ನೀವು ಒಬ್ಬ/ಳು ಪ್ರೇಮಿಯಾಗಿದ್ದು, ನಿಮ್ಮಲ್ಲಿ ನಾರ್ಸಿಸಿಸ್ಟ್ ಗುಣವಿದ್ದರೆ, ನಿಮ್ಮ ಪ್ರೇಮ ಯಾವತ್ತೂ ಸಫಲವಾಗುವುದಿಲ್ಲ. ಏಕೆಂದರೆ ಪ್ರೇಮವು ಪರಸ್ಪರ ಪೂರಕವಾದ ಪ್ರಕ್ರಿಯೆ. ಅಲ್ಲಿ ನೀವು ನಿಮ್ಮ ಕುರಿತು ಕಡಿಮೆ ಮತ್ತು ಪ್ರೇಮಿಯ ಕುರಿತು ಹೆಚ್ಚು ಯೋಚಿಸಬೇಕಾಗುತ್ತದೆ. ನಿಮ್ಮಲ್ಲಿ ಈ ಕೆಳಗಿನ ಸಂಭಾಷಣೆಯಲ್ಲಿ ಕಾಣಿಸುವಂಥ ಆಲೋಚನೆ ಅಥವಾ ಅಸಹನೆ ಇರುವುದೇ ಆದರೆ, ನೀವು ನಾರ್ಸಿಸಿಸ್ಟ್ ಆಗಿದ್ದೀರಿ ಎಂದರ್ಥ ~ ಅಲಾವಿಕಾ
ಈ ಸಂಭಾಷಣೆಯನ್ನು ಗಮನಿಸಿ.
ಪ್ರೇಮಿಗಳಿಬ್ಬರು ಮಾತಾಡುತ್ತಾ ಕುಳಿತಿರುತ್ತಾರೆ. ಅವಳ ಫೋನ್’ಗೆ ಅವಳ ಅಮ್ಮನ ಕರೆ ಬರುತ್ತದೆ.
ಅವನು : ಕಾಲ್ ಪಿಕ್ ಮಾಡಬೇಡ
ಅವಳು : ಅಗತ್ಯ ಇದೆ, ನನ್ನ ಅಮ್ಮನ ಫೋನ್…
ಅವನು : ಅವರು ನನಗಿಂತ ಹೆಚ್ಚಾ? ನನಗಿಂತಲೂ…?
ಅವಳು ಅವನ ಮಾತನ್ನು ಇಗ್ನೋರ್ ಮಾಡಿ ಕಾಲ್ ಪಿಕ್ ಮಾಡುತ್ತಾಳೆ. ಮಾತಾಡಿ ಕಟ್ ಮಾಡುತ್ತಾಳೆ.
ಅವನು : ಛೆ! ನೀನು ಹೀಗೆ ಮಾಡ್ತೀಯ ಅಂದುಕೊಂಡಿರ್ಲಿಲ್ಲ! ನಾನು ಬೇಡ ಅಂದ್ರೂ ನೀನು ಕಾಲ್ ಪಿಕ್ ಮಾಡಿದ್ಯಲ್ಲ! ನನಗಿಂತ ಹೆಚ್ಚಾ!?
ಅವಳು : ನೀನು ತಮಾಷೆಗೆ ಹೇಳ್ತಿದ್ದೀಯಾ ಅಂದ್ಕೊಂಡೆ
ಅವನು : ನಾನು ಏನಾದ್ರೂ ಹೇಳಿದ್ರೆ ನಿನಗೆ ತಮಾಷೆಯಾಗಿ ಕಾಣುತ್ತಾ? ನಾವು ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದೀವಿ. ನಿನ್ನ ಲೈಫ್’ನಲ್ಲಿ ನನಗಿಂತ ಮುಖ್ಯವಾದ ವ್ಯಕ್ತಿ ಯಾರೂ ಇರಬಾರದು ಅಂತ ನಾನು ಬಯಸ್ತೀನಿ
ಅವಳು : ಅರೆ! ನೀನು ನನ್ನ ಪಾಲಿಗೆ ಬಹಳ ಮುಖ್ಯ ವ್ಯಕ್ತಿ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಬಟ್ ನಾನು ನನ್ನ ಫ್ಯಾಮಿಲಿಯನ್ನು ಕೂಡಾ ಪ್ರೀತಿಸ್ತೀನಿ!
ಅವನು : ಹಾಗಾದ್ರೆ…. ನೀನು ಫೋನ್ ನಲ್ಲೇ ಮಾತಾಡ್ತಾ ಕುಳಿತಿರು. ನಾನು ನಿನ್ನ ಜೊತೆ ಇರೋದಿಲ್ಲ. ನಾವು ಮಾತಾಡ್ತಾ ಇರುವಾಗ ಯಾರದೋ ಕಾಲ್ ಬಂದ್ರೆ, ನಮ್ಮ ಮಾತನ್ನೇ ತುಂಡರಿಸಿ ಪಿಕ್ ಮಾಡೋದು… ಇದು ತೀರಾ ತೀರಾ rude…
ಅವಳು : ಅದು ಯಾರದೋ ಕಾಲ್ ಅಲ್ಲ.. ನನ್ನ ಅಮ್ಮನ ಕಾಲ್!
ಅವನು : ಸ್ಟಿಲ್! ನನಗೆ ಪ್ರಾಮಿಸ್ ಮಾಡು. ಅಮ್ಮನದೋ ಅಪ್ಪನದೋ… ನಾನು ನಿನ್ನ ಜೊತೆ ಇರುವಾಗ ನೀನು ಯಾರ ಕಾಲ್ ಕೂಡಾ ಪಿಕ್ ಮಾಡಬಾರದು. ನನಗಿಂತ ನಿನಗೆ ಅದು ಹೇಗೆ ಮತ್ಯಾರೋ ಮುಖ್ಯವಾಗಿಬಿಡ್ತಾರೆ!?
ಇಂಥದೊಂದು ಸಂಭಾಷಣೆಯಲ್ಲಿ ನೀವು ಎಂದಾದರೂ ಈ ಎರಡರಲ್ಲಿ ಯಾವುದಾದರೊಂದು ಪಾತ್ರವಾಗಿದ್ದೀರಾ? ನೀವು ಕಾಲ್ ರಿಸೀವ್ ಮಾಡಿದವರಾಗಿದ್ದರೆ, ನಿಮ್ಮ ಪ್ರೇಮಿ ನಾರ್ಸಿಸಿಸ್ಟ್ ಎಂದು ತಿಳಿಯಿರಿ. ಅಥವಾ ಕಾಲ್ ರಿಸೀವ್ ಮಾಡಿದವರನ್ನು ಆಕ್ಷೇಪಿಸುವವರಾಗಿದ್ದಲ್ಲಿ, ಸ್ವತಃ ನೀವೇ ನಾರ್ಸಿಸಿಸ್ಟ್ ಆಗಿದ್ದೀರಿ.
ಪ್ರೇಮಿಯ ಸಾಂಗತ್ಯದಲ್ಲಿ ತಾನೇ ಮಹತ್ವ ಪಡೆಯಬೇಕೆಂದು, ಅವರ ಬದುಕಿನಲ್ಲಿ ತನಗಿಂತ ಮುಖ್ಯವಾದವರು ಯಾರೂ ಇರಬಾರದೆಂದು ಬಯಸುವುದು ಯಾವುದೇ ವ್ಯಕ್ತಿಯ ಸ್ವಯಂಕೇಂದ್ರಿತ ಗುಣವನ್ನು ತೋರಿಸುತ್ತದೆ. ನಮ್ಮನ್ನು ನಾವು ಪ್ರೀತಿಸಿಕೊಳ್ಳಬೇಕು ಅನ್ನುವುದೇನೋ ನಿಜ. ಆದರೆ, ನಮ್ಮ ಸ್ವಯಂಪ್ರೇಮವು ಗೀಳಾಗಬಾರದು. ಅದು ಗೀಳಾದಾಗ ನಮ್ಮ ಜೊತೆ ಇರುವವರ ಕುರಿತು ಅಸಹಿಷ್ಣುತೆ ಬೆಳೆಯುತ್ತದೆ. ನಮ್ಮನ್ನು ನಾವು ಮುಖ್ಯವಾಗಿ ಪರಿಗಣಿಸುವುದಷ್ಟೇ ಅಲ್ಲ, ಇತರರೂ ನಮಗೆ ಮಾತ್ರ ಮಹತ್ವ ನೀಡಬೇಕೆಂದು ಬಯಸುತ್ತೇವೆ. ಈ ಭಾವನೆ ನಮ್ಮಲ್ಲಿ ಬೇರೂರಿದಾಗ ನಾವು ಅವರ ಬಗ್ಗೆ ನಿರ್ಲಕ್ಷ್ಯ ತೋರತೊಡಗುತ್ತೇವೆ. ಅವರ ಭಾವನೆ, ಆಸಕ್ತಿ, ಬಯಕೆಗಳು, ಬೇಕು – ಬೇಡಗಳು ಯಾವುದರ ಬಗ್ಗೆಯೂ ನಮಗೆ ಕಾಳಜಿ ಇರುವುದಿಲ್ಲ
ಇದು ನಾರ್ಸಿಸಿಸ್ಟ್ ಗುಣ. (ನಾರ್ಸಿಸಿಸ್ಟ್ ಯಾರು, ಅವನ ಗುಣವೇನು ಎಂಬುದನ್ನು ಇಲ್ಲಿ ಓದಿ : https://aralimara.com/2018/05/17/narcissus/ ) ಈ ಗುಣ ಯಾರನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ನೀವು ಒಬ್ಬ/ಳು ಪ್ರೇಮಿಯಾಗಿದ್ದು, ನಿಮ್ಮಲ್ಲಿ ಈ ಗುಣವಿದ್ದರೆ, ನಿಮ್ಮ ಪ್ರೇಮ ಯಾವತ್ತೂ ಸಫಲವಾಗುವುದಿಲ್ಲ. ಏಕೆಂದರೆ ಪ್ರೇಮವು ಪರಸ್ಪರ ಪೂರಕವಾದ ಪ್ರಕ್ರಿಯೆ. ಅಲ್ಲಿ ನೀವು ನಿಮ್ಮ ಕುರಿತು ಕಡಿಮೆ ಮತ್ತು ಪ್ರೇಮಿಯ ಕುರಿತು ಹೆಚ್ಚು ಯೋಚಿಸಬೇಕಾಗುತ್ತದೆ. ನಿಮ್ಮಲ್ಲಿ ಈ ಮೇಲಿನ ಸಂಭಾಷಣೆಯಲ್ಲಿ ಕಾಣಿಸುವಂಥ ಆಲೋಚನೆ ಅಥವಾ ಅಸಹನೆ ಇರುವುದೇ ಆದರೆ, ನೀವು ನಾರ್ಸಿಸಿಸ್ಟ್ ಆಗಿದ್ದೀರಿ. ನಿಮ್ಮಲ್ಲಿ ನಾರ್ಸಿಸಿಸಮ್ ಯಾವ ಹಂತದಲ್ಲಿದೆ ಎಂದು ಪರೀಕ್ಷಿಸಿಕೊಂಡು, ಅದನ್ನು ನಿವಾರಿಸಿಕೊಂಡು ಮುನ್ನಡೆಯಿರಿ. ಆಗ ಮಾತ್ರ ನಿಮ್ಮ ಪ್ರೇಮ ಸಫಲವಾಗಲು ಸಾಧ್ಯ.
ಅಕಸ್ಮಾತ್ ನಿಮ್ಮ ಪ್ರೇಮಿ ನಾರ್ಸಿಸಿಸ್ಟ್ ಆಗಿದ್ದಲ್ಲಿ, ನೀವು ಅವರನ್ನು ಬದಲಿಸಲು ಸಾಧ್ಯವಾದಷ್ಟು ಪ್ರಯತ್ನಿಸಿ. ಪ್ರೇಮದಲ್ಲಿ ಸಂಗಾತಿಯ ಮಹತ್ವ, ಪರಸ್ಪರ ಕಾಳಜಿ ಮತ್ತು ಗೌರವದ ಅಗತ್ಯವನ್ನು ಸರಳವಾಗಿ ತಿಳಿಸಲು, ಅರ್ಥ ಮಾಡಿಸಲು ಯತ್ನಿಸಿ. ಯಾವ ಕಾರಣಕ್ಕೂ ಅವರು ಹೇಳಿದಂತೆಲ್ಲ ಕೇಳುತ್ತಾ ಅವರ ಸ್ವಯಂ ವ್ಯಾಮೋಹಕ್ಕೆ ನೀರೆರೆಯಲು ಹೋಗಬೇಡಿ. ಇದರಿಂದ ಎರಡು ನಷ್ಟಗಳು. ಮೊದಲನೆಯದಾಗಿ ಅವರ ನಾರ್ಸಿಸಿಸ್ಟ್ ಗುಣ ಬಲಗೊಳ್ಳುತ್ತಾ ಹೋಗುತ್ತದೆ. ಎರಡನೆಯದಾಗಿ, ನೀವು ನಿಮ್ಮ ಸ್ವಂತಿಕೆಯನ್ನೇ ಕಳೆದುಕೊಳ್ಳುವ ಅಪಾಯವಿರುತ್ತದೆ. ಅಂಥವರ ಜೊತೆ ಏಗುವುದು ಸಾಧ್ಯವಾಗದೆ ಹೋದರೆ ನೀವು ಆ ಸಂಬಂಧದಿಂದ ಹೊರಬರುವುದು ಸೂಕ್ತ. ಪ್ರೇಮ ಯಾವತ್ತೂ ಆಹ್ಲಾದಮಯವಾಗಿರಬೇಕು ಹೊರತು ಬದುಕನ್ನು ದುರಂಕ್ಕೆ ತಳ್ಳುವಂತೆ ಇರಬಾರದು.
ನಾರ್ಸಿಸಿಸ್ಟ್ ಅನ್ನು ಗುರುತಿಸುವುದು ಹೇಗೆ?
ಅವರು ಸುಲಭವಾಗಿ ಯಾರ ಮಾತನ್ನೂ ಒಪ್ಪುವುದಿಲ್ಲ. ನೀವು ಏನಾದರೂ ಸಲಹೆ ನೀಡಿದರೆ, “ನಾನು ಹೀಗೆ ವರ್ತಿಸಲು ಕಾರಣವೇನು ಗೊತ್ತಾ?” ಎಂದು ಕಥೆ ಶುರು ಹಚ್ಚಿಕೊಳ್ಳುತ್ತಾರೆ
ಪರಿಚಯದ ಹೊಸತರಲ್ಲಿ ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ನಮ್ಮದು ಜೀವಮಾನದ ಸ್ನೇಹ ಎಂದೋ ಪ್ರೇಮ ಎಂದೋ… ನಿಮ್ಮಂಥ ವ್ಯಕ್ತಿಯನ್ನು ಈವರೆಗೆ ಭೇಟಿ ಮಾಡಿಲ್ಲ ಎಂದೋ ಹೇಳುತ್ತಾರೆ. ವಾಸ್ತವದಲ್ಲಿ ಅವರು ಇದೇ ಮಾತನ್ನು ಪ್ರತಿಯೊಬ್ಬರಿಗೂ ಹೇಳುತ್ತಾರೆ. ಆರಂಭದಲ್ಲಿ ಹೀಗೆ ಏರಿಸಿ, ನಂತರದಲ್ಲಿ ಅಷ್ಟೇ ಕೆಳಕ್ಕೆ ತಳ್ಳುತ್ತಾರೆ. ಅಂದರೆ, ಉಪೇಕ್ಷೆ ಮಾಡುತ್ತಾರೆ.
ನಾರ್ಸಿಸಿಸ್ಟ್’ಗಳು ಸುಲಭವಾಗಿ ಇತರರ ಬಗ್ಗೆ ಒಳ್ಳೆಯ ಮಾತಾಡುವುದಿಲ್ಲ. ಯಾವಾಗಲೂ ಯಾರ ಬಗೆಗಗಾದರೂ ಒಂದಲ್ಲ ಒಂದು ನೆಗೆಟಿವ್ ಕಮೆಂಟ್ ಮಾಡುತ್ತಲೇ ಇರುತ್ತಾರೆ. ನೀವು ಬೇಕಿದ್ದರೆ ಅವರನ್ನು ನಕಾರಾತ್ಮಕ ಸುದ್ದಿಗಳ ವಿಶ್ವಕೋಶ ಅನ್ನಬಹುದು. ಅವರಿಗೆ ತಮ್ಮ ಚಿಂತನೆಗಳ ಎದುರು ಯಾರ ಚಿಂತನೆಯೂ ಯೋಗ್ಯವಾದುದಲ್ಲ ಅನ್ನುವ ಭ್ರಮೆ
ತನ್ನ ಸುತ್ತಮುತ್ತ ಇರುವವರು ತನ್ನನ್ನು ಬಿಟ್ಟು ಬೇರೆ ಯಾರನ್ನೂ ಮೆಚ್ಚಲು ಸಾಧ್ಯವೇ ಇಲ್ಲ ಎಂದು ಭಾವಿಸಿರುತ್ತಾರೆ. ಹಾಗೆ ತನ್ನವರು ಬೇರೆ ಯಾರನ್ನಾದರೂ ಮೆಚ್ಚಿ ಮಾತನಾಡಿದರೆ, ದ್ವೇಷಕ್ಕೆ ತಿರುಗುವಷ್ಟು ಮತ್ಸರ ತಾಳುತ್ತಾರೆ.
ಸರಳವಾಗಿ ಹೇಳುವುದಾದರೆ; ಸ್ವಯಂ ವ್ಯಾಮೋಹ ಅಥವಾ ಗೀಳಿನ ಪ್ರತಿಫಲಗಳಾದ ಸ್ವಯಂಕೇಂದ್ರಿತ ವ್ಯಕ್ತಿತ್ವ, ಅಹಂಕಾರ, ಮತ್ಸರ, ನಕಾರಾತ್ಮಕತೆ, ಸ್ವಾರ್ಥಗಳು ನಾರ್ಸಿಸಿಸ್ಟ್ ವ್ಯಕ್ತಿಯಲ್ಲಿ ಎದ್ದು ಕಾಣುವ ಗುಣಗಳು.