ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಬೇಕೆ? ನಿಲ್ಲಿಸಿದರೆ ದೈವ ದ್ರೋಹವೇ ?

ಮಾರ್ಚ್ 30ರಂದು ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ನಿಲ್ಲಿಸಬಾರದು ಎಂದು ಕೆಲವು ಶ್ರದ್ಧಾವಂತರು ವಾದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಧರ್ಮ ಶಾಸ್ತ್ರದ ಆಧಾರ ಮುಂದಿಟ್ಟುಕೊಂಡೇ ಡಾ.‌ಶಲ್ವಪ್ಪಿಳ್ಳೈ ಅಯ್ಯಂಗಾರ್ ಅವರು ನೀಡಿರುವ ಪ್ರತಿಕ್ರಿಯೆ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದೊರಕಿದ ಈ ಲೇಖನವನ್ನು, ಇದರಲ್ಲಿ ಸಚ್ಚಿಂತನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಯಥಾವತ್ತಾಗಿ ಪ್ರಕಟಿಸಲಾಗಿದೆ. 

ದೇಶವೇ ರೋಗಬಾಧೆಯಿಂದ ಕ್ಷೋಭೆಗೊಂಡು ಒದ್ದಾಡುತ್ತಿದೆ. ಈ ಸಮಯದಲ್ಲಿ ಜನರು ನೋವು ಪಡುತ್ತಿರುವಾಗ, ರಾಷ್ಟ್ರವು ವಿಪತ್ತಿನಲ್ಲಿ ಇರುವಾಗ ಸಂತೋಷದಾಯಕವಾದ ಉತ್ಸವಗಳನ್ನು ನಡೆಸಬಾರದು ಎಂದು ಭಗವಚ್ಛಾಸ್ತ್ರಗಳಾದ ಪಾಂಚರಾತ್ರ ಸಂಹಿತೆಗಳಲ್ಲಿ ಹೇಳಲಾಗಿದೆ.

ಮೇಲುಕೋಟೆಯ ದೇವಾಲಯದಲ್ಲಿ ರೂಢಿಯಲ್ಲಿರುವ ಸಾತ್ವತ ಈಶ್ವರ ಸಂಹಿತೆಯ ೧೯ ನೇ ಅಧ್ಯಾಯದ ಶ್ಲೋಕ ೬೩೩ ರಿಂದ ಶ್ಲೋಕ ೬೪೨ ವರೆಗೆ ಉತ್ಸವದ ಮುಂದೂಡುವಿಕೆಯನ್ನು ವಿವರಿಸಲಾಗಿದೆ. ಮುಂದು ವರೆದು ಶ್ರೀ ಪ್ರಶ್ನ ಸಂಹಿತೆ, ಪಾದ್ಮ ಸಂಹಿತೆಗಳಲ್ಲಿಯೂ ಪ್ರಾಯಶ್ಚಿತ್ತ ಅಧ್ಯಾಯದಲ್ಲಿ ಮುಂದೂಡುವಿಕೆ ವಿವರಿಸಲಾಗಿದೆ.

ಇಷ್ಟಿದ್ದರೂ ಮೇಲುಕೋಟೆಯ ಉತ್ಸವ ನಡೆಸುವುದು ಔಚಿತ್ಯವೇ? ಉತ್ಸವ ನಡೆಸುವುದು ಜನಸಾಮಾನ್ಯರಿಗಾಗಿ. ಸವ ಎಂಬ ಸಾಂಸಾರಿಕ ದುಃಖದ ಉತ್ ಎಂದರೆ ನಿವಾರಣೆಗಾಗಿ ಎಂಬುದು ಶಾಸ್ತ್ರಗಳ ನಿರ್ಣಯ.

ಸಾರ್ವಜನಿಕರೇ ದುಃಖದಲ್ಲಿ ಇರುವಾಗ ಯಾರ ಸಂತೋಷಕ್ಕಾಗಿ ಈ ಉತ್ಸವ. ಭಗವಂತನಿಗಾಗಿ ಎನ್ನಬಹುದು. ಆದರೆ ಭಗವಂತ ಅವಾಪ್ತಸಮಸ್ತಕಾಮ ಆದ್ದರಿಂದ ಶಾಸ್ತ್ರಗಳು ಹೇಳುವುದು ಜನರ ಸಂತೋಷಕ್ಕಾಗಿ, ಅವರ ದುಃಖ, ದುಮ್ಮಾನಗಳ ನಿವಾರಣೆಗಾಗಿ ಉತ್ಸವಗಳು.

ಇನ್ನು ಉತ್ಸವ ಮೂರ್ತಿ ಇರುವುದೇ ದೇವಾಲಯದ ಹೊರಬಂದು ಒಳಗಿನ ತನ್ನದೇ ಮೂರ್ತಿರೂಪವಾದ ಮೂಲಮೂರ್ತಿಯನ್ನು ದರ್ಶಿಸಲು ಅಶಕ್ತರಾದವರಿಗೆ ಸೌಲಭ್ಯ ಯುಕ್ತವಾಗಿ ದರ್ಶನ ಕೊಡಲು. ಒಂದು ವೇಳೆ ಆ ಮೂರ್ತಿ ವೈರಮುಡಿ ಧರಿಸಿ ದೇವಾಲಯದ ಹೊರಗೆ ಬರದೆ ಇದ್ದಲ್ಲಿ ವೈರಮುಡಿ ಉತ್ಸವದ ಔಚಿತ್ಯ ಏನು ?

ಭಗವಂತನ ಅರ್ಚಾವತಾರದ ಸೌಲಭ್ಯ ಏನು? ಇನ್ನು ಸಾಂಕೇತಿಕವಾಗಿ ಬ್ರಹ್ಮೋತ್ಸವ ಆಚರಿಸುತ್ತೇವೆ ಎನ್ನುವುದಾದರೆ ಆಗ ಬ್ರಹ್ಮೋತ್ಸವ ವನ್ನು ಸಾಂಕೇತಿಕ ಮೂರ್ತಿ ಯಾ ಬೇರವಾದ ಸ್ನಪನ ಶಲ್ವರಿಗೆ ಮಾಡಬೇಕಾಗುತ್ತದೆ. ಕಾರಣ ಸ್ನಪನ‌ ಮೂರ್ತಿಯೇ ಸಾಂಕೇತಿಕ ಪೂಜಾಮೂರ್ತಿ. ನಿತ್ಯ ತಿರು ನಾರಾಯಣ ದೇವರಿಗೆ ನಡೆಯುವ ಅಭಿಷೇಕ ಇವರಿಗೆ ಸಾಂಕೇತವಾಗಿ ಮಾಡಲಾಗುತ್ತದೆ. ತೀರ್ಥಸ್ನಾನದಲ್ಲಿ ಅವಭೃಥವೂ ಸಹ ಇವರಿಗೆ. ಹಾಗಾಗಿ ಸಾಂಕೇತಿಕವಾಗಿ ಉತ್ಸವ ನಡೆದರೆ ಎಲ್ಲ ಉತ್ಸವಗಳೂ ಸಹ ಮೂಲ, ಸ್ನಪನ ಬೇರರಿಗೆ ಮಾತ್ರ ನಡೆಯಬೇಕು.

ಇನ್ನು ರಥೋತ್ಸವ, ತೆಪ್ಪೋತ್ಸವ ಮತ್ತು ತೀರ್ಥೋತ್ಸವ ಮುಖ್ಯವಾಗಿದ್ದು ಅವುಗಳನ್ನೇ ನಡೆಸದೆ ವೈರಮುಡಿ ಮಾತ್ರ ನಡೆಸುವುದು ಅಶಾಸ್ರ್ತೀಯ.

ಮೇಲುಕೋಟೆಯ ಮಹಾಜನರೇ ನೋಡದ ಉತ್ಸವ ಮೇಲುಕೋಟೆಯಲ್ಲಿ ಎಂದೂ ನಡೆದಿಲ್ಲ. ದೇಶದ ಜನರು ರೋಗದಿಂದ ಪೀಡಿತರಾಗಿ ಸಾಯುತ್ತಿರುವಾಗ, ದೇಶವೇ ಎಚ್ಚರಿಕೆಯಲ್ಲಿ ಇರುವಾಗ, ಪ್ರಭುತ್ವದ ನಿಷೇಧವಿದ್ದರೂ, ಆಗಮ ಶಾಸ್ತ್ರ ಗಳು ಬೇಡವೆಂದರೂ ಈ ಉತ್ಸವ ನಡೆಯಲೇಬೇಕೆಂಬ ಆಸಕ್ತಿ ಯಾರಿಗಾಗಿ?.

ಪ್ರಸಿದ್ಧ ಸ್ವಯಂ ವ್ಯಕ್ತ, ದಿವ್ಯ ದೇಶಗಳ ತಿರುಪತಿ,ಶ್ರೀರಂಗ ದೇವಾಲಯಗಳಲ್ಲೇ ಉತ್ಸವಗಳನ್ನು ಮುಂದೂಡಲಾಗಿದೆ.

ಹೀಗಿರುವಾಗ ಮೇಲುಕೋಟೆಯ ಹಿತವನ್ನು ಬಯಸುವವರು ಈ ಬಗ್ಗೆ ಚಿಂತಿಸಬೇಕು. ಅದೂ ಅಲ್ಲದೆ ಆಗಮ ಶಾಸ್ತ್ರಗಳ‌ ಪ್ರಕಾ ದೇಶವು ವ್ಯಾಧಿಯಿಂದ ಪೀಡಿತವಾಗಿರುವಾಗ ಶಾಂತಿ ಕರ್ಮಗಳನ್ನು ಆಚರಿಸಿ, ವ್ಯಾಧಿ ಪೀಡೆ ಮುಗಿದ ನಂತರ ಉತ್ಸವ ಆಚರಿಸಬೇಕು. ಇದು ಭಗವಂತನ ಆಜ್ಞೆ. ಶಾಸ್ತ್ರ ವಾಕ್ಯಗಳಿಗೆ ಜಯವಾಗಲಿ. ದೇವರ ಇಚ್ಛೆಯಿದ್ದಂತೆ ನಡೆಯಲಿ.

ಲೋಕಾಃ ಸಮಸ್ತಾಃ ಸುಖಿನೋ ಭವಂತು.

 

Leave a Reply