“ಬೆಳಕಿನ ಎತ್ತರಕ್ಕೆ ಏರು” : ಅಥರ್ವ ವೇದದ ಆಶಯ

ಆರೋಹ ತಮಸೋ ಜ್ಯೋತಿಃ  – “ಕತ್ತಲಿನಿಂದ ಬೆಳಕಿನ ಕಡೆ ಆರೋಹಣ ಮಾಡು”. ಇದು ಅಥರ್ವ ವೇದದ ಆಶಯ. ಕತ್ತಲು ಮತ್ತು ಬೆಳಕು ತಮಸ್ಸು ಮತ್ತು ಜ್ಯೋತಿಗೆ ರೂಪಕಗಳು. ಇಲ್ಲಿ ತಮಸ್ಸು ಅಂದರೆ ನಮಗೆ ತಿಳಿದಿರುವಂತೆ ಪಾರಿಸರಿಕ ಕತ್ತಲೆ ಅಲ್ಲ. ಮತ್ತು ‘ಜ್ಯೋತಿ’ ಯ ಅರ್ಥ ದೀಪದ ಬೆಳಕಿಗೆ ಸೀಮಿತವಲ್ಲ.

ಮೌಢ್ಯ, ಅಂಧಶ್ರದ್ಧೆ, ಅಜ್ಞಾನ, ಮೂರ್ಖತನ, ಸಂಕುಚಿತ ಬುದ್ಧಿ ಇವೆಲ್ಲ ತಮೋಗುಣಗಳು. ತಮಸ್ಸು ಅಂದರೆ ಬುದ್ಧಿಗೆ ದಾರಿ ತೋರದಂತೆ ಕವಿಯುವ ಮುಸುಕು. ಬುದ್ಧಿಯ ಕುರುಡುತನಕ್ಕೆ ಕಾರಣವಾಗುವ ಮೌಢ್ಯದ ಪರದೆ. ಆದ್ದರಿಂದ ಕತ್ತಲೆಯನ್ನು ತಮಸ್ಸಿಗೆ ಪರ್ಯಾಯವಾಗಿ ತೆಗೆದುಕೊಳ್ಳಬಹುದು. ಹಾಗೆಯೇ ಜ್ಯೋತಿ ಎಂದರೆ ಬೆಳಕು ಮಾತ್ರವಲ್ಲ ಬದುಕು ಎಂದೂ ಅರ್ಥವಿದೆ. ಆದ್ದರಿಂದಲೇ ಅಥರ್ವ ವೇದ, “ಅಜ್ಞಾನದ ಕತ್ತಲ ಕೂಪದಿಂದ ಜೀವನದಾಯಿನಿ ಜ್ಞಾನದ ಬೆಳಕಿನ ಎತ್ತರಕ್ಕೆ ಏರು” ಎಂದು ಸೂಚನೆ ನೀಡುತ್ತಿದೆ.

ಪ್ರತಿ ಮುಂಜಾನೆ ರಾತ್ರಿಯ ಕತ್ತಲು ಕಳೆದು ಹೊಸ ದಿನದ ಬೆಳಕನ್ನು ಬರಮಾಡಿಕೊಳ್ಳುವಾಗ “ಆರೋಹ ತಮಸೋ ಜ್ಯೋತಿಃ” ಎಂಬ ವೇದನಿರ್ದೇಶನವನ್ನು ಸ್ಮರಿಸಿ, ಅದರಂತೆ ಪ್ರಯತ್ನ ನಡೆಸಿದರೆ, ನಮ್ಮ ಬದುಕು ಅರಿವಿನ ಪಥದಲ್ಲಿ ಸಾಗುವುದರಲ್ಲಿ ಸಂದೇಹವಿಲ್ಲ.

Leave a Reply