ಪ್ರೀತಿ ಪ್ರೇಮದ ಏಳು ವಿಧಗಳು : ನಿಮ್ಮದು ಯಾವ ಬಗೆಯ ಪ್ರೀತಿ?

nangaliಪ್ರೀತಿ ಪ್ರೇಮವನ್ನು ಮೊದಲಿಗೆ ಏಕೈಕ ದೃಷ್ಟಿಯಿಂದ ನೋಡುವ ಪರಿಪಾಠವನ್ನು ಬಿಟ್ಟುಬಿಡಬೇಕು. ಅಂದರೆ, ಪ್ರೀತಿ ಪ್ರೇಮದ ಬಹುರೂಪಿ ತತ್ವವನ್ನು ಅರಿತು ಕೊಳ್ಳಬೇಕು. ಈ ದಿಸೆಯಲ್ಲಿ ಪ್ರಾಚೀನ ಗ್ರೀಕರು ನಿರೂಪಣೆ ಮಾಡಿರುವ ಪ್ರೀತಿ ಪ್ರೇಮದ ವಿವಿಧ ಬಗೆಗಳು ; ಅವುಗಳ ಪ್ರಕ್ರಿಯಾತ್ಮಕ ಪರಿವರ್ತನೆಗಳು ಇಲ್ಲಿವೆ…  ~ ಚಂದ್ರಶೇಖರ ನಂಗಲಿ

‘ಒಂದು ಶಬ್ದಕ್ಕೆ ಒಂದು ಅರ್ಥ’ ಎಂಬ ಏಕೈಕ ದೃಷ್ಟಿಯಿಂದ ಹೊರಟರೆ, ಪ್ರೀತಿ ಪ್ರೇಮ ಎಂಬ ಶಬ್ದಗಳಿಗೆ ‘ರಮ್ಯಪ್ರೀತಿ’ ಅಥವಾ ‘ರಮ್ಯಪ್ರೇಮ’ ಎಂಬ ಜನಪ್ರಿಯ ಅರ್ಥವನ್ನು ಹೇಳಿ ಸುಮ್ಮನಾಗಬೇಕಷ್ಟೆ ! ಆದರೆ ರಮಿಸುವುದು ಅಥವಾ ರಮ್ಯತೆಯ ಅರ್ಥಮಾತ್ರದಲ್ಲಿ ಪ್ರೀತಿ ಪ್ರೇಮ ನಿಲ್ಲದು. ಮಾನವ ಏಕಾಂಗಿಯಲ್ಲ. ಕುಟುಂಬ ಜೀವಿ ಮತ್ತು ಸಂಘಜೀವಿ. ಕುಟುಂಬಧರ್ಮ ಮತ್ತು ಸಂಘಧರ್ಮಗಳೊಂದಿಗೆ ಬೆರೆತು ಬಾಳುವುದೇ ಬುದ್ಧಧರ್ಮ. ಮಾನವಕುಲ ಸ್ವಾರ್ಥರಹಿತ ಪಥದಲ್ಲಿ ಸಾಗಬೇಕೆಂಬುದೇ ಬುದ್ಧವಾಣಿಯ ಗುರಿ: ಬುದ್ಧಂ (ಜ್ಞಾನ) ಶರಣಂ ಗಚ್ಛಾಮಿ, ಸಂಘಂ (ಸಮಷ್ಟಿ) ಶರಣಂ ಗಚ್ಛಾಮಿ, ಧರ್ಮಂ (ಧರ) ಶರಣಂ ಗಚ್ಛಾಮಿ ಎಂಬ ನುಡಿಗಳ ಮಥಿತಾರ್ಥವನ್ನು ಮೇಲ್ಕಂಡಂತೆ ಗ್ರಹಿಸಬೇಕು. ಆದರೆ ಮನುಷ್ಯರ ಸ್ವಾರ್ಥಬುದ್ಧಿ ಇದಕ್ಕೆ ದೊಡ್ಡಅಡ್ಡಿ.

ಹಾಗೆಯೇ, ಪ್ರೀತಿ ಪ್ರೇಮವನ್ನೂ ಏಕೈಕ ದೃಷ್ಟಿಯಿಂದ ನೋಡುವ ಪರಿಪಾಠವನ್ನು ಬಿಟ್ಟುಬಿಡಬೇಕು. ಅಂದರೆ, ಪ್ರೀತಿ ಪ್ರೇಮದ ಬಹುರೂಪಿ ತತ್ವವನ್ನು ಅರಿತು ಕೊಳ್ಳಬೇಕು. ಈ ದಿಸೆಯಲ್ಲಿ ಪ್ರಾಚೀನ ಗ್ರೀಕರು ನಿರೂಪಣೆ ಮಾಡಿರುವ ಪ್ರೀತಿ ಪ್ರೇಮದ ವಿವಿಧಬಗೆಗಳು ; ಅವುಗಳ ಪ್ರಕ್ರಿಯಾತ್ಮಕ ಪರಿವರ್ತನೆಗಳನ್ನು ಮನನ ಮಾಡಿಕೊಳ್ಳುವುದು ಅತ್ಯಗತ್ಯ

ಪ್ರೀತಿ ಪ್ರೇಮದ ಸಪ್ತ ಅವಸ್ಥೆಗಳು:

different-kinds-of-love-post-bish

1) Eros: ಎರೊಸ್ ಎಂಬುದು ಲೈಂಗಿಕ ಅಥವಾ ಭಾವುಕ ಪ್ರೀತಿ ಪ್ರೇಮ. ಆಧುನಿಕ ಕಾಲದ ರಮ್ಯಪ್ರೀತಿ ಪ್ರೇಮದ ಅರ್ಥವನ್ನು ಇಲ್ಲಿ ಮನಗಾಣಬಹುದು. ಮೋಹದಿಂದ ಶುರುವಾಗುವ ಕತೆಗಳಿವು. ದೇಹದ ದಾಹವೇ ಧ್ಯೇಯವಾಗಿ ಸಾಗುವ ಬಗೆಯಿದು. ಗ್ರೀಕ್ ಪುರಾಣದ ಪ್ರಕಾರ ಇದೊಂದು ರೀತಿಯ ಉನ್ಮಾದವಾಗಿದ್ದು ಇದಕ್ಕೆ ಕಾಮದೇವ ಕುಪಿಡ್ (ಮನ್ಮಥ) ಪ್ರಯೋಗಿಸುವ ಪ್ರೇಮಬಾಣಗಳೇ ಕಾರಣ. ಈ ಪ್ರೇಮಬಾಣಗಳು ಹೃದಯಕ್ಕೆ ಚುಚ್ಚಿ ನಮ್ಮನ್ನು ಗಾಸಿಗೊಳಿಸಿ, ಪ್ರೀತಿ ಪ್ರೇಮದ ತೊರೆಗೆ ತಳ್ಳಿಬಿಡುತ್ತವೆ. Eros ಮತ್ತು Error ಅವಳಿಗಳು. ಎರೊಸ್ ಎಂದರೆ ಲೈಂಗಿಕ ವಾಂಛೆ ಮಾತ್ರವಲ್ಲ ! ಇದೊಂದು ಜೀವೋತ್ಸಾಹ ಮತ್ತು ಸಂತಾನೋತ್ಪತ್ತಿಯ ಪ್ರಕ್ರಿಯೆ ಕೂಡಾ.

2) Philia: ಫಿಲಿಯ ಅಥವಾ ಸ್ನೇಹಬಂಧ ಸದಾ ಒಳಿತನ್ನೇ ಬಯಸುತ್ತದೆ. ಅರಿಸ್ಟಾಟೆಲ್ ಪ್ರಕಾರ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಒಳಿತನ್ನು ಬಯಸುವುದಕ್ಕೆ ಮೂರು ಕಾರಣಗಳಿವೆ: ಉಪಯುಕ್ತತೆ, ಆಹ್ಲಾದಕತೆ, ಬುದ್ಧಿವಂತಿಕೆ & ಗುಣವಂತಿಕೆ.

ಒಳಿತನ್ನೇ ಹಾರೈಸುವ ಸ್ನೇಹವು ಕೇವಲ ಉಪಯುಕ್ತತೆಯನ್ನಷ್ಟೇ ಬಯಸುವುದಿಲ್ಲ. ಸಾಂಗತ್ಯ ಮತ್ತು ನಂಬಿಕೆಯಿಂದ ಸ್ನೇಹವು ನಡೆಯಬೇಕು.

ಪ್ಲೇಟೋ ಪ್ರಕಾರ ಎರೊಸ್ ಅವಸ್ಥೆಯನ್ನು ದಾಟಿದ ಫಿಲಿಯ ಅವಸ್ಥೆಯಿಂದ ಸಂಬಂಧವು ಗಟ್ಟಿಯಾಗಬೇಕು. ಅಂದರೆ ಇಬ್ಬರ ನಡುವೆ ಬಾಳಿನ ರುಚಿ ಗಂಧಗಳು ಒಂದಾಗಬೇಕು. ಶರೀರದ ಸೊಗಸುಗಳನ್ನು ದಾಟಿಕೊಂಡು ಮನಸ್ಸನ್ನು ಅರಿತು ನಡೆಯುವ ಪ್ರೇಮವಿದು. ಒಂದೇ ಮಾತಿನಲ್ಲಿ ಹೇಳುವುದಾದರೆ, ಎರೊಸ್ ನಲ್ಲಿರುವ ಹಿಡುವಳಿತನವು ರೂಪಾಂತರಗೊಂಡು ಫಿಲಿಯ ದಲ್ಲಿ ಜೀವನಾಡಿಯನ್ನು ಮಿಡಿವ ತತ್ವವಾಗಿ ಪರಿಣಮಿಸಬೇಕು. ಮುಕ್ತವಾದ ಮನೋಧರ್ಮ, ಇಂಗಿತ ಜ್ಞಾನ, ಉಭಯ ಪರಿವರ್ತನೆಯ ಗುಣಗಳಿರಬೇಕು.

3) Storge : ಸ್ಟೋರ್ಜ್ ಅಥವಾ ಆತ್ಮೀಯ ಪ್ರೀತಿಯು ಫಿಲಿಯ ಭಾವದ ಮತ್ತೊಂದು ಬಗೆಯೇ ಆಗಿದ್ದು , ತಾಯಿ ತಂದೆ ಮಕ್ಕಳ ನಡುವಣ ಪ್ರೀತಿಯನ್ನು ಸೂಚಿಸುತ್ತದೆ. ಫಿಲಿಯ ಭಾವದಿಂದ ಸ್ಟೋರ್ಜ್ ಭಿನ್ನವಾಗುವುದು ಪುಟ್ಟಮಕ್ಕಳ ಜೊತೆಗಿನ ಸಂಬಂಧದಿಂದ. ಆತ್ಮೀಯತೆ ಮತ್ತು ಆಲಂಬನ ಭಾವದ ಸ್ಟೋರ್ಜ್, ಎರೊಸ್ ಅಥವಾ ಫಿಲಿಯ ರೀತಿ ವೈಯುಕ್ತಿಕ ಗುಣಾವಗುಣಗಳೊಂದಿಗೆ ಬೆಸೆದುಕೊಂಡಿರುವುದಿಲ್ಲ. ರಮ್ಯಪ್ರೀತಿಯ ಎರೊಸ್ ಮತ್ತು ಸದ್ಭಾವನೆಯ ಫಿಲಿಯ ಪರಿಪಕ್ವಗೊಂಡು ಬೇಷರತ್ತಾದ ಸ್ಟೋರ್ಜ್ ಆಗಿ ಪರಿವರ್ತನೆಯಾದಲ್ಲಿ ಅದೊಂದು ಭಾಗ್ಯವೇ ಸರಿ ! ಈ ವ್ಯಕ್ತಿ ಜೊತೆಯಲ್ಲಿದ್ದರೆ ಸಾಕೆಂಬ ನಂಬಿಕೆಯನ್ನೂ ಈ ಜಂಟಿಬಾಳು ಭದ್ರವಾದುದೆಂಬ ಧೈರ್ಯವನ್ನೂ ಸ್ಟೋರ್ಜ್ ನೀಡುತ್ತದೆ.

4) Agape : ಅಗಪೆ ಎಂಬುದು ವಿಶ್ವಾತ್ಮಕ ಪ್ರೇಮ! ಅನ್ಯರು, ನಿಸರ್ಗ, ದೇವರು ಜೊತೆಗಿನ ಪ್ರೀತಿ ಪ್ರೇಮವನ್ನು ಇದು ಬಿಂಬಿಸುತ್ತದೆ. ಸ್ಟೋರ್ಜ್ ನಲ್ಲಿರುವಂತೆ ಆತ್ಮೀಯತೆಯನ್ನೇ ಆಧರಿಸಿರುವುದಿಲ್ಲ. ನಿಸ್ವಾರ್ಥ ಅಥವಾ ಪರೋಪಕಾರ ಬುದ್ಧಿಯೇ (Altruism) ಅಗಪೆಯ ಅಭಿವ್ಯಕ್ತಿ. ಒಬ್ಬ ವ್ಯಕ್ತಿಯಿಂದ ಏನನ್ನೂ ಆಶಿಸದೆ, ನಿರ್ವಂಚನೆಯಿಂದ ಸಾಗುವ ಪ್ರೇಮಕ್ಕೆ ಗ್ರೀಕರಿಟ್ಟ ಹೆಸರೇ ‘ಅಗಪೆ’ !

ಈ ಬಗೆಯ ಪ್ರೇಮದಲ್ಲಿ ಕೊಡುವುದು ಇರುತ್ತದೆಯೇ ಹೊರತು, ಪಡೆದುಕೊಳ್ಳುವ ಆಲೋಚನೆಯೇ ಇರುವುದಿಲ್ಲ. ಅಗಪೆಯ ಭಾವವು ಮಾನಸಿಕ, ಸಾಮಾಜಿಕ, ಪರಿಸರ ಸ್ನೇಹಿಯಾದ ವ್ಯಕ್ತಿತ್ವಸಿದ್ಧಿಗೆ ಪೂರಕವಾಗಿದ್ದು ಅಂತರಂಗವನ್ನು ಶ್ರೀಮಂತವಾಗಿಡುವುದು. ನಾನಾವಿಧವಾದ ಭೇದಭಾವ ಮತ್ತು ತಾರತಮ್ಯಗಳಿಂದ ಕೂಡಿದ ನಮ್ಮ ಸಮಾಜವನ್ನು ಸುಧಾರಣೆ ಮಾಡಲು, ಮಾನವರೆಲ್ಲಾ ಒಂದೇ ಕುಲಂ ಎಂಬ ಧೋರಣೆಯಿಂದ ಭೂಮಿತಾಯಿಯನ್ನು ಕಾಪಾಡಿಕೊಳ್ಳಲು ಅಗಪೆ ಭಾವವು ನೆರವಾಗುತ್ತದೆ.

5) Ludus : ಲುಡುಸ್ ಅಥವಾ ಬಿಂದಾಸ್ ಕ್ರೀಡಾಭಾವದ ಮತ್ತು ಯಾವುದೇ ಬದ್ಧತೆ ಇಲ್ಲದ, ಪ್ರೇಮ! ಟೀಕೆ ಪ್ರಶಂಸೆ, ನೃತ್ಯ ನಾಟಕಾದಿ ಲಲಿತಕಲೆಗಳಲ್ಲಿ ಸೇರುವಿಕೆಯ ಭಾವವನ್ನು ಲುಡುಸ್ ನಲ್ಲಿ ಗುರುತಿಸಿದ್ದಾರೆ.

ಲುಡುಸ್ ಸಂಬಂಧಗಳು ಔಪಚಾರಿಕವಾಗಿ ಇರುತ್ತವೆ. ಯಾವುದನ್ನೂ ಒತ್ತಾಯಿಸದ ಮತ್ತು ಯಾವುದೇ ಸಂಕೀರ್ಣತೆಗೆ ದೂಡದ ಸಂಬಂಧವಿದು. ಲುಡುಸ್ ಪ್ರೇಮವು ಯಶಸ್ವಿಯಾಗಬೇಕಾದರೆ, ಇಬ್ಬರು ವ್ಯಕ್ತಿಗಳ ನಡುವೆ ಪರಿಪಕ್ವತೆ ಮತ್ತು ಸ್ವಯಂಪೂರ್ಣ ವ್ಯಕ್ತಿತ್ವವಿರಬೇಕು. ಲುಡುಸ್ ನಿಂದ ಎರೊಸ್ ಗೆ ಜಾರಿದಲ್ಲಿ ಸಮಸ್ಯೆಗಳುಂಟಾಗುವ ಸಾಧ್ಯತೆಯಿದೆ. ಫಿಲಿಯ ಅವಸ್ಥೆಗೆ ಲುಡುಸ್ ಪ್ರತಿಸ್ಪರ್ಧಿ ಎನ್ನಬಹುದು.

6) Pragma : ಪ್ರಾಗ್ಮ ಎಂಬುದು ಕಾರಣ, ಕರ್ತವ್ಯ , ದೀರ್ಘಕಾಲೀನ ಆಸಕ್ತಿಗಳ ಪರಿಣಾಮಫಲವಾದ ಪ್ರಾಯೋಗಿಕ ದೃಷ್ಟಿಯ ಪ್ರೀತಿ ಪ್ರೇಮ ಎನ್ನಬಹುದು. ಇಲ್ಲಿ ಲೈಂಗಿಕ ಆಕರ್ಷಣೆ ಹಿಂದಕ್ಕೆ ಸರಿದು, ಉಭಯ ವಿರುದ್ಧವಲ್ಲದ ಆಕಾಂಕ್ಷೆಗಳು, ಬಾಳಿನ ಗುರಿ ಮುಖ್ಯವಾಗುತ್ತದೆ. ಸಾಂಪ್ರದಾಯಿಕ ಮದುವೆಯ ಸಂಬಂಧಗಳಲ್ಲಿ ಪ್ರಾಗ್ಮ ಭಾವವು ಸರ್ವ ಸಾಮಾನ್ಯ ಸಂಗತಿ. ಪ್ರೇಮವನ್ನು ನೂರು ವರ್ಷದ ಬಂಧವನ್ನಾಗಿ ನಿಲ್ಲಿಸಿಕೊಳ್ಳುವ ಸ್ಥಾಯೀಭಾವವೇ ಪ್ರಾಗ್ಮ ! ಜವಾಬ್ದಾರಿ ಹಂಚಿಕೊಳ್ಳುತ್ತಾ , ಹಠಮಾರಿತನವನ್ನು ಬಿಟ್ಟುಕೊಡುತ್ತಾ , ಪ್ರೇಮವನ್ನು ಸಾರ್ಥಕ ಪಡಿಸಿಕೊಳ್ಳುವ ತಾಪತ್ರಯ ಇಲ್ಲಿರುತ್ತದೆ. ಎರೊಸ್ ಅಥವಾ ಲುಡುಸ್ ನಿಂದ ಆರಂಭವಾಗುವ ಬಹಳಷ್ಟು ಪ್ರೀತಿ ಪ್ರೇಮದ ಸಂಬಂಧಗಳು ಸ್ಟೋರ್ಜ್ ಅಥವಾ ಪ್ರಾಗ್ಮ ದಲ್ಲಿ ಕೊನೆಗೊಂಡಲ್ಲಿ ಫಲಪ್ರದವಾಗುತ್ತವೆ.

7) Philautia : ಫಿಲಾಟಿಯ ಇದು ಅಗಪೆಗೆ ತದ್ವಿರುದ್ಧವಾದುದು. ಪ್ರೀತಿ ಪ್ರೇಮದ ಹೆಸರಲ್ಲಿ ಒಬ್ಬ ವ್ಯಕ್ತಿಯಿಂದ ಸಾಧ್ಯವಾದಷ್ಟು ಮಟ್ಟಿಗೆ ದೋಚುವ ತತ್ವ ಇಲ್ಲಿದೆ. ನಾನೆಷ್ಟು ? ನನಗೇನು ಕಮ್ಮಿ? ಎಂಬ ಪ್ರಶ್ನೆಯಿಂದಲೇ ಎಲ್ಲಾ ವ್ಯವಹಾರ ಆರಂಭವಾಗುತ್ತದೆ. ಇದು ಸ್ವರತಿ ಸಂಪ್ರೀತಿಯ ಅಭಿವ್ಯಕ್ತಿ. ಪರಿಣಾಮದಲ್ಲಿ ಆರೋಗ್ಯಕರವೋ ? ಅನಾರೋಗ್ಯಕರವೋ ? ಏನಾದರೂ ಆಗಬಹುದು. ಆತ್ಮಸ್ತುತಿ ಅಥವಾ ಆತ್ಮ ಪ್ರತ್ಯಯವನ್ನು ಅಧಿಕವಾಗಿ ಹೊಂದಿರುವ ಕಾರಣದಿಂದ ಸತ್ಯವನ್ನು ನಿರಾಕರಿಸುವ ಅಹಂಕಾರವರ್ಧನೆಯಾಗಿ ಕುಟುಂಬ ಮತ್ತು ಸಮಾಜದಲ್ಲಿ ಅನ್ಯಾಯ, ಸಂಘರ್ಷ, ಶತ್ರುತ್ವಗಳು ಹೆಚ್ಚಾಗಬಹುದು.

ಆರೋಗ್ಯಕರವಾದ ಸ್ವರತಿಯು ಸ್ವಯಂ ಯೋಜನಾಬದ್ಧತೆಯಿಂದ ಕೂಡಿದ್ದು , ಇತರ ವ್ಯಕ್ತಿಗಳನ್ನು ತನ್ನೊಳಗು ಮಾಡಿ ಕೊಳ್ಳುವ ಗುಣಾತ್ಮಕ ಕ್ರಿಯೆಗೂ ಕಾರಣವಾಗಬಹುದು. ಸೋಲು, ತಿರಸ್ಕಾರ ಇತ್ಯಾದಿಗಳನ್ನು ಲೆಕ್ಕಿಸದೆ ಸಾಗುವ ಬಾಳಿನ ಪಯಣವೂ ಇವರದಾಗಬಹುದು. ಅಭಿವೃದ್ಧಿಯ ಅನುಭವಗಳು, ಸಂಬಂಧ, ಸಹಿಷ್ಣುತೆ, ಆನಂದ, ಸಂತೋಷಗಳನ್ನು ಒಪ್ಪಿ , ಅಪ್ಪಿ , ಸಾಗುವ ಕ್ಷಮಾಶೀಲ ವ್ಯಕ್ತಿತ್ವ ಸಿದ್ಧಿಯೂ ಇವರಲ್ಲಿ ಸಾಧ್ಯವಿದೆ.

ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಇದು ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಬಾಳು ಸಹನೀಯ ಮತ್ತು ಆನಂದಮಯ. ಸ್ವಾರ್ಥಬುದ್ಧಿ ಮತ್ತು ಅಹಂಕಾರದಿಂದ ದಿಕ್ಕೆಟ್ಟು ಹುಚ್ಚು ಹುಚ್ಚಾಗಿ ಹರಿದರೆ, ಕಾಳು ಒಡೆದು ಬೇಳೆಯಾಗುವ ಬಾಳು! ” ಕೂಡಿರಲಿ ಬಾಳು ಇಡಿಗಾಳಿನಂತೆ, ಮಾಡದಿರು ಬಾಳನ್ನು ಬೇಳೆಯಂತೆ ! ” ~ ಬೇಂದ್ರೆವಾಣಿ

ಗ್ರೀಕ್ ಪರಿಭಾಷೆಗಳಿಗೆ ಕನ್ನಡದಲ್ಲಿ ಕ್ರಮವಾಗಿ, ಲೈಂಗಿಕ ಪ್ರೀತಿ > ಮಾನಸ ಪ್ರೀತಿ > ಆತ್ಮೀಯ ಪ್ರೀತಿ > ವಿಶ್ವಾತ್ಮಕ ಪ್ರೀತಿ > ಬಿಂದಾಸ್ ಪ್ರೀತಿ > ಕರ್ತವ್ಯ ಪ್ರೀತಿ > ಸ್ವರತಿ ಸಂಪ್ರೀತಿ ಎಂದು ವ್ಯವಹರಿಸಲು ಅಡ್ಡಿಯಿಲ್ಲ!

Leave a Reply