ನಾವು ಪ್ರಾರ್ಥಿಸುವುದು ಯಾವಾಗ? ಭಗವಂತ ನಮ್ಮ ಪ್ರಾರ್ಥನೆಗೆ ಉತ್ತರಿಸುತ್ತಾನೆಯೇ? ಪ್ರಾರ್ಥನೆಗೆ ಭಗವಂತ ಕೆಲವೊಮ್ಮೆ ಬೇಗೆ, ಕೆಲವೊಮ್ಮೆ ನಿಧಾನವಾಗಿ ಉತ್ತರಿಸುವುದೇಕೆ? ಕೆಲವೊಮ್ಮೆ ಭಗವಂತ ಉತ್ತರಿಸುವುದೇ ಇಲ್ಲ. ಏಕೆ ಹೀಗೆ? ಪ್ರಾರ್ಥನೆ ಪಠಿಸುವುದು ಅಂಧಶ್ರದ್ಧೆಯಲ್ಲವೆ? ಪದಗಳಿಗೆ ಅಷ್ಟೆಲ್ಲ ಶಕ್ತಿ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ… ~ ಸಾ.ಹಿರಣ್ಮಯಿ
ಪ್ರಾರ್ಥನೆಗೆ ಭಗವಂತ ನಿಜಕ್ಕೂ ಒಲಿಯುವನೇ? ಪ್ರಾರ್ಥನೆ ಪರಿಣಾಮಕಾರಿಯೇ? ಪ್ರಾರ್ಥನೆಯಿಂದ ಪ್ರಯೋಜನವಾದರೂ ಇದೆಯೇ? ಪ್ರಾರ್ಥನೆಗೆ ವ್ಯಯಿಸುವ ಸಮಯವನ್ನು ಪ್ರಯತ್ನಕ್ಕೆ ವಿನಿಯೋಗಿಸಬಹುದಲ್ಲವೆ? ಎಂದೆಲ್ಲ ಪ್ರಶ್ನೆಗಳು ಸಹಜವಾಗಿ ಕೇಳಿಬರುತ್ತವೆ. ಅದು ಹಾಗಲ್ಲ; ಪ್ರಯತ್ನವೇ ಬೇರೆ, ಪ್ರಾರ್ಥನೆಯೇ ಬೇರೆ. ಪ್ರಯತ್ನಕ್ಕೆ ತನ್ನದೇ ಮಹತ್ವವಿದೆ, ಪ್ರಾರ್ಥನೆಗೂ ತನ್ನ ಮಹತ್ವವಿದೆ. ಆದರೆ ಅವೆರಡೂ ಪರಸ್ಪರ ಪೂರಕ. ಒಂದು ಮತ್ತೊಂದರ ಜೊತೆ ಸೇರಿದಾಗ ಮಾತ್ರ ಪೂರ್ಣ ಫಲ ದೊರಕುವುದು. ಎಲ್ಲವನ್ನೂ ಮಾಡಿ ಮುಗಿಸಿದಾಗ, ಕೊನೆಗೆ ತಮ್ಮೆಲ್ಲ ಪ್ರಯತ್ನಗಳೂ ಸಫಲವಾಗಲೆಂದು ಹೃತ್ಪೂರ್ವಕವಾಗಿ ಹಾರೈಸುತ್ತೇವಲ್ಲ, ಅದು ಪ್ರಾರ್ಥನೆ.
ನಾವು ಪ್ರಾರ್ಥಿಸುವುದು ಯಾವಾಗ?
ತೀರಾ ಅಸಹಾಯಕ ಘಳಿಗೆಗಳಲ್ಲಿ, ಏನಾದರೊಂದು ಹೊಸ ಸಾಹಸಕ್ಕೆ ಮುಂದಾದಾಗ, ದಾರಿ ತಪ್ಪಿದಾಗ, ಆಪ್ತೇಷ್ಟರಿಗೆ ಸಂಕಟ ಒದಗಿದಾಗ… ನಾವು ಪ್ರಾರ್ಥಿಸುವುದು ನಮ್ಮ ದುಃಖದ ಕ್ಷಣಗಳಲ್ಲಿ. ಕೆಲವೊಮ್ಮೆ ಎಲ್ಲವೂ ಶುಭವಾಗಲೆಂದು, ಮಂಗಳವಾಗಲೆಂದೂ ಪ್ರಾರ್ಥಿಸುತ್ತೇವೆ. ಆಗೆಲ್ಲಾ ನಮ್ಮೊಳಗೆ ಅಶುಭದ ಆತಂಕವಿರುತ್ತದೆ. ಅದನ್ನು ನಿವಾರಿಸಿಕೊಳ್ಳಲೆಂದೇ ಭಗವಂತನಲ್ಲಿ ಶುಭವಾಗಲೆಂದು ಮೊರೆ ಇಡುತ್ತೇವೆ,
ಪ್ರಾರ್ಥನೆ ನಮ್ಮ ಹೃದಯಾಂತರಾಳದ ಆರ್ತನಾದ. ಪ್ರಾರ್ಥನೆ ಕೇವಲ ಬಾಯಿಪಾಠ ಮಾಡಿಕೊಂಡ ಸ್ತುತಿಯಲ್ಲ, ಶ್ಲೋಕಗಳಲ್ಲ, ಕಂಠಸ್ಥಗೊಳಿಸಿಕೊಂಡು ಹಾಡುವ ಗೀತೆಯೂ ಅಲ್ಲ. ಪ್ರಾರ್ಥನೆ ನಮ್ಮ ಸಂಪೂರ್ಣ ಅಸ್ತಿತ್ವವನ್ನೇ ಅಂಗೈಲಿಟ್ಟುಕೊಂಡು ಭಗವಂತನೆದುರು ಇರಿಸುವ ನಿವೇದನೆ.
ಭಗವಂತ ನಮ್ಮ ಪ್ರಾರ್ಥನೆಗೆ ಉತ್ತರಿಸುತ್ತಾನೆಯೇ?
ಮೊದಲನೆಯದಾಗಿ, ಉತ್ತರಿಸುತ್ತಾನೆ ಅನ್ನುವ ಆತ್ಮವಿಶ್ವಾಸವಿದ್ದರೆ, ನಾವು ಪ್ರಾರ್ಥಿಸುತ್ತಿರುವಾಗಲೇ ಭಗವಂತ ಸ್ಪಂದಿಸುತ್ತಾ ಇರುತ್ತಾನೆ.
ಎರಡನೆಯದಾಗಿ, ಹೌದು, ಭಗವಂತ ಉತ್ತರಿಸುತ್ತಾನೆ. ಪ್ರಯತ್ನವೇ ಪರಮಾತ್ಮ ಅನ್ನುವ ಮಾತಿದೆ. ಅಲ್ಲಿಗೆ, ಪ್ರಯತ್ನ ನಡೆಸುವ ಪ್ರಕ್ರಿಯೆಯೇ ಪ್ರಾರ್ಥನೆ. ಪ್ರಯತ್ನ ತೀವ್ರವಾಗಿದ್ದರೆ, ಪ್ರಾಮಾಣಿಕವಾಗಿದ್ದರೆ ಅದಕ್ಕೆ ಫಲ ದೊರಕಲೇಬೇಕಲ್ಲವೆ? ಈ ಫಲವೇ ಭಗವಂತನ ಉತ್ತರ!
ಪ್ರಾರ್ಥನೆಗೆ ಭಗವಂತ ಕೆಲವೊಮ್ಮೆ ಬೇಗೆ, ಕೆಲವೊಮ್ಮೆ ನಿಧಾನವಾಗಿ ಉತ್ತರಿಸುವುದೇಕೆ?
ಕೆಲವೊಮ್ಮೆ ಫಲ ತತ್ ಕ್ಷಣ ದೊರೆಯುತ್ತದೆ, ಕೆಲವೊಮ್ಮೆ ದೀರ್ಘ ಕಾಲ ಕಾಯಬೇಕಾಗುತ್ತದೆ. ಕೆಲವು ಬೀಜಗಳು ಬಿತ್ತಿದ ಕೂಡಲೇ ಮೊಳಕೆ ಒಡೆಯುತ್ತವೆ, ಕೆಲವು ದಿನಗಟ್ಟಲೆ ತೆಗೆದುಕೊಳ್ಳುತ್ತವೆ. ನಾವು ಯಾವ ಬೀಜ ಬಿತ್ತಿದ್ದೇವೆ ಅನ್ನುವುದು ಮುಖ್ಯ. ನಾವು ಅದಕ್ಕೆ ನೀಡುವ ರಕ್ಷಣೆ, ಆರೈಕೆ, ಪೋಷಣೆಗಳೇ ಪ್ರಾರ್ಥನೆ.
ನಾವು ಎಷ್ಟು ಚೆನ್ನಾಗಿ ಆರೈಕೆ ಮಾಡುತ್ತೇವೋ ಅಷ್ಟು ಉತ್ತಮ ಫಸಲು ಪಡೆಯುತ್ತೇವೆ. ಈ ಸಂದರ್ಭದಲ್ಲಿ ನಾವು ಸೂಸುವ ಅಕ್ಕರೆ, ತೋರುವ ಪ್ರೀತಿ, ಕಾಯಕ ಶ್ರದ್ಧೆಗಳೇ ಪ್ರಾರ್ಥನೆ. ಕೇವಲ ಬಿತ್ತಿ ಬೆಳೆಯುವ ಪ್ರಕ್ರಿಯೆ ನಮಗೆ ಧನ ಲಾಭ ತಂದುಕೊಡಬಹುದು, ಆದರೆ ಆತ್ಮತೃಪ್ತಿ ನೀಡುವುದಿಲ್ಲ. ನಾವು ಪ್ರೇಮದಿಂದ, ಶ್ರದ್ಧೆಯಿಂದ ನಡೆಸುವ ಪ್ರಯತ್ನ ಆ ಸಂತೃಪ್ತಿಯನ್ನು ಒದಗಿಸುತ್ತದೆ.
ನಮ್ಮಲ್ಲಿ ಎಷ್ಟು ಸಹನೆ ಇರುತ್ತದೋ, ನಾವು ಎಷ್ಟು ತಾಳ್ಮೆಯಿಂದ ಕಾಯುತ್ತೇವೋ ಅಷ್ಟು ಶೀಘ್ರವಾಗಿ ಪ್ರಾರ್ಥನೆ ಫಲಿಸುತ್ತದೆ. ಇಲ್ಲಿ ಕಾಯುವಿಕೆಯ ಕಾಲ ಸಾಪೇಕ್ಷ. ನಮ್ಮಲ್ಲಿ ಕಾಯುವಿಕೆ ಒಂದು ತಪವಾದಾಗ, ಒಂದು ಪ್ರಾರ್ಥನೆಯಾದಾಗ, ಸಮಯ ದೀರ್ಘ ಅಥವಾ ಕ್ಲುಪ್ತ ಅನ್ನುವ ಪ್ರಶ್ನೆಯೇ ಮೂಡುವುದಿಲ್ಲ. ಆದ್ದರಿಂದ ಪ್ರಾರ್ಥನೆಗೆ ಭಗವಂತ ಬೇಗ ಅಥವಾ ನಿಧಾನವಾಗಿ ಉತ್ತರಿಸಿದನೆಂಬ ಪ್ರಶ್ನೆಯೂ ಅಲ್ಲಿಲ್ಲ.
ಕೆಲವೊಮ್ಮೆ ಭಗವಂತ ಉತ್ತರಿಸುವುದೇ ಇಲ್ಲ. ಏಕೆ ಹೀಗೆ?
ಕೆಲವೊಮ್ಮೆ ನಮ್ಮ ಪ್ರಯತ್ನ ಕೈಗೂಡುವುದಿಲ್ಲ. ನಮ್ಮ ಶ್ರದ್ಧೆ, ಪ್ರಾಮಾಣಿಕತೆಯಲ್ಲಿ ಯಾವ ಕೊರತೆಯೂ ಇರುವುದಿಲ್ಲ. ಹೃದಯ ಕರಗುವಂತೆ ಪ್ರಾರ್ಥನೆ ಸಲ್ಲಿಸಿರುತ್ತೇವೆ. ಆದರೂ ಫಲ ದೊರೆಯುವುದಿಲ್ಲ. ಏಕೆ ಹೀಗಾಗುತ್ತದೆ?
ಈ ಪ್ರಶ್ನೆಗೆ ಮೊದಲು ನಾವು ಯಾವುದರ ಕುರಿತು ಪ್ರಾರ್ಥನೆ ನಡೆಸಿದೆವು ಎಂದು ನೋಡಿಕೊಳ್ಳಿ. ಭಗವಂತ ಅಸಂಭವವನ್ನು ಸಂಭವ ಮಾಡುವುದಿಲ್ಲ. ಭಗವಂತನಿಗೆ ಜನನ ಮರಣ ಲಾಭ ನಷ್ಟಗಳೆಲ್ಲವೂ ಒಂದೇ. ನಿಮಗೆ ತಪ್ಪಾಗಿ, ನಷ್ಟವಾಗಿ, ಸೋಲಾಗಿ ತೋರುವುದು ಭಗವಂತನಿಗೆ ಹಾಗೆ ತೋರುವುದಿಲ್ಲ. ನಿಮ್ಮ ಜೀವನದ ಮುಂದಿನ ಚಲನೆಯ ಗತಿ ಹೇಗಿರಬೇಕೆಂದು ಆತ ನಿರ್ಧರಿಸುತ್ತಾನೆ. ಅದರ ಸೂಚನೆ ನೀಡಲೆಂದೇ ಆತ ನೀವು ಬಯಸಿದ ಉತ್ತರ ನೀಡುವುದಿಲ್ಲ. ಆತನ ಮೌನ ಏನನ್ನು ಸೂಚಿಸುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಈ ಬಾರಿಯ ವೈಫಲ್ಯ ಮುಂದಿನ ಸಫಲತೆಯ ಮೆಟ್ಟಿಲುಗಳಿಗೆ ದಿಕ್ಸೂಚಿಯಾಗಿರುತ್ತದೆ. ಅದನ್ನು ಕಂಡುಕೊಳ್ಳಬೇಕು.
ಪ್ರಾರ್ಥನೆ ಪಠಿಸುವುದು ಅಂಧಶ್ರದ್ಧೆಯಲ್ಲವೆ? ಪದಗಳಿಗೆ ಅಷ್ಟೆಲ್ಲ ಶಕ್ತಿ ಇದೆಯೇ?
ಇದನ್ನು ಮನದಟ್ಟು ಮಾಡಿಸುವ ಮಾಧವ ಲಾಹೋರಿಯ ಕಥೆಯೊಂದಿದೆ (ಮಾಧವ ಲಾಹೋರಿ ಕಥೆಗಳನ್ನು ಇಲ್ಲಿ ನೋಡಿ : https://aralimara.com/tag/ಮಾಧವ-ಲಾಹೋರಿ/ )
ಮಾಧವ ಲಾಹೋರಿ ಕಾಯಿಲೆಯನ್ನೂ ಗುಣಪಡಿಸುತ್ತಿದ್ದ. ಅವನ ಕೈಗುಣ ಚೆನ್ನಾಗಿದೆ ಎಂದು ಊರವರು ಹೇಳುತ್ತಿದ್ದರು.
ಆದರೆ ತನ್ನ ಬಳಿ ಚಿಕಿತ್ಸೆಗೆ ಬರುವವರಿಗೆ ಲಾಹೋರಿ ಒಂದು ಷರತ್ತು ವಿಧಿಸಿದ್ದ. ತನ್ನತನಕ ಬರುವ ಮುಂಚೆ ರೋಗಿಗಳು ಯಾರಾದರೊಬ್ಬ ಸಾಂಪ್ರದಾಯಿಕ ವೈದ್ಯರನ್ನು ಭೇಟಿಯಾಗುವುದು ಕಡ್ಡಾಯ ಮಾಡಿದ್ದ. ಅವರು ಕೊಟ್ಟ ಔಧಗಳು ಸರಿ ಇವೆಯೇ ಎಂದು ಹೇಳುವುದು, ಆ ಔಷಧಗಳು ‘ಸರಿಯಾಗಿ ಕೆಲಸ ಮಾಡುವಂತೆ’ ಪ್ರಾರ್ಥಿಸುವುದು ಅವನ ಚಿಕಿತ್ಸೆಯ ವಿಧಾನವಾಗಿತ್ತು.
ಗೌಸ್ಪೀರ್ ಒಮ್ಮೆ ಮಗು ಸಹಿತ ದಂಪತಿಯನ್ನು ಕರೆತಂದ. ಆ ಮಗು ಕಾಯಿಲೆಯಿಂದ ಬಸವಳಿದುಹೋಗಿತ್ತು. ಸುಸ್ತಿಗೆ ಒಂದೇ ಸಮನೆ ರಚ್ಚೆ ಹಿಡಿದಿತ್ತು. ಹುಕ್ಕಾದ ಕೊನೆಯ ಗುಟುಕು ಸೇದಿ ಗಂಟಲು ಸರಿ ಮಾಡಿಕೊಂಡ ಮಾಧವ ಲಾಹೋರಿ ಗೌಸ್ಪೀರನ ಬಳಿ ಅವರ ಬಗ್ಗೆ ವಿಚಾರಿಸಿದ.
“ಮಾಧೋ! ಇವರು ನನ್ನ ಪರಿಚಿತರು. ಈ ಮಗು ಮೂಳೆಜ್ವರದಿಂದ ನರಳುತ್ತಿದೆ. ಇದನ್ನು ನೀನೇ ಗುಣಪಡಿಸಬೇಕು. ಏನಾದರೂ ಮಾಡು” ಅಂದ.
ಮಾಧೋ ಮೂರು ವರ್ಷದ ಆ ಮಗುವನ್ನು ಎತ್ತಿಕೊಂಡು, ಅದಕ್ಕೆ ಏನೆಲ್ಲ ಔಷಧ ಕೊಡಲಾಗಿದೆ ಎಂದು ವಿಚಾರಿಸಿದ. ಸರಿಯಾದ ಚಿಕಿತ್ಸೆಯನ್ನೇ ಕೊಡಲಾಗಿದೆ ಎಂದು ಅವನಿಗೆ ಖಾತ್ರಿಯಾಯಿತು. ಅವನು ಮಗುವಿನ ತಲೆ ಮೇಲೆ ಕೈಯಿಟ್ಟು ಚಾವಣಿಯತ್ತ ಮುಖ ಮಾಡಿ ಭಗವಂತನನ್ನು ಪ್ರಾರ್ಥಿಸಿದ. ಆಮೇಲೆ ದಂಪತಿಗೆ ಮಗುವನ್ನು ಮರಳಿಸುತ್ತಾ, “ಇನ್ನು ಚಿಂತೆಯಿಲ್ಲ. ಎಲ್ಲವೂ ಸರಿಹೋಗುತ್ತೆ” ಅಂದ. ಸಮಾಧಾನಗೊಂಡ ದಂಪತಿ ಅವನಿಗೆ ಒಂದು ಮುಟೆ ಕಬ್ಬಿನ ಜಲ್ಲೆಗಳನ್ನು ಕಾಣಿಕೆಯಾಗಿ ಕೊಟ್ಟು, ಕೈಮುಗಿದು ಹೊರಟುಹೋದರು.
ಗೌಸ್ಪೀರನ ಮನೆಗೆ ಬಂದಿದ್ದ ಹೊರ ಊರಿನ ನೆಂಟನೊಬ್ಬ ಇದನ್ನೆಲ್ಲ ನೋಡುತ್ತಾ ನಿಂತಿದ್ದ. “ಔಷಧಕ್ಕೆ ಗುಣವಾಗದ ಕಾಯಿಲೆ ಪ್ರಾರ್ಥನೆಯಿಂದ ಆಗ್ತದಾ? ಇದೆಂಥ ವಿಚಿತ್ರ? ಪದಗಳಿಗೆ ಕಾಯಿಲೆ ವಾಸಿ ಮಾಡುವಷ್ಟು ಶಕ್ತಿ ಇದ್ದಿದ್ದರೆ ಪ್ರಪಂಚ ಹೀಗಿರುತ್ತಿತ್ತಾ? ” ಎಂದು ಆಕ್ಷೇಪಿಸಿದ.
ಯಾವಾಗಲೂ ಮಿತಭಾಷಿಯೂ ಮೃದು ಭಾಷಿಯೂ ಆಗಿರುವ ಲಾಹೋರಿ ಸಿಟ್ಟುಗೊಂಡು, ಮೂಟೆಯಿಂದ ಒಂದು ಕಬ್ಬಿನ ಜಲ್ಲೆ ತೆಗೆದು ಹೊಡೆಯುವವನಂತೆ ಕೈ ಮೇಲಕ್ಕೆತ್ತಿದ; ಮತ್ತು, “ನೀನೊಬ್ಬ ಮೂರ್ಖ! ಇವೆಲ್ಲ ನಿನಗೆ ಗೊತ್ತಾಗಲ್ಲ ಸುಮ್ಮನಿರು” ಅಂದ.
ಇದರಿಂದ ಗೌಸ್ಪೀರನ ನೆಂಟನಿಗೆ ಅವಮಾನವಾದಂತಾಯ್ತು. ಸಿಟ್ಟೂ ಬಂದು ಮುಖ ಕೆಂಪಡರಿತು. ಮುಷ್ಟಿಗಟ್ಟಿ ತನ್ನ ಅಂಗೈಗೆ ಗುದ್ದಿಕೊಂಡು ತನ್ನ ಸಿಟ್ಟು ತೋರ್ಪಡಿಸಿಕೊಂಡ.
ಚಾವಡಿಯಿಂದ ಹುಕ್ಕ ಹಿಡಿದೇ ಕೆಳಗಿಳಿದು ಬಂದ ಲಾಹೋರಿ, ನೆಂಟನ ಹೆಗಲ ಮೇಲೆ ಕೈಯಿಟ್ಟು ಸಾವರಿಸಿದ. ಅವನಿಗೆ ಸೇದಲು ಕೊಡುತ್ತಾ, “ನೋಡು! ನಾನು ಒಂದು ಸಲ ಮೂರ್ಖ ಅಂದಿದ್ದು ನಿನ್ನ ಮೇಲೆ ಪರಿಣಾಮ ಬೀರಲಿಲ್ಲವೆ? ನಿನ್ನ ಎದೆ ಬಡಿತ ಏರುಪೇರು ಮಾಡಿ, ನಿನ್ನನ್ನು ಉದ್ವಿಗ್ನಗೊಳಿಸಲಿಲ್ಲವೆ? ಸಿಟ್ಟಿಗೆ ನಿನ್ನ ಮೈ ಬಿಸಿಯಾಯಿತಲ್ಲವೆ? ಪದಗಳಿಗೆ ಎಷ್ಟು ಶಕ್ತಿ ಇದೆ ನೋಡು!! ನಿಂದನೆಗೇ ಇಷ್ಟು ಶಕ್ತಿ ಇದೆಯಾದರೆ, ಪ್ರಾರ್ಥನೆಗೆ ಇನ್ನೆಷ್ಟು ಶಕ್ತಿ ಇರಬೇಡ! ಅದೂ ಇತರ ಔಷಧಗಳ ಜೊತೆ ಸೇರಿದಾಗ ಅದು ಇನ್ನೆಷ್ಟು ಪರಿಣಾಮ ಬೀರಬೇಡ!!” ಅಂದ.
ನೆಂಟನಿಗೆ ಮಾಧವ ಲಾಹೋರಿ ಏನು ಹೇಳುತ್ತಿದ್ದಾನೆಂದು ಅರಿವಾಯ್ತು. ಕ್ಷಮೆ ಕೇಳಿ ಅವನನ್ನು ಆಲಿಂಗಿಸಿಕೊಂಡ.
ಈ ಕಥೆ ಓದಿದ ಮೇಲೂ ಪ್ರಾರ್ಥನೆಯ ಪದಗಳ ಶಕ್ತಿಯನ್ನು ಪ್ರತ್ಯೇಕವಾಗಿ ವಿವರಿಸಬೇಕೆ!?
ತುಂಬಾ ಅದ್ಭುತ ವಿಷಯ ಪ್ರಾಥನೆ ಪ್ರಾಥನೆಯೇ ಧನ್ಯವಾದಗಳು