ಧೃತರಾಷ್ಟ್ರ ವಿದುರನಿಂದ ಸಲಹೆ ಪಡೆದ 3 ಸಂದರ್ಭಗಳು; ಅದರಿಂದ ನಾವು ಕಲಿಯಬಹುದಾದ ಪಾಠ

ಮೂರು ಬಾರಿ ವಿದುರನಿಂದ ಉಪದೇಶ ಪಡೆದ ಧೃತರಾಷ್ಟ್ರ, ಮೊದಲ ಬಾರಿ ಅದನ್ನು ತಿರಸ್ಕರಿಸಿದ್ದ. ಎರಡನೆ ಬಾರಿ ಅನುಸರಿಸಲಾಗದ ಅಸಹಾಯಕತೆ ತೋರಿಕೊಂಡಿದ್ದ. ಮೂರನೆ ಬಾರಿ ಅದನ್ನು ಸ್ವೀಕರಿಸಿ, ಶಾಂತಿಯನ್ನೂ ನೆಮ್ಮದಿಯ ಅಂತ್ಯವನ್ನೂ ಪಡೆದ ~ ಸಾ. ಹಿರಣ್ಮಯಿ

ಮಹಾಭಾರತದಲ್ಲಿ ವಿದುರನ ಪಾತ್ರ ಮಹತ್ವದ್ದು. ದಾಸೀಪುತ್ರನಾದ ಕಾರಣದಿಂದ ರಾಜನೆಂದು ಗುರುತಿಸಿಕೊಳ್ಳದೆ ಹೋದರೂ ಕುರುಕುಲವನ್ನು ಸಮರ್ಥವಾಗಿ ಮುನ್ನಡೆಸಲು ಮಾರ್ಗದರ್ಶನ ನೀಡುವ ಮಹತ್ತರ ಜವಾಬ್ದಾರಿ ವಿದುರನ ಮೇಲಿತ್ತು. ಧೃತರಾಷ್ಟ್ರ ಅಧಿಕಾರ ವಹಿಸಿಕೊಂಡ ಮೇಲೆ ರಾಜಕಾರ್ಯಗಳಲ್ಲದೆ ವೈಯಕ್ತಿಕವಾಗಿ ವಿದುರನಿಂದ ಸಲಹೆ ಕೇಳಿದ ಮತ್ತು ತಿರಸ್ಕರಿಸಿದ ಸಂದರ್ಭಗಳೂ ಇದ್ದವು. ಅವು ಯಾವುವು ಗೊತ್ತೆ?

ಸಂದರ್ಭ 1
ಪಾಂಡವರನ್ನು ಜೂಜಿನಲ್ಲಿ ಸೋಲಿಸಿ, ತನ್ನ ಮಕ್ಕಳು ರಾಜ್ಯವನ್ನು ಸಂಪೂರ್ಣ ವಶಮಾಡಿಕೊಂಡಿದ್ದು ಧೃತರಾಷ್ಟ್ರನಿಗೆ ಒಂದು ರೀತಿಯಲ್ಲಿ ಸಂತೋಷವೇ ಆಗಿತ್ತು. ಆದರೂ ಧೀರರೂ ಶೂರರೂ ಆದ ಪಾಂಡವರು ತನ್ನ ಮಕ್ಕಳ ಮೇಲೆ ತಿರುಗಿಬಿದ್ದರೆ ಗತಿಯೇನು ಎಂಬ ಚಿಂತೆ ಅವನನ್ನು ಕಾಡತೊಡಗಿತು. ತನ್ನ ಚಿಂತೆ ಹೋಗಲಾಡಿಸುವ ಉಪಾಯ ದೊರೆಯಬಹುದೆಂದು ಆಶಿಸಿದ ಧೃತರಾಷ್ಟ್ರ, ಎಂದಿನಂತೆ ವಿದುರನನ್ನು ತನ್ನ ಬಳಿಗೆ ಕರೆಸಿಕೊಂಡ. “ವಿದುರ, ನೀನು ಧರ್ಮದ ಗುಟ್ಟನ್ನು ಬಲ್ಲವನು. ಪಾಂಡವರು ಕೌರವರು ಇಬ್ಬರಲ್ಲೂ ಒಂದೇ ರೀತಿಯ ಅಭಿಮಾನವುಳ್ಳವನು. ಆದ್ದರಿಂದ ಇವರಿಬ್ಬರಿಗೂ ಯಾವುದು ಹಿತವೋ ಅದನ್ನು ಹೇಳು. ಪಾಂಡವರಿಂದ ನಾವು ನಾಶವಾಗಬಾರದು; ನಮ್ಮಿಂದ ಪಾಂಡವರೂ ನಾಶವಾಗಬಾರದು; ಏನು ಮಾಡಿದರೆ ಇದು ಸಾಧ್ಯ; ಹೇಳು” ಎಂದು ಕೇಳಿಕೊಂಡ.

ಇದಕ್ಕೆ ಉತ್ತರವಾಗಿ ವಿದುರ, “ಧೃತರಾಷ್ಟ್ರ, ನೀನು ಧರ್ಮದಿಂದ ನಡೆದುಕೊಂಡರೆ ನಿನ್ನ ಮಕ್ಕಳೂ ಪಾಂಡವರೂ ಸುಖವಾಗಿ ಬಾಳುತ್ತಾರೆ. ಅಧರ್ಮದಿಂದ ನಡೆದುಕೊಂಡ ನಿನ್ನ ಮಗನ ಬೆಂಬಲಕ್ಕೆ ನಿಂತು ನೀನು ತಪ್ಪು ಮಾಡಿದ್ದಿ. ಅನ್ಯಾಯವಾಗಿ ಪಾಂಡವರಿಂದ ಅಪಹರಿಸಿರುವುದನ್ನೆಲ್ಲಾ ಅವರಿಗೆ ಹಿಂದಕ್ಕೆ ಕೊಡಿಸಿಬಿಡು. ಆಗ ಎಲ್ಲವೂ ಸರಿಹೋಗುತ್ತದೆ. ಆದರೆ ನಿನ್ನ ಮಗ ದುರ್ಯೋಧನ ಈ ಮತಿಗೆ ಒಪ್ಪುವುದಿಲ್ಲ. ಅವನು ಹಾಗೆ ಒಪ್ಪದೆ ಇದ್ದರೆ, ಅವನನ್ನು ನೀನು ಶಿಕ್ಷಿಸಿ ದೂರ ಮಾಡಬೇಕು. ಇಲ್ಲದಿದ್ದರೆ ಕೌರವರ ನಾಶ ತಪ್ಪಿದ್ದಲ್ಲ. ಈ ಮಾತನ್ನು ನಿನಗೆ ಎಷ್ಟೋ ಬಾರಿ ಹೇಳಿದ್ದೇನೆ” ಎಂದುಬಿಟ್ಟ.

ತನ್ನ ಬಗ್ಗೆ ಸಹಾನುಭೂತಿಯಿಂದ, ಸಾಂತ್ವನದ ಮಾತುಗಳನ್ನಾಡುತ್ತಾನೆಂದು ಕಾದಿದ್ದ ಧೃತರಾಷ್ಟ್ರನಿಗೆ ವಿದುರನ ಮಾತು ಕೇಳಿ ತುಂಬ ಕೋಪ ಬಂತು. “ನೀನು ಯಾವಾಗಲೂ ಪಾಂಡವರ ಪಕ್ಷಪಾತಿ; ನಮಗೆ ಅನುಕೂಲನಲ್ಲ” ಎಂದು ವಿದುರನನ್ನು ದೂರಿ, “ಪಾಂಡವರಿಗಾಗಿ ನನ್ನ ಮಗನನ್ನು ಬಿಟ್ಟುಬಿಡು ಎನ್ನುತ್ತೀಯಾ? ನನ್ನ ಮಗ ನನ್ನ ದೇಹದ ಹಾಗೆ. ನನ್ನ ದೇಹವನ್ನು ನಾನೇ ನಾಶಮಾಡಿಕೊಳ್ಳಲೇ? ಎಂಥ ಬುದ್ಧಿವಾದ ನಿನ್ನದು! ನೀನು ಕಪಟಿ. ನಮ್ಮಲ್ಲಿ ನಿನಗೆ ಸ್ವಲ್ಪವೂ ಅಭಿಮಾನವಿಲ್ಲ. ಗೌರವವಿಲ್ಲ! ಇಲ್ಲಿರಲು ಇಷ್ಟವಿಲ್ಲದಿದ್ದರೆ ಎಲ್ಲಿಗಾದರೂ ಹೊರಟುಹೋಗು” ಎಂದು ಬೈದು ತಾನೇ ಸಿಂಹಾಸನದಿಂದ ಎದ್ದು ಹೊರಟುಬಿಟ್ಟ!

ಸಂದರ್ಭ 2
ಇದು ಕುರುಕ್ಷೇತ್ರ ಯುದ್ಧಕ್ಕೆ ಕೌರವ – ಪಾಂಡವರು ಮುನ್ನುಡಿ ಬರೆಯುತ್ತಿದ್ದ ಸಂದರ್ಭ, ಈ ಯುದ್ಧದಲ್ಲಿ ತನ್ನ ಮಕ್ಕಳಿಗೆ ಸೋಲಾದರೆ ಏನು ಮಾಡುವುದೆಂಬ ಚಿಂತೆ ಧೃತರಾಷ್ಟ್ರನನ್ನು ಕಾಡತೊಡಗಿತ್ತು. ಮತ್ತೆ ವಿದುರನಿಗೇ ಹೇಳಿಕಳಿಸಿದ. “ವಿದುರ, ಪುತ್ರರು ಯುದ್ಧದ ತಯಾರಿಯಲ್ಲಿದ್ದಾರೆ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವಂತೆ ನನಗೆ ಧರ್ಮ ಸೂಕ್ಷ್ಮಗಳನ್ನು ತಿಳಿಸು. ಯಾವುದು ಧರ್ಮವೋ ಯಾವುದರಿಂದ ಶ್ರೇಯಸ್ಸು ಉಂಟಾಗುವುದೋ ಅದನ್ನು ಹೇಳು” ಎಂದು ಕೇಳಿಕೊಂಡ.

ಧೃತರಾಷ್ಟ್ರನ ಸ್ಥಿತಿಯನ್ನು ಕಂಡು ಧರ್ಮಾತ್ಮನಾದ ವಿದುರನಿಗೆ ಮರುಕವುಂಟಾಯಿತು. ಧೃತರಾಷ್ಟ್ರನ ಎದುರು ಕುಳಿತು ದೀರ್ಘ ಸಂವಾದ ನಡೆಸಿದ. ಧರ್ಮ, ವಿವೇಕ, ಕರ್ತವ್ಯ ಮುಂತಾದ ಸಂಗತಿಗಳ ಕುರಿತು ಬುದ್ಧಿಯ ಮಾತುಗಳನ್ನು ಹೇಳಿದ. ಈ ಸಂದರ್ಭದಲ್ಲಿ ವಿದುರ ಆಡಿದ ಮಾತುಗಳೇ ‘ವಿದುರ ನೀತಿ’ ಎಂದು ಪ್ರಸಿದ್ಧವಾಗಿರುವುದು. ಧೃತರಾಷ್ಟ್ರನಿಗೆ ವಿದುರ ಬೋಧಿಸಿದ ಸಂಗತಿಗಳು ಈ ಕಾಲಕ್ಕೂ ಸಲ್ಲುವಂತಿದ್ದು, ನಿತ್ಯ ವಿವೇಕ ಜಾಗೃತಿಗೆ ಕೈಪಿಡಿಯಂತಿದೆ.

ಹೀಗೆ ಧೃತರಾಷ್ಟ್ರನಿಗೆ ನೀತಿ ಬೋಧೆ ಮಾಡಿದ ವಿದುರ, “ಒಬ್ಬನು ಮಾಡುವ ಪಾಪದ ಪರಿಣಾಮವನ್ನು ಅನೇಕರು ಅನುಭವಿಸಬೇಕಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದನು. ನ್ಯಾಯಸಮ್ಮತವಾದ, ಪ್ರಾಮಾಣಿಕವಾದ ರೀತಿಯಲ್ಲಿ ನಡೆದುಕೊಳ್ಳುವುದೇ ಶ್ರೇಯಸ್ಸನ್ನು ಸಾಧಿಸುವ ಮಾರ್ಗ” ಎಂದು ಬುದ್ಧಿ ಹೇಳಿ, “ಪಾಂಡವರಿಗೆ ಕೊಡಬೇಕಾದ ರಾಜ್ಯದ ಪಾಲನ್ನು ಅವರಿಗೆ ಕೊಟ್ಟುಬಿಡು. ಆಗ ನೀನು, ನಿನ್ನ ಮಕ್ಕಳು, ಪಾಂಡವರು ಎಲ್ಲರೂ ಸುಖದಿಂದಿರಬಹುದು” ಎಂದು ಸೂಚಿಸಿದ.
ಆದರೆ ಧೃತರಾಷ್ಟ್ರ ಮಾತ್ರ ಅವನ ಮಾತುಗಳನ್ನು ನಡೆಸಲಾಗದ ಅಸಹಾಯಕತೆ ತೋರಿಕೊಂಡ. “ನೀನು ಹೇಳುವುದೆಲ್ಲಾ ಸರಿ. ನೀನು ಯಾವಾಗಲೂ ಇದೇ ಮಾತನ್ನೇ ಹೇಳುತ್ತಿದ್ದೀಯೆ. ನನ್ನ ಬುದ್ಧಿಗೂ ಅದು ಸರಿಯೆಂದೇ ತೋರುತ್ತದೆ. ಅದೇ ರೀತಿ ನಡೆದುಕೊಳ್ಳೋಣ ಎನಿಸುತ್ತದೆ. ಆದರೆ ಏನು ಮಾಡಲಿ? ದುರ್ಯೋಧನ ಬಂದು ಮಾತನಾಡಿದನೆಂದರೆ ಅದೆಲ್ಲಾ ಬದಲಾಗುತ್ತದೆ” ಎಂದು ಕೈಚೆಲ್ಲಿದ.

ಸಂದರ್ಭ 3
ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಧೃತರಾಷ್ಟ್ರ, ಗಾಂಧಾರಿ ಇಬ್ಬರೂ ಮುದುಕರು. ಧೃತರಾಷ್ಟ್ರ ಕುರುಡ. ಅವರು ತಮ್ಮ ನೂರು ಮಕ್ಕಳನ್ನೂ ಬಂಧು ಬಳಗವನ್ನೂ ಕಳೆದುಕೊಂಡಿದ್ದರು. ಅವರ ದುಃಖವನ್ನು ವಿವರಿಸಲು ಸಾಧ್ಯವಿರಲಿಲ್ಲ. ಇಂಥಾ ಸಂದರ್ಭದಲ್ಲಿ ವಿದುರ ಧೃತರಾಷ್ಟ್ರನ ಬಳಿ ಧಾವಿಸಿದ. ಅವನನ್ನು ಸಮಾಧಾನ ಪಡಿಸುತ್ತಾ, “ಆಸೆಯೇ ದುಃಖಕ್ಕೆ ಮೂಲ. ತತ್ವಜ್ಞಾನವೇ ಅದಕ್ಕೆ ಮದ್ದು. ಮನಸ್ಸನ್ನು ಬಿಗಿಹಿಡಿದು ದುಃಖವನ್ನು ಕಳೆದುಕೋ. ಮನಸ್ಸನ್ನು ಸಮಾಧಾನಕ್ಕೆ ತಂದುಕೊಂಡು, ಸ್ನೇಹದಿಂದ ನಡೆದುಕೋ. ಅದರಿಂದ ಒಳ್ಳೆಯದಾಗುತ್ತದೆ” ಎಂದು ಬೋಧಿಸಿದ. 

ವಿದುರನ ಮಾತು ಧೃತರಾಷ್ಟ್ರನ ಮನಸ್ಸಿಗೆ ಸಾಂತ್ವನ ನೀಡಿತು. ನಂತರ ಗಾಂಧಾರಿಯನ್ನೂ ಅವನು ಸಮಾಧಾನ ಪಡಿಸಿದ. ಮುಂದೆ ವಿದುರನೊಡನೆ ಪತ್ನಿಯನ್ನೂ, ಅತ್ತಿಗೆ ಕುಂತಿಯನ್ನೂ ಕರೆದುಕೊಂಡು ತಪಶ್ಚರಣೆಗಾಗಿ ಕಾಡಿಗೂ ಹೊರಟು ನಿಂತ.

ಹೀಗೆ ಮೂರು ಬಾರಿ ವಿದುರನಿಂದ ಉಪದೇಶ ಪಡೆದ ಧೃತರಾಷ್ಟ್ರ, ಮೊದಲ ಬಾರಿ ಅದನ್ನು ತಿರಸ್ಕರಿಸಿದ್ದ. ಎರಡನೆ ಬಾರಿ ಅನುಸರಿಸಲಾಗದ ಅಸಹಾಯಕತೆ ತೋರಿಕೊಂಡಿದ್ದ. ಮೂರನೆ ಬಾರಿ ಅದನ್ನು ಸ್ವೀಕರಿಸಿ, ಶಾಂತಿಯನ್ನೂ ನೆಮ್ಮದಿಯ ಅಂತ್ಯವನ್ನೂ ಪಡೆದ.

ನಮಗೊಂದು ಪಾಠ 
ನಾವು ಯಾವಾಗಲೂ ಹೀಗೆಯೇ. ಉಪದೇಶ ಕೊಡುವವರು ಎಲ್ಲ ಸಂದರ್ಭದಲ್ಲೂ ಒಳಿತನ್ನೇ ಹೇಳುತ್ತಿರುತ್ತಾರೆ. ನಾವು ಮಾತ್ರ ನಮಗೆ ಬೇಕಾದುದನ್ನು ಬೇಕಾದ ಹಾಗೆ ಸ್ವೀಕರಿಸುತ್ತೇವೆ. ನಮಗೆ ಅನುಕೂಲವಾಗಿ ಕಂಡರೆ ಅನುಸರಿಸುತ್ತೇವೆ, ಇಲ್ಲವಾದರೆ ಬಿಟ್ಟುಬಿಡುತ್ತೇವೆ. ಅಥವಾ ಮತ್ತೊಬ್ಬರ ಹೆಗಲಿಗೆ ಹೊಣೆಯೇರಿಸಿ ಪಲಾಯನ ಮಾಡುತ್ತೇವೆ. ಅಷ್ಟೆಲ್ಲ ಆದರೂ ನಾವು ದೂರುವುದು ಉಪದೇಶಕರನ್ನೇ. ನಿಮ್ಮ ಮಾತುಗಳಿಂದ ನನಗೇನೂ ಪ್ರಯೋಜನವಾಗಲಿಲ್ಲ ಎಂದು ದೂರುತ್ತೇವೆ. ವಾಸ್ತವದಲ್ಲಿ ಆ ಮಾತುಗಳು ಪ್ರಯೋಜನಕಾರಿಯಾಗಿಯೇ ಇರುತ್ತವೆ ಮತ್ತು ನಾವು ಅವನ್ನು ಗ್ರಹಿಸಿ ಅಳವಡಿಸಿಕೊಳ್ಳುವಲ್ಲಿ ಸೋತಿರುತ್ತೇವೆ. 

ಧೃತರಾಷ್ಟ್ರ ಕೊನೆಯಲ್ಲಿ ವಿದುರನ ಮಾತನ್ನು ಸ್ವೀಕರಿಸಿದ. ಹಾಗೆಂದೇ ಶಾಂತಿ ಪಡೆದ. ಆರಂಭದಲ್ಲೇ ಅವನು ವಿದುರನ ಮಾತು ಕೇಳಿದ್ದರೆ, ಬಹುಶಃ ಅಷ್ಟೆಲ್ಲ ಅನಾಹುತ ನಡೆಯುತ್ತಿರಲಿಲ್ಲ. 

ಆದ್ದರಿಂದ, ನಾವು ಯಾರದಾದರೂ ಸಲಹೆ ಕೇಳುವಾಗ ಪೂರ್ವಾಗ್ರಹರಹಿತರಾಗಿ ಸ್ವೀಕರಿಸಬೇಕು. ಅದರಂತೆ ನಡೆಯಬೇಕು. ಇಲ್ಲವಾದರೆ ಸಲಹೆಯನ್ನು ಕೇಳಲಿಕ್ಕೇ ಹೋಗಬಾರದು. ಇಲ್ಲವಾದರೆ, ನಾವೂ ಧೃತರಾಷ್ಟ್ರನ ಪಾಡನ್ನೆ ಅನುಭವಿಸಬೇಕಾದೀತು!

Leave a Reply