ಸತ್ಯದ ಒಂದೊಂದು ತುಣುಕೂ ನಮ್ಮನ್ನು ಶಾಂತಗೊಳಿಸುತ್ತದೆ. ಅದೆಲ್ಲಿಂದ ಬಂದರೂ ಸೇವಿಸಿ. ಏಕೆಂದರೆ ಅದು ಜೀವನದಲ್ಲಿ ಬೆಂದವರ , ಕಹಿ ನುಂಗಿ ಸಿಹಿ ನೀಡಿದ ಎಲ್ಲ ಸತ್ಯಕಾಮರುಗಳ ಶ್ರಮದ ಫಲ… | ಪ್ರದೀಪ್
ಅವನ ತಾಯಿ ವ್ಯಭಿಚಾರಿಣಿ. ಅವಳ ದೀನತೆಯ ಮುಖ, ಜನರ ಉಪೇಕ್ಷೆಯ,ತಿರಸ್ಕಾರದ ನೋಟ, ಆಡುಮಾತು ಕೊಂಕುನುಡಿ ಅವನಿಗೆ ಸಾಮಾನ್ಯವಾಗಿತ್ತು.
ಅವನಲ್ಲಿ ಪ್ರಶ್ನೆಗಳ ಭೋರ್ಗರೆತ. ಎಲ್ಲವನ್ನೂ ಎಲ್ಲಿ, ಯಾರು, ಏಕೆ, ಹೇಗೆ, ಏನು, ಜಾತಿ, ಮತ, ಸಂಸ್ಕೃತಿ, ದೇಶ, ಜಗತ್ತು ಹೀಗೇ…
ಅವನು ಮೌನಿಯಾದ.
ಪ್ರಶ್ನೆಗಳಿಗೆ ಉತ್ತರ ಬೇಕೇಬೇಕು.
ಪ್ರಶ್ನೆಗಳೇ ಇಲ್ಲದ ಸ್ಥಿತಿ ಇದೆಯೇ?
ನಾನು ಶಾಂತನಾಗಬೇಕು,
ಎಲ್ಲರೂ ಶಾಂತಿಯಿಂದಿರಬೇಕು.
ಅಂತಹ ಯಾವ ವಿದ್ಯೆ ಕಲಿಯಲಿ ?
ಯುದ್ಧವಿದ್ಯೆ ಕಲಿತು ಕ್ಷತ್ರಿಯ ನಾಗಲೆ ?
ಯುದ್ಧದಿಂದ ಶಾಂತಿ ಅಸಾಧ್ಯ.
ಒಂದು ಕಲ್ಲನ್ನು ಎರಡು,ನಾಲ್ಕು, ಆರು ಆಗಿಸುವ ಮಗ್ಗಿಪಾಠದ ವೈಶ್ಯನಾಗಲೇ? ಅದರಿಂದ ಶಾಂತಿ ಸಿಗದು. ಯಾರೋ ‘ಬ್ರಹ್ಮವಿದ್ಯೆ’ ‘ಬ್ರಹ್ಮಾನಂದ’ ಎಂಬ ಪದ ಹೇಳಿದ್ದು ಕೇಳಿಸಿಕೊಂಡಿದ್ದನು.ಅದನ್ನೇ ಕಲಿಯುತ್ತೇನೆಂದು ನಿರ್ಧರಿಸಿದನು. “ಅಮ್ಮಾ ನಾನು ಬ್ರಹ್ಮವಿದ್ಯೆ ಕಲಿಯಬೇಕೆಂದಿದ್ದೇನೆ. ಗೌತಮರೆಂಬ ಗುರುಗಳ ಬಳಿ ತೆರಳಬೇಕಿದೆ.ಅಲ್ಲಿ ನನ್ನ ತಂದೆಯ ಹೆಸರು ಕೇಳಿದರೆ ಏನು ಹೇಳಲಿ ?” ಎಂದು ಕೇಳಿದ.
“ಮಗನೆ ನಾನು ವ್ಯಭಿಚಾರಿಣಿ. ಹಾಗಾಗಿ ನಿನ್ನ ತಂದೆಯ ಹೆಸರು ನನಗೂ ಗೊತ್ತಿಲ್ಲ.ನನ್ನ ಹೆಸರು ಜಾಬಾಲೆ .ಜಾಬಾಲೆಯ ಮಗ ಸತ್ಯಕಾಮ ಎಂದೇ ಹೇಳು. ಬೇರೆ ದಾರಿಯಿಲ್ಲ” ಎಂದಳು.
ಅವನು ಗೌತಮರ ಬಳಿ ತೆರಳಿದ. ಸಹಜವಾಗಿ ನಿನ್ನ ಹೆಸರೇನು? ಕುಲ, ಗೋತ್ರ ಯಾವುದು ? ಎಂದರು.
“ಗುರುಗಳೇ ನನ್ನ ತಾಯಿ ವ್ಯಭಿಚಾರಿಣಿ. ನಾನು ಜಾಬಾಲೆಯ ಮಗ ಸತ್ಯಕಾಮ” ಎಂದು ತಲೆ ತಗ್ಗಿಸಿದನು.
ಅವರು ಒಂದು ಕ್ಷಣ ಅವಾಕ್ಕಾದರು. ಇವನಿಗೆ ಪ್ರವೇಶ ನೀಡಿದರೆ ‘ವ್ಯಾಕರಣಪಂಡಿತರು’, ‘ನಾನುಶ್ರೇಷ್ಠ’ವಾದಿಗಳು ಏನಾದರು ಗಲಾಟೆ ಎಬ್ಬಿಸಬಹುದಲ್ಲ ಎಂದು.
ಏನಾದರಾಗಲಿ ನೋಡೇ ಬಿಡೋಣ ಎಂದು ನಿರ್ಧರಿಸಿ, “ನೀನು ಸತ್ಯವನ್ನು ನುಡಿದಿದ್ದೀಯೆ ಹಾಗಾಗಿ ನೀನು ಬ್ರಹ್ಮವಿದ್ಯೆಗೆ ಅರ್ಹ. ನಡೆ ಉಪನಯನ ಮಾಡುತ್ತೇನೆ” ಎಂದರು.
ಅವರಿಗೂ ಇದು ಒಂದು ಪರೀಕ್ಷೆ. ಬ್ರಹ್ಮಜ್ಞಾನ ಹೊಂದಲು ಆನುವಂಶಿಕತೆ ಮಾನದಂಡವೊ ಅಥವಾ ಗುಣಗ್ರಾಹಿತ್ವವೋ ಎಂದು.
ಅವರು ನಾಲ್ಕುಗೋಡೆಯೊಳಗೆ ಕೂಡ್ರಿಸಿ ಗಿಳಿಪಾಟ ಮಾಡಿಸಲಿಲ್ಲ. ೧೦೦ ದನಗಳನ್ನು ನೀಡಿ ಸುಮ್ಮನಾದರು.
ಸತ್ಯಕಾಮ ಸಂಕಲ್ಪಿಸಿದ , ಇದನ್ನು ಸಾವಿರವಾಗಿಸುತ್ತೇನೆಂದು.
ಕಾಡು ಅಲೆದ, ಮಳೆ , ಬಿಸಿಲು, ಚಳಿ , ಗಾಳಿ , ಗುಡುಗು ಸಿಡಿಲು, ಭಯ , ರಕ್ಷಣೆ, ದನಗಳ ಹುಟ್ಟುಸಾವು , ರೋಗ, ರುಜಿನೆ ಎಲ್ಲ ಗಮನಿಸಿದ.ಗಿಡಗಳು ಮೇಲಕ್ಕೆ ಬೆಳೆಯುವುದು, ಹಣ್ಣು ಕೆಳಕ್ಕೆ ಬೀಳುವುದು, ಹೂ, ಬೀಜ, ಎಲ್ಲಕ್ಕೂ ಒಂದು ನಿಯಮವಿದೆ ಎಂದರಿತ.
ವರ್ಷಗಳು ಕಳೆದವು. ದನಗಳು ಸಾವಿರವಾಗುತ್ತಾ ಬಂದವು. ತಾನು ಬಂದಿದ್ದು ಬ್ರಹ್ಮವಿದ್ಯೆಗೆಂದು, ದನಗಳನ್ನು ಸಾಕುತ್ತಾ ಅದರ ಸಂಖ್ಯೆಯನ್ನು ಜಾಸ್ತಿಮಾಡುವುದೇ ಮೈಮರೆತು ಅದೇ ಜೀವನವನ್ನಾಗಿಸಿಕೊಳ್ಳುವುದಲ್ಲ ,ಉಂಡಾಡಿ ಆಗದಿರುವುದಕ್ಕೆ ಒಂದು ಜವಾಬ್ದಾರಿ , ಇದೂ ಒಂದು ಕಲಿಕೆ ಎಂಬ ಅರಿವು ಅವನಿಗಿತ್ತು.
ಅವನ ಕಣ್ಣು ಕಿವಿ ಮೂಗು ಬಾಯಿ ಗಳೆಲ್ಲಾ ಸತ್ಯವನ್ನು ಗ್ರಹಿಸಲು ಆಸಕ್ತವಾಗಿದ್ದವು. ಹಾಗಾಗಿ ಅವನಿಗೆ ಬೆಂಕಿ ಗಾಳಿ ಬೆಳಕು ಶಬ್ಧಗಳೇ ಅವನಿಗೆ ತಮ್ಮ ತಮ್ಮ ನಿಯಮಗಳನ್ನು ಕಲಿಸಿದವು. ಋಗ್ವೇದ, ಯಜುರ್ವೇದ, ಸಾಮವೇದ ಎಂದರಿತ. ಉದ್ದ, ಅಗಲ, ದಪ್ಪ, ಗಾತ್ರ ಅಳತೆ ಎಲ್ಲವೂ ಸಾಪೇಕ್ಷ ವಾಗಿವೆ . ಯಾವುದು ಸಾಪೇಕ್ಷಕ್ಕೆಲ್ಲ ಸಾಪೇಕ್ಷವಾಗಿ ಸ್ವಯಂ ನಿರಪೇಕ್ಷವಾಗಿರುವುದೋ ಅದು ‘ಸತ್’ ಎಂದರಿತ. ಅದು ವಿಶ್ವಕ್ಕೆಲ್ಲಾ ಚೈತನ್ಯ ನೀಡುವುದರಿಂದ ‘ಚಿತ್’ ಎಂದರಿತ.
“ಏಕಂ ಸತ್ ವಿಪ್ರಾ ಬಹುಧಾ ವದಂತಿ” ‘ಒಂದು ಇರುವಿಕೆ’ಯನ್ನು ಬೇರೆ ಬೇರೆ ದೇಶಗಳ, ಭಾಷೆಗಳಲ್ಲಿ ತಿಳಿದವರು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ಎಂಬ ವಿಶ್ವಪ್ರಜ್ಞೆ ಆವರಿಸಿತು.
“ಸತ್ಯ” ದ ಅರಿವಾಯಿತು. ತಕ್ಷಣ ‘ಶಾಂತ’ನಾದನು. ಅವನ ಪ್ರಶ್ನೆಗಳೆಲ್ಲಾ ಮಾಯವಾಗಿದ್ದವು
‘ನಾನು ಶಾಂತನಾಗಬೇಕೆಂಬ’ ಒಂದು ಗುರಿ ತಲುಪಾಗಿತ್ತು.
ಗುರುಗಳ ಬಳಿ ತೆರಳಿದ.ಮುಖ ನೋಡಿದ ತಕ್ಷಣ ಗುರುಗಳಿಗೆ ಅವನ ಮುಖದಲ್ಲಿ ‘ಶಾಂತಿ’ನೆಲೆಸಿದ್ದು ಗೋಚರಿಸಿತು. ಇವನಿಗೆ ಸತ್ಯದ ಅರಿವಾಗಿದೆ. ಇವನು ಶಾಂತಿಯನ್ನು ಹೊಂದಿದ್ದಾನೆ ಶಾಂತಿಯನ್ನು ಹಂಚಬಲ್ಲ ಎಂದರಿತರು. ಗೌತಮರೂ ಪರೀಕ್ಷೆಯಲ್ಲಿ ಪಾಸಾಗಿದ್ದರು. “ಗುಣಗ್ರಾಹಿತ್ವ” “ಮಾತೃಪ್ರಾಧಾನತೆ” ಗೆದ್ದಿತ್ತು.
ಅವರ ಮುಖದಲ್ಲೂ ‘ಶಾಂತಿ’ ಆವರಿಸಿತು.
ಪ್ರಮಾಣಪತ್ರ ನೀಡಿದರು. ಸತ್ಯಕಾಮನ ‘ಎಲ್ಲರೂ ಶಾಂತರಾಗಬೇಕೆಂಬ ‘ ಎರಡನೇ ಗುರಿಯೂ ನೆರವೇರಿತ್ತು.
ಶಾಂತತೆ ಶಾಂತತೆಯನ್ನೇ ಹರಡುತ್ತದೆ.
ಅರಿಯುವಿಕೆಯಿಂದ ಸತ್ಯ, ಸತ್ಯದಿಂದ ಶಾಂತಿ.
ಗೌರವಿಸಿ, ಸತ್ಯವನ್ನು
ಪ್ರೇಮಿಸಿ , ಸತ್ಯವನ್ನು …
ಸತ್ಯದ ಒಂದೊಂದು ತುಣುಕೂ ನಮ್ಮನ್ನು ಶಾಂತಗೊಳಿಸುತ್ತದೆ. ಅದೆಲ್ಲಿಂದ ಬಂದರೂ ಸೇವಿಸಿ. ಏಕೆಂದರೆ ಅದು ಜೀವನದಲ್ಲಿ ಬೆಂದವರ , ಕಹಿ ನುಂಗಿ ಸಿಹಿ ನೀಡಿದ ಎಲ್ಲ ಸತ್ಯಕಾಮರುಗಳ ಶ್ರಮದ ಫಲ…
ಇವರು ದೇವರಲ್ಲ, ನಮ್ಮಂತೆ ಮನುಷ್ಯರು…
ಅರಿಯಬೇಕಾಗಿದ್ದು ಸತ್ಯ, ಗಳಿಸಬೇಕಾಗಿದ್ದು ಶಾಂತಿ ಎಂಬ ಸಹಜ ಅರಿವು ಅಗತ್ಯ.
ಸೇವಿಸಬೇಡಿ ಯುದ್ಧೋಪದೇಶಗಳನ್ನು , ಬಿಲ್ಲು ಸೆಟೆಸಿ ನಿಂತ ಚಿತ್ರಕಗಳನ್ನು ಏಕೆಂದರೆ ಅದು “ಲೇಪಿತ ಸತ್ಯ”….
” ವಿಶ್ವದ ಯಾರ ಮುಖದ ಹುಬ್ಬುಗಳೂ ಗಂಟಿಕ್ಕಿಕೊಂಡಿರಬಾರದು, ಹಣೆಯ ನೆರಿಗೆಗಳು ಬಿಗಿದುಕೊಂಡಿರಬಾರದು ಇದು ‘ಆನಂದ’ದ ಮಾನದಂಡ. ಇದನ್ನು ಸಾಧಿಸುವುದೇ ಮಾನವ ಜೀವನ ಸಾಫಲ್ಯತೆ…
ಇದು “ಬ್ರಹ್ಮಪ್ರಜ್ಞೆ” ಇದು “ವಿಶ್ವಪ್ರಜ್ಞೆ”.
‘ಅಸತ್ಯದಿಂದ ಸತ್ಯದೆಡೆಗೆ
ಕತ್ತಲಿನಿಂದ ಬೆಳಕಿನೆಡೆಗೆ
ಮರಣದಿಂದ ಜೀವನದೆಡೆಗೆ ‘
ಒಂದು ” ಸುಂದರ ಮೌನ”.
(ಉಪನಿಷತ್ ಆಧಾರಿತ)