದು ಕೇವಲ ಬತ್ತಿ ಸುಟ್ಟಂತೆ ಆಗುವುದಷ್ಟೆ.

1 Comment

  1. ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಂ
    ಸತ್ಯಂ ಭೂತದಯಾ ಪುಷ್ಪಂ ಕ್ಷಮಾ ಪುಷ್ಪಂ ವಿಶೇಷತಃ
    ಶಾಂತಿಃ ಪುಷ್ಪಂ ತಪಃ ಪುಷ್ಪಂ ಧ್ಯಾನಂ ಪುಷ್ಪಂ ತಥೈವ ಚ
    ಸತ್ಯಮಷ್ಠವಿದಂ ಪುಷ್ಪಂ ದೇವಪ್ರೀತಿಕರಂ ಭವೇತ್
    ಅಹಿಂಸೆ, ಇಂದ್ರಿಯನಿಗ್ರಹ,ಸತ್ಯ, ಪ್ರಾಣಿದಯೆ, ಕ್ಷಮೆ,ಶಾಂತಿ, ತಪಸ್ಸು, ಧ್ಯಾನ ಇವೆ ಪರಮಾತ್ಮನ ಪ್ರೀತಿಗೆ ಅರ್ಪಿಸಬೇಕಾದ ಹೂಗಳು (ಗುಣಗಳು)
    ಇಂತಹ ಅದ್ವೈತ ದ ಮಹಾಸಾಗರದಿಂದ ಒಂದು ತೊಟ್ಟೂ ಸವಿದಿಲ್ಲದಿರುವುದೇ ವಿಪರ್ಯಾಸ !!!
    ಶಂಕರರು ಹೇಳಿದ್ದಾರೆ ಎಂದು ಮೂರ್ತಿಯನ್ನು ತೊಳೆದು, ಜೀವಂತ ಹೂ ಕೊಯ್ದು ಶ್ರಂಗರಿಸಿ ಹಾಲು ಸುರಿದು ನಮಸ್ಕರಿಸಿ ಪ್ರಾಣೋಪಾಸನೆಯ ಬದಲಿಗೆ ಜಡೋಪಾಸನೆ ವಿಜ್ರಂಬಿಸುತ್ತಿರುವುದಕ್ಕೆ ಏನು ಹೇಳಲಿ ?
    ಅವೈದಿಕತೆಯ, ದ್ವೈತ ದ ಪರಾಕಾಷ್ಠೆ !!
    ಇದೊಂದು ‘ಮರಣಯಾತ್ರೆ’ …

Leave a Reply