ಆಶ್ರಯಣೀಯವೂ ಆದರಣೀಯವೂ ಆದ ಚಾರ್ವಾಕ ದರ್ಶನ

ನಾಸ್ತಿಕವಾದಿ ಲೋಕಾಯತರ ಕೆಲವು ಚಿಂತನೆಗಳು ಆಸ್ತಿಕವಾದಿ ಬಂಡಾಯಗಾರರನ್ನೂ (ಅಂದರೆ ದಾಸ, ಶರಣ ಇತ್ಯಾದಿ) ಪ್ರಭಾವಿಸಿರುವುದು. ಈ ದೃಷ್ಟಿಯಿಂದ ಲೋಕಾಯತ ದರ್ಶನವನ್ನು ಭಾರತೀಯ ಪರಂಪರೆಯ ಬಂಡಾಯದ ಮೂಲ ಬೀಜ ಎಂದು ಕರೆಯಬಹುದೇನೋ…. ~ ಚೇತನಾ ತೀರ್ಥಹಳ್ಳಿ

Charvaka

ಯಾವಾಗ ಒಂದು `ಗುಂಪು’ ತಯಾರಾಗುತ್ತದೆಯೋ ಆಗಲೇ `ವಿರೋಧಿ’ಗಳೂ ಹುಟ್ಟಿಕೊಳ್ಳುತ್ತಾರೆ. ಯಾವಾಗ ಒಂದು `ಸಿದ್ಧಾಂತ’ ಅಥವಾ ಚೌಕಟ್ಟುಳ್ಳ ಜೀವನಕ್ರಮ ರೂಪುಗೊಳ್ಳುತ್ತದೆಯೋ ಅದರೊಳಗಿಂದಲೇ `ಬಂಡಾಯ’ವೂ ಹುಟ್ಟಿಕೊಳ್ಳುತ್ತದೆ. ಭಾರತೀಯ ಧರ್ಮ – ತತ್ವಶಾಸ್ತ್ರ ಪರಂಪರೆಯಲ್ಲಿ ಇಂತಹ ಬಂಡಾಯಗಾರರು ನಮ್ಮ ಪರಂಪರೆಯ ತಳಹದಿಯೆಂದು ಪರಿಗಣಿಸಲ್ಪಡುವ ವೇದಕಾಲದಲ್ಲೇ ಹುಟ್ಟಿಕೊಂಡಿದ್ದರು. ಅವರನ್ನು ಶಾಸ್ತ್ರಜ್ಞರು `ಲೋಕಾಯತರು’ ಅಥವಾ `ಚಾರ್ವಾಕರು’ ಎಂದು ಗುರುತಿಸುತ್ತಾರೆ. ಈ ಲೋಕಾಯತರು ಸಾವಿರಾರು ವರ್ಷಗಳ ಹಿಂದೆ ಎತ್ತಿದ್ದ ಪ್ರಶ್ನೆಗಳು, ಮಂಡಿಸಿದ್ದ ತರ್ಕ, ಅವರು ವಿರೋಧಿಸಿದ ಸಂಗತಿಗಳು ಇಂದಿಗೂ ನಮ್ಮ ನಡುವಿನ ಬಂಡಾಯಗಾರರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕಂಡುಬರುತ್ತದೆ. ಆಸಕ್ತಿಕರ ಅಂಶವೆಂದರೆ ಈ ನಾಸ್ತಿಕವಾದಿ ಲೋಕಾಯತರ ಕೆಲವು ಚಿಂತನೆಗಳು ಆಸ್ತಿಕವಾದಿ ಬಂಡಾಯಗಾರರನ್ನೂ (ಅಂದರೆ ದಾಸ, ಶರಣ ಇತ್ಯಾದಿ) ಪ್ರಭಾವಿಸಿರುವುದು. ಈ ದೃಷ್ಟಿಯಿಂದ ಲೋಕಾಯತ ದರ್ಶನವನ್ನು ಭಾರತೀಯ ಪರಂಪರೆಯ ಬಂಡಾಯದ ಮೂಲ ಬೀಜ ಎಂದು ಕರೆಯಬಹುದೇನೋ. ಬೌದ್ಧ, ಜೈನ ಧರ್ಮಗಳು ಈ ಬೀಜದಿಂದಲೇ ಮೊಳೆತು ಬೆಳೆದವೆಂದು ಪ್ರಾಜ್ಞರು ಗುರುತಿಸುತ್ತಾರೆ.

ಚಾರ್ವಾಕ – ಲೋಕಾಯತ
ಚಾರ್ವಾಕ ಪದವನ್ನು `ಚಾರು’- ಸುಂದರ, `ವಾಕ್’- ಮಾತು ಎಂದು ಒಡೆದು, ಸುಂದರವಾಗಿ ಮಾತನಾಡುವವರು (ಹಿತಭಾಷಿಗಳು) ಎಂದು ಅರ್ಥೈಸಲಾಗುತ್ತದೆ. ವಿದ್ವಾಂಸರ ನಡುವೆ ಈ ಪದದ ಹುಟ್ಟು, ಅರ್ಥ ವ್ಯಾಪ್ತಿಗಳ ಬಗ್ಗೆ ದೊಡ್ಡ ಚರ್ಚೆಯೇ ಇದೆ. ಚಾರ್ವಾಕ ಎಂದರೆ ಒಬ್ಬ ವ್ಯಕ್ತಿಯಲ್ಲ. ಅದು ನಾಸ್ತಿಕ-ಭೌತವಾದಿಗಳ, ವೇದವಿರೋಧಿಗಳ ಒಂದು ಪಂಥ ಎಂಬುದು ಎಲ್ಲ ಪ್ರಾಜ್ಞರ ಅಭಿಮತವಾಗಿದೆ.

ಈ ಚಾರ್ವಾಕರನ್ನು ಪ್ರಾಚೀನ ಕಾಲದ ವೈಜ್ಞಾನಿಕರೆಂದು ತಮ್ಮ ‘ಲೋಕಾಯತ’ ಕೃತಿಯಲ್ಲಿ ವಿಶ್ಲೇಷಿಸಿರುವ ಗೌರೀಶ ಕಾಯ್ಕಿಣಿಯವರು, “ಚಾರ್ವಾಕರು ತರ್ಕದ ಒರೆಗಲ್ಲಿನ ಮೇಲೆ ಸತ್ಯದ ಪರೀಕ್ಷೆ ಮಾಡುತ್ತಿದ್ದರು. ಅವರು ನಾಸ್ತಿಕರಾಗಿದ್ದುದು ನಿಜ. ಆದರೆ ಸಂಯಮಿಗಳೇ ಆಗಿದ್ದರು. ಸದಾ ತಮ್ಮ ಮತ ಪ್ರಚಾರಕ್ಕಾಗಿ ಸಂಚಾರದಲ್ಲಿ ಇರುತ್ತಿದ್ದ ಪರಿವ್ರಾಜಕರು ಈ ಚಾರ್ವಾಕರು. ಇವರು ಸಾಲ ಮಾಡಿಯಾದರೂ ತುಪ್ಪವನ್ನು ಕುಡಿಯಿರಿ ಎಂದರಲ್ಲದೆ ಹೆಂಡವನ್ನು ಕುಡಿಯಿರೆಂದು ಹೇಳಲಿಲ್ಲ!” ಎಂದು ಬರೆಯುತ್ತಾರೆ. ಚಾರ್ವಾಕ ತತ್ತ್ವವು ಭೌತಿಕ ಸುಖಕ್ಕೆ ಪಾರಮ್ಯ ನೀಡಿದೆ ಹೊರತು ಸ್ವೇಚ್ಛೆಯ ಲಂಪಟತನಕ್ಕಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ.

ಆಶ್ರಯಣೀಯವೂ ಆದರಣೀಯವೂ…
ಚಾರ್ವಾಕರ ಸಿದ್ಧಾಂತ ಭಾರತೀಯ ಪರಂಪರೆಯ ಪ್ರಪ್ರಾಚೀನ ಭೌತಿಕ ಸಿದ್ಧಾಂತವೆಂದು ಹೆಸರಾಗಿದೆ. ಮೋಕ್ಷ ಸಾಧನೆ, ವೈದಿಕ ಆಚಾರ ವಿಚಾರಗಳಿಗೆ ಪ್ರಾಮುಖ್ಯತೆಯನ್ನೂ ಪವಿತ್ರತೆಯನ್ನೂ ನೀಡಲಾಗಿದ್ದ ಕಾಲದಲ್ಲಿ ಚಾರ್ವಾಕರನ್ನು ಅಸುರರೆಂದೂ ಪಿಶಾಚಿಗಳೆಂದೂ ಪರಿಗಣಿಸಲಾಗುತ್ತಿತ್ತು. ಸಜ್ಜನರು ಅವರ ಸಂಪರ್ಕದಲ್ಲಿರಬಾರದೆಂದು ಬೋಧಿಸಲಾಗುತ್ತಿತ್ತು. ಹಾಗೆಂದ ಮಾತ್ರಕ್ಕೆ ಲೋಕಾಯತ ವಿಚಾರಗಳನ್ನು ವಿರೋಧಿಗಳ ಬಡಬಡಿಕೆಯೆಂದು ಉಪೇಕ್ಷೆ ಮಾಡಿರಲಿಲ್ಲ. ಗುರುಕುಲದಲ್ಲಿ ಅದನ್ನೂ ಒಂದು ಭಾಗವಾಗಿ ಬೋಧಿಸಲಾಗುತ್ತಿತ್ತು. ಆದರೆ ಅದರ ಭೌತಿಕ ಸುಖದ ಪ್ರಾಮುಖ್ಯತೆ, ವೇದ ವಿರೋಧಿ ಚಿಂತನೆಗಳು ಭಕ್ತಿ ತತ್ತ್ವದ ಪ್ರವಾಹದಲ್ಲಿ ಕೊಚ್ಚಿಹೋಗಿ, ಚಾರ್ವಾಕರ ಬಗ್ಗೆ ಮಾತನಾಡುವುದೂ ಒಂದು ಪಾಪವೆಂಬಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಸುಮಾರು 14ನೇ ಶತಮಾನದಲ್ಲಿ ವೇದಾಂತಿ ಮಾಧವಾಚಾರ್ಯರು ಲೋಕಾಯತವನ್ನು `ದರ್ಶನ’ವೆಂದು ಗುರುತಿಸಿ, ತಮ್ಮ `ಸರ್ವದರ್ಶನ ಸಂಗ್ರಹ’ ಕೃತಿಯಲ್ಲಿ ಅದನ್ನು ಸೇರಿಸಿದರು. ಈ ದರ್ಶನದ ವಿಷಯವೆತ್ತಿದ ಬಹುತೇಕ ವೇದಾಂತಿಗಳು ಇದನ್ನು ಪ್ರಬಲವಾಗಿ ಖಂಡಿಸಿದ್ದರೂ ಲೋಕಾಯತನವನ್ನು `ಆಶ್ರಯಣೀಯವೂ ಆದರಣೀಯವೂ’ ಆದ ಸಿದ್ಧಾಂತ ಎಂದು ಕರೆದಿದ್ದಾರೆ. ವಿರೋಧದ ನಡುವೆಯೂ ಅವರಿಗೆ ಈ ಸಿದ್ಧಾಂತವು ಜನರಿಗೆ ಪ್ರಿಯವಾಗಬಲ್ಲುದಾಗಿಯೇ ಕಂಡಿದೆ.

ಸಮಾಜಮುಖಿ ಸಿದ್ಧಾಂತ
ಲೋಕಾಯತದ ಪ್ರಕಾರ `ಕಾಮ’ವೇ ಏಕೈಕ ಪುರುಷಾರ್ಥ. ಇಲ್ಲಿ ಕಾಮವೆಂದರೆ ಲೈಂಗಿಕತೆಯಲ್ಲ, `ಬಯಕೆ’ ಎಂಬ ವ್ಯಾಪಕಾರ್ಥವಿದೆ. ಸಾವಿನೊಂದಿಗೆ ದೇಹಾತ್ಮಗಳೆರಡೂ ನಾಶವಾಗುತ್ತವೆ ಎಂದು ಸಾರಿದ ಲೋಕಾಯತರು ಇರುವೊಂದು ಜೀವಿತದಲ್ಲಿ ಬದುಕನ್ನು ಸಂಪೂರ್ಣವಾಗಿ ಅನುಭವಿಸಬೇಕು. ಎಲ್ಲ ಕಾಮನೆಗಳನ್ನೂ ಪೂರೈಸಿಕೊಳ್ಳಬೇಕು ಎಂದು ಬೋಧಿಸಿದರು. ಆದ್ದರಿಂದ ಕೃಷಿ, ವಾಣಿಜ್ಯ, ಉದ್ದಿಮೆ ಮೊದಲಾದ ದೈಹಿಕ ಕ್ರಿಯಾಶೀಲ ದುಡಿಮೆಗೆ ಅವರು ಮಹತ್ವ ನೀಡಿದರು. ವೈದಿಕ ಕರ್ಮಕಾಂಡಗಳನ್ನೂ ಅದರ ಆಮಿಷಗಳಾದ ಸ್ವರ್ಗ ನರಕಗಳನ್ನೂ ಅವರು ಉಗ್ರವಾಗಿ ಟೀಕಿಸಿದರು. ಜಾತಿಭೇದ, ವರ್ಣಭೇದ, ಸಾಮಾಜಿಕ ತಾರತಮ್ಯಗಳನ್ನು ಧಿಕ್ಕರಿಸಿದರು. ಸ್ತ್ರೀಯರ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ಕಟುವಾಗಿ ವಿರೋಧಿಸಿದರು. ರಾಜಸತ್ತೆಯನ್ನು ಮನ್ನಿಸಿದರೂ ಅಲ್ಲಿ ನ್ಯಾಯ – ವಿವೇಕಗಳು ಇದ್ದರೆ ಮಾತ್ರ ಮನ್ನಣೆ ಎಂದು ಸಾರಿದರು. ಇಂದ್ರಿಯಗಳಿಗೆ ಗೋಚರವಾಗುವ, ಇಂದ್ರಿಯಗಳು ತಲುಪಬಹುದಾದ ಜಗತ್ತು ಮಾತ್ರ ಸತ್ಯವೆಂದು ಪ್ರತಿಪಾದಿಸುವ ಇಂದಿನ ವಿಚಾರವಾದಿಗಳ ಚಿಂತನೆಯನ್ನು ಲೋಕಾಯತರು ಸಾವಿರಾರು ವರ್ಷಗಳಷ್ಟು ಹಿಂದೆಯೇ ಪ್ರಚುರಪಡಿಸಿದ್ದರು.

ರಾಮಾಯಣ ಮಹಾಭಾರತಗಳಲ್ಲಿ ಚಾರ್ವಾಕರು ಕಾಣಿಸಿಕೊಂಡು ಕೇಳಿರುವ ಪ್ರಶ್ನೆಗಳು ಇಂದಿನ ಜನಸಾಮಾನ್ಯರ, ವೈಚಾರಿಕರ ಪ್ರಶ್ನೆಗಳೂ ಆಗಿವೆ. ರಾಮಾಯಣದಲ್ಲಿ ಬರುವ ಜಾಬಾಲಿಯೆಂಬ ಲೋಕಾಯತ ಬ್ರಾಹ್ಮಣನು ರಾಮನಿಗೆ `ಸಾಯುವಾಗ ಜತೆಯಲ್ಲಿ ಯಾರು ಬರುತ್ತಾರೆ? ಯಾರಿಂದ ಏನಾಗಬೇಕು? ಮಾತು ಕೊಟ್ಟಿರುವೆನೆಂದು ಅದಕ್ಕೆ ಅಂಟಿಕೊಂಡು ಭೋಗ ಭಾಗ್ಯಗಳನ್ನು ಕಡೆಗಣಿಸಬೇಡ. ನಿನ್ನ ಪಾಲಿಗೆ ಬಂದಿರುವ ಅಧಿಕಾರವನ್ನು (ಭರತನ ಅಪೇಕ್ಷೆಯಂತೆ) ಅನುಭವಿಸು’ ಎಂದು ಉಪದೇಶ ಕೊಡುತ್ತಾನೆ. ಹಾಗೆಯೇ ಮಹಾಭಾರತದಲ್ಲಿ ಒಬ್ಬ ಲೋಕಾಯತ ಬ್ರಾಹ್ಮಣನು ಯುಧಿಷ್ಠಿರನನ್ನು `ಬಂಧು ಬಾಂಧವರ ರಕ್ತದ ಕಲೆ ಅಂಟಿಕೊಂಡಿರುವ ರಾಜಪೀಠವನ್ನು ನೀನು ಏರುತ್ತಿದ್ದೀಯೆ. ನಿನಗೆ ಧಿಕ್ಕಾರವಿರಲಿ’ ಎಂದು ಮೂದಲಿಸುತ್ತಾನೆ. 

ಮಿತಿಯಿಂದ ಮಾಸಿತು ಪ್ರಖರತೆ
ಜನಪರವಾಗಿದ್ದುಕೊಂಡೂ, ಧರ್ಮ, ಅರ್ಥಹೀನ ಕರ್ಮಾಚರಣೆಗಳ ಹೆಸರಲ್ಲಿ ಶೋಷಣೆಗೆ ಒಳಗಾಗುತ್ತಿದ್ದ ಜನರ ಉದ್ಧಾರವನ್ನೆ ಮುಖ್ಯವಾಗಿಟ್ಟುಕೊಂಡೂ ಲೋಕಾಯತವು ಕಾಲಪ್ರವಾಹದಲ್ಲಿ ಅಡಗಿಹೋಗಿದ್ದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಭಾರತೀಯರಲ್ಲಿ ಪ್ರಬಲವಾಗಿರುವ ಆಸ್ತಿಕತೆ, ಧರ್ಮಭೀರು ಪ್ರಜ್ಞೆ, ವೇದಾಂತಿಗಳ ಪ್ರಾಬಲ್ಯ, ಸಮಾಜ ವಿಧಿಸತೊಡಗಿದ ಸಾಮೂಹಿಕ ಬಹಿಷ್ಕಾರದಂತಹ ಶಿಕ್ಷೆಗಳು ಮುಖ್ಯ ಕಾರಣವೆಂದು ಅಧ್ಯಯನಕಾರರು ಗುರುತಿಸುತ್ತಾರೆ. ಇವುಗಳ ಜೊತೆಗೆ, ಚಾರ್ವಾಕರ ವಿತಂಡವಾದ, ಅನಂತರದ ಕಾಲದಲ್ಲಿ ಅಧ್ಯಯನದ ಕೊರತೆಯುಳ್ಳ, ಕೇವಲ ವಿರೋಧಕ್ಕೆ ಸೀಮಿತವಾದ ಜ್ಞಾನಗಳೂ ಅವರ ಪ್ರಭಾವ ಕುಗ್ಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದವು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಕೆಲವು ಚಾರ್ವಾಕ ಸೂಕ್ತಿಗಳು
* ಜನರು ಬೇಸಾಯ, ಪಶುಪಾಲನೆ, ವ್ಯಾಪಾರ, ವ್ಯವಹಾರ, ರಾಜನೀತಿಯೇ ಮೊದಲಾದ ಸದುಪಾಯಗಳಿಂದಲೇ ಭೋಗಗಳನ್ನು ಅನುಭವಿಸಬೇಕು.
* ಪಾತಿವ್ರತ್ಯಾದಿ ಸಂಕೇತಗಳು ಕರಾರುಗಳ ಮಂದಬುದ್ಧಿಯವರಿಂದ ಮಾಡಲ್ಪಟ್ಟವು. ಇವು ಹೆಣ್ಣಿಗೆ ತೊಡಿಸಲಾದ ಬಂಧನಗಳಷ್ಟೆ.
* ಅರ್ಥಶಾಸ್ತ್ರ, ಕಾಮಶಾಸ್ತ್ರ, ಲೌಕಿಕ ವ್ಯವಹಾರ ಶಾಸ್ತ್ರ- ಇವು ಮಾತ್ರವೇ ಅಗತ್ಯವಾಗಿ ಕಲಿಯಬೇಕಾದ ವಿದ್ಯೆಗಳು.
* ದೇಹದ ಹೊರತಾಗಿ ಆತ್ಮಕ್ಕೆ ಅಸ್ತಿತ್ವವಿಲ್ಲ. ಸ್ವಾತಂತ್ರ್ಯವೇ ಮೋಕ್ಷ, ಪಾರತಂತ್ರ್ಯವೇ ಬಂಧನ. ಮರಣಕ್ಕಿಂತ ಬೇರೆ ಮೋಕ್ಷವಿಲ್ಲ. ಪರಲೋಕವೆಂಬುದಿಲ್ಲ. ಸತ್ತ ಮೇಲೆ ಯಾರೂ ಎಲ್ಲಿಗೂ ಹೋಗುವುದಿಲ್ಲ.
* ಬದುಕಿದ್ದಷ್ಟೂ ಕಾಲ ಸುಖವಾಗಿ ಬದುಕಬೇಕು. ಸಾಲಮಾಡಿಯಾದರೂ ಸರಿ ತುಪ್ಪವನ್ನು ಕುಡಿಯಬೇಕು.

 

 

Leave a Reply