ಉದ್ಗಾರದ ಪ್ರತಿಫಲ ಕೊಡುವೆಯಾ!? : Teatime Stories

ಶಿಷ್ಯನ ಉದ್ಗಾರ ಕೇಳಿದ ಗುರು, ಆಸೆಯಿಂದ ಕೇಳಿದ್ದು ಹೀಗೆ… | ಬಿ.ಎಂ.ಬಷೀರ್

ಅದು ಧ್ಯಾನದ ಹೊತ್ತು.
ಸಂತ ಮತ್ತು ಶಿಷ್ಯರು ಮುಂಜಾನೆ ಎಂದಿನಂತೆ ಧ್ಯಾನಕ್ಕೆ ಅಣಿಯಾದರು.

ಸಂತನ ಪ್ರೀತಿಯ ಶಿಷ್ಯ ಮಾತ್ರ ಇನ್ನೂ ಎದ್ದಿರಲಿಲ್ಲ.
ಶಿಷ್ಯನ ನಿದ್ದೆ ಅದೆಷ್ಟು ಆಳವಾಗಿತ್ತೆಂದರೆ ಸಂತನಿಗೆ ಆ ನಿದ್ದೆಯನ್ನು ಕಲಕುವ ಮನಸ್ಸಾಗಲಿಲ್ಲ. ಆದುದರಿಂದ ತನ್ನ ಉಳಿದ ಶಿಷ್ಯರೊಂದಿಗೆ ಧ್ಯಾನವನ್ನು ಮುಗಿಸಿದ.

ಧ್ಯಾನ ಮುಗಿದ ಹೊತ್ತಿಗೆ ಶಿಷ್ಯನಿಗೆ ಎಚ್ಚರಿಕೆಯಾಯಿತು.
ನೋಡಿದರೆ ಧ್ಯಾನದ ಹೊತ್ತು ಕಳೆದಿತ್ತು.
ಆಗಾಧ ನಿರಾಶೆ, ಪಶ್ಚಾತ್ತಾಪ, ದುಃಖದಿಂದ ಶಿಷ್ಯ ‘‘ಛೇ…!’’ ಎಂದು ಉದ್ಗರಿಸಿದ.

ಅದನ್ನು ಆಲಿಸಿದ ಸಂತ ಆಸೆಯಿಂದ ಶಿಷ್ಯನ ಬಳಿ ಬಂದು ಕೇಳಿದ ‘‘ಶಿಷ್ಯ, ನನ್ನ ಜೀವಮಾನದಲ್ಲಿ ನಾನು ಮಾಡಿದ ಧ್ಯಾನದ ಪ್ರತಿಫಲವನ್ನೆಲ್ಲ ನಿನಗೆ ಕೊಡುತ್ತೇನೆ. ಬದಲಿಗೆ ನೀನೀಗ ಉದ್ಗರಿಸಿದ ‘ಛೇ…!’ ಎನ್ನುವ ಉದ್ಗಾರದ ಪ್ರತಿಫಲವನ್ನು ನನಗೆ ಕೊಡುವೆಯ?’’

Leave a Reply