ಜಿಡ್ಡು ಕೃಷ್ಣಮೂರ್ತಿ ಕುರಿತು ಓಶೋ ಹೇಳಿದ್ದು….

oshoಜಿಡ್ಡು ಕೃಷ್ಣಮೂರ್ತಿ ಒಬ್ಬ ಪರಿಪೂರ್ಣ ಗುರು, ಸ್ವತಃ ಗುರು ಎಂದು ಘೋಷಿಸದಿದ್ದರು ಸಹ ಅವರು ಗುರುವೇ ಆಗಿದ್ದಾರೆ. ಇದನ್ನು ಕೆಲವರಷ್ಟೇ ಅರಿಯಲು ಸಾಧ್ಯ ~ ಓಶೋ | ಭಾವಾನುವಾದ: ಧ್ಯಾನ್‌ ಉನ್ಮುಖ್

ಸಂನ್ಯಾಸಿ : ಜಿಡ್ಡುಕೃಷ್ಣಮೂರ್ತಿ ಕುರಿತು ನನಗೆ ತುಂಬಾ ಗೌರವವಿದೆ… ಆದರೆ ಅವರ ಅಮೂರ್ತ ಚಿಂತನೆಗಳು ನಿಮ್ಮಲ್ಲಿ ಮೂರ್ತರೂಪ ಪಡೆಯುತ್ತಿರುವುದನ್ನು ನೋಡುತ್ತಿದ್ದೇನೆ. ನಾನು ನಿಮ್ಮ ಬಳಿ ಬರುವುದಕ್ಕೆ ಮೊದಲು ಸಾಕಷ್ಟು ಪ್ರತಿರೋಧವನ್ನು ಹೊಂದಿದ್ದೆ. ಒಲ್ಲದ ಮನಸ್ಸಿನಿಂದಲೇ ಇಲ್ಲಿಗೆಬಂದೆ, ಬಂದನಂತರ ಆಶ್ರಮದಲ್ಲಿನ ತೀವ್ರತೆ ಭಾಸವಾಗುತ್ತಿದೆ. ನಾನು ಇಲ್ಲಿಯೇ ಇದ್ದು ಇಲ್ಲಿನ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುತ್ತೇನೆ.

ಓಶೋ:  ನೀನು ಕೃಷ್ಣಮೂರ್ತಿಯವರನ್ನು ಅರ್ಥಮಾಡಿಕೊಂಡಲ್ಲಿ ಒಳ್ಳೆಯದು, ಏಕೆಂದರೆ ನನ್ನನ್ನು ಅರಿಯುವುದು ಸುಲಭವಾಗುವುದು, ಆದರೆ ಜಿಡ್ಡು ಕೃಷ್ಣಮೂರ್ತಿಯವರನ್ನು ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯ. ಅವರನ್ನು ಅಪಾರ್ಥ ಮಾಡಿಕೊಳ್ಳುವುದು ಅತ್ಯಂತ ಸುಲಭ. ಅವರ ಸುತ್ತಮುತ್ತ ಇರುವರಲ್ಲಿ ೯೯ ಪ್ರತಿಶತ ಅವರನ್ನು ಅಪಾರ್ಥ ಮಾಡಿಕೊಂಡವರೇ.

ಅವರು ಅಷ್ಟು ಸುಲಭವಾಗಿ ಅಪಾರ್ಥಕ್ಕೆ ಒಳಗಾಗಲು ಕಾರಣವಿದೆ. ಉದಾಹರಣೆಗೆ, ಅವರು ಹೇಳುತ್ತಾರೆ ‘ಧ್ಯಾನದ ಅವಶ್ಯಕತೆಯಿಲ್ಲʼಎಂದು. ಅವರು ಸರಿಯಾಗಿಯೇ ಹೇಳುತ್ತಿದ್ದಾರೆ, ಧ್ಯಾನ ಎಂದಿಗೂ ಒಂದು ತಂತ್ರವಾಗಬಾರದು, ಒಂದು ವಿಧಾನವಾಗಬಾರದು, ಏಕೆಂದರೆ ಎಲ್ಲಾ ವಿಧಾನಗಳು ಮತ್ತು ಎಲ್ಲಾ ತಂತ್ರಗಳು ಮನಸ್ಸುನ್ನು ಬಳಸುತ್ತವೆ, ಆದ್ದರಿಂದ ತಂತ್ರವನ್ನು ಬಳಸಿಕೊಂಡು ನೀವು ಮನಸ್ಸನ್ನು ಮೀರಿ ಹೇಗೆ ತಾನೆ ಹೋಗಬಲ್ಲಿರಿ? ಆದ್ದರಿಂದ ಯಾವುದೇ ಧ್ಯಾನದ ಅಗತ್ಯವಿಲ್ಲ ಎಂದು ಅವರು ಹೇಳುತ್ತಿರುವುದು ಸಂಪೂರ್ಣವಾಗಿ ಸರಿಯಿದೆ, ಧ್ಯಾನದ ಕುರಿತಂತೆ ಅವರ ದೃಷ್ಟಿಕೋನ. ಜನ ಹಾದಿತಪ್ಪುವುದು ಇಲ್ಲಿ. ‘ಯಾವುದೇ ಧ್ಯಾನದ ಅಗತ್ಯವಿಲ್ಲʼ ಎಂಬ ಅವರ ಹೇಳಿಕೆಯನ್ನು ತಾರ್ಕಿಕವಾಗಿ ‌ಅರ್ಥೈಸಿಕೊಳ್ಳುತ್ತಾರೆ. ಹೀಗೆ ಅರ್ಥ ಮಾಡಿಕೊಳ್ಳುವುದರಿಂದ ಏನೂ ಆಗುವುದಿಲ್ಲ. ಈಗ ಅವರ ಕುರುಡುತನ ದುಪ್ಪಟಾಯಿತು: ಈಗ ಏನೂ ಘಟಿಸುತ್ತಿಲ್ಲ ಮತ್ತು ಏನಾದರೂ ಆಗಬೇಕೆಂದು ಅವರು ಬಯಸುತ್ತಾರೆ, ಆದರೆ ಈಗ ಯಾವುದೇ ಧ್ಯಾನ, ಯಾವುದೇ ವಿಧಾನದ ಅಗತ್ಯವಿಲ್ಲ ಎಂಬ ಕಲ್ಪನೆಯು ಅವರಿಗೆ ಅಡ್ಡಿಯಾಗುತ್ತಿದೆ.

ವಾಸ್ತವವಾಗಿ ಕೃಷ್ಣಮೂರ್ತಿ ಅವರು ಧ್ಯಾನದ ಹೃದಯವನ್ನು ವಿವರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ತಂತ್ರವಲ್ಲ, ಏಕೆಂದರೆ ಅದು ಮನಸ್ಸಿಗೆ ಸಂಬಂಧಿಸಿದ್ದಲ್ಲ. ಇದು ಮಾಡುವಿಕೆಗೆ ಸಂಬಂಧಿಸಿದಲ್ಲ ಇರುವಿಕೆಗೆ ಸಂಬಂಧಿಸಿದ ವಿಷಯ. ಇದು ನೀವು ಬೆಳಿಗ್ಗೆ ಅಥವಾ ಸಂಜೆ ಮಾಡಬಹುದಾದ ಮತ್ತು ಅದರೊಂದಿಗೆ ಮುಗಿಸುಬಹುದಾದ ವಿಷಯವಲ್ಲ; ಇದು ನಿಮ್ಮ ಜೀವನದುದ್ದಕ್ಕೂ ವಿಸ್ತರಿಸಬೇಕಾದ ವಿಷಯ, ಜಾಗೃತ ಹಾಗೂ ಸ್ವಪ್ನಾವಸ್ಥೆಗೂ ಇದುವಿಸ್ತರಿಸಬೇಕಿದೆ. ಅದು ನಿನ್ನೊಳಗಿನ ಸಹಜಸ್ಥಿತಿಯಾಗಬೇಕು, ನಿಜಗುಣವಾಗಿ ಮಾರ್ಪಡಬೇಕು. ಮತ್ತು ಆ ನಿಜ –ಸಹಜಗುಣ ನಿನ್ನ ಯಾವುದೇ ಪ್ರಯತ್ನದಿಂದ ದಕ್ಕದು. ಏಕೆಂದರೆ ಯಾವುದೇ ಪ್ರಯತ್ನ ಸಹಾ ನಿನ್ನನ್ನು ಆಯಾಸಗೊಳಿಸುತ್ತದೆ ಮತ್ತು ನಿನ್ನನ್ನು ವಿಶ್ರಾಂತಿಯತ್ತ ದೂಡುತ್ತದೆ. ಹೇಗೆ ನೀನು ನಡೆಯುತ್ತಲೇ ಇದ್ದರೆ ಒಂದು ಹಂತದಲ್ಲಿ ಕೂರಲೇಬೇಕೋ ಅಥವಾ ಮಲಗಬೇಕೋ ಹಾಗೆ. ನೀನು ನಿರಂತರವಾಗಿ ನಡೆಯುತ್ತಲೇ ಇರಲಾರೆ. ಆಯಾಸಗೊಳ್ಳುವೆ; ವಿಶ್ರಾಂತಿಗೆ ಹಂಬಲಿಸುವೆ..!!

ಪ್ರತಿಯೊಂದು ಪ್ರಯತ್ನವು ವಿಶ್ರಾಂತಿಯನ್ನು ಬಯಸುತ್ತದೆ, ಆದ್ದರಿಂದ ಧ್ಯಾನವು ಒಂದು ಪ್ರಯತ್ನವಾಗಿರಬಾರದು, ಇಲ್ಲದಿದ್ದರೆ ನಿಮಗೆ ಧ್ಯಾನವಿಲ್ಲದ ರಜಾದಿನಗಳು ಬೇಕೆನ್ನಿಸುತ್ತದೆ ಮತ್ತು ಅದು ಇಡೀ ಸಂಗತಿಯನ್ನು ನಾಶಪಡಿಸುತ್ತದೆ. ಧ್ಯಾನ ನಿಮ್ಮ ಉಸಿರಾಟದಷ್ಟೇ ಸಹಜವಾಗಬೇಕು, ಎಚ್ಚರದಲ್ಲಿರಿ ಅಥವಾ ನಿದ್ರಿಸುತ್ತಿರಿ. ಅದು ನಿಮ್ಮ ಆಂತರಿಕ ತಿಳುವಳಿಕೆ, ನಿಮ್ಮ ಆಂತರಿಕ ಅರಿವು ಆಗಬೇಕು. ಯಾವುದೇ ಹೇರಿಕೆಯಾಗಿರಬಾರದು, ಒಂದು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಉದ್ದೇಶಕ್ಕಾಗಿ ನೀವು ಮಾಡುವ ಕೆಲಸವಲ್ಲ, ಯಾವುದೇ ಉದ್ದೇಶವಿಲ್ಲದೇ ಅದನ್ನು ಆನಂದಿಸಬಲ್ಲಿರಿ.

ಕೃಷ್ಣಮೂರ್ತಿ ‘ಯಾವುದೇ ಗುರುವಿನ ಅಗತ್ಯವಿಲ್ಲ’ ಎಂದು ಹೇಳುತ್ತಾರೆ ಮತ್ತು ಅವರು ಸರಿಯಾಗಿಯೇ ಹೇಳುತ್ತಿದ್ದಾರೆ, ಯಾರು ಸಹ ನಿಮಗೆ ಸತ್ಯವನ್ನು ನೀಡಲಾರರು, ಸತ್ಯವನ್ನು ಯಾವುದೇ ರೀತಿ ವರ್ಗಾಯಿಸಲಾಗದು. ಯಾವುದೇ ಪದಗಳಿಂದ ಸಹಸಂವಹನ ಮಾಡಲುಸಾಧ್ಯವಿಲ್ಲ. ಆದ್ದರಿಂದ ಯಾವುದೇ ಗುರುವಿನ ಅಗತ್ಯವಿಲ್ಲ ಎಂದು ಅವರು ಹೇಳುತ್ತಿರುವುದು ಸರಿಯಾಗಿದೆ, ಅದರೆ ಜನ ಮತ್ತೆ ಅಪಾರ್ಥ ಮಾಡಿಕೊಳ್ಳುತ್ತಾರೆ. ಸ್ವತಃ ಅವರೇ ಗುರುವಾಗಿದ್ದಾರೆ ! ಗುರುವಿನ ರೀತಿಯೇ ಕೆಲಸ ಮಾಡುತ್ತಿದ್ದಾರೆ: ನಿಮಗೆ ಮಾರ್ಗ ತೋರುತ್ತಿದ್ದಾರೆ, ಹಾದಿಯಲ್ಲಿ ಸಾಗಲು ಮಾರ್ಗದರ್ಶನ ಮಾಡುತ್ತಿದ್ದಾರೆ, ನೀವುಗಳು ಪ್ರಜ್ಞಾಪೂರ್ಣವಾಗಿರಲು ಸನ್ನಿವೇಶ ನಿರ್ಮಾಣ ಮಾಡುತ್ತಿದ್ದಾರೆ. ಇದು ಗುರುವಿನ ಕೆಲಸವಲ್ಲವೇ ?

ಆದರೆ ಅವರ ಪ್ರವಚನಗಳನ್ನು ಕೇಳಿದವರು ಅರ್ಥೈಸಿಕೊಳ್ಳುತ್ತಾರೆ ‘ಯಾವುದೇ ಗುರುವಿನ ಅವಶ್ಯಕತೆಯಿಲ್ಲ. ನಾನು ಇನ್ಯಾರಿಗೋ ಶಿಷ್ಯನಾಗುವ ಅವಶ್ಯಕತೆಯಿಲ್ಲʼ. ಇದು ತಪ್ಪುತಿಳುವಳಿಕೆ. ನೀವು ಶಿಷ್ಯನಾಗುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಿಲ್ಲ. ಅವರು ಹೇಳುತ್ತಿರುವುದು ಶಿಷ್ಯತ್ವ ಎಂಬದು ಎಷ್ಟು ಆಳವಾಗಿರಬೇಕೆಂದರೆ ಶಿಷ್ಯ ನಿರಂತರ ಕಲಿಕೆನಿರತನಾಗಿರಬೇಕು: ಇದೇ ಶಿಷ್ಯತ್ವದ ನಿಜಾರ್ಥ. ನಿರಂತರ ಕಲಿಕೆ, ಜ್ಞಾನವನ್ನುಗುಡ್ಡೆ ಹಾಕಿಕೊಳ್ಳದೆ ಇರುವುದು, ಹಾಗೂ ಸದಾ ಕಲಿಕೆಗೆ ತನ್ನ ತಾನು ತೆರೆದುಕೊಂಡಿರುವುದು. ಇದೇ ಶಿಷ್ಯತ್ವ. ಅವರು ಗುರು ಆಗಿದ್ದಾರೆ, ಅವರೊಬ್ಬ ಪರಿಪೂರ್ಣ ಗುರು, ಸ್ವತಃ ಗುರು ಎಂದು ಘೋಷಿಸದಿದ್ದರು ಸಹ ಅವರು ಗುರುವೇ ಆಗಿದ್ದಾರೆ. ಇದನ್ನು ಕೆಲವರಷ್ಟೇ ಅರಿಯಲು ಸಾಧ್ಯ.

ಅವರನ್ನು ಅರ್ಥಮಾಡಿಕೊಂಡ ಒಬ್ಬೇಒಬ್ಬ ವ್ಯಕ್ತಿಯನ್ನು ಸಹ ನಾನು ನೋಡಿಲ್ಲ. ನಲವತ್ತು ವರ್ಷಗಳಿಂದ ಅವರ ಪ್ರವಚನಗಳನ್ನು ಕೇಳುತ್ತಿರುವರು ಗಿಣಿಗಳಂತಾಗಿದ್ದಾರೆ. ಅವರ ಮಾತಗಳನ್ನು ಪುನರುಚ್ಚಿರಿಸುತ್ತ ಹೋಗುತ್ತಾರೆ, ಒಂದು ಪದ ಅರ್ಥವಾಗದಿದ್ದರು ಸಹ. ಅವರುಬಹಳಷ್ಟು ವಿಚಾರಗಳನ್ನು ಹೇಳಿಲ್ಲ. ಅವರೊಬ್ಬ ಸರಳವ್ಯಕ್ತಿ, ಅವರ ಸಂದೇಶವೂ ಸರಳವಾಗಿದೆ. ಅದೇ ವಿಚಾರವನ್ನು ಮತ್ತೆ-ಮತ್ತೆ ಹೇಳುತ್ತ ಹೋಗುತ್ತಾರೆ. ಅವರಿಗೆ ನೀವು ಏನೇ ಕೇಳಿದರು, ಅವರ ಉತ್ತರ ಅದೇ ಆಗಿರುತ್ತದೆ, ಮತ್ತದೇ ವಿಷಯಕ್ಕೆ ತಂದು ನಿಲ್ಲಿಸುತ್ತಾರೆ. ಜನ ಅವರನ್ನು ಅರ್ಥಮಾಡಿಕೊಳ್ಳದ ಕಾರಣ ತಮ್ಮದೇ ವಿಚಾರಗಳನ್ನು ಪ್ರಕ್ಷೇಪಿಸುತ್ತ ಹೋಗುತ್ತಾರೆ. ಯಾರೂ ಸಹ ಶಿಷ್ಯರಾಗಲು ಬಯಸುವುದಿಲ್ಲ.

ಇದು ನಿಮ್ಮ ಅಹಂಗೆ ವಿರುದ್ಧವಾಗಿದೆ, ಯಾರೂ ಸಹ ಶರಣಾಗತಿಗೆ ಸಿದ್ಧರಿಲ್ಲ.  ಆದ ಕಾರಣ ಅವರ ಸುತ್ತ ಅಹಂಕಾರಿಗಳೇ ಸೇರುತ್ತ ಹೋದರು. ನಿಮಗೆ ಏನಾದರೂ ಅಹಂಕಾರಿಗಳ ಸಂಗಬೇಕಿದ್ದಲ್ಲಿ ನೀವು ಕೃಷ್ಣಮೂರ್ತಿಯವರ ಬಳಿಹೋಗಬಹುದು, ಏಕೆಂದರೆ ಅವರು ನಿಮ್ಮಅಹಂಕಾರಕ್ಕೆ ಸುಂದರವಾದ ತರ್ಕವನ್ನು ನೀಡುತ್ತಾರೆ. ಅವರೇನು ಕೊಡುತ್ತಿಲ್ಲ, ಇವರೇ ಸ್ವೀಕರಿಸುತ್ತಿದ್ದಾರೆ. ಅವರು ಸರಳಾತಿಸರಳರು. ಅವರು ಅಹಂಶೂನ್ಯರಾಗಿದ್ದಾರೆ. ಆದ್ದರಿಂದ ನೀನು ಓದಿದ್ದು, ಕೇಳಿದ್ದು ನಿನಗೆ ಅಡ್ಡಿಯಾಗಿದೆ. ಶಿಷ್ಯನಿಗೆ ವಿಶ್ವಾಸ ಹಾಗೂ ಶರಣಾಗತಿಯೇ ಸಾಧನ. ಅದನ್ನೇ ಅವರು ಹೇಳುತ್ತಿರುವುದು. ಅದನ್ನು ಅರ್ಥಮಾಡಿಕೊಳ್ಳಲು ಕೆಲವರಿಗಷ್ಟೇ ಸಾಧ್ಯ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.