ಜೀವನದಲ್ಲೂ ‘ಟ್ರೈ ಅಗೈನ್’ ಆಪ್ಷನ್ ಬಳಸಿ

ಫೇಸ್ ಬುಕ್ ಆ್ಯಪ್’ನಲ್ಲಿ ಟ್ರೈ ಅಗೈನ್ ಆಪ್ಷನ್ ಬಳಸಿ ಉತ್ತಮ ಫಲಿತಾಂಶ ಬರುವವರೆಗೆ ಪ್ರಯತ್ನಿಸುತ್ತೇವೆ. ಹಾಗೆಯೇ ನಿಜ ಜೀವನದಲ್ಲೂ ಪ್ರಯತ್ನದ, ಮರು ಪ್ರಯತ್ನದ ಆಯ್ಕೆ – ಅವಕಾಶಗಳು ಇದ್ದೇ ಇರುತ್ತವೆ. ಆದರೆ ನಾವು ಅದನ್ನು ಮುತುವರ್ಜಿಯಿಂದ ಬಳಸುತ್ತೇವೆಯೇ? 

ಫೇಸ್ ಬುಕ್’ನಲ್ಲಿ ಇರುವ ನಾವೆಲ್ಲರೂ ಯಾವಾಗಲಾದರೂ ಈ ಒಂದು ಕೆಲಸ ಮಾಡಿರುತ್ತೇವೆ. ಅಲ್ಲಿ ಕಾಣುವ ವಿವಿಧ ಫನ್ ಆ್ಯಪ್ ಬಳಸಿ “ನೀವು ಮಹಾಭಾರತದಲ್ಲಿ ಯಾವ ಪಾತ್ರವಾಗಿದ್ದಿರಿ?” “ನೀವು ಮುಂದಿನ ಜನ್ಮದಲ್ಲಿ ಏನಾಗಿದ್ದಿರಿ?” “ನಿಮ್ಮ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ಯಾರು?” “ನೀವು ಯಾವ ನಾಯಕ ನಟ/ನಟಿಯನ್ನು ಹೋಲುತ್ತೀರಿ?” ಇತ್ಯಾದಿ ಆಟಗಳನ್ನು ಆಡಿರುತ್ತೇವೆ. ಈ ಆಟ ಆಡುವ ಬಹುತೇಕರು ಅಲ್ಲಿ ತೋರಿಸಲಾಗುವ ರಿಸಲ್ಟ್ ಅನ್ನು ಫೇಸ್ ಬುಕ್ ಗೋಡೆಯ ಮೇಲೆ ಶೇರ್ ಮಾಡುವುದುಂಟು. ಹೀಗೆ ಶೇರ್ ಮಾಡುವಾಗ ಹೆಚ್ಚಿನದಾಗಿ ನಾವೇನು ಮಾಡುತ್ತೇವೆ ಹೇಳಿ? ನಮಗೆ ಸಮಾಧಾನ ನೀಡುವ ಉತ್ತರ ಬಂದಾಗಲಷ್ಟೇ ಆ ಕೆಲಸ ಮಾಡುತ್ತೇವೆ, ಅಲ್ಲವೆ?

ಇನ್ನೂ ಕೆಲವು ಸಲ ಹೀಗೆ ಮಾಡುತ್ತೇವೆ. ಗೇಮ್ ಆ್ಯಪ್ ನಮ್ಮ ಇಷ್ಟದ ಅಥವಾ ನಮ್ಮನ್ನು ಸಮಾಧಾನ ಪಡಿಸುವ ಫಲಿತಾಂಶ ತೋರಿಸುವವರೆಗೂ ‘ಟ್ರೈ ಅಗೈನ್’ ಕೊಡುತ್ತಲೇ ಇರುತ್ತೇವೆ. ನಮಗೆ ಓಕೆ ಅನ್ನಿಸಿದರೆ ಮಾತ್ರ ಅದನ್ನು ಶೇರ್ ಮಾಡುವುದು. ಉದಾ: “ರಾಮಾಯಣದಲ್ಲಿ ನೀವು ಯಾವ ಪಾತ್ರ?” ಅನ್ನುವ ಪ್ರಶ್ನೆಗೆ ಮಂಥರೆಯ ಚಿತ್ರ ಬಂದರೆ, ಸೀತೆಯೋ, ಕೌಸಲ್ಯೆಯೋ, ಕೊನೆಗೆ ಮಂಡೋದರಿಯೋ ಬರುವವರೆಗೂ ಟ್ರೈ ಮಾಡುತ್ತಲೇ ಇರುತ್ತೇವೆ. ನಮಗೆ ಮಂಥರೆಯಾಗುವುದರಲ್ಲಿ ಒಲವಿಲ್ಲ. ಆ ಪಾತ್ರ ಹಿಂಸೆಯನ್ನೂ ದುಃಖವನ್ನೂ ನೀಡುವ ಪಾತ್ರ. ನಾವು ಹಿಂಸೆಯನ್ನಾಗಲೀ ದುಃಖವನ್ನಾಗಲೀ ನೀಡುವವರಲ್ಲ. ಕೊನೆಪಕ್ಷ ಹಾಗೆ ತೋರಿಸಿಕೊಳ್ಳಲು ಬಯಸುವುದಿಲ್ಲ. ನಾವು ಹೇಗೇ ಇದ್ದರೂ ಉತ್ತಮರಂತೆ ಕಾಣಿಸಿಕೊಳ್ಳಲು ಬಯಸುತ್ತೇವೆ. ಪ್ಲೀಸಿಂಗ್ ಆಗಿ ಕಾಣಿಸಿಕೊಳ್ಳಲು ಬಯಸುತ್ತೇವೆ. ಅದಕ್ಕಾಗಿ ಆ್ಯಪ್’ನಲ್ಲಿ ‘ಟ್ರೈ ಅಗೈನ್’ ಆಪ್ಷನ್ ಅನ್ನು ಬಳಸಿಕೊಳ್ತೇವೆ.

ಆದರೆ, ನಿಜ ಬದುಕಿನಲ್ಲಿ ನಾವು ಹಾಗೆ ಮಾಡುತ್ತೇವೆಯೇ?
ನಮ್ಮ ಅಂತಸ್ಸಾಕ್ಷಿಗೆ ನಾವು ಏನಾಗಿದ್ದೇವೆ ಎಂದು ಗೊತ್ತಿದೆ. ನಾವು ತೀರಾ ಕೆಟ್ಟವರಲ್ಲದೆ ಇರಬಹುದು. ಆದರೆ ನಾವು ಕಾಣಿಸಿಕೊಳ್ಳಲು ಬಯಸುವಷ್ಟು ಒಳ್ಳೆಯವರಲ್ಲದೆ ಇರುವ ಸಾಧ್ಯತೆಗಳಿವೆ. ಫೇಸ್ ಬುಕ್ ಆ್ಯಪ್’ನಲ್ಲಿ ಟ್ರೈ ಅಗೈನ್ ಆಪ್ಷನ್ ಬಳಸಿ ಉತ್ತಮ ಫಲಿತಾಂಶ ಬರುವವರೆಗೆ ಪ್ರಯತ್ನಿಸುತ್ತೇವೆ. ಹಾಗೆಯೇ ನಿಜ ಜೀವನದಲ್ಲೂ ಪ್ರಯತ್ನದ, ಮರು ಪ್ರಯತ್ನದ ಆಯ್ಕೆ – ಅವಕಾಶಗಳು ಇದ್ದೇ ಇರುತ್ತವೆ. ಆದರೆ ನಾವು ಅದನ್ನು ಮುತುವರ್ಜಿಯಿಂದ ಬಳಸುತ್ತೇವೆಯೇ? ನಾವು ಯಾವ ರೀತಿ ಕಾಣಿಸಿಕೊಳ್ಳಲು ಬಯಸುತ್ತೇವೋ ಆ ವ್ಯಕ್ತಿ / ಪಾತ್ರ / ಹಂತ ತಲುಪಲು ಸತತ ಪ್ರಯತ್ನ ಹಾಕುತ್ತೇವೆಯೇ? ನಾವು ಆ ರಿಸ್ಕ್ ತೆಗೆದುಕೊಳ್ಳಲು ಹೋಗುವುದೇ ಇಲ್ಲ!

ಇದನ್ನೊಮ್ಮೆ ಪ್ರಯತ್ನಿಸಿ ನೋಡಿ. ನಿಮ್ಮ ಅವಗುಣ / ದೌರ್ಬಲ್ಯಗಳನ್ನು ಒಂದು ಹಾಳೆಯಲ್ಲಿ ಬರೆಯಿರಿ. ಪ್ರಾಮಾಣಿಕವಾಗಿ ಬರೆದುಕೊಳ್ಳಿ. ಉದಾಃರಣೆಗೆ, ನೀವು ಮತ್ತೊಬ್ಬರ ಪ್ರಗತಿಯ ಬಗ್ಗೆ ಯಾವಾಗಲೂ ಮತ್ಸರ ತಾಳುತ್ತೀರಿ. ಪರಿಚಿತರು, ಸಹೋದ್ಯೋಗಿಗಳು ಉನ್ನತಿಗೇರಿದರೆ ನಿಮಗೆ ಖುಷಿಯ ಬದಲು ಹೊಟ್ಟೆಕಿಚ್ಚಾಗುತ್ತದೆ. ಆದರೆ ಅವರ ಎದುರು ನೀವು ನಗುಮುಖ ಹೊತ್ತುಕೊಂಡು ಅಭಿನಂದನೆ ಸಲ್ಲಿಸುತ್ತೀರಿ. ಅವರು ಕೊಡುವ ಪಾರ್ಟಿಗೆ ಹೋಗಿ, ಒಂದು ಬೊಕೆ ಕೊಟ್ಟು ಬರುತ್ತೀರಿ. ನಿಮಗೆ, ನೀವು ಅವರಿಗಾಗಿ ಸಂತಸಪಟ್ಟಿದ್ದೀರಿ ಎಂದು ತೋರಿಸಿಕೊಳ್ಳಬೇಕಾಗಿದೆ. ಆದರೆ ಅಂತರಂಗದಲ್ಲಿ ಹೊಟ್ಟೆಕಿಚ್ಚಿನ ಹಸಿರು ಭೂತ ಕುಣಿಯುತ್ತಿದೆ.

ಫೇಸ್ ಬುಕ್ ಆ್ಯಪ್’ನಲ್ಲಿ ನೀವೇನು ಮಾಡುತ್ತೀರಿ? ಹೇಗೆ ಕಾಣಿಸಿಕೊಳ್ಳಲು ಬಯಸುತ್ತೀರೋ ಆ ಫಲಿತಾಂಶ ಬರುವವರೆಗೂ ಟ್ರೈ ಮಾಡುತ್ತೀರಲ್ಲವೆ? ಅದನ್ನು ನಿಜ ಜೀವನದಲ್ಲಿ, ವಾಸ್ತವದಲ್ಲಿ ಅನ್ವಯಿಸಿ ನೋಡಿ. ಅವರ ಪರಿಶ್ರಮದಿಂದ ಅವರು ಸಾಧನೆ ಮಾಡಿದ್ದಾರೆ. ಅದನ್ನು ಮನದಟ್ಟು ಮಾಡಿಕೊಂಡು ಸಹಜವಾಗಿ, ಅಂತಃಕರಣಪೂರ್ವಕವಾಗಿ ಖುಷಿ ಪಡಲು ಯತ್ನಿಸಿ.
ಇದು ಅಷ್ಟು ಸುಲಭವಲ್ಲ. ನಿಮ್ಮ ಇಗೋ, ನಿಮ್ಮ ಕೀಳರಿಮೆ, ನಿಮ್ಮ ಕಾಂಪ್ಲೆಕ್ಸ್’ಗಳು ನಿಮಗೆ ತಡೆಯಾಗುತ್ತವೆ. ಆದ್ದರಿಂದ ಮತ್ತೆಮತ್ತೆ ಪ್ರಯತ್ನಿಸಿ. ನಿಮ್ಮಿಂದ ಸಹಜವಾಗಿ, ನೈಜವಾಗಿ ಹಾಗಿರಲು ಸಾಧ್ಯವಾಗುವವರೆಗೂ ಪ್ರಯತ್ನಿಸಿ.

ಒಳ್ಳೆಯವರಂತೆ ಕಾಣಿಸಿಕೊಳ್ಳಲು ಇಷ್ಟಪಡುವ ನಿಮಗೆ, ಒಳ್ಳೆಯವರೇ ಆಗಿಬಿಡುವ ಪ್ರಯತ್ನ ಮಾಡಲಿಕ್ಕೆ ಇರುವ ಅಡ್ಡಿಯಾದರೂ ಏನು!?

 

Leave a Reply