ಕ್ಷಮಿಸಲು ಬೇಕಿರುವುದು ಉದಾರ ಹೃದಯವಲ್ಲ, ಕ್ಷಮಿಸುವ ಧೈರ್ಯ!

ಕ್ಷಾಂತಿ ಎಂದರೆ ಕ್ಷಮಿಸುವ ಧೈರ್ಯ; ಕ್ಷಮಿಸುವ ಸಹಾನುಭೂತಿ. ಇದು ಕೇವಲ ಕ್ಷಮಿಸುವ ಗುಣವಲ್ಲ, ಆ ಗುಣದ ಮೂಲ ಬೀಜ. ಮೋಕ್ಷದ ಹಾದಿಯಲ್ಲಿ ಮಾತ್ರವಲ್ಲ, ಅನುದಿನದ ಬದುಕಿಗೂ `ಕ್ಷಾಂತಿ’ಯು ದಿವ್ಯ ಮಂತ್ರವಾಗಿದೆ.
~ ಗಾಯತ್ರಿ

ನೆಮ್ಮದಿಯಾಗಿ ಬದುಕಲಿಕ್ಕೆ ಏನೆಲ್ಲ ಬೇಕು? ಹೊಟ್ಟೆ ಬಟ್ಟೆಗೆ ತಕ್ಕಷ್ಟು, ಇರಲಿಕ್ಕೆ – ಮಲಗಲಿಕ್ಕೊಂದು ಜಾಗ. ಇವಿಷ್ಟಿದ್ದರೆ ನೆಮ್ಮದಿ ಖಾತ್ರಿ. ಇವುಗಳ ಅಗತ್ಯಗಳ ಜೊತೆಗೆ ಮಹತ್ವಾಕಾಂಕ್ಷೆಗಳು ಸೇರಿಕೊಂಡಾಗ ಪಟ್ಟಿ ಬೆಳೆಯುತ್ತ ಹೋದರೂ ಅವು ಈ ಮೂಲಭೂತ ಅಗತ್ಯಗಳ ಬೀಜದಿಂದಲೇ ಚಿಗಿತು ಹಬ್ಬಿದಂಥವಷ್ಟೆ. ವಾಸ್ತವವಾಗಿ ನೆಮ್ಮದಿ ದೈಹಿಕ ಸವಲತ್ತುಗಳಿಗೆ ಸಂಬಂಧಿಸಿದ್ದಲ್ಲ. ಅದು ಮನಸ್ಸಿಗೆ ಸಂಬಂಧಿಸಿದ ಸಂಗತಿ ಅನ್ನೋದು ಸರಳ ತಿಳಿವಳಿಕೆ. ಹಾಗಿದ್ದೂ ನಮ್ಮ ಆದ್ಯತೆ ದೈಹಿಕ ಅಗತ್ಯಗಳ ಪೂರೈಕೆಯತ್ತಲೇ ಇರುತ್ತದೆ. ಈ ಕಾರಣದಿಂದಲೇ ಬಹಳ ಬಾರಿ ಮಾನಸಿಕ ನೆಮ್ಮದಿಯೊಂದು ಮರೀಚಿಕೆ ಎನ್ನಿಸುವುದು.

ಇದರಂತೆಯೇ ಬದುಕು ಪರಿಪೂರ್ಣ ಎನ್ನಿಸಿಕೊಳ್ಳಲು ಏನೆಲ್ಲ ಸಾಧಿಸಬೇಕು? ಎನ್ನುವ ಪ್ರಶ್ನೆ ಬಂದಾಗಲೂ ಲೌಕಿಕವಾಗಿಯೇ ನಾವು ಯೋಚಿಸ್ತೇವೆ. ಯಶಸ್ಸು, ಕೀರ್ತಿ, ಹಣ, ಮನ್ನಣೆಗಳ ಗ್ರಾಫ್ ಮೇಲೆ ನಮ್ಮ ಬದುಕಿನ ಪರಿಪೂರ್ಣತೆಯನ್ನು ಅಳೆಯುತ್ತೇವೆ. ಆದರೆ ಬದುಕಿನ ಪರಿಪೂರ್ಣತೆ ವ್ಯಕ್ತಿಯ ಹೊರಗಿನ ಪ್ರಭೆಯ ಅಳತೆಗೆ ಒಳಪಡುವಂಥದ್ದಲ್ಲ. ಅದು, ವ್ಯಕ್ತಿಯ ಅಂತಃಸತ್ವದ ಕಾಂತಿಗೆ ಗೋಚರಿಸುವಂಥದ್ದು. ವ್ಯಕ್ತಿಯು ಯಾವುದೆಲ್ಲ ಗುಣ ಹೊಂದಿದ್ದಾನೆ ಎನ್ನುವುದರ ಮೇಲೆ ನಿರ್ಧಾರವಾಗುವಂಥದ್ದು.
ಮೋಕ್ಷ ಅಥವಾ ಜ್ಞಾನೋದಯದ ಹಾದಿಯಲ್ಲಿ ನಡೆಯದೆ ಬದುಕು ಅರ್ಥ ಪಡೆಯುವುದಿಲ್ಲ. ಬದಲಿಗೆ ಅಪೂರ್ಣ ಬದುಕು ಕಂಡ ಆತ್ಮವು ನಿರಂತರ ಜನನ ಮರಣಗಳ ಚಕ್ರದೊಳಗೆ ಸುತ್ತುತ್ತಲೇ ಇರುತ್ತದೆ. ಪೂರ್ಣತೆಯ ಬಿಂದುವನ್ನು ಕೂಡಿಕೊಳ್ಳದೆ ಜಾರಿ ಮತ್ತೆ ಮರುಹುಟ್ಟುಗಳನ್ನು ಪಡೆಯುತ್ತ ಕಳೆದ ಜನ್ಮದ ಕರ್ಮಫಲವನ್ನು ಉಣ್ಣುತ್ತ ಸಾಗಬೇಕಾಗುತ್ತದೆ. ಹಾಗಾಗಬಾರದು ಎಂದಾದಲ್ಲಿ ಬದುಕನ್ನು ಪರಿಪೂರ್ಣವಾಗಿಸಿಕೊಳ್ಳಲು ಪೂರಕವಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಪೂರ್ವದ ಮುಮುಕ್ಷುಗಳು ಬೋಧಿಸಿದ್ದಾರೆ. ಸರಳ – ಸಜ್ಜನಿಕೆಯ ಜೀವನದಿಂದ ಇದು ಸಾಧ್ಯವೆಂದು ಸ್ವಯಂ ನಿದರ್ಶನದಿಂದ ಸಾಬೀತು ಪಡಿಸಿದ್ದಾರೆ ಕೂಡ.

ಅಂತರಂಗದ ಸೌಂದರ್ಯಕ್ಕೆ…
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿರುವಂತೆ ಶಮ, ದಮ, ಶೌಚ, ಕ್ಷಾಂತಿ, ಆರ್ಜವ, ಜ್ಞಾನ – ವಿಜ್ಞಾನ ಹಾಗೂ ಆಸ್ತಿಕ್ಯ – ಇವು ಸಜ್ಜನರ ಸ್ವಭಾವ ಸಹಜ ಲಕ್ಷಣಗಳು. ಇವು ಅಂತರಂಗದ ಸೌಂದರ್ಯವನ್ನು ಹೆಚ್ಚಿಸುವಂಥವು. ಅಷ್ಟು ಮಾತ್ರವಲ್ಲ, ಬಹಿರಂಗದಲ್ಲೂ ಪ್ರಕಾಶಿಸುತ್ತ ಸಹಜೀವಿಗಳ ಕ್ಷೇಮಕ್ಕೂ ಕಾರಣವಾಗುವಂಥ ಗುಣಗಳು. ಇವುಗಳನ್ನು ಬೆಳೆಸಿಕೊಂಡವರು ಸಹಜೀವಿಗಳನ್ನು, ಜಗತ್ತಿನೆಲ್ಲ ಜಡ – ಚೇತನಗಳನ್ನು ಸಮಾನ ದೃಷ್ಟಿಯಿಂದ ನೋಡಬಲ್ಲವರಾಗುತ್ತಾರೆ ಹಾಗೂ ದುಷ್ಕೃತ್ಯ, ಹಿಂಸೆಗಳೇ ಮೊದಲಾದವುಗಳ ಸಂಭವನೀಯತೆಯಿಂದ ಮುಕ್ತರಾಗಿರುತ್ತಾರೆ.

ಇಂಥಾ ಪರಿಪೂರ್ಣತೆಯ ಪಥಿಕರ ಸಲ್ಲಕ್ಷಣಗಳಲ್ಲಿ `ಕ್ಷಾಂತಿ’ಯೂ ಒಂದು. ಇದು ಅಪರೂಪದ, ಆದರೆ ಮುಖ್ಯವಾದ ಗುಣ. ಬೌದ್ಧ ಧರ್ಮದಲ್ಲಿ ಇದಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಕ್ಷಾಂತಿ ಎಂದರೆ ಕ್ಷಮಿಸುವ ಧೈರ್ಯ. ಕ್ಷಮಿಸುವ ಸಹಾನುಭೂತಿ. ಇದು ಕೇವಲ ಕ್ಷಮಿಸುವ ಗುಣವಲ್ಲ, ಆ ಗುಣದ ಮೂಲ ಬೀಜ. ಕ್ಷಾಂತಿಯೆಂದರೆ ಯಾವುದರಿಂದಲೂ ಬಾಧೆಗೆ ಒಳಗಾಗದಿರುವುದು. ಯಾವುದರಿಂದಲೂ ಹಿಮ್ಮೆಟ್ಟಿಸಲ್ಪಡದೆ ದೃಢವಾಗಿ ನಿಲ್ಲುವುದು. ಇದು ಸಹನೆ, ತಾಳ್ಮೆ, ದೃಢತೆ ಹಾಗೂ ಕ್ಷಮಾ ಗುಣಗಳ ಪ್ಯಾಕೇಜ್‍ನಂತೆ.

ಮೋಕ್ಷದ ಹಾದಿಯಲ್ಲಿ ಮಾತ್ರವಲ್ಲ, ಅನುದಿನದ ಬದುಕಿಗೂ `ಕ್ಷಾಂತಿ’ಯು ದಿವ್ಯ ಮಂತ್ರವಾಗಿದೆ. ಇದು ಲೌಕಿಕತೆಯ ಸರ್ಪ ಕಕ್ಕುವ ವಿಷಕ್ಕೆ ಪ್ರತಿರೋಧ ತೋರುವ ಮದ್ದಿನಂತೆ ಕೆಲಸ ಮಾಡುತ್ತದೆ. ಪ್ರತಿರೋಧಕ್ಕಿಂತಲೂ ಆ ವಿಷದ ಪರಿಣಾಮವೇ ಆಗದಂತೆ ನೋಡಿಕೊಳ್ಳುವ ರಕ್ಷಕನಂತೆ ಕಾಯುತ್ತದೆ. ಬದುಕಿನ ಓಟದಲ್ಲಿ ಎದುರಾಗುತ್ತ ಆವರಿಸಿಕೊಳ್ಳುವ ದ್ವೇಷ, ಕೋಪ, ಮತ್ಸರ, ಸಂಕುಚಿತ ಬುದ್ಧಿ, ಮೇಲರಿಮೆ, ಕ್ರೌರ್ಯ – ಈ ಎಲ್ಲಕ್ಕೂ ಕ್ಷಾಂತಿಯು ಮದ್ದಿನಂತೆ ವರ್ತಿಸುತ್ತದೆ. ಈ ಗುಣದ ಮೂಲ ಧಾತುಗಳಲ್ಲಿ ಸಹನೆ ಹಾಗೂ ಕ್ಷಮೆಗಳ ಹದ ಬೆರಕೆ ಇರುವುದರಿಂದ ಸಂದರ್ಭಗಳನ್ನು ಅರಿತುಕೊಂಡು ಪ್ರತಿಕ್ರಿಯಿಸಲು ಸಹಾಯವಾಗುತ್ತದೆ. ನಮ್ಮೆಲ್ಲ ಸಮಸ್ಯೆಗಳಿಗೆ ಅರ್ಥೈಸಿಕೊಳ್ಳುವ ಮನೋಭಾವದ ಕೊರತೆಯೇ ಮೂಲ ಕಾರಣ. ಈ ಕೊರತೆಯನ್ನಿದು ನೀಗಿಸುತ್ತದೆ.

ಕ್ಷಮಿಸಲು ಬೇಕಿರುವ ಅರ್ಹತೆಯೆಂದರೆ ಧೈರ್ಯ. ಹೇಡಿ ನೀಡುವ ಕ್ಷಮೆಗೆ ಬೆಲೆ ಇರುವುದಿಲ್ಲ. ಧೈರ್ಯದ ಇರುವಿಕೆಯು ಅಹಿಂಸೆಯಿಂದ ಸಾಬೀತಾಗುತ್ತದೆ. ಅಕಸ್ಮಾತ್ ಕಚ್ಚುವ ಇರುವೆಯನ್ನು ಅಸಹನೆಯಿಂದ ಕೊಂದು ಹಾಕುವವನು ಹುಲಿಯೊಂದಿಗೆ ಸೆಣೆಸಿ ಗೆದ್ದವನಾಗಿದ್ದರೂ ಹೇಡಿ ಅನ್ನಿಸಿಕೊಳ್ಳುತ್ತಾನೆ. ಏಕೆಂದರೆ ತನ್ನ ಜೀವ ರಕ್ಷಣೆಗೆ ಹೋರಾಡುವುದು ಅನಿವಾರ್ಯವೇ ಹೊರತು ಧೀರತನವಲ್ಲ. ಪಾಪದ ಇರುವೆಯ ಆಕಸ್ಮಿಕ ವರ್ತನೆಯನ್ನು ಕ್ಷಮಿಸುವುದು, ಅದರ ಕಚ್ಚುವಿಕೆಯಿಂದ ಬಾಧೆಗೆ ಒಳಪಡದೆ ಇರುವುದು ಧೈರ್ಯ ಎನ್ನಿಸುತ್ತದೆ. ಇದನ್ನು ಹೊಂದಿರುವುದೇ ಕ್ಷಾಂತಿಯ ಇರುವಿಕೆಯ ಗುರುತು.

ಮೂರು ಆಯಾಮಗಳು
ಬೌದ್ಧ ಧರ್ಮದ ಮಹಾಯಾನ ಸೂತ್ರದಲ್ಲಿ ಕ್ಷಾಂತಿಯ ಮೂರು ಆಯಾಮಗಳ ವಿವರಣೆ ಇದೆ. ಅವು; ವೈಯಕ್ತಿಕ ಸಂಕಷ್ಟಗಳನ್ನು ಮೀರುವುದು, ಇತರರೊಂದಿಗೆ ತಾಳ್ಮೆಯಿಂದ ಇರುವುದು ಹಾಗೂ ಸತ್ಯವನ್ನು ಒಪ್ಪಿಕೊಳ್ಳುವುದು. ಈ ಮೂರರಲ್ಲಿ ಕೊನೆಯ ಆಯಾಮವೇ ಅತ್ಯಂತ ಕಷ್ಟದ್ದು. ಇತರರೊಂದಿಗೆ ವ್ಯವಹರಿಸಲು ಅಗತ್ಯವಿರುವುದನ್ನು ನಾವು ಹೇಗಾದರೂ ರೂಢಿಸಿಕೊಂಡು ಬಿಡುತ್ತೇವೆ. ಕ್ಷಮಿಸುವುದು, ತಾಳ್ಮೆಯಿಂದ ಇರುವುದು- ಇವೆಲ್ಲವೂ ನಮ್ಮ ಅಹಮ್ ಅನ್ನು ಪರೋಕ್ಷವಾಗಿಯಾದರೂ ತೃಪ್ತಿ ಪಡಿಸುವ ಅಂಶಗಳಾಗಿವೆ. ಆದರೆ ಸತ್ಯವನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ ನಮ್ಮ ಅಹಮ್‍ನ ಬುನಾದಿಯನ್ನು ಅಲುಗಾಡಿಸುವ ಪ್ರಕ್ರಿಯೆ. ಜೀವನ ನಶ್ವರ ಎಂಬ ಪರಮ ಸತ್ಯವನ್ನು ಓದಿ, ಕೇಳಿ ತಿಳಿದುಕೊಂಡಿದ್ದರೂ ಅದನ್ನು ಒಪ್ಪಿದಂತೆ ನಟಿಸಿದರೂ, ಆಂತರ್ಯದಲ್ಲಿ ಅದನ್ನು ನಾವು ನಿರಾಕರಿಸುತ್ತಲೇ ಇರುತ್ತೇವೆ. ಹಾಗೇನಾದರೂ ನಾವದನ್ನು ಸಂಪೂರ್ಣ ಸಹಮತದಿಂದ ಒಪ್ಪಿಕೊಂಡಿದ್ದೇ ಆಗಿದ್ದರೆ, ನಮ್ಮೊಳಗೆ ಅರಿಷಡ್ವರ್ಗಗಳ ತಾಕಲಾಟವೇ ಇರುತ್ತಿರಲಿಲ್ಲ.

ಕ್ಷಾಂತಿಯ ಆಯಾಮವಾದ ಸತ್ಯವನ್ನು ಒಪ್ಪಿಕೊಳ್ಳುವ ಹಾಗೂ ಅದನ್ನು ಅದು ಇರುವ ಹಾಗೆಯೇ ಸ್ವೀಕರಿಸುವ ಗುಣ ನಮ್ಮನ್ನು ನೆಮ್ಮದಿಯ ಹಾದಿಯಲ್ಲಿ ನಡೆಸುತ್ತದೆ. ಮಾತ್ರವಲ್ಲ, ಬದುಕನ್ನು ಪರಿಪೂರ್ಣವಾಗಿಸಿಕೊಳ್ಳುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡುತ್ತದೆ. ಹಿಮಾಲಯವನ್ನೇ ಏರಿ ಧ್ವಜ ಹಾರಿಸಿ ಬಂದರೂ ನಾವು ನಮ್ಮ ಮನಸ್ಸನ್ನೇರಿ ನಿಯಂತ್ರಣ ತೋರಲು ಅಸಮರ್ಥರಾಗಿದ್ದೇವೆ. ಹುಲಿಯೊಡನೆ ಸೆಣೆಸಿದರೂ ಇರುವೆಯ ಕಡಿತವನ್ನು ಸೈರಿಸಲು ನಮ್ಮಿಂದ ಸಾಧ್ಯ ಇಲ್ಲದಂತಾಗಿದೆ. ನಮ್ಮ ಈ ಬಲಹೀನತೆಗಳು ನಮ್ಮನ್ನು ಆಧ್ಯಾತ್ಮಿಕವಾಗಿ ಮಾತ್ರವಲ್ಲ, ಲೌಕಿಕವಾಗಿಯೂ ಕೆಳಮಟ್ಟಕ್ಕೆ ದೂಡುತ್ತಿದೆ. ನಮ್ಮ ಇಂದಿನ ಸಾಧನೆಗಳು ಕೇವಲ ಭೌತಿಕ ಭೋಗಕ್ಕೆ ಸೀಮಿತ ಎಂಬಂತಾಗಿಬಿಟ್ಟಿದೆ. ಆದ್ದರಿಂದಲೇ ನೆಮ್ಮದಿಯ ಕೊರತೆ ಮತ್ತು ಅಪರಿಪೂರ್ಣತೆಯ ಚಡಪಡಿಕೆಗಳು ಎಂದಿಗಿಂತಲೂ ಹೆಚ್ಚು ಕಾಡುತ್ತ ಭೂಮಿ ಮನೋರೋಗಗಳ ಆಗರವಾಗುತ್ತಿದೆ.
ಈಗಲಾದರೂ ಹಿರಿಯರ ಹಾದಿಯಲ್ಲಿ ನಡೆದು ಆತ್ಮಕ್ಕೆ ಕಾಂತಿಯೂಡುವ ಕ್ಷಾಂತಿಯನ್ನು ನಮ್ಮೊಳಗೆ ಮೊಳೆಸಿಕೊಳ್ಳಬೇಕಿದೆ. ಅದನ್ನು ಬೆಳೆಸಿ ಜಗತ್ತಿನುದ್ದಗಲ ಹಬ್ಬಿ ಹರಡಬೇಕಿದೆ.

 

 

Leave a Reply