ನಿಮ್ಮಲ್ಲಿ ಈ ಅವಗುಣವಿದೆಯೇ? ಹಾಗಾದರೆ ನೀವು ಈ ಪ್ರಾಣಿಯನ್ನು ಪ್ರತಿನಿಧಿಸುತ್ತೀರಿ!

ಪ್ರತಿಯೊಂದು ಜನಪದವೂ ಪ್ರಾಣಿಗಳೊಡನೆ ವಿಶಿಷ್ಟ ಸಂಬಂಧವನ್ನು ಹೊಂದಿದೆ. ಮನುಷ್ಯೇತರ ಪ್ರಾಣಿಗಳೊಡನೆ ಬದುಕು ತುಲನೆ ಮಾಡಿದ್ದಕ್ಕೇ ‘ನಾಗರಿಕತೆ’ ಅನ್ನುವ ಪದ ಹುಟ್ಟಿಕೊಂಡಿದ್ದು. ಮನುಷ್ಯ ಕೂಡ ಮೂಲತಃ ಮೃಗವೇ. ಆದರೆ ಆಲೋಚನಾ ಸಾಮರ್ಥ್ಯ, ಮನಸ್ಸು, ಹೃದಯಗಳ ಕಾರಣದಿಂದ ನಾವು ಭಿನ್ನವಾಗಿದ್ದೇವೆ. ಆದರೂ ನಮ್ಮಲ್ಲಿ ಅಲ್ಪಸ್ವಲ್ಪ ಮೃಗೀಯತೆ ಉಳಿದೇಬಿಟ್ಟಿದೆ. ಕೆಲವು ಕ್ಲಿಷ್ಟ ಅತವಾ ತೀವ್ರ ಸನ್ನಿವೇಶಗಳಲ್ಲಿ ಅವು ಹೊರಗೆ ಹಣಕುತ್ತವೆ. ನಮ್ಮ ಅವಗುಣಗಳೇ ನಮ್ಮ ಮೃಗೀಯತೆಯ ಆವಾಸ ಸ್ಥಾನ. ನಮ್ಮೊಳಗಿನ ಮೃಗತ್ವವವನ್ನು ಸಂಪೂರ್ಣ ಹೊರಗಟ್ಟಬೇಕು ಎಂದರೆ, ನಮ್ಮ ಅವಗುಣವನ್ನು ಗುರುತಿಸಿಕೊಂಡು ಅದನ್ನು ಗುಡಿಸಿ ಹೊರಹಾಕಬೇಕು.

ಈ ನಿಟ್ಟಿನಲ್ಲಿ ನಮ್ಮ ಭಾರತೀಯ ಜನಪದ ಹಾಗೂ ಪ್ರಾಚೀನ ಸಾಹಿತ್ಯ ಯಾವ ಅವಗುಣಕ್ಕೆ ಯಾವ ಪ್ರಾಣಿಯನ್ನು ಹೋಲಿಸಿದೆ; ನೋಡೋಣ…

ಕಾಮ: ಇದನ್ನು ಹಾವಿಗೆ (ಸರ್ಪಕ್ಕೆ) ಹೋಲಿಸಲಾಗಿದೆ. ಹುತ್ತದಲ್ಲಿ ಮುದುರಿ ಮಲಗಿದ ಹಾವು  ಚಿಕ್ಕ ಪ್ರಚೋದನೆಗೂ ಹೆಡೆಯೆತ್ತಿ ಭುಸುಗುಡುವಂತೆ ಸಂಯಮವಿಲ್ಲದವರಲ್ಲಿ ಕಾಮ ಸದಾ ಹೆಡೆಯಾಡುತ್ತಿರುತ್ತದೆ.

ಕ್ರೋಧ: ಇದನ್ನು ತೋಳಕ್ಕೆ ಹೋಲಿಸಲಾಗಿದೆ. ತೋಳ ಅತ್ಯಂತ ಕ್ರೂರವಾಗಿ ಕೊಲ್ಲುತ್ತದೆ. ಹಾಗೆಯೇ ಕ್ರೋಧವಶವಾದವರು ಮತ್ತೊಬ್ಬರನ್ನು ಅಸಹನೀಯವಾಗಿ ಹಿಂಸಿಸುತ್ತಾರೆ.

ಲೋಭ: ಇದನ್ನು ಹದ್ದಿಗೆ ಹೋಲಿಸಲಾಗಿದೆ. ಹೇಗೆ ಹದ್ದು ಮುಗಿಲೆತ್ತರ ಹಾರಿದರೂ ಹೆಣಗಳ ಮೇಲೇ ಕಣ್ಣು ನೆಟ್ಟಿರುವುದೋ, ಲೋಭ ಅಷ್ಟೈಶ್ವರ್ಯವೇ ಇದ್ದರೂ ಹಾಲಿನಲ್ಲಿ ಬಿದ್ದ ನೊಣವನ್ನು ಹೀರಿ ಬಿಸಾಡುವ ಕೀಳು ಅಭಿರುಚಿ ಮೂಡಿಸುತ್ತದೆ.

ಮೋಹ: ಇದನ್ನು ಗೂಬೆಗೆ ಹೋಲಿಸಲಾಗಿದೆ. ಗೂಬೆಗೆ ಕತ್ತಲೆಂದರೆ ಕಡುಮೋಹ. ಮೋಹಿತರೂ ಹಾಗೆಯೇ. ಯಾವುದು ಲೋಕದ ಪಾಲಿಗೆ ವಾಮೆಯೋ ಅದೇ ಇವರಿಗೆ ಪ್ರಿಯವಾಗುತ್ತದೆ!

ಮದ: ಇದು ಗರುಡನಂಥದ್ದು. ತನ್ನನ್ನು ಬಿಟ್ಟರಿಲ್ಲ ಎಂದು ಮೆರೆಯುವ ಗರುಡ ಎಷ್ಟು ಹಾರಿದರೂ ಚಕ್ರಚಕ್ರ ಸುತ್ತುತ್ತಲೇ ಇರುತ್ತದೆ. ಚಕ್ರಗತಿ ಬಿಟ್ಟರೆ ಅದಕ್ಕೆ ಹಾರಲು ಬಾರದು. ಮದ ಉಳ್ಳವರೂ ಹಾಗೆಯೇ. ಅವರು ತಮ್ಮ ಪರಿಧಿಯಿಂದ ಹೊರಗೆ ಬರಲಾರರು!

ಮಾತ್ಸರ್ಯ: ಇದು ನಾಯಿಗೆ ಸಮಾನವಾದ್ದು. ನಾಯಿ ಮತ್ತೊಂದು ನಾಯಿಯ ಬಾಯಲ್ಲಿರುವುದನ್ನು ಕಿತ್ತು ತಿನ್ನಲು ಹವಣಿಸುತ್ತದೆ. ಹಾಗೆಯೇ ಮತ್ಸರಿಗಳು ಮತ್ತೊಬ್ಬರ ಅವಕಾಶ, ಸಾಧನೆ, ಜನಪ್ರಿಯತೆ ಎಲ್ಲವನ್ನೂ ಕಸಿಯಲು ಕಾದು ಕೂರುತ್ತಾರೆ. ಇವರಷ್ಟು ಅಪಾಯಕಾರಿ ಮತ್ತೊಬ್ಬರಿಲ್ಲ. ಆದ್ದರಿಂದಲೇ ‘ನಾಯಿಬುದ್ಧಿ’ ಅನ್ನುವುದು ಬೈಗುಳಗಳಲ್ಲಿ ಒಂದಾಗಿ ಪ್ರಚಲಿತದಲ್ಲಿದೆ.

2 Comments

Leave a Reply to sathishpoojari2841Cancel reply