ಬುದ್ಧಕಾರುಣ್ಯ ಸವಿದ ನೇಕಾರನ ಮಗಳು

ಗ್ರಾಮಸ್ಥರು ನೇಕಾರನ ಮಗಳ ಮೇಲೆ `ಅಧಿಕಪ್ರಸಂಗಿ’ ಎಂದು ಕೋಪಗೊಂಡರು. ಬಿಕ್ಖುಗಳಿಗೂ ಇದು ಆಶ್ಚರ್ಯ ತಂದಿತು. ನೇಕಾರನ ಮಗಳು ಎಷ್ಟೇ ಲಗುಬಗೆಯಿಂದ ಧಾವಿಸಿ ಬಂದರೂ ತಡವಾಗಿಹೋಗಿತ್ತು. ಆದರೆ ಬುದ್ಧ ಅವಳಿಗಾಗಿ ಕಾದಿದ್ದು, ಅವಳಿಗೆ ಸಂತಸವನ್ನೂ ಹಾಗೆ ಕಾಯಿಸಿಬಿಟ್ಟೆನಲ್ಲ ಎಂಬ ಪಶ್ಚಾತ್ತಾಪವನ್ನೂ ತಂದಿತು….
~ ಚೇತನಾ ತೀರ್ಥಹಳ್ಳಿ

ಕೋಸಲ ರಾಜ್ಯದಲ್ಲಿ ಅಳವಿ ಎಬುದೊಂದು ಪುಟ್ಟ ಗ್ರಾಮ. ಆ ಗ್ರಾಮದಲ್ಲೊಬ್ಬ ನೇಕಾರ. ಆ ನೇಕಾರನಿಗೊಬ್ಬಳು ಸುಂದರಿಯಾದ ಮಗಳಿದ್ದಳು. ಆಕೆ ಸೌಂದರ್ಯದಷ್ಟೇ ಸುಶೀಲೆಯೂ ಆಗಿದ್ದಳು. ಒಮ್ಮೆ ಬುದ್ಧ ಅಳವಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದ. ಊರಿನ ಜನರ ಕೋರಿಕೆಯಂತೆ ಭಿಕ್ಷೆ ಸ್ವೀಕರಿಸಿ ಒಂದು ದಿನ ವಾಸ್ತವ್ಯ ಹೂಡಿದ್ದ. ಈ ಸಂದರ್ಭದಲ್ಲಿ ಬೋಧನೆ ನೀಡಿ, `ಜೀವನ ಅನಿಶ್ಚಿತ, ಮರಣ ನಿಶ್ಚಿತ. ಖಂಡಿತವಾಗಿ ಒಂದಲ್ಲ ಒಂದು ದಿನ ನಾಣು ಮರಣವನ್ನು ಎದುರುಗೊಳ್ಳುವೆನು. ನೀವು ಕೂಡ ಇದೇ ಗತಿಯನ್ನು ಅನುಭವಿಸಲಿದ್ದೀರಿ. ಯಾರೂ ಇದರಿಂದ ಹೊರತಾಗಿ ಉಳಿಯುವುದಿಲ್ಲ. ಆದ್ದರಿಂದ ಸದಾ ಸ್ಮೃತಿವಂತರಾಗಿ ಎಚ್ಚರದಿಂದಿದ್ದು ಮರಣವನ್ನು ಧೈರ್ಯದಿಂದ ಎದುರಿಸಬೇಕು. ಆಗ ಮಾತ್ರ ಅಂಥವರು ಈ ಜಗತ್ತನ್ನು ಸಂತೃಪ್ತಿಯಿಂದ ತೊರೆದು ಸುಗತಿಯನ್ನು ಪಡೆಯುತ್ತಾರೆ’ ಎಂದು ಹೇಳಿದನು. ಬುದ್ಧಬೋಧೆ ಕೇಳಲು ಅಲ್ಲಿ ನೆರೆದಿದ್ದ ಬಹಳಷ್ಟು ಜನರು ಈ ಸೂತ್ರದ ಸಾರವನ್ನು ಗ್ರಹಿಸಲು ವಿಫಲರಾದರು. ಕೆಲವರು ಮಾತ್ರ ಚೆನ್ನಾಗಿ ಅರ್ಥೈಸಿಕೊಂಡರು. ಅವರಲ್ಲಿಯೂ ಹದಿನಾರು ವರ್ಷದ ನೇಕಾರನ ಮಗಳು ಈ ಸೂತ್ರವನ್ನು ಹೃದ್ಗತ ಮಾಡಿಕೊಂಡಳು.

ಬುದ್ಧ ಅಳವಿಯಿಂದ ಜೇತವನಕ್ಕೆ ಹಿಂದಿರುಗಿದ. ಕ್ರಮೇಣ ಅಳವಿಯ ಗ್ರಾಮಸ್ಥರು ಬುದ್ಧಬೋಧೆಯನ್ನು ಮರೆತೇಹೋದರು.

ಕೆಲ ಕಾಲದ ನಂತರ ಬುದ್ಧ ಜೇತವನದಿಂದ ಶ್ರಾವಸ್ತಿಗೆ ಹೊರಟಿದ್ದ. ಮಾರ್ಗದಲ್ಲಿ ಅಳವಿ ಗ್ರಾಮವನ್ನು ಬಳಸಿ ಸಾಗಬೇಕಿತ್ತು. ಅದನ್ನು ಸಮೀಪಿಸುತ್ತಲೇ ಬುದ್ಧ ಗ್ರಾಮದ ಕಡೆ ಮುಖ ಮಾಡಿ ಇಂದು ಈ ಹಳ್ಳಿಯಲ್ಲೇ ತಂಗಿದ್ದು ಹೊರಡೋಣ ಎಂದು ಸೂಚಿಸಿದ. ಭಂತೇ ಗಣ ಆಶ್ಚರ್ಯಚಕಿತಗೊಂಡಿತು. ನಾವಾದರೂ ಇಷ್ಟೊಂದು ಜನರಿದ್ದೇವೆ. ಅನಿರೀಕ್ಷಿತವಾಗಿ ಭೇಟಿಕೊಟ್ಟರೆ ಈ ಪುಟ್ಟ ಗ್ರಾಮಸ್ಥರು ನಮ್ಮೆಲ್ಲರನ್ನು ಹೇಗೆ ನೋಡಿಕೊಂಡಾರು ಎಂಬ ಯೋಚನೆ ಅವರಲ್ಲಿ ಸುಳಿದುಹೋಯಿತು.

ಬುದ್ಧ ನಸುನಗುತ್ತ, `ನಾನು ಇಂದು ಈ ಹಳ್ಳಿಗೆ ಹೋಗುವುದು ಅತ್ಯಗತ್ಯವಿದೆ. ಅಲ್ಲೊಬ್ಬ ನೇಕಾರರ ಹುಡುಗಿ ನನಗಾಗಿ ಕಾದುಕೊಂಡಿದ್ದಾಳೆ’ ಎಂದ. ಶಿಷ್ಯರು ಮರುಮಾತಿಲ್ಲದೆ ಬುದ್ಧನನ್ನು ಅನುಸರಿಸಿದರು. ಐದು ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಬಿಕ್ಖುಗಳನ್ನು ಕಂಡು ಗ್ರಾಮಸ್ಥರಿಗೆ ಆನಂದವೇ ಆಯಿತು. ಹಳ್ಳಿಯ ಶ್ರೀಮಂತರು ಸತ್ಕಾರದ ಏರ್ಪಾಡು ಮಾಡಿದರು.

ಊರ ಪ್ರಮುಖ ಕಟ್ಟೆಯಲ್ಲಿ ಪ್ರವಚನದ ವ್ಯವಸ್ಥೆಯಾಯಿತು. ಎಲ್ಲರೂ ಬಂದು ನೆರೆದರು. ಆದರೆ ನೇಕಾರನ ಮಗಳು ಬರಲಿಲ್ಲ. ಆಕೆಗೆ ಬುದ್ಧ ಬಂದಿರುವ ವಿಷಯ ತಿಳಿದಿರಲಿಲ್ಲ ಎಂದಲ್ಲ, ಆಕೆ ತುರ್ತಾಗಿ ತನ್ನ ತಂದೆಗೆ ನೂಲಿನ ಉಂಡೆಗಳನ್ನು ಸಿದ್ಧಪಡಿಸಿಕೊಡಬೇಕಾಗಿತ್ತು. ಅದರಂತೆ ಮನೆಯಲ್ಲಿ ಅವನ್ನು ಸಿದ್ಧಪಡಿಸಿ ತಂದೆ ಇದ್ದ ಸ್ಥಳಕ್ಕೆ ಅದನ್ನು ತೆಗೆದುಕೊಂಡು ಹೋಗುವಾಗ ಅದಾಗಲೇ ಊರ ಜನ ಬುದ್ಧನ ಮುಂದೆ ನೆರೆದಿರುವುದು ಕಂಡಿತು. ಅವಳಿಗೆ ತಾನು ಬುದ್ಧನ ಒಂದು ಮಾತನ್ನೂ ಕಳೆದುಕೊಳ್ಳಬಾರದು ಎಂಬ ಹಂಬಲ ಉಂಟಾಗಿ, ದೂರದಿಂದಲೇ `ದಯವಿಟ್ಟು ನಾನು ಮರಳಿ ಬರುವವರೆಗೆ ತಡಿಯಿರಿ. ಬೇಗನೆ ಬಂದುಬಿಡುತ್ತೇನೆ’ ಎಂದು ಕೂಗಿಹೇಳಿದಳು. ಬುದ್ಧ ಹಾಗೆಯೇ ಆಗಲೆಂದು ತಲೆಯಾಡಿಸಿದ.
ಇದನ್ನು ಕಂಡು ಗ್ರಾಮಸ್ಥರು ನೇಕಾರನ ಮಗಳ ಮೇಲೆ `ಅಧಿಕಪ್ರಸಂಗಿ’ ಎಂದು ಕೋಪಗೊಂಡರು. ಬಿಕ್ಖುಗಳಿಗೂ ಇದು ಆಶ್ಚರ್ಯ ತಂದಿತು.

ನೇಕಾರನ ಮಗಳು ಎಷ್ಟೇ ಲಗುಬಗೆಯಿಂದ ಧಾವಿಸಿ ಬಂದರೂ ತಡವಾಗಿಹೋಗಿತ್ತು. ಆದರೆ ಬುದ್ಧ ಅವಳಿಗಾಗಿ ಕಾದಿದ್ದು, ಅವಳಿಗೆ ಸಂತಸವನ್ನೂ ಹಾಗೆ ಕಾಯಿಸಿಬಿಟ್ಟೆನಲ್ಲ ಎಂಬ ಪಶ್ಚಾತ್ತಾಪವನ್ನೂ ತಂದಿತು.
ನಮಸ್ಕರಿಸಿದ ಆಕೆಯನ್ನು ಉದ್ದೇಶಿಸಿ ಬುದ್ಧ ಕೇಳಿದ:
`ನೀನು ಎಲ್ಲಿಂದ ಬಂದೆ?’
`ನನಗೆ ಗೊತ್ತಿಲ್ಲ’.
`ನೀನು ಎಲ್ಲಿಗೆ ಹೋಗುವೆ?’
`ನನಗೆ ಗೊತ್ತಿಲ್ಲ’
`ನಿನಗೆ ಗೊತ್ತಿಲ್ಲವೆ?’
`ಹೌದು, ನನಗೆ ಗೊತ್ತಿದೆ’
`ನಿನಗೆ ಗೊತ್ತಿದೆಯೆ?’
`ನನಗೆ ಗೊತ್ತಿಲ್ಲ ಭಗವಾನ್’
ಹೀಗೆ ಸಾಗಿತು ಪ್ರಶ್ನೋತ್ತರ.

ಹುಡುಗಿಯ ಉತ್ತರಗಳನ್ನು ಕೇಳಿ ಜನ ದಂಗಾದರು. ಈಕೆ ಬುದ್ಧನ ಸಂಗಡ ಅಗೌರವದಿಂದ ವರ್ತಿಸುತ್ತಿದ್ದಾಳೆ, ಬೇಕೆಂದೇ ಎದುರು ಮಾತುಗಳನ್ನು ಆಡುತ್ತಿದ್ದಾಳೆ ಎಂದು ಬಗೆದರು.
ಆದರೆ ಬುದ್ಧ ನೇಕಾರನ ಮಗಳ ಉತ್ತರಗಳಿಂದ ಸಂಪೂರ್ಣ ತೃಪ್ತನಾಗಿದ್ದನು. ಆದರೂ ಜನರ ಗೊಂದಲವನ್ನು ಬಗೆಹರಿಸುವ ಸಲುವಾಗಿ ಅವಳನ್ನು ಕುರಿತು ಉತ್ತರಗಳನ್ನು ವಿವರಿಸುವಂತೆ ಸೂಚಿಸಿದನು.

ಹುಡುಗಿ ಹೇಳತೊಡಗಿದಳು; `ಭಗವಾನ್, ನಾನು ಎಲ್ಲಿಂದ ಬಂದೆ ಎಂದು ನೀವು ಕೇಳಿದಾಗ ಅದು ಯಾವ ಜನ್ಮದಿಂದ ಬಂದೆ ಎಂದು ಕೇಳುತ್ತಿರುವುದಾಗಿ ಅರ್ಥೈಸಿಕೊಂಡೆನು. ಅದು ನನಗೆ ತಿಳಿದಿಲ್ಲವಾಗಿ ಗೊತ್ತಿಲ್ಲವೆಂದೇ ಹೇಳಿದೆನು. ಎಲ್ಲಿಗೆ ಹೋಗುವೆ ಎಂದು ನೀವು ಕೇಳಿದಾಗ ಮುಂದಿನ ಜನ್ಮ ಎಲ್ಲಿ ತಳೆಯುವೆ ಎಂದು ಅರ್ಥ ಮಾಡಿಕೊಂಡು. ಅದು ಕೂಡ ತಿಳಿದಿಲ್ಲವಾಗಿ ಗೊತ್ತಿಲ್ಲವೆಂದು ಹೇಳಿದೆನು. ಇನ್ನು, ನೀವು ನಿನಗೆ ಮರಣವಿದೆಯೆಂದು ಗೊತ್ತಿಲ್ಲವೆ ಎಂದು ಗೂಢವಾಗಿ ಕೇಳಿದಿರಿ, ಮತ್ತು ನಾನು ಗೊತ್ತಿದೆ ಎಂದೆನು. ಯಾವಾಗ ಮರಣಿಸುವೆನೆಂದು ಗೊತ್ತಿದೆಯೆ? ಎಂಬುದು ನಿಮ್ಮ ಕೊನೆಯ ಪ್ರಶ್ನೆಯಾಗಿದ್ದಿತು, ನಾನು ನನಗೆ ಗೊತ್ತಿಲ್ಲ ಎಂದು ಉತ್ತರಿಸಿದೆನು. ಇವೆಲ್ಲವೂ ನೀವು ಕಳೆದ ಬಾರಿ ಹೇಳಿದ ಸೂತ್ರದ ಜ್ಞಾನವೇ ಆಗಿದೆ ಭಗವಾನ್’ ಎಂದಳು.

ಜನರು ಸಮಾಧಾನಗೊಂಡು, ತಮ್ಮ ಹಳ್ಳಿಯ ಹುಡುಗಿಯ ಜ್ಞಾನವನ್ನು ಪ್ರಶಂಸಿಸಿದರು. ಬಿಕ್ಖುಗಳೂ ಸಂತಸಗೊಂಡರು. ಅನಂತರ ನೇಕಾರನ ಮಗಳು ಬುದ್ಧನ ಸೂತ್ರವನ್ನು ಆಲಿಸಿ ಸೋತಪತ್ತಿ ಫಲ ಪಡೆದಳು. ಪ್ರವಚನ ಮುಗಿಸಿಕೊಂಡು ತಂದೆಯ ಕೆಲಸಕ್ಕೆ ಜೊತೆಯಾಗಲು ಹುಡುಗಿ ಅಲ್ಲಿಂದ ತೆರಳಿದಳು. ಆ ವೇಳೆಗೆ ಆಕೆಯ ತಂದೆಯು ಕೆಲಸದಿಂದ ದಣಿದು ವಿರಮಿಸಿದ್ದನು. ಗಾಢ ನಿದ್ರೆ ಹತ್ತಿದ್ದ ಅವನು ಮಗಳ ಹೆಜ್ಜೆ ಸದ್ದಿಗೆ ಬೆಚ್ಚಿ ಏಳುವಾಗ ಲಾಳಿಯನ್ನು ಎಳೆದುಬಿಟ್ಟನು. ಅಲ್ಲಿಂದ ಶರವೇಗದಲ್ಲಿ ತೂಗಿಕೊಂಡು ಹೋದ ಲಾಳಿಯು ಹುಡುಗಿಯ ಎದೆಗೆ ನಾಟಿಬಿಟ್ಟಿತು. ಅವಳು ಆ ಕ್ಷಣದಲ್ಲೆ ಮರಣಿಸಿದಳು. ಆದರೆ ಸೋತಪತ್ತಿಯ ಫಲವಾಗಿ, ಬುದ್ಧ ಕಾರುಣ್ಯದ ಅದೃಷ್ಟದಿಂದ ತುಸಿತಾ ಲೋಕದಲ್ಲಿ ದೇವತೆಯಾಗಿ ಪುನರ್ಜನ್ಮ ತಾಳಿದಳು. ಮಗಳ ಮರಣದಿಂದ ವಿರಕ್ತನಾದ ತಂದೆಯು ಬಿಕ್ಖುವಾಗಿ, ಸಾಧನೆ ನಡೆಸಿ ಅರಹಂತನಾದನು.

 

Leave a Reply