ರೂಮಿ, ‘ಕೊಳಲೂದಲು ಉಸಿರು ಬೇಕಿಲ್ಲ, ಬೇಕಿರುವುದು ಕಿಚ್ಚು ಅನ್ನುತ್ತಿದ್ದಾನೆ. ಇದರ ಅರ್ಥ, ಉಸಿರು ಬೇಕಾಗಿಯೇ ಇಲ್ಲವೆಂದಲ್ಲ; ಉಸಿರಷ್ಟೇ ಸಾಕಾಗುವುದಿಲ್ಲ ಎಂದು! | ಅಲಾವಿಕಾ
ಕೊಳಲೂದಲು ಉಸಿರು ಬೇಕಿಲ್ಲ,
ಬೇಕಿರುವುದು ಕಿಚ್ಚು.
ಎದೆಯೊಳಗೆ ಕಿಡಿಯಿಲ್ಲದೆ,
ನಾದ ಹೊಮ್ಮುವುದು ಹೇಗೆ?
~ ರೂಮಿ
ಕೊಳಲಿನ ರಂಧ್ರಗಳಲ್ಲಿ ಸುಳಿದಾಡುವ ಗಾಳಿ ನಾದ ಹೊಮ್ಮಿಸುತ್ತದೆ. ಇದು ವಿಜ್ಞಾನ. ಕೊಳಲೂದಲು ಬೇಕಿರುವುದು ಕಿಚ್ಚು ಅನ್ನುವುದು ಆತ್ಮಜ್ಞಾನ.
ಕಿಚ್ಚು ಕೂಡಾ ಗಾಳಿಯಿಂದಲೇ ಉರಿಯುವುದು. ಗಾಳಿ ಇಲ್ಲದೆ ಬೆಂಕಿ ಹೊತ್ತಿಕೊಳ್ಳುವುದೇ ಇಲ್ಲ. ಆಮ್ಲಜನಕವಿಲ್ಲದೆ ಬೆಂಕಿಯ ಕಿಡಿಯೂ ಹೊತ್ತಿಕೊಳ್ಳದು ಅಲ್ಲವೆ?
ರೂಮಿ, ‘ಕೊಳಲೂದಲು ಉಸಿರು ಬೇಕಿಲ್ಲ, ಬೇಕಿರುವುದು ಕಿಚ್ಚು ಅನ್ನುತ್ತಿದ್ದಾನೆ. ಇದರ ಅರ್ಥ, ಉಸಿರು ಬೇಕಾಗಿಯೇ ಇಲ್ಲವೆಂದಲ್ಲ; ಉಸಿರಷ್ಟೇ ಸಾಕಾಗುವುದಿಲ್ಲ ಎಂದು!
ನಮ್ಮೊಳಗೊಂದು ತಹತಹವಿಲ್ಲದೆ, ಒಂದು ಚಾಲಕ ಶಕ್ತಿ ಇಲ್ಲದೆ ನಾದ ಹೊಮ್ಮುವುದಾದರೂ ಹೇಗೆ? ನಿಮಗೆ ಕೊಳಲಿನ ದನಿ ಕೇಳಬಹುದು. ಶಾಸ್ತ್ರೀಯವಾಗಿಯೂ ಅದೊಂದು ಸಂಗೀತ ಅನ್ನಿಸಬಹುದು. ಆದರೆ, ಆ ಸಂಗೀತದಲ್ಲೊಂದು ನಾದ ಹರಿಯಬೇಕೆಂದರೆ, ಆ ಸಂಗೀತದಲ್ಲೊಂದು ರಸ ಚಿಮ್ಮಬೇಕೆಂದರೆ, ತಾದಾತ್ಮ್ಯಗೊಳ್ಳಬೇಕೆಂದರೆ, ನುಡಿಸುವವನ ಎದೆಯಲ್ಲಿ ಕಿಚ್ಚಿರಬೇಕು. ಅವನೂಡುವ ಉಸಿರು ತಿದಿಯೊತ್ತಿ, ಕಿಡಿಯು ನಾದವಾಗಿ ಜ್ವಲಿಸಬೇಕು. ಆಗಲೇ ಅನುಭೂತಿಯ ಬೆಳಕು ಸುತ್ತಲೂ ಚಿಮ್ಮುವುದು.
ಕೃಷ್ಣ ತನ್ನ ಕೊಳಲಿನಲ್ಲೆ ಉಸಿರನ್ನಷ್ಟೆ ತುಂಬಿದ್ದನೇ? ಹಾಗಿದ್ದರೆ, ಅವನೇಕೆ ವ್ರಜಭೂಮಿ ತೊರೆಯುವಾಗ ಕೊಳಲನ್ನು ಅಲ್ಲಿಯೇ ಬಿಟ್ಟುಹೊರಟ?
ಕೃಷ್ಣನ ಕೊಳಲಿನ ನಾದದಲ್ಲಿ ಅವನ ಅಂತರಂಗದ ಬೆಳಕಿತ್ತು. ಅದನ್ನವನು ವ್ರಜದ ಗೆಳೆಯ ಗೆಳತಿಯರಿಗಾಗಿ ಕೊಟ್ಟುಹೋದ.
ಕೃಷ್ಣನ ಉಸಿರು ಸೋಕದಿದ್ದರೂ ಆ ಕೊಳಲು ಕೊನೆತನಕ ವ್ರಜವಾಸಿಗಳಿಗೆ ಕಂದೀಲಾಗಿ ಜೊತೆಯಿತ್ತು.
ಊದುವ ಕ್ರಿಯೆ ಕಿಚ್ಚು ಹೊತ್ತಿಸಲೆಂದೇ ಇರುತ್ತದೆ. ಉಸಿರನ್ನೇ ಊಡಿದರೂ ಬೆಂಕಿ ಜ್ವಲಿಸುತ್ತದೆ. ಗಾಳಿಯಿಂದ ಹೊತ್ತಿಕೊಳ್ಳುವ ಬೆಂಕಿ, ಜೀವಗಳನ್ನು ಸೌಹಾರ್ದದಿಂದ ಕಾಯುತ್ತದೆ.