ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ
ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು
ಒಂದು ಗಿಳಿ ಇಪ್ಪತ್ತೈದು ಗಿಳಿಯಾಯಿತ್ತು.
ಬ್ರಹ್ಮನಾಗಿಳಿಗೆ ಪಂಜರವಾದ; ವಿಷ್ಣುವಾಗಿಳಿಗೆ ಕೊರಕೂಳಾದ
ರುದ್ರನಾಗಿಳಿಗೆ ತಾ ಕೋಲಾದ.
ಇಂತೀ ಮೂವರ ಮುಂದಣ ಕಂದನ ನುಂಗಿ ದುಷ್ಟನಾಮ ನಷ್ಟವಾಯಿತ್ತು
ಇದೆಂತೋ ಗುಹೇಶ್ವರ.
ಮಹಾಲಿಂಗರ ವ್ಯಾಖ್ಯಾನ : ಆತ್ಮ ಅಹಂಕಾರ ವಿಭ್ರಾಂತಿಯ ತೂರ್ಯಾವಸ್ಥೆಯಲ್ಲಿ ಜೀವಶುಕನು ಉದಯಿಸಿ ಸಂಸಾರ ಪ್ರಪಂಚದಲ್ಲಿ ನೆಲೆಸಿದನು. ಈ ಜೀವಶುಕನು ಇಪ್ಪತ್ತೈದು ಪ್ರಕೃತಿಗಳಿಂದ ಕೂಡಿದವನಾಗಿದ್ದನು (ಪಂಚವಿಂಶತಿ ಭೂತಾತ್ಮಕ). ಇವನಿಗೆ ರಜೋಗುಣದ ಸ್ಥೂಲ ಶರೀರವೇ ನಿವಾಸ ಸ್ಥಾನ. ಸಾತ್ತ್ವಿಕ ಗುಣದ ಸೂಕ್ಷ್ಮ ಶರೀರದಿಂದಾದ ಇಂದ್ರಿಯ ವಿಷಯಾದಿಭೋಗಗಳೇ ಆಹಾರ. ತಮೋಗುಣದ ಕಾರಣಶರೀರದ ಮರವೆಯು ಆ ಜೀವಭ್ರಾಂತಿಗೆ ಸಿಲುಕಿತು.
ಹೀಗೆ ಬ್ರಹ್ಮ, ವಿಷ್ಣು, ರುದ್ರರೆಂಬ ತತ್ತ್ವತ್ರಯಗಳಿಗೆ ಇದಿರಿಟ್ಟಿರುವ ಆ ಜೀವಭ್ರಾಂತುವು ಆವಸಿರುವ ಕಾರಣ ಲಕ್ಷ್ಯಕ್ಕೂ ತನ್ನ ನಾಮಕ್ಕೂ ನಷ್ಟ ಉಂಟು
ಕಲ್ಲುಮಠದ ಪ್ರಭುದೇವರ ವ್ಯಾಖ್ಯಾನ : ಪರಶಿವನು ತನ್ನ ಚಿದ್ವಿಲಾಸದಿಂದ ಮಹಾಲಿಂಗವಾಗಿ ಪರಮಾತ್ಮನೆನಿಸಿದ. ಆ ಪರಮಾತ್ಮನು ತನಗೆ ತಾನೇ ಸೇವ್ಯ ಸೇವಕನಾಗಬೇಕೆಂದು ಇಚ್ಛಿಸಲು, ಆ ಇಚ್ಛೆಯಿಂದ ಉಂಟಾದ ಅಹಂಭಾವದ ಚಿತ್ ಚೈತನ್ಯವು ಬೇರ್ಪಟ್ಟು ಜೀವಹಂಸವಾಗಿ ಉದಯಿಸಿತು. ಈ ಜೀವಹಂಸವು ಪಂಚವಿಂಶತಿಭೂತಾತ್ಮ ದೇಹವನ್ನು ಆಶ್ರಯಿಸಿ, ತನ್ನ ನಿಜವನ್ನು ಮರೆತು, ದೇಹಸಂಸಾರ ಪ್ರಪಂಚವನ್ನೇ ತಾನೆಂದು ಸಂಭ್ರಮಿಸುತ್ತಿದ್ದಿತು.
ಹೀಗೆ ಗುಣತ್ರಯಗಳನ್ನು ಮುಂದುಗೊಂಡಿದ್ದ ಜೀವವನ್ನು ತನುವಾಸನೆಯು ಎಂದೆಂದೂ ಬಿಡದೆ ಗ್ರಹಿಸಿತ್ತು. ಹೀಗೆ ಮಿಥ್ಯಾದೇಹ ಸಂಬಂಧದಿಂದ ಜೀವನಾಗಿ ತನ್ನನ್ನು ತಾನು ಮರೆತಿರಲು, ತಾನು ಶಿವನೆಂಬ ತಥ್ಯವೇ ತನಗೆ ಮಿಥ್ಯವಾಗಿ ತೋರಿತ್ತು.