“ಶೂನ್ಯ ಸ್ಥಾಪಿತವಾದಾಗ ಅಖಂಡತೆಯೂ ಹುಟ್ಟುಗಟ್ಟುವುದು” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 5.5

ನೀವು ಇರುವುದಕ್ಕೆ ಕಾರಣ ನಿಮ್ಮ ಸುತ್ತ ಇತರ ಸಂಗತಿಗಳಿರುವುದು, ನಿಮ್ಮ ಸುತ್ತ ಗಡಿಗಳಿರುವುದು ಹಾಗು
ಇತರ ಸಂಗತಿಗಳ ಸುತ್ತಲೂ ಗಡಿ ಇರುವ ಕಾರಣಕ್ಕಾಗಿ.…  ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

ಅಧ್ಯಾಯ 5 ಭಾಗ 5 : Unity of Emptiness

ಧ್ಯಾನದಲ್ಲಿ ಚಿತ್ರ,
ಹಿನ್ನೆಲೆಯೊಂದಿಗೆ ಏಕಕಾಲದಲ್ಲಿ
ವೈಯಕ್ತಿಕವಾಗಿಯೂ ಸಾರ್ವತ್ರಿಕವಾಗಿಯೂ
ಸಾಧ್ಯವಾಗಬೇಕು.
ನಕ್ಷತ್ರಗಳು ಮುಖ್ಯವಾಗದೇ
ಆಕಾಶ ಮುಖ್ಯವಾಗಬೇಕು.
ಆಗ ಬುದ್ಧಿ-ಮನಸ್ಸಿಗೆ ಹಿನ್ನಡೆ
ಮತ್ತು ಆಗ ಅದನ್ನು ಕಳಚುವುದೂ ಸುಲಭ.

ಹೀಗೆ ಕಳಚುವುದು
ಬಟ್ಟೆಯನ್ನು ಬಿಚ್ಚಿ ಇಟ್ಟಷ್ಟೇ ಸುಲಭ.
ಆದರೆ ಇದು ಕೇವಲ ನೀವು ಧರಿಸಿರುವ ಬಟ್ಟೆ
ನಿಮ್ಮ ಚರ್ಮವಲ್ಲ ಎನ್ನುವುದು
ನಿಮಗೆ ನಿಕ್ಕಿ ಆಗಿರಬೇಕು.

ಸೊಸಾನ್ ಹೇಳುವುದು ಇದನ್ನೇ.
ಬುದ್ಧಿ-ಮನಸ್ಸು ಇಲ್ಲವಾದಾಗ
ಸುತ್ತಲಿನ ಸಂಗತಿಗಳೂ ಇಲ್ಲವಾಗುವವು.
ಹಾಗೆಂದರೇನು?
ಆಳ ಧ್ಯಾನದಲ್ಲಿ ನೋ ಮೈಂಡ್ ಸಾಧ್ಯವಾದಾಗ
ಸುತ್ತಮುತ್ತಲಿನ ಗಿಡ ಮರಗಳು
ನೀವು ಕುಳಿತಿರುವ ಖುರ್ಚಿ ಇಲ್ಲವಾಗುವವೆ?

ಹಾಗಲ್ಲ,
ಸುತ್ತಲಿನ ಸಂಗತಿಗಳು ಮಾಯವಾಗುವುದೇನೋ ನಿಜ,
ಹಾಗೆಂದರೆ ನಡುವಿನ ಗಡಿ ಮಾಯವಾಗುವುದು.
ಮರ, ಸೂರ್ಯನ ಜೊತೆ ಮಾತಿಗಳಿಯುವುದು,
ಖುರ್ಚಿ, ಆಕಾಶದಲ್ಲಿ ಕಾಲು ಚಾಚುವುದು.
ಚಿತ್ರ, ಹಿನ್ನೆಲೆಯೊಂದಿಗೆ ಒಂದಾಗಿ
ಒಂದು ಸೌಹಾರ್ದ ಸಾಧ್ಯವಾಗುವುದು.

ಜಿಡ್ಡು ಕೃಷ್ಣಮೂರ್ತಿ
ಒಂದು ಸುಂದರ ವಿಷಯ ಹೇಳುತ್ತಾರೆ.
“ ಆಳ ಧ್ಯಾನದಲ್ಲಿ,
ಗಮನಿಸುವವ ಸ್ವತಃ ತಾನೇ ಗಮನಿಸಲ್ಪಡುವ ಸಂಗತಿಯಾಗುತ್ತಾನೆ”
ಇದು ಅಸಂಗತ ಅಲ್ಲ, ಹದಿನಾರಾಣೆ ಸತ್ಯ.

ಜಿಡ್ಡು ಏನು ಹೇಳುತ್ತಿದ್ದಾರೆ?
ಅಕಸ್ಮಾತ್, ನೀವು ಧ್ಯಾನದಲ್ಲಿ
ಹೂವನ್ನು ಗಮನಿಸುತ್ತಿದ್ದರೆ
ನೀವೂ ಹೂವಾಗುತ್ತೀರ ಎಂದೆ?
ಹಾಗಲ್ಲ. ಆದರೆ ಒಂದರ್ಥದಲ್ಲಿ ಹೌದು,
ಭೌತಿಕವಾಗಿ ನೀವು ಹೂವಾಗುವುದಿಲ್ಲ,
ನೋಡುವ ಬುದ್ಧಿ-ಮನಸ್ಸು ಇಲ್ಲದಾಗ
ನಿಮ್ಮ ಮತ್ತು ಹೂವಿನ ನಡುವಿನ ಗಡಿ ಮಾಯವಾಗುತ್ತದೆ,
ಚಿತ್ರ ಹಿನ್ನಲೆಯೊಂದಿಗೆ ಒಂದಾಗುತ್ತದೆ,
ಆಗ ನಿಮ್ಮೊಳಗೆ ಹೂವು ಮತ್ತು ಹೂವಿನೊಳಗೆ ನೀವು.

ನಿಜ ಜೀವನದಲ್ಲಿಯೂ
ಕೆಲ ಕ್ಷಣಗಳಮಟ್ಟಿಗಾದರೂ
ನಿಮಗೆ ಈ ಅನುಭವ ಸಾಧ್ಯವಾಗುವುದು.
ಯಾರನ್ನಾದರೂ ನೀವು ತೀವ್ರವಾಗಿ ಪ್ರೀತಿಸಿದಾಗ
ನಿಮ್ಮಿಬ್ಬರ ನಡುವಿನ ಗಡಿ ನಾಶವಾಗಿ,
ಅಂತರ ಇಲ್ಲವಾಗಿ,
ನೀವಿಬ್ಬರೂ ಒಂದಾಗಿ ಅಖಂಡವಾಗುವ ಭಾವ.

ಆದರೆ ಇದು ಬಹಳ ಅಪರೂಪ.
ಮನುಷ್ಯನ ಬುದ್ಧಿ-ಮನಸ್ಸು
ಹೀಗಾಗುವುದನ್ನ ತಡೆ ಹಿಡಿದು ನಿಲ್ಲಿಸುತ್ತದೆ,
ಪ್ರೇಮದಲ್ಲಿಯೂ ಕೂಡ
ತನ್ನ ಹುಡುಗಾಟ ಮುಂದುವರೆಸುತ್ತದೆ,
ಸ್ವತಃ ತನ್ನ ಜಗತ್ತನ್ನು ನಿರ್ಮಾಣ ಮಾಡುತ್ತದೆ.
ಗಮನಿಸುವವನನ್ನು, ಗಮನಿಸಲ್ಪಡುವ ಸಂಗತಿಯಿಂದ
ಅವನ ಅಹಂ ದೂರ ಇಡುತ್ತದೆ.

ಆದರೂ,
ಕೆಲವೊಮ್ಮೆ ಈ ಎಲ್ಲ ಸಾಧ್ಯತೆಗಳ ನಡುವೆಯೂ
ಅಪರೂಪ ಸಾಧ್ಯವಾಗುತ್ತದೆ.
ನಿಮ್ಮ ಎಲ್ಲ ಕನಸು, ಬಯಕೆ, ಪ್ರಯತ್ನಗಳ ಮಧ್ಯೆ,
ಎಲ್ಲ ರಕ್ಷಣೆಗಳ ನಡುವೆಯೂ
ಈ ಅಪರೂಪ ಸಾಧ್ಯವಾಗುತ್ತದೆ.
ಕಿಟಕಿಯ ಬಾಗಿಲು
ತಾನೇ ತಾನಾಗಿ ತೆರೆದುಕೊಳ್ಳುತ್ತದೆ,
ನೀವು ಕಿಟಕಿಯತ್ತ ನೋಡದೇ ಇರುವಾಗಲೂ
ನಿಜ, ಕಿಟಕಿ ಹಾಯ್ದು ಬಂದು
ನಿಮ್ಮೊಳಗೆ ದಾಖಲಾಗುತ್ತದೆ.

ಕೆಲವೇ ಕ್ಷಣಗಳ ಮಟ್ಚಿಗಾದರೂ
ಪ್ರೇಮದಲ್ಲಿ ಈ ಅನನ್ಯ ಸಾಧ್ಯವಾಗುತ್ತದೆ.
ಗಮನಿಸುವವ
ಸ್ವತಃ ಗಮನಿಸಲ್ಪಡುವ ಸಂಗತಿಯಾದಾಗ ,
ನೀವು ನಿಮ್ಮ ಪ್ರೇಮದ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ,
ಜಗದ ಸಂತೆಯಿಂದ ದೂರವಾದಾಗ,
ನಿಮ್ಮನ್ನು ನೀವು ಮರೆತಾಗ,
ನೀವು ನಿಮ್ಮ ಪ್ರೇಮಿಯಾಗಿ,
ನಿಮ್ಮ ಪ್ರೇಮಿ ನೀವಾಗಿ
ಒಬ್ಬರನ್ನೊಬ್ಬರು ಪ್ರವೇಶಿಸುತ್ತೀರಿ
ಹೀಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಕಣ್ಣುಗಳು
ಜಗತ್ತಿನ ಅತ್ಯಂತ ಸುಂದರ ಬಾಗಿಲುಗಳು.

ಯಾಕೆ ಇದು ಪ್ರೇಮದಲ್ಲಿ ಮಾತ್ರ ಸಾಧ್ಯ?
ಏಕೆಂದರೆ ನಿಜದ ಪ್ರೇಮದಲ್ಲಿ,
ಆಕ್ರಮಣದ ಹಂಬಲವಿಲ್ಲ,
ರಕ್ಷಣೆಯ ಭಯವಿಲ್ಲ,
ಪೂರ್ಣವಾಗಿ ನೀವು ನಿರಾಳ
ಗಾಯ ಮಾಡುವ ಹುಕಿ ಇಲ್ಲ,
ಘಾಸಿಗೊಳ್ಳುವ ಸಂಶಯವಿಲ್ಲ.
‘ನೀವು’ ಇಲ್ಲ,
ಇರುವುದು ಪ್ರೇಮ ಮಾತ್ರ.
ಆಗ ಮಾತ್ರ ನಿಜದ ಸಂಭಾಷಣೆ.

ಆಳವಾದ ಧ್ಯಾನ ಕೂಡ
ಈ ಅಪರೂಪವನ್ನು ಸಾಧ್ಯಮಾಡುತ್ತದೆ.
ಬ್ರಹ್ಮಾಂಡದ ಜೊತೆ ನಿಮ್ಮ ಒಂದಾಗುವಿಕೆಯಲ್ಲಿ,
ನೀವು ಮರವಾಗುವುದಿಲ್ಲ, ನಕ್ಷತ್ರವಾಗುವುದಿಲ್ಲ, ನದಿಯಾಗುವುದಿಲ್ಲ,
ಹಕ್ಕಿಯಾಗುವುದಿಲ್ಲ
ಆದರೆ ಅದೇ ಸಮಯದಲ್ಲಿ
ಎಲ್ಲವೂ ಆಗಿರುವಿರಿ.
ನಿಮ್ಮ ನಡುವಿನ ಗಡಿಗಳು ನಾಶವಾಗಿರುತ್ತವೆ,
“ಗಿಡಗಂಟಿಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು “
ಎಂದು ಕವಿ ಹಾಡುವಂತೆ
ಹಾಡುತ್ತಿರುವುದು ನೀವೋ, ಗಿಡಗಂಟಿಗಳೋ, ಹಕ್ಕಿಯೋ?
ಎನ್ನುವುದನ್ನ ವಿಭಜಿಸಿ ಹೇಳಲಿಕ್ಕಾಗುವುದಿಲ್ಲ,
ಎಲ್ಲವೂ ಸೇರಿ ಅಖಂಡವಾಗಿ
ಹಾಡುತ್ತಿರುವಂತೆ ತೋರುತ್ತದೆ.
ಇಲ್ಲಿ, ನಿಮ್ಮ, ಗಿಡಗಂಟಿಗಳ, ಹಕ್ಕಿಯ ಆನಂದ
ಯಾವುದೂ ಬೇರೆ ಬೇರೆ ಅಲ್ಲ,
ಇಡೀ ಬ್ರಹ್ಮಾಂಡ ಅಖಂಡವಾಗಿ ಹಾಡುತ್ತಿದೆ.

ಸೊಸಾನ್ ಹೇಳುತ್ತಿರುವುದು ಇದೇ.

ವಿಚಾರ ಮಾಡಲ್ಪಡುವ ಸಂಗತಿಗಳು ಇಲ್ಲವಾದಾಗ
ವಿಚಾರ ಮಾಡುವ ಬುದ್ಧಿ-ಮನಸ್ಸು ಕೂಡ ಮಾಯವಾಗುತ್ತವೆ.
ಹಾಗೆಯೇ, ಬುದ್ಧಿ-ಮನಸ್ಸು ಇಲ್ಲವಾದಾಗ
ವಿಚಾರ ಮಾಡಲ್ಪಡುವ ಸಂಗತಿಗಳೂ ಕಾಣೆಯಾಗುತ್ತವೆ.
ಬುದ್ಧಿ-ಮನಸ್ಸು ಇರುವುದರಿಂದಲೇ
ವಿಷಯಗಳ, ಸಂಗತಿಗಳ ಅಸ್ತಿತ್ವ
ಹಾಗು, ಬುದ್ಧಿ-ಮನಸ್ಸು ಹೀಗಿರುವುದಕ್ಕೆ ಕಾರಣವೇ
ಸುತ್ತಲಿನ ವಿಷಯ ಮತ್ತು ಸಂಗತಿಗಳು.

ಈ ಎರಡರ (mind & object) ನಡುವಿನ
ಸಾಪೇಕ್ಷವನ್ನು ಅರ್ಥ ಮಾಡಿಕೊಳ್ಳಿ,
ಶೂನ್ಯದ ಅಖಂಡತೆಯೇ ಮೂಲ ಸತ್ಯ.

ನೀವು ಇರುವುದಕ್ಕೆ ಕಾರಣ
ನಿಮ್ಮ ಸುತ್ತ ಇತರ ಸಂಗತಿಗಳಿರುವುದು,
ನಿಮ್ಮ ಸುತ್ತ ಗಡಿಗಳಿರುವುದು ಹಾಗು
ಇತರ ಸಂಗತಿಗಳ ಸುತ್ತಲೂ
ಗಡಿ ಇರುವ ಕಾರಣಕ್ಕಾಗಿ.

ನಿಮ್ಮ ಸುತ್ತಲಿನ ಗಡಿ ಇಲ್ಲವಾದಾಗ
ಅವುಗಳ ಸುತ್ತಲಿನ ಗಡಿಯೂ ಇಲ್ಲವಾಗುತ್ತದೆ,
ಆಗ ನೀವಿಬ್ಬರೂ ಒಂದು ಏಕತೆಯಲ್ಲಿ.

ನಿಮ್ಮ ಬುದ್ಧಿ-ಮನಸ್ಸು ಮತ್ತು
ನಿಮ್ಮ ಸುತ್ತಲಿನ ಸಂಗತಿಗಳ ನಡುವೆ
ಒಂದು ಸೇತುವೆ ಇದೆ.
ಸೇತುವೆಯ ಬಂದು ಬದಿ ಕುಸಿದರೂ
ಸೇತುವೆ ಇಲ್ಲವಾಗುತ್ತದೆ.
ಆಗ ಸೇತುವೆಯ ಇನ್ನೊಂದು ಬದಿಯೂ
ಪ್ರಯೋಜನಕ್ಕೆ ಬಾರದು.

ನದಿಯ ಒಂದು ತೀರ ಇಲ್ಲದಾಗ
ಇನ್ನೊಂದು ತೀರ ಇರುವುದು ಹೇಗೆ ಸಾಧ್ಯ?
ಸೊಸಾನ್ ಹೇಳುತ್ತಿರುವ ಸಾಪೇಕ್ಷದ ಅರ್ಥ ಇದು.

ಎರಡೂ ತೀರಗಳು ಇಲ್ಲವಾದಾಗ
ಎಲ್ಲೆಲ್ಲೂ ನದಿ.
ಇದೇ ಶೂನ್ಯದ ಅಖಂಡತೆ.

ನಿಮ್ಮ ಬುದ್ಧಿ – ಮನಸ್ಸು ಇಲ್ಲದಾಗ,
ನಿಮ್ಮ ಸುತ್ತ ಗಡಿ ಇಲ್ಲ
ಆದ್ದರಿಂದಲೆ ನೀವು ಗಮನಿಸುತ್ತಿರುವ
ಹೂವಿನ ಸುತ್ತಲೂ ಗಡಿ ಇಲ್ಲ.
ಆಗ ನೀವಿಬ್ಬರೂ ಒಂದು.
ಎರಡೂ ಶೂನ್ಯಗಳು ಒಂದು
ಇದೇ ಶೂನ್ಯದ ಅಖಂಡತೆ.
ಸೊಸಾನ್, ಜಿಡ್ಡು ಹೇಳುತ್ತಿರುವುದು ಇದನ್ನೇ.
ಬೌದ್ಧರು ‘ಅನಾತ್ಮ’ ಎಂದಿರುವುದೂ ಇದನ್ನೇ.
ಎಷ್ಟು ಸುಂದರ ಈ ಸತ್ಯ.

ಆದರೆ ಹಿಂದೂಗಳ ಪ್ರಕಾರ,
ಹಿಂದೂ ಧರ್ಮದ ಮೂಲ ಪರಿಕಲ್ಪನೆಯೇ
ಆತ್ಮದ ಕುರಿತಾಗಿ.
ಆತ್ಮವೇ ಸರ್ವಶ್ರೇಷ್ಠ ಎನ್ನುವ ಸಿದ್ಧಾಂತದಲ್ಲಿ.
ಆದರೆ ಬುದ್ಧ ಹೇಳುತ್ತಾನೆ,
ನಡುವಿನ ಗಡಿ ಇಲ್ಲವಾದಾಗ
‘ಸ್ವ’ ( self) ಇರುವುದು ಹೇಗೆ ಸಾಧ್ಯ?
ಗಡಿ ಇಲ್ಲದಿರುವಾಗ,
ಬುದ್ಧಿ-ಮನಸ್ಸು ಇಲ್ಲದಿರುವಾಗ
‘ನಾನು’ ಇರುವುದು ಹೇಗೆ ಸಾಧ್ಯ ?

ಇದು ಬೌದ್ಧರ ಶೂನ್ಯ ತತ್ವ, ಅನಾತ್ಮ ಸಿದ್ಧಾಂತ.
‘ನೀವು’ ಇಲ್ಲ, ಆದರೂ ಇರುವಿರಿ
ವೈಯಕ್ತುಕವಾಗಿ ಅಲ್ಲ
ಆದರೆ ಒಂದು ಅಖಂಡತೆಯ ಭಾಗವಾಗಿ.
ಮೊದಲಬಾರಿಗೆ ವೈಯಕ್ತಿಕವಾಗಿ ಅಲ್ಲ
ಸಾರ್ವತ್ರಿಕವಾಗಿ ನಿಮ್ಮ ಅಸ್ತಿತ್ವ .

ಹಾಗೆಯೇ ಹೂವು ಕೂಡ, ಮರವೂ ಕೂಡ, ಹಕ್ಕಿಯೂ ಕೂಡ.
ಬಂಡೆ, ನಕ್ಷತ್ರ, ಸೂರ್ಯ, ಚಂದ್ರ ಕೂಡ.
ಏಕೆಂದರೆ ನಿಮ್ಮ ‘ಸ್ವ’ ದ ಕಾರಣವಾಗಿಯೇ
ಎಲ್ಲದರ ‘ಸ್ವ’ ಇರುವುದು.
ನಿಮ್ಮ ‘ಸ್ವ’ ಇಲ್ಲವಾದಾಗ
ಸುತ್ತಲಿನ ಎಲ್ಲ ಸಂಗತಿಗಳ ‘ಸ್ವ’ ಕೂಡ ಇಲ್ಲವಾಗುವುದು.
ಆಗಲೇ ಎಲ್ಲವೂ ಕೂಡಿಕೊಂಡ
ಒಂದು ಅಖಂಡತೆ ರೂಪಗೊಳ್ಳುವುದು.

ಸೋಸಾನ್ ಇದನ್ನೇ ಹೇಳುತ್ತಿದ್ದಾನೆ,
ಶೂನ್ಯ ಸ್ಥಾಪಿತವಾದಾಗ
ಅಖಂಡತೆಯೂ ಹುಟ್ಟುಗಟ್ಟುವುದು.

“ಶೂನ್ಯದಲ್ಲಿ ಹುಟ್ಟುಗಟ್ಟಿತ್ತು
ಹದುಳದೊಂದು ಹುಣ್ಣಿಮೆ” ಎಂದು
ಅಲ್ಲಮನ ಬಗ್ಗೆ ಬೇಂದ್ರೆ ಹೇಳುವುದೂ ಇದನ್ನೇ.

(ಮುಂದುವರೆಯುತ್ತದೆ……..)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2020/04/05/ming-6/

1 Comment

Leave a Reply