ವಚನಗಳ ನೇಕಾರ ಶರಣ ದಾಸಿಮಯ್ಯ

ಶರಣ ಪರಂಪರೆಯ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯು ಈ ಬಾರಿ ಮಾರ್ಚ್ 29ರಂದು ಬಂದಿದೆ. ಈ ಸಂದರ್ಭದಲ್ಲಿ ದಾಸಿಮಯ್ಯನ ಜೀವನ – ಸಾಧನೆ ಕುರಿತು ಒಂದು ಸ್ಥೂಲ ಚಿತ್ರಣ ಇಲ್ಲಿದೆ

dasimayya

ಳೆ ನಿಮ್ಮ ದಾನ ಬೆಳೆ ನಿಮ್ಮ ದಾನ / ಸುಳಿದು ಸೂಸುವ ಗಾಳಿ ನಿಮ್ಮ ದಾನ ಎನ್ನುತ್ತ ಜಗದ ಪ್ರತಿಯೊಂದಕ್ಕೂ ಕಾರಣೀಭೂತವಾದ ದಿವ್ಯವೊಂದು ಅಸ್ತಿತ್ವದಲ್ಲಿದ ಎನ್ನುವ ಅರಿವನ್ನು ಸರಳವಾಗಿ ಸಾರಿದವನು ದಾಸಿಮಯ್ಯ. ದಾಸಿಮಯ್ಯನ ಈ ನುಡಿಗಳು ಆಡುಮಾತಿನವಲ್ಲ, ಅರಿವಿನಿಂದ ಬಂದಂಥವು. ಹಾಗೆಂದೇ ಮುಂದುವರಿದು ಆತ ಕೇಳುತ್ತಾನೆ, `ನಿಮ್ಮ ದಾನವನುಂಡು ಅನ್ಯರನು ಹೊಗಳುವ ಕುನ್ನಿಗಳನೇನೆಂಬೆ!?’ ಎಂದು. ಆದ್ದರಿಂದ ದಾಸಿಮಯ್ಯನ ನಿಷ್ಠೆಯೆಲ್ಲವೂ ಆ ಪರಮ ಅಸ್ತಿತ್ವಕ್ಕೆ.
ದಾಸಿಮಯ್ಯ ಆದ್ಯ ವಚನಕಾರನೆಂಬ ಹೆಗ್ಗಳಿಕೆಗೆ ಪಾತ್ರನಾದ ಶಿವಶರಣ. ತನ್ನ ಗುಣ ಪಾರಮ್ಯದಿಂದ ದೇವರ ದಾಸಿಮಯ್ಯನೆಂದೂ, ನೇಕಾರ ವೃತ್ತಿಯಿಂದ ಜೇಡರ ದಾಸಿಮಯ್ಯನೆಂದೂ, ಜ್ಞಾನೋನ್ನತಿಯಿಂದ ದಾಸಿಮಾಚಾರ್ಯನೆಂದೂ ಹೆಸರು ಪಡೆದವನು.

ಯಾದಗಿರಿ ಜಿಲ್ಲೆಯ ಮುದನೂರು ಎಂಬ ಹಳ್ಳಿ ದಾಸಿಮಯ್ಯನ ಜನ್ಮಸ್ಥಳ. ಆ ಊರಲ್ಲಿ ರಾಮನಾಥ ದೇವಾಲಯವಿದ್ದು, ಆ ರಾಮನಾಥನೇ ದಾಸಿಮಯ್ಯನ ಆರಾಧ್ಯ ದೈವವಾಗಿದ್ದನು. ಆದ್ದರಿಂದಲೇ ಅವನ ವಚನಾಂಕಿತ ರಾಮನಾಥ ಎಂದಿರುವುದು. ಬಾಲ್ಯದಿಂದಲೇ ಅಧ್ಯಾತ್ಮದ ಹಸಿವು ಹೊಂದಿದ್ದ ದಾಸಿಮಯ್ಯ, ಆತ್ಮಜ್ಞಾನ ಅರಸುತ್ತ ಶ್ರೀಶೈಲಕ್ಕೆ ಹೋಗುತ್ತಾನೆ. ಅಲ್ಲಿ ಪಂಡಿತಾರಾಧ್ಯ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಸಾಧನೆ ಮಾಡಿ ಶಿವಜ್ಞಾನ ಸಂಪನ್ನನಾಗುತ್ತಾನೆ. ಅನಂತರ ದಾಸಿಮಯ್ಯನು ಲೋಕ ಕಲ್ಯಾಣದ ಕೈಂಕರ್ಯ ತೊಟ್ಟು ಚಾಲುಕ್ಯ ರಾಜ್ಯದ ಪೊಟ್ಟಲ ಕೆರೆಯತ್ತ ಸಾಗುತ್ತಾನೆ. ದಾರಿಯಲ್ಲಿ ಶಿವಾನುಭವ ಗೋಷ್ಠಿಗಳನ್ನು ಮಾಡುತ್ತ ಸಾವಿರಾರು ಜನರಿಗೆ ಶಿವದೀಕ್ಷೆ ನೀಡುತ್ತಾನೆ. ಪೊಟ್ಟಲಕೆರೆಯ ರಾಜ 2ನೇ ಜಯಸಿಂಹ ಮತ್ತು ರಾಣಿ ಸುಗ್ಗಲೆಯೂ ಇವನಿಂದ ಶಿವದೀಕ್ಷೆ ಪಡೆಯುತ್ತಾರೆ. ನಂತರ ದಾಸಿಮಯ್ಯನು ತನ್ನ ಊರಾದ ಮುದನೂರಿಗೆ ಬಂದು ನೇಯ್ಗೆ ಕಾಯಕ ಮುಂದುವರೆಸಿಕೊಂಡು, ಜನರಿಗೆ ಶಿವಾನುಭವ ನೀಡುತ್ತಾ ಜೀವನ ಸಾಗಿಸುತ್ತಾನೆ.
ಶರಣ ದಾಂಪತ್ಯ
ಶರಣರು ದಾಂಪತ್ಯ ಜೀವನಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಮೋಳಿಗೆಯ ಮಾರಯ್ಯ ಮಹಾದೇವಿ ಹಡಪದ ಅಪ್ಪಣ್ಣ ಲಿಂಗಮ್ಮ ಬಸವಣ್ಣ ನೀಲಾಂಬಿಕೆ ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ಹರಳಯ್ಯ ಕಲ್ಯಾಣಮ್ಮ ಮೊದಲಾದವರು ಆದರ್ಶ ಶರಣ ದಂಪತಿಗಳಾಗಿದ್ದಾರೆ. ಪ್ರಾಯಕ್ಕೆ ಬಂದಿದ್ದ ದಾಸಿಮಯ್ಯನು ಮದುವೆಯಾಗುವ ಇಚ್ಛೆ ಉಳ್ಳವನಾಗಿ ಹೆಣ್ಣಿನ ಅನ್ವೇಷಣೆಯಲ್ಲಿ ತೊಡಗುತ್ತಾನೆ. ಗೊಬ್ಬೂರಿನ ಮಲ್ಲನಾಥ ಶಿವಯೋಗಿ ದಂಪತಿಯ ಮಗಳು ದುಗ್ಗಲೆ ಆತನಿಗೆ ಅನುರೂಪಳಾಗಿ ಒದಗಿಬರುತ್ತಾಳೆ. ದುಗ್ಗಲೆ – ದಾಸಿಮಯ್ಯ ಪರಸ್ಪರರಿಗೆ ಪುರಕವಾಗಿ, ನಿತ್ಯ ಕಾಯಕ – ದಾಸೋಹದಲ್ಲಿ ನಿರತರಾಗಿ ಸಾಧನೆಯ ಒಂದೊಂದೇ ಮೆಟ್ಟಿಲೇರುತ್ತಾರೆ.
ದಾಸಿಮಯ್ಯ ದಾಂಪತ್ಯಕ್ಕೆ ಕೊಡುತ್ತಿದ್ದ ಮಹತ್ವವನ್ನು ನಿರೂಪಿಸುವ ಪ್ರಸಂಗವೊಂದು ಹೀಗಿದೆ: ಒಮ್ಮೆ ಸಂಸಾರ ಶ್ರೇಷ್ಠವೋ ಸನ್ಯಾಸ ಶ್ರೇಷ್ಠವೋ ಎಂಬ ಬಗ್ಗೆ ಇಬ್ಬರು ಸಾಧಕ ಚರಮೂರ್ತಿ ಯುವಕರಲ್ಲಿ ವಾದ ವಿವಾದ ನಡೆಯುತ್ತದೆ. ಇದರ ಪರಾಮರ್ಶೆಗೆ ಅವರಿಬ್ಬರು ಅನುಭಾವಿ ಶರಣ ದಾಸಿಮಯ್ಯನಲ್ಲಿಗೆ ಬರುತ್ತಾರೆ. ಅವರಿಗೆ ಆದಾರಾತಿಥ್ಯ ಮಾಡಿ ಕೂರಿಸಿದ ದಾಸಿಮಯ್ಯನು ಎಳೆ ಬಿಸಿಲಿನಲ್ಲಿ ಕುಳಿತು ಕಾಯಕ ನಿರತನಾಗಿ ದುಗ್ಗಳೆಗೆ ದೀಪ ಹಚ್ಚಿ ತರಲು ಹೇಳುತ್ತಾನೆ. ದುಗ್ಗಳೆ ದೀಪ ಹಚ್ಚಿ ತಂದು ಬಿಸಿಲಲ್ಲಿ ಕುಳಿತ ದಾಸಿಮಯ್ಯನ ಮುಂದಿಡುತ್ತಾಳೆ. ತಲೆಗೆ ಹೊದ್ದುಕೊಳ್ಳಲು ವಸ್ತ್ರ ತೆಗೆದುಕೊಡಲು ಹೇಳುತ್ತಾನೆ. ಅವನ ಹೆಗಲ ಮೇಲೆಯೇ ಇದ್ದ ವಸ್ತ್ತ್ರವನ್ನು ದುಗ್ಗಳೆ ತೆಗೆದು ಅವನ ತಲೆಯ ಮೇಲಿರಿಸುತ್ತಾಳೆ. ಕುಡಿಯಲು ತಂದಿಟ್ಟ ತಂಗಳು ಅಂಬಲಿ ಬಾಯಿ ಸುಟ್ಟಿತು ಆರಿಸಿಕೊಡು ಎಂದು ಹೇಳಲು, ದುಗ್ಗಳೆ ಅಂಬಲಿಗೆ ಗಾಳಿ ಹಾಕುತ್ತಾಳೆ. ಇದನ್ನೆಲ್ಲ ನೋಡುತ್ತ ಕುಳಿತಿದ್ದ ಆ ಸಾಧಕ ಯುವಕರು ಮುಸಿಮುಸಿ ನಗುತ್ತಿರುತ್ತಾರೆ. ಆಗ ದಾಸಿಮಯ್ಯನು, `ಸಾಧಕರೇ, ಇದಿರು ನುಡಿಯದೆ ಸಂಸಾರದ ಒಳ ಅರಿವನ್ನು ಅರಿತು ಸೇವೆ ಮಾಡಿಕೊಂಡಿರಬಲ್ಲ ನಮ್ಮ ದುಗ್ಗಳೆಯಂಥ ಸತಿ ಇದ್ದರೆ ಸಂಸಾರ ಲೇಸು. ಇಲ್ಲದಿದ್ದರೆ ಸನ್ಯಾಸ ಲೇಸು’ ಎಂದು ಹೇಳುತ್ತಾನೆ. `ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬುದು ದಾಸಿಮಯ್ಯನ ನುಡಿ.
ದಾಸಿಮಯ್ಯ ತನ್ನ ಪತ್ನಿಯನ್ನು ಅವಕಾಶ ಸಿಕ್ಕಾಗೆಲ್ಲ ಕೊಂಡಾಡಿದ್ದಾನೆ.
ಬಂದುದನರಿದು ಬಳಸುವಳು / ಬಂದುದ ಪರಿಣಾಮಿಸುವಳು / ಬಂಧು ಬಳಗದ ಮರೆಸುವಳು – ಎಂದು ಹಾಡಿದ್ದಾನೆ. `ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥಾ’ ಎಂದು ಆದರ್ಶ ಸತಿ ದುಗ್ಗಳೆಯನ್ನು ಮನಸಾರೆ ಹೊಗಳಿದ್ದಾನೆ.
ಗಾತ್ರ ಚಿಕ್ಕದಾದರೂ ಪಾತ್ರ ದೊಡ್ಡದು!
ದಾಸಿಮಯ್ಯನ ವಚನಗಳು ಗಾತ್ರದಲ್ಲಿ ಚಿಕ್ಕವು. ಭಾಷೆ ತೀರ ಸರಳ. ಆದರೆ ಈ ಸರಳ ಸಂಕ್ಷಿಪ್ತತೆಯಲ್ಲಿಯೇ ತೀವ್ರವಾದ ಅನುಭವವನ್ನು ತರುವ ಅವರ ರೀತಿ ಅನನ್ಯ ಮತ್ತು ಆಶ್ಚರ್ಯಕರವಾದುದು. ಹಾಗೆಯೇ ಶಬ್ದ ಚಿತ್ರಗಳನ್ನು ನೀಡುವುದರಲ್ಲಿ ದಾಸಿಮಯ್ಯನದು ಎತ್ತಿದ ಕೈ. ಈತ ಕಟ್ಟಿಕೊಡುವ ಹಸಿವಿನ ಸುತ್ತ ಚಿತ್ರಿತವಾದ ಹಾವು, ವಿಷ, ಗಾರುಡಿಗ, ಡಾಂಭಿಕ ಭಕ್ತಿಯನ್ನು ಸೂಚಿಸುವ ಮಠದ ಇಲಿ ಬೆಕ್ಕುಗಳ ಚಿತ್ರಣಗಳು ಅದ್ಭುತವಾಗಿವೆ.
ದಾಸಿಮಯ್ಯನು 176 ವಚನಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ರೂಪಾಲಂಕಾರ ವಿಶೇಷವಾಗಿದ್ದು ಸರಳತೆ, ಸಾಹಿತ್ಯಿಕ ಗುಣ ಹಾಗೂ ಮೌಲ್ಯಗಳಿಂದ ಕೂಡಿವೆ. ವಚನಗಳಲ್ಲಿ ದಾಸಿಮಯ್ಯನ ವಿಡಂಬನೆ ಕೆಲವೊಮ್ಮೆ ನಯವಾದರೆ, ಮತ್ತೊಮ್ಮೆ ಒರಟಾಗುತ್ತದೆ. ಭಾವ – ಬುದ್ಧಿಗಳ ಹದವಾದ ಮಿಶ್ರಣದಿಂದ ಪರಿಣಾಮಕಾರಿಯಾಗಿ ತಲುಪುವಂತಿವೆ. ಸಂಸ್ಕೃತದ ದೇವ ಕವಿ, ಕನ್ನಡದ ರಾಘವಾಂಕ, ವಿರೂಪಾಕ್ಷ ದೇಶಿಕ, ಸಿದ್ಧ ಮಲ್ಲಾರಯ್ಯ ಮತ್ತು ಅಯ್ಯಪ್ಪ ಕವಿ ಮುಂತಾದವರು ದಾಸಿಮಯ್ಯನನ್ನು ಕುರಿತು ಬೃಹತ್ ದೇವಾಂಗ ಪುರಾಣಗಳನ್ನು ರಚಿಸಿದ್ದಾರೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.