“ಎಲ್ಲ ಒಂದರೊಳಗೊಂದು ಹೆಣೆದುಕೊಂಡಿವೆ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 5.2

ಬುದ್ಧಿ-ಮನಸ್ಸಿಗೆ ಎಲ್ಲವೂ ವಕ್ರವೇ. ಒಂದು ನೇರ ಕೋಲನ್ನು ನೀವು ನೀರಿನಲ್ಲಿ ಅರ್ಧ ಮುಳುಗಿಸಿದಾಗ ಮುಳುಗಿದ ಕೋಲಿನ ಭಾಗ ನಮಗೆ ಡೊಂಕಾಗಿ ಕಾಣುವುದಿಲ್ಲವೆ? ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

ಅಧ್ಯಾಯ 5 ಭಾಗ 2 : Unity of Emptiness

ಇನ್ನು ಸಮಯ ವ್ಯರ್ಥ ಮಾಡುವುದು
ಸಾಧುವಲ್ಲ.
ಬುದ್ಧಿ-ಮನಸ್ಸು ಗಳ ಬೆನ್ನು ಬಿದ್ದು
ಈವರೆಗೆ ಏನನ್ನೂ ಸಾಧಿಸಲಾಗಿಲ್ಲ.
ಸಾಧಿಸಿದ್ದೇವೆ ಎಂದುಕೊಂಡರೆ ಅದು
ಸಂಕಟ ಮತ್ತು ಹತಾಶೆಯನ್ನು ಮಾತ್ರ.

ಒಮ್ಮೆ ಹೀಗಾಯಿತು.

ಮುಲ್ಲಾ ನಸ್ರುದ್ದೀನ್ ನ ಮಗ
ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕರು
ಭೂಗೋಳದ ಪಾಠ ಮಾಡುತ್ತಿದ್ದರು.
ಮಕ್ಕಳಿಗೆ ಭೂಮಿಯ ಆಕಾರದ ಬಗ್ಗೆ
ಪಾಠ ಮಾಡಿದ ನಂತರ,
ನಸ್ರುದ್ದೀನ್ ನ ಮಗನನ್ನು ಪ್ರಶ್ನೆ ಮಾಡಿದರು.

“ ಮಗು, ಭೂಮಿ ಯಾವ ಆಕಾರದಲ್ಲಿದೆ?”

ಹುಡುಗ ಯಾವ ಉತ್ತರವನ್ನೂ ನೀಡಲಿಲ್ಲ.

ಹುಡುಗನಿಗೆ ಉತ್ತೇಜನ ನೀಡಲು ಶಿಕ್ಷಕರು
ಅದೇ ಪ್ರಶ್ನೆಯನ್ನು
ಇನ್ನೊಂದು ರೀತಿಯಲ್ಲಿ ಕೇಳಿದರು.

“ ಮಗು, ಭೂಮಿ ಚಪ್ಪಟೆಯಾಗಿದೆಯಾ? “

“ ಇಲ್ಲ “ ಹುಡುಗ ಉತ್ತರಿಸಿದ.

ಹುಡುಗನ ಉತ್ತರ ಕೇಳಿ ಉತ್ತೇಜಿತರಾದ ಶಿಕ್ಷಕರು
ಮತ್ತೆ ಪ್ರಶ್ನೆ ಮಾಡಿದರು.

“ ಹಾಗಾದರೆ ಭೂಮಿ ದುಂಡಗಾಗಿದೆಯಾ? “

“ ಇಲ್ಲ “ ಹುಡುಗ ಮತ್ತೆ ಅದೇ ಉತ್ತರ ಕೊಟ್ಟ.

ಶಿಕ್ಷಕರಿಗೆ ಆಶ್ಚರ್ಯವಾಯ್ತು.

“ ಎರಡಕ್ಕೂ ‘ಇಲ್ಲ’ ಎಂದು ಉತ್ತರಿಸಿದೆಯಲ್ಲ, ಯಾಕೆ? “
ಮತ್ತೆ ಕೇಳಿದರು.

“ಭೂಮಿ ವಕ್ರವಾಗಿದೆಯಂತೆ ನಮ್ಮಪ್ಪ ಹೇಳಿದ”

ನಸ್ರುದ್ದೀನ್ ನ ಮಗ ಉತ್ತರಿಸಿದ.

ಬುದ್ಧಿ-ಮನಸ್ಸಿಗೆ ಎಲ್ಲವೂ ವಕ್ರವೇ.
ಒಂದು ನೇರ ಕೋಲನ್ನು ನೀವು
ನೀರಿನಲ್ಲಿ ಅರ್ಧ ಮುಳುಗಿಸಿದಾಗ
ಮುಳುಗಿದ ಕೋಲಿನ ಭಾಗ ನಮಗೆ ಡೊಂಕಾಗಿ ಕಾಣುವುದಿಲ್ಲವೆ?
ನೀರಿನಿಂದ ಹೊರತೆಗೆದಾಗ
ಕೋಲು ಮತ್ತೆ ನೇರ ಕಾಣಿಸುತ್ತದೆ.
ನೀರಿನಲ್ಲಿದ್ದಾಗಲೂ ಕೋಲು
ನೇರವಾಗಿಯೇ ಇತ್ತು ಎನ್ನುವುದು ನಿಮಗೂ ಗೊತ್ತು
ಆದರೆ, ನಿಮ್ಮ ಕಣ್ಣು ಮತ್ತು ಕೋಲಿನ ನಡುವೆ ಇರುವ ಮಾಧ್ಯಮ
ನಿಮಗೆ ತಪ್ಪು ಮಾಹಿತಿ ನೀಡುತ್ತಿದೆ.
ಇದು ಬುದ್ಧಿ-ಮನಸ್ಸಿನ ವ್ಯವಹಾರ.
ನಮ್ಮ ಸಂಕಟ ಮತ್ತು ವಿಷಾದಗಳಿಗೆ
ಬುದ್ಧಿ-ಮನಸ್ಸುಗಳೇ ಕಾರಣ ಎಂದು ಗೊತ್ತಿದ್ದರೂ
ಇವು ತೋಡಿದ ಖೆಡ್ಡಾಕ್ಕೆ ಮತ್ತೆ ಮತ್ತೆ ಬೀಳುತ್ತೇವೆ.

ಬುದ್ಧಿ-ಮನಸ್ಸಿಗೆ
ಸತ್ಯವನ್ನು ಎದುರುಗೊಳ್ಳುವ ಸಾಮರ್ಥ್ಯ ಇಲ್ಲ,
ಕೇವಲ ಕನಸು ಕಾಣುವ ಹುಕಿ.
ಆದರೆ ಕನಸುಗಳು ಸತ್ಯಕ್ಕೆ ಮುಖಾಮುಖಿಯಾದಾಗ
ಚೂರು ಚೂರಾಗುತ್ತವೆ.

ನೀವು ಗಾಜಿನ ಮನೆಯಲ್ಲಿ ನೆಲೆಗೊಂಡಿದ್ದೀರಿ.
ಸತ್ಯ ಬಂದು ನಿಮ್ಮ ಮನೆ ಬಾಗಿಲಲ್ಲಿ ನಿಂತಾಗ
ನಿಮ್ಮ ಮನೆ ಒಡೆದು ಚೂರು ಚೂರಾಗುವುದು,
ಆದರೆ ನೀವು ಸುಮ್ಮನಾಗುವುದಿಲ್ಲ
ಈ ಗಾಜಿನ ಮನೆಯ ಅವಶೇಷಗಳನ್ನು
ಮತ್ತೆ ಹೊತ್ತು ತಿರುಗುತ್ತೀರಿ
ಆದ್ದರಿಂದಲೇ ನೀವು ಅಷ್ಟು ಕಹಿ
ಅಷ್ಟು ಹುಳಿ.

ಅದೇ ಕಾರಣಕ್ಕೆ
ನೀವು ಯಾವ ರುಚಿ ನೋಡಿದರೂ ಅದು ಕಹಿ
ಇದೇ ಸಮಸ್ಯೆ ಇತರರಿಗೂ
ಅವರಿಗೂ ನೀವು ಕಹಿಯೇ.
ಹತ್ತಿರ ಹತ್ತಿರ ಆಗುತ್ತಿದ್ದಂತೆಯೇ
ಕಹಿ ಹೆಚ್ಚಾಗುತ್ತ ಹೋಗುತ್ತದೆ
ದೂರದಲ್ಲಿ ಎಲ್ಲ ಸುಂದರ
ಎಲ್ಲ ಸಿಹಿ.

ಈ ತಿಳುವಳಿಕೆ
ನಿಮ್ಮ ಅನುಭವಕ್ಕೆ ನಿಲುಕಬೇಕು
ನನ್ನ ಅಥವಾ ಸೊಸಾನ್ ನ ಸಿದ್ಧಾಂತವಾಗಿ ಅಲ್ಲ
ನಿಮ್ಮ ಸ್ವಂತದ ಅನುಭವವಾಗಿ.
ಆಗ ನೀವು ಬುದ್ಧಿ-ಮನಸ್ಸುಗಳ ಹಿಡಿತದಿಂದ
ಸುಲಭವಾಗಿ ಕಳಚಿಕೊಳ್ಳಬಲ್ಲಿರಿ.
ಆಗ ಎಲ್ಲ ಜಗತ್ತುಗಳು ಮಾಯವಾಗುವವು
ಎಲ್ಲ ವಸ್ತುಗಳು ಮಾಯವಾಗುವವು
ಯಾವುದು ಮೊದಲು, ಯಾವುದು ಕೊನೆ
ಒಂದೂ ಗೊತ್ತಾಗುವುದಿಲ್ಲ
ಎಲ್ಲ ಗಡಿಗಳೂ ಕಾಣೆಯಾಗುವವು.

ಮೊದಮೊದಲು ಎಲ್ಲ
ಮಸುಕು ಮಸಕಾಗಿ ಕಂಡರೂ
ನೀವು ಸಂಪೂರ್ಣ ಖಾಲಿಯಲ್ಲಿ
ಸ್ಥಿರವಾಗುತ್ತ ಹೋಗುವಿರಿ.
ಆಗ ಆಕಾಶದಲ್ಲಿ ನಕ್ಷತ್ರಗಳಿದ್ದರೂ
ಅವು ನಿಮ್ಮ ಭಾಗವೇ,
ಗಿಡ, ಮರ, ಹೂಗಳು ಎಲ್ಲ ಇದ್ದರೂ
ಅವು ನಿಮ್ಮ ಮೂಲಕವೇ ಜೀವಿಸುವವು.
ಎಲ್ಲ ವಸ್ತುಗಳೂ
ನಿಮ್ಮ ಜಗತ್ತಿನ ಭಾಗವೇ.

ಈಗ ನಿಮ್ಮ ಮತ್ತು ವಸ್ತುವಿನ ನಡುವಿನ
ಗೋಡೆ ಮುರಿದು ಬಿದ್ದಿದೆ,
ಮೊದಲ ಬಾರಿಗೆ ಜಗತ್ತು ಬೇರೆಯಾಗಿ ಕಾಣುತ್ತಿಲ್ಲ.
ಮರ ಬಂಡೆಯಾಗುತ್ತಿದೆ,
ಬಂಡೆ ಸೂರ್ಯನಾಗುತ್ತಿದೆ
ಸೂರ್ಯ ನಕ್ಷತ್ರದಂತೆ ಮತ್ತು
ನಕ್ಷತ್ರ ನಿನ್ನ ಪ್ರೀತಿಯ ಹುಡುಗಿಯಂತೆ.

ಎಲ್ಲ ಒಂದರೊಳಗೊಂದು ಹೆಣೆದುಕೊಂಡಿವೆ,
ನೀನು ಪ್ರತ್ಯೇಕವಾಗಿಲ್ಲ
ಅವುಗಳ ಹೃದಯದಲ್ಲಿ ಮಿಡಿಯುತ್ತಿರುವೆ
ಇದು ಬ್ರಹ್ಮಾಂಡದ ನಿಜ ವಿನ್ಯಾಸ.

ಬುದ್ಧಿ- ಮನಸ್ಸು ಕಾಣೆಯಾದಾಗ
ಸುತ್ತಲಿನ ವಸ್ತುಗಳೂ ಮಾಯವಾಗುತ್ತವೆ.
ಆದರೆ ನೀವೇನು ಮಾಡುತ್ತಿದ್ದೀರಿ?
ಹೊಸ ಕನಸುಗಳನ್ನು ಕಾಣಬಯಸುತ್ತಿದ್ದೀರಿ,
ಬುದ್ಧಿ- ಮನಸ್ಸು ಗಳ ಕೆಲಸವೇ ಇದು
ಹೊಸ ಹೊಸ ಕನಸುಗಳ ಆಮಿಷ ಒಡ್ಡುವುದು,
ಆದರೆ ಸಮಸ್ಯೆ ನೋಡಿ
ಅದು ಎಷ್ಟು ಒಳ್ಳೆಯ ಕನಸಾದರೂ
ಕನಸೇ.

ನಿಮಗೆ ಬಾಯಾರಿಕೆ ಆಗಿದ್ದರೆ
ನಿಮಗೆ ಬೇಕಾಗಿರುವುದು ನಿಜದ ನೀರು
ಮೃಗಜಲವಲ್ಲ.
ಸಮಾಧಾನದ ಸಂಗತಿ ಎಂದರೆ
ನಿಮಗೆ ಈ ವಿಷಯ ಗೊತ್ತು,
ನಿಜವನ್ನು ಎದುರುಗೊಂಡಾಗ ನಿಮ್ಮ ಕನಸು
ಚೂರು ಚೂರಾಗುವುದನ್ನ
ನೀವು ಸ್ವಾಗತಿಸುತ್ತೀರಿ ಆದರೆ
ವಿಷಾದದ ವಿಷಯವೆಂದರೆ
ನೀವು ಅವೇ ಚೂರುಗಳನ್ನ ಬಳಸಿ
ಮತ್ತೆ ಹೊಸ ಕನಸುಗಳನ್ನ ಕಟ್ಟುತ್ತೀರಿ.

ಬುದ್ಧಿ- ಮನಸ್ಸನ್ನ ತ್ಯಜಿಸಬೇಕೆಂದು
ನಿಮಗೆ ಮನವರಿಕೆ ಆದಾಗ
ವಸ್ತುಗಳ ಜಗತ್ತು ಮಾಯವಾಗುತ್ತದೆ,
ಜಗತ್ತು ಇರುತ್ತದೆ ಆದರೆ ವಸ್ತುಗಳಲ್ಲ,
ಎಲ್ಲವೂ ಒಂದರೊಳಗಂದು
ಎಲ್ಲ ಜೀವಂತ
ಎಲ್ಲವೂ ವೈಬ್ರಂಟ್.

ಧಾರ್ಮಿಕರು
ಎಲ್ಲದರಲ್ಲೂ ದೇವರಿದ್ದಾನೆ ಎನ್ನುವುದು
ಇದೇ ಕಾರಣಕ್ಕೆ.
ದೇವರೆಂದರೆ ಸ್ವರ್ಗದಲ್ಲಿ ಕುಳಿತು
ಭೂಮಿಯ ವ್ಯವಹಾರಗಳನ್ನು ನಿಯಂತ್ರಿಸುವ ವ್ಯಕ್ತಿಯಲ್ಲ,
ದೇವರು ಇಲ್ಲಿ ರೂಪಕವಾಗಿ ಮಾತ್ರ
ಎಲ್ಲದಕ್ಕೂ ಮನುಷ್ಯ ರೂಪ
ಎಲ್ಲಕ್ಕೂ ಜೀವವಿದೆ ಎಂದು ಸ್ಪಷ್ಟವಾಗಿ ಮನಗಾಣಿಸಲಿಕ್ಕೆ.

ಹೌದು
ಜಗತ್ತಿನ ಸಮಸ್ತವೂ ಮಿಡಿಯುತ್ತಿವೆ,
ಮತ್ತು ಈ ಮಿಡಿತ ಬೇರೆ ಬೇರೆಯಾಗಿ ಇಲ್ಲ
ಇದು ಒಂದು ಸಮಗ್ರ ಮಿಡಿತ.

ಹೌದು
ನೀವು ಹೃದಯಕ್ಕೆ ಕಿವಿಕೊಟ್ಟಾಗ
ಹೃದಯದ ಮಿಡಿತ ನಿಮಗೆ ಕೇಳಿಸುತ್ತದೆ,
ಆದರೆ ಮಿಡಿಯುತ್ತಿರುವುದು
ಹೃದಯ ಮಾತ್ರವಾ?
ಇಲ್ಲಿ ಹೃದಯ ಕೇವಲ ಸೂಚಕ ಮಾತ್ರ
ಇಡೀ ದೇಹದ ಜೀವಂತಿಕೆಗೆ.

ಹಾಗೆಯೇ ಇಡೀ ಜಗತ್ತು
ಮಿಡಿಯುತ್ತಿದೆ
ನಿಮ್ಮ ಮಿಡಿತ ಕೇವಲ ಸೂಚಕ ಮಾತ್ರ
ಬ್ರಹ್ಮಾಂಡದ ಜೀವಂತಿಕೆಗೆ.

(ಮುಂದುವರೆಯುತ್ತದೆ……)

ಹಿಂದಿನ ಭಾಗ ಇಲ್ಲಿ ನೋಡಿ… https://aralimara.com/2020/03/15/ming-3/

1 Comment

Leave a Reply