ನೆಮ್ಮದಿಯ ನಿದ್ರೆಗೆ ಈ 5 ಸೂತ್ರಗಳನ್ನು ಅನುಸರಿಸಿ…


ನಾವು ತೀರಾ ನಿದ್ರೆಯನ್ನು ಹೀಗೆ ನಿಯಂತ್ರಿಸಲಾಗದೆ ಇದ್ದರೂ, ಕೊನೆ ಪಕ್ಷ ರಾತ್ರಿಗಳಲ್ಲಿ ಸುಖನಿದ್ರೆಯನ್ನು ಹೊಂದುವ ಪ್ರಯತ್ನ ಮಾಡಬಹುದು, ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಈ 5 ಉಪಾಯಗಳನ್ನು ಅನುಸರಿಸಿ ನೋಡಿ.

ಜೀವ ಕೋಟಿಗಳಲ್ಲಿ ನಿದ್ರೆಗೆ ಪರದಾಡುವುದು ಮನುಷ್ಯ ಜೀವಿ ಮಾತ್ರ. ಇದನ್ನು ಮನುಷ್ಯರ ‘ಆಲೋಚಿಸುವ ಸಾಮರ್ಥ್ಯ’ದ ಸೈಡ್ ಎಫೆಕ್ಟ್ ಅನ್ನಲಡ್ಡಿಯಿಲ್ಲ. ಕೆಲವರು ಎಲ್ಲೆಂದರಲ್ಲಿ ಕಣ್ಮುಚ್ಚಿದ ಕೂಡಲೇ ನಿದ್ರೆಗೆ ಜಾರಿದರೆ, ನಿದ್ರೆಗಾಗಿ ನಾನಾ ಬಗೆಯ ಕಸರತ್ತುಗಳನ್ನೂ ಔಷಧಗಳನ್ನೂ ಮಾಡಿ ದಣಿಯುವವರ ಸಂಖ್ಯೆ ಬಹಳವಿದೆ.

ವಾಸ್ತವದಲ್ಲಿ ನಿದ್ರೆಗೂ ಮನಸ್ಸಿಗೂ ನೇರ ಸಂಬಂಧವಿದೆ. ಮನಸ್ಸಿನ ಮೇಲೆ ನಿಯಂತ್ರಣವಿದ್ದರೆ ಬೇಕೆಂದಾಗ ನಿದ್ರೆ ಮಾಡಬಹುದು ಮಾತ್ರವಲ್ಲ, ಬೇಡವೆಂಆಗ ನಿದ್ರೆಯನ್ನು ದೂರವಿಡಲೂಬಹುದು. ಆದರೆ ಇದು ಅಷ್ಟು ಸುಲಭವಲ್ಲ. ನಿದ್ರೆಯನ್ನು ಹೀಗೆ ನಿಯಂತ್ರಿಸುವುದೂ ಒಂದು ಸಾಧನೆ. ಇದನ್ನು ಕರಗತ ಮಾಡಿಕೊಂಡವರು ಬಹಳ ಕಡಿಮೆ. ಹಾಗೆಂದೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನನ್ನು ವಿಶೇಷವಾಗಿ ‘ಗುಡಾಕೇಶ’ ಎಂದು ಸಂಬೋಧಿಸುವುದು. ಅರ್ಜುನ ನಿದ್ರೆಯನ್ನು ಗೆದ್ದವನು ಎಂದು ರಣಾಂಗಣದಲ್ಲಿ ನಿಂತ ಕೃಷ್ಣ ಶ್ಲಾಘಿಸುತ್ತಾನೆಂದರೆ, ಅದರ ಮಹತ್ವ ಎಷ್ಟಿರಬಹುದು ಊಹಿಸಿ!

ನಾವು ತೀರಾ ನಿದ್ರೆಯನ್ನು ಹೀಗೆ ನಿಯಂತ್ರಿಸಲಾಗದೆ ಇದ್ದರೂ, ಕೊನೆ ಪಕ್ಷ ರಾತ್ರಿಗಳಲ್ಲಿ ಸುಖನಿದ್ರೆಯನ್ನು ಹೊಂದುವ ಪ್ರಯತ್ನ ಮಾಡಬಹುದು, ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಈ 5 ಉಪಾಯಗಳನ್ನು ಅನುಸರಿಸಿ ನೋಡಿ.

  1. ಯೋಚಿಸಲೆಂದೇ ಸಮಯ ಮೀಸಲಿಡಿ: ನೀವು ದಿನಪೂರ್ತಿ ದುಡಿದು ದಣಿದಿರುತ್ತೀರಿ. ಈ ಧಾವಂತದಲ್ಲಿ ನಿಮಗೆ ಹಲವು ಸಂಗತಿಗಳ ಕುರಿತು ಯೋಚಿಸಲು ಸಮಯ ಸಿಕ್ಕಿರುವುದಿಲ್ಲ. ಅವನ್ನೆಲ್ಲ ರಾತ್ರಿಯ ವೇಳೆ ಯೋಚಿಸಲು ಎತ್ತಿಡುತ್ತೀರಿ. ಒಮ್ಮೆ ತಡೆದಿಟ್ಟ ಯೋಚನೆಗಳೆಲ್ಲ ನೆರೆ ನುಇಗ್ಗಿದರೆ, ಅವುಗಳ ಜೊತೆಗೆ ನಿದ್ರೆ ಕೊಚ್ಚಿಹೋಗುವುದೂ ಸಹಜವೇ! ಆದ್ದರಿಂದ, ಮಲಗುವುದಕ್ಕೆ ಮುಂಚೆ ಎರಡು ಗಂಟೆಯ ಮೊದಲು ಒಂದಷ್ಟು ಸಮಯವನ್ನು ಇಂಥಾ ಆಲೋಚನೆಗಳಿಗೆ ಎತ್ತಿಡಿ. ನಿಮ್ಮ ಆಲೋಚನೆಗಳಿಗೂ ನೀವು ಹಾಸಿಗೆ ಮೇಲೆ ಒರಗುವುದಕ್ಕೂ ಕನಿಷ್ಠ 2 ಗಂಟೆಗಳ ಅಂತರ ಇರುವಂತೆ ನೋಡಿಕೊಳ್ಳಿ.
  2. ತಂಗಾಳಿಯಲ್ಲಿ ವಿಹರಿಸಿ: ಊಟವಾದ ಮೇಲೆ ಟಿವಿ ಮುಂದೆ ಕುಳಿತರೆ ಬರುವ ನಿದ್ರೆಯೂ ಹಾರಿಹೋಗುತ್ತದೆ. ಅದರ ಬದಲು ಹೊರಗೆ ಅಥವಾ ತಾರಸಿಯ ಮೇಲೆ ಹತ್ತಿಪ್ಪತ್ತು ನಿಮಿಷ ನಡೆದಾಡಿ. ದೈಹಿಕ ವ್ಯಾಯಾಮದ ದಣಿವು ಮತ್ತು ತಂಗಾಳಿಯಿಂದ ಉಲ್ಲಸಿತಗೊಂಡ ಮನಸ್ಸು ನಿಮಗೆ ನಿದ್ರೆ ತಂದುಕೊಡುವುದರಲ್ಲಿ ಸಂದೇಹವಿಲ್ಲ.
  3. ಸಂಗೀತ ಕೇಳಿ : ಇಂಪಾದ ಸಂಗೀತವು ನಿಮ್ಮ ಮನೋಲಹರಿಯನ್ನು ಸುಸಂಬದ್ಧಗೊಳಿಸಿ ಒಂದು ಸೂತ್ರದಲ್ಲಿ ಹಿಡಿದಿಡುತ್ತದೆ. ತುಳುಕುವ ಕೊಳದಂತೆ ಅಲ್ಲೋಲ ಕಲ್ಲೋಲವಾಗಿರುವ ಮನಸ್ಸು ಶಾಂತವಾಗುತ್ತಾ ನಿಮ್ಮ ಅಂತರಂಗವನ್ನು ನಿಮಗೆ ಪ್ರತಿಫಲಿಸಿ ತೋರತೊಡಗುತ್ತದೆ. ಅದರಲ್ಲಿ ನಿಮ್ಮನ್ನು ನೀವು ನೋಡಿಕೊಳ್ಳುತ್ತಾ, ಅರಿಯಲು ಯತ್ನಿಸುತ್ತಾ ನಿದ್ರೆಗೆ ಜಾರುವುದು ಖಚಿತ. ಆದರೆ, ಈ ಪ್ರಕ್ರಿಯೆಯಲ್ಲಿ ನೀವು ಸಂಪೂರ್ಣವಾಗಿ ನಿಮ್ಮನ್ನು ತೊಡಗಿಸಿಕೊಳ್ಳಬೇಕಷ್ಟೆ.
  4. ಪ್ರೀತಿಸಿ : ಇದು ಸುಖ ನಿದ್ರೆಗೆ ಇರುವ ಅತಿ ಸುಂದರ ದಾರಿ. ಸಂಗಾತಿಯ ಜೊತೆ ಪ್ರೇಮ ತುಂಬಿದ ಸಂಭಾಷಣೆ ಅಥವಾ ಕ್ರಿಯೆ ನಿಮ್ಮನ್ನು ನಿದ್ರೆಯ ತೆಕ್ಕೆಯವರೆಗೂ ಕೊಂಡೊಯ್ದು ಬಿಡುವುದು. ಯಾವುದೇ ಕಾರಣಕ್ಕೂ ಮಲಗುವ ಮುನ್ನ ಕಹಿಯಾದ ಮಾತುಕತೆಯಲ್ಲಿ, ಜಗಳದಲ್ಲಿ ತೊಡಗಬೇಡಿ. ಇದರಿಂದ ನಿದ್ರೆ ಮಾತ್ರವಲ್ಲ, ಮಾರನೆ ದಿನದ ಬೆಳಗೂ ಹಾಳಾಗುತ್ತದೆ.
  5. ಧ್ಯಾನ ಮಾಡಿ : ಧ್ಯಾನ ಅಂತರಂಗದ ಜಾಗೃತಿಗೆ ಹೇಗೋ ದೇಹದ ನಿದ್ರೆಗೂ ಸಹಕಾರಿ. ಏಕಾಗ್ರತೆಯ ಧ್ಯಾನ ಹಾಗೂ ಮನಃಪೂರ್ವಕ ಧ್ಯಾನಗಳು ನಿಮ್ಮನ್ನು ನಿದ್ರೆಗೆ ಅಣಿಗೊಳಿಸುತ್ತವೆ. ಏಕಾಗ್ರಚಿತ್ತ ಧ್ಯಾನದಲ್ಲಿ ಯಾವ ಆಲೋಚನೆಗಳಿಗೂ ಆಸ್ಪದ ನೀಡದಂತೆ ನಿಮ್ಮ ಅಂತರಂಗದಲ್ಲೇ ಗಮನ ನೆಟ್ಟು ಧ್ಯಾನಿಸಿ. ದಿನಪೂರ್ತಿಯ ಯೋಚನೆಗಳೆಲ್ಲವನ್ನೂ ಕತ್ತರಿಸಿ ಹಾಕುತ್ತಾ ನಿಮ್ಮೊಳಗೆ ಮನಸ್ಸನ್ನು ನೆಲೆಗೊಳಿಸಿ. ಹೀಗೆ ಕನಿಷ್ಠ 20 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಶಾಂತಗೊಂಡು, ಅಡ್ಡಿರಹಿತ ನಿದ್ರೆಗೆ ಅಣಿಯಾಗುತ್ತದೆ.

ಅಥವಾ ನಿಮ್ಮ ಉಸಿರನ್ನೇ ಗಮನಿಸುತ್ತಾ, ನಿಮ್ಮ ದೇಹವನ್ನೂ ಮನಸ್ಸನ್ನೂ ನಿರೀಕ್ಷಿಸುವ ಮೈಂಡ್’ಫುಲ್ ಮೆಡಿಟೇಶನ್ ಕೂಡಾ ನಿಮ್ಮನ್ನು ಪ್ರಶಾಂತಗೊಳಿಸಿ ನಿದ್ರೆಗೆ ಅಣಿಗೊಳಿಸಬಲ್ಲದು.

Leave a Reply