ಸಮಸ್ತಕ್ಕೂ ವಾರಸುದಾರರಾಗುವುದು ಹೇಗೆ? : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 5.6

ನಾನು ಹಿಂದೂ/ಕ್ರಿಶ್ಚಿಯನ್/ ಮುಸ್ಲಿಂ ಎಂದು ಘೋಷಿಸಿದೊಡನೆ ಇಡೀ ಸಮಸ್ತದೊಂದಿಗಿನ ಬಾಂಧವ್ಯದಿಂದ
ನೀವು ಹೊರತಾಗುವಿರಿ, ನಾನು ವಿಶೇಷ ಎಂದು ತಿಳಿದುಕೊಂಡ ಕ್ಷಣದಲ್ಲಿಯೇ ನೀವು ಬ್ರಹ್ಮಾಂಡದ ಹೆಣಿಗೆಯಿಂದ ಕಳಚಿಕೊಳ್ಳುವಿರಿ. ಜುವಾಂಗ್ ತ್ಸು ಹೇಳುವ ಹಾಗೆ , “ಸಾಮಾನ್ಯರಾಗಿರಿ, ಯಾವ ವಿಶೇಷವನ್ನೂ ಅಂಟಿಸಿಕೊಳ್ಳದಿರಿ”         ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

ಅಧ್ಯಾಯ 5 ಭಾಗ 6 : Unity of Emptiness

ತಮಗೆ ಮುಸ್ಲೀಂರು ಅಣ್ಣ ತಮ್ಮಂದಿರಂತೆ
ಎನ್ನುತ್ತಾರೆ ಹಿಂದೂಗಳು,
ಯಹೂದಿಗಳು ನಮ್ಮ ಬಂಧುಗಳು
ಎನ್ನುತ್ತಾರೆ ಕ್ರಿಶ್ಚಿಯನ್ ರು.
ಆದರೆ ನೀವು ಹಿಂದೂಗಳಾಗಿದ್ದರೆ, ಕ್ರಿಶ್ಚಿಯನ್ ಆಗಿದ್ದರೆ
ಇದು ಹೇಗೆ ಸಾಧ್ಯ?
ಇವೆಲ್ಲ ಖಾಲಿ ಶಬ್ದಗಳು
ನೀವು ನಿಮ್ಮ ಧರ್ಮದ ಗಡಿಯಲ್ಲಿದ್ದುಕೊಂಡು
ಹೀಗಾಗುವುದು ಸಾಧ್ಯವೇ ಇಲ್ಲ.
ನೀವು ಹಿಂದೂಗಳಾಗಿದ್ದರೆ, ಕ್ರಿಶ್ಚಿಯನ್ ಆಗಿದ್ದರೆ
ಅಥವಾ ಮುಸ್ಲೀಂರಾಗಿದ್ದರೆ
ಇನ್ನೊಬ್ಬರನ್ನು ಸಹಿಸಿಕೊಳ್ಳಬಹುದು ಅಷ್ಟೇ.

ನಾನು ಹಿಂದೂ/ಕ್ರಿಶ್ಚಿಯನ್/ ಮುಸ್ಲಿಂ
ಎಂದು ಘೋಷಿಸಿದೊಡನೆ
ಇಡೀ ಸಮಸ್ತದೊಂದಿಗಿನ ಬಾಂಧವ್ಯದಿಂದ
ನೀವು ಹೊರತಾಗುವಿರಿ,
ನಾನು ವಿಶೇಷ ಎಂದು ತಿಳಿದುಕೊಂಡ ಕ್ಷಣದಲ್ಲಿಯೇ
ನೀವು ಬ್ರಹ್ಮಾಂಡದ ಹೆಣಿಗೆಯಿಂದ ಕಳಚಿಕೊಳ್ಳುವಿರಿ.

ಜುವಾಂಗ್ ತ್ಸು ಹೇಳುವ ಹಾಗೆ
“ ಸಾಮಾನ್ಯರಾಗಿರಿ, ಯಾವ ವಿಶೇಷವನ್ನೂ ಅಂಟಿಸಿಕೊಳ್ಳದಿರಿ”

ಏನು ಹಾಗೆಂದರೆ?

ಯಾವ ರೀತಿಯಿಂದಲೂ ಸಮಸ್ತದಿಂದ ದೂರವಾಗದಿರಿ,
ನಿಮ್ಮ ಬಗೆಗಿನ ಯಾವ ಪರಿಕಲ್ಪನೆಯನ್ನೂ ನಂಬಬೇಡಿ.

**
ಈ ಎರಡರ (mind & object) ನಡುವಿನ
ಸಾಪೇಕ್ಷವನ್ನು ಅರ್ಥ ಮಾಡಿಕೊಳ್ಳಿ,
ಶೂನ್ಯದ ಅಖಂಡತೆಯೇ ಮೂಲ ಸತ್ಯ.
ಖಾಲೀತನದಲ್ಲಿ ಈ ಎರಡನ್ನೂ ಬೇರ್ಪಡಿಸಿ ನೋಡಲಿಕ್ಕಾಗದು.

***
ಹೌದು ಅವೆರಡನ್ನೂ ಪ್ರತ್ಯೇಕಿಸಿ ನೋಡಲಿಕ್ಕಾಗದು,
ಪ್ರತ್ಯೇಕವಾಗಿ ಅನುಭವಿಸಲಿಕ್ಕಾಗದು.
ಆದರೆ ಅವೆರಡು ಬೇರೆ ಬೇರೆ ಇರುವುದು ನಿಜ.
ಆದರೆ ಈ ಪ್ರತ್ಯೇಕತೆ ಸಂಪೂರ್ಣವಾಗಿ
ವಿಭಿನ್ನ ರೀತಿಯದು.

ಅಲೆಗಳು ಸಮುದ್ರ ಅಲ್ಲ,
ಆದರೆ ಸಮುದ್ರವಿಲ್ಲದೆ ಅಲೆಗಳಿಲ್ಲ.
ಸಮುದ್ರ, ಅಲೆಗಳ ಮೂಲಕ ತುಡಿಯುತ್ತಿದೆ,
ಹಾತೊರೆಯುತ್ತಿದೆ.
ರೂಪದಲ್ಲಿ ಅವೆರಡೂ ಬೇರೆ ಬೇರೆ
ಆದರೆ ಅಸ್ತಿತ್ವದಲ್ಲಿ ಅಲ್ಲ.

ಹಾಗೆಯೇ
ನೀವು ವಿಶಿಷ್ಟವಾಗಿರುವುದು ನಿಜ
ಆದರೆ ನೀವು ಸಮಸ್ತದಿಂದ ಪ್ರತ್ಯೇಕವಲ್ಲ.

ಮನುಷ್ಯ, ಅನಾತ್ಮವನ್ನು ಸಾಧಿಸಿದಾಗ
ಈ ಮೂಲಭೂತ ದ್ವಂದ್ವವನ್ನು ಅನುಭವಿಸುತ್ತಾನೆ.

….. ಮತ್ತು ಪ್ರತೀ ವಿಶಿಷ್ಟವೂ ತನ್ನೊಳಗೆ ಸಮಸ್ತವನ್ನು ಒಳಗೊಂಡಿದೆ ಎನ್ನುವ ನಿಜವನ್ನು ಮನಗಾಣುತ್ತಾನೆ.

ನಿಮಗನಿಸಬಹುದು,
ನನ್ನ ವಿಶಿಷ್ಟತೆಯನ್ನು ನಾನು ನಿರಾಕರಿಸಿದರೆ,
ನಾನು ಇಲ್ಲವಾದಂತಲ್ಲವೆ?
ಹಾಗೆ ನಿರಾಕರಿಸಿದರೆ
ನನಗಾಗುವ ಲಾಭವಾದರೂ ಏನು?

ನಿಮ್ಮನ್ನು ನೀವು ಕಳೆದುಕೊಂಡಾಗ
ಸಮಸ್ತಕ್ಕೂ ವಾರಸುದಾರರಾಗುವಿರಿ.

ನಿಮ್ಮನ್ನು ನೀವು ಕಳೆದುಕೊಳ್ಳುವುದು, ಹಾಗೆಂದರೇನು?
ನಿಮ್ಮ ದುಗುಡ, ನಿಮ್ಮ ಅಹಂ,
ನಿಮ್ಮ ಆತಂಕ, ನಿಮ್ಮ ಕಟ್ಟಳೆಗಳನ್ನು ಕಳೆದುಕೊಳ್ಳುವುದು.
ಏಕೆಂದರೆ ಇದ್ಯಾವುದು ನೀವಲ್ಲ,
ನೀವೇ ಎಂದು ನಿಮ್ಮ ಮೈಂಡ್
ನಿಮ್ಮನ್ನ ನಂಬಿಸುತ್ತ ಬಂದಿದೆ.
ಈ ಬುದ್ಧಿ-ಮನಸ್ಸು
ನಿಮ್ಮನ್ನು ಭಿಕ್ಷುರನ್ನಾಗಿ ಮಾಡುವ ಭಿಕ್ಷಾಪಾತ್ರೆ.

***
ಒಂದು ಸೂಫೀ ಕಥೆ ಹೀಗಿದೆ.

ಒಂದು ದಿನ,
ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಭಿಕ್ಷುಕನೊಬ್ಬ
ರಾಜನ ಅರಮನೆಯೆದುರು ನಿಂತು
ಜೋರು ದನಿಯಲ್ಲಿ ಭಿಕ್ಷೆ ಬೇಡತೊಡಗಿದ.

ಅರಮನೆಯ ಕಾವಲುಗಾರ ಭಿಕ್ಷೆ ನೀಡಲು ಮುಂದಾದಾಗ
ಭಿಕ್ಷುಕ, ಭಿಕ್ಷೆ ಸ್ವೀಕರಿಸಲು ನಿರಾಕರಿಸಿದ.
ಕಾವಲುಗಾರನೂ ಒಂದು ಬಗೆಯ ಭಿಕ್ಷುಕನೇ ಆದ್ದರಿಂದ
ಇನ್ನೊಬ್ಬ ಭಿಕ್ಷುಕನಿಂದ ಭಿಕ್ಷೆ ಸ್ವೀಕರಿಸಲಾರೆ ಎಂದ.

ಅರಮನೆಯ ಉದ್ಯಾನವನದಲ್ಲಿ
ವಿಹರಿಸುತ್ತಿದ್ದ ರಾಜ
ಭಿಕ್ಷುಕನ ಈ ಮಾತುಗಳನ್ನ ಕೇಳಿಸಿಕೊಂಡ,
ತಾನೇ ಭಿಕ್ಷುಕನ ಬಳಿ ಬಂದು
ಭಿಕ್ಷೆ ನೀಡಲು ಮುಂದಾದ.
ಆಗಲೇ ಭಿಕ್ಷುಕ, ರಾಜನ ಮುಂದೆ
ತನ್ನ ಇನ್ನೊಂದು ಕರಾರನ್ನು ಮಂಡಿಸಿದ.

“ ನನ್ನ ಈ ಭಿಕ್ಷಾ ಪೂರ್ತಿ ತುಂಬಿದರೆ ಮಾತ್ರ
ನಾನು ನಿಮ್ಮ ಭಿಕ್ಷೆಯನ್ನು ಒಪ್ಪಿಸಿಕೊಳ್ಳುತ್ತೇನೆ”

“ ಇಷ್ಟು ಚಿಕ್ಕ ಭಿಕ್ಷಾಪಾತ್ರೆಯನ್ನು ನಾನು ತುಂಬಿಸಲಾರೆನೆ “
ರಾಜ ಜೋರಾಗಿ ನಕ್ಕು ಬಿಟ್ಟ.

ರಾಜ, ಭಿಕ್ಷೆಯನ್ನು ಆ ಪಾತ್ರೆಯಲ್ಲಿ ಹಾಕಿದಾಗ
ಕ್ಷಣಾರ್ಧದಲ್ಲಿ ಭಿಕ್ಷೆ ಮಾಯವಾಯಿತು,
ರಾಜನಿಗೆ ಆಶ್ಚರ್ಯ, ಮತ್ತಷ್ಟು ತರಿಸಿದ
ಅದೂ ಕೂಡ ಹಾಗೆಯೇ.
ರಾಜ ತನ್ನ ಅರಮನೆಯಲ್ಲಿದ್ದ ಎಲ್ಲವನ್ನೂ ತಂದು ಸುರಿದ
ಯಾವ ಸದ್ದನ್ನು ಮಾಡದೆ ಅವೆಲ್ಲ
ಭಿಕ್ಷಾಪಾತ್ರೆಯಲ್ಲಿ ಮಾಯವಾದವು.

ರಾಜನಿಗೆ ಗಾಬರಿಯಾಯಿತು,
ತನ್ನ ಅಹಂಕಾರದ ಬಗ್ಗೆ ನಾಚಿಕೆಯಾಯಿತು.

“ ನನ್ನ ಎಲ್ಲವನ್ನೂ
ಈ ಭಿಕ್ಷಾಪಾತ್ರೆಗೆ ತಂದು ಹಾಕಿದೆ?
ಈಗ ನಾನೂ ಒಬ್ಬ ಭಿಕ್ಷುಕ,
ಆದ್ದರಿಂದ ನಿನಗೆ ಭಿಕ್ಷೆ ಹಾಕುವಂತಿಲ್ಲ.
ನನಗೆ ದಯವಿಟ್ಟು
ಈ ಭಿಕ್ಷಾಪಾತ್ರೆಯ ರಹಸ್ಯದ ಬಗ್ಗೆ ಹೇಳು “
ರಾಜ ಬೇಡಿಕೊಂಡ.

“ ಈ ಭಿಕ್ಷಾಪಾತ್ರೆಯಲ್ಲಿ
ಅಂಥ ವಿಶೇಷ ರಹಸ್ಯವೇನಿಲ್ಲ ರಾಜ,
ಈ ಭಿಕ್ಷಾಪಾತ್ರೆಯನ್ನ
ಮನುಷ್ಯನ ಮನಸ್ಸಿನಿಂದ (ಮೈಂಡ್) ತಯಾರಿಸಲಾಗಿದೆ ಅಷ್ಟೇ “

ಎನ್ನುತ್ತ ಭಿಕ್ಷುಕ ಅಲ್ಲಿಂದ ಜಾಗ ಖಾಲೀ ಮಾಡಿದ.

***

ಮನುಷ್ಯನ ಮನಸ್ಸಿನ ಕಥೆಯೇ ಇಷ್ಟು,
ನೀವು ಎಷ್ಟೇ ವಿಷಯಗಳನ್ನ ಅದರಲ್ಲಿ ತುಂಬಿದರೂ
ಅದು ಇನ್ನಷ್ಟು ಬೇಕು, ಇನ್ನಷ್ಟು ಬೇಕು, ಎನ್ನುತ್ತದೆ.
ಜಗತ್ತನ್ನು ಹಾಕಿ, ಬ್ರಹ್ಮಾಂಡವನ್ನು ಹಾಕಿ
ಆದರೆ, ಒಂದಿಷ್ಟೂ ಸದ್ದು ಮಾಡದೇ ಅವು
ಈ ಮನಸ್ಸೆಂಬ ಭಿಕ್ಷಾಪಾತ್ರೆಯಲ್ಲಿ ಮಾಯವಾಗುತ್ತವೆ.

ಇಂಥ ಮನಸ್ಸಿನಿಂದ (mind) ನೀವು ಕಳಚಿಕೊಂಡಾಗ,
ಒಂದು ಅಪಾರ ಖಾಲೀತನ ನಿಮ್ಮನ್ನು ಆವರಿಸಿಕೊಂಡಾಗ,
ಮೊದಲಬಾರಿಗೆ ನಿಮಗೆ ‘ತುಂಬಿಕೊಂಡ’ ಅನುಭವವಾಗುತ್ತದೆ.
ಏಕೆಂದರೆ ಈಗ ನೀವು ಸಮಸ್ತದ ಭಾಗವಾಗಿದ್ದೀರಾ,
ಸಮಸ್ತ ನಿಮ್ಮನ್ನು ತುಂಬಿಕೊಂಡಿದೆ.

**

ಎರಡು ವೈರುಧ್ಯಗಳ ನಡುವೆ
ನೀವು ಭೇಧ ಮಾಡದೇ ಹೋದಾಗ,
ಪೂರ್ವಾಗ್ರಹ ಮತ್ತು ಅಭಿಪ್ರಾಯಗಳನ್ನು
ಹೊಂದುವ/ ಹೇರುವ ಆಮಿಷದಿಂದ
ನೀವು ಪಾರಾಗುವಿರಿ.

***

ಒಳಿತು – ಕೆಡಕುಗಳ ನಡುವೆ,
ಸೌಂದರ್ಯ – ಕುರೂಪಗಳ ಮಧ್ಯೆ,
ಪಾಪ – ಪುಣ್ಯ ಎಂದು

ಹೀಗೆ ಯಾವ ವೈರುಧ್ಯದ ನಡುವೆಯೂ
ಭೇಧ ಮಾಡದೇ ಇರುವಾಗ,
ಎಲ್ಲವನ್ನೂ ಅವು ಇದ್ದ ಹಾಗೆಯೇ,
ಯಾವ ಪೂರ್ವಾಗ್ರಹವೂ ಇಲ್ಲದೆಯೇ
ಗಮನಿಸುವುದು
ನಿಮಗೆ ಸಾಧ್ಯವಾದಾಗ,
ನೀವು ಸಮಸ್ತದಲ್ಲಿ ಒಂದಾಗುತ್ತೀರಿ,
‘ಇದು ಯಾಕೆ ಹೀಗೆ’ ಎನ್ನುವ ರಹಸ್ಯ
ನಿಮ್ಮ ಎದುರು ಅನಾವರಣವಾಗುತ್ತದೆ.

ನೀವು ಯಾವಾಗ ರಹಸ್ಯವೊಂದರ ಭಾಗವಾಗುತ್ತೀರೋ,
ಆಗಲೇ ನಿಮ್ಮ ಎದುರು
ಬದುಕಿನ ಎಲ್ಲ ರಹಸ್ಯಗಳು ತೆರೆದುಕೊಳ್ಳುತ್ತವೆ.

ನೀವು, ಕೇವಲ ನೀವಾಗಿದ್ದರೆ
ಈ ಅನುಭವ ನಿಮ್ಮದಾಗುವುದಿಲ್ಲ.
ಆಗ ನೀವು ಜಾಸ್ತಿ ಎಂದರೆ
ಒಬ್ಬ ತತ್ವಜ್ಞಾನಿಯಾಗಬಹುದು.
ಬದುಕಿನ ಪ್ರಶ್ನೆಗಳಿಗೆ ಹಲವು ಉತ್ತರಗಳನ್ನು ಸೂಚಿಸಬಹುದು,
ಕೆಲವು ಸಿದ್ಧಾಂತಗಳನ್ನು ಸ್ಥಾಪಿಸಬಹುದು,
ಆದರೆ ಇದೆಲ್ಲವೂ
ಸತ್ಯದ ನಿಗೂಢತೆಗೆ ಹೊರತಾಗಿರುತ್ತದೆ.

ನೀವು ಸ್ವತಃ ರಹಸ್ಯವಾಗಿ,
ಆಗ ಸತ್ಯ ನಿಮಗೆ ಸ್ಪಷ್ಟವಾಗಿ ಕಾಣುತ್ತದೆ.
ಆದರೆ ಈ ತಿಳುವಳಿಕೆ ಕೂಡ ತುಂಬ ಸೂಕ್ಷ್ಮವಾದದ್ದು.
ಶಬ್ದಗಳಲ್ಲಿ ಹಿಡಿದಿಡಲಾಗದಂಥದ್ದು.
ಅನೇಕ ದ್ವಂದ್ವಗಳಿಂದ ಕೂಡಿರುವಂಥದು.
ಭಾಷೆಯ ಯಾವ ವ್ಯಾಕರಣಕ್ಕೂ ನಿಲುಕದಂಥದ್ದು.

ಚಿತ್ರ ಎಂದರೆ ಶಬ್ದ,
ಹಿನ್ನೆಲೆ ಎಂದರೆ ಮೌನ.
ಈ ತಿಳುವಳಿಕೆಯಲ್ಲಿ ಚಿತ್ರ ಮತ್ತು ಹಿನ್ನೆಲೆ ಒಂದು,
ಶಬ್ದ ಮತ್ತು ಮೌನ ಒಂದು.

**

ಮಾತನಾಡದಿರುವುದೇ ಮೌನ ಎಂದು ಜನರು ಸಾಮಾನ್ಯವಾಗಿ ತಿಳಿದುಕೊಂಡರೂ; ಮೌನದ ನೆಲೆಯು ಇನ್ನೂ ಎತ್ತರದಲ್ಲಿದೆ ಎಂಬುದು ಅದರ ಅಭ್ಯಾಸದಿಂದ ತಿಳಿಯುವುದು. ಮೊದಲು ಮಾತಿಗೂ ಮೌನಕ್ಕೂ ವೈರವಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮಾತಿನ ನೆಲೆಯಾಚೆಗೆ ಮೌನದ ಮನೆಯಿದೆ – ಹೌದು. ಆದರೂ ಮೌನದ ಗರ್ಭದ ಸಾಹಿತ್ಯವನ್ನು ಮಾತು ಹೊತ್ತು ಹೊರಗೆ ತರುವದು. ಮಾತಿನ ಸಂತೆಯಲ್ಲಿ ಮೌನದ ಸರಕಿನ ವ್ಯಾಪಾರ ನಡೆಯುವದು. ಹೀಗಿದ್ದೂ ಮಾತೇನು, ಮೌನವೇನು, ಎರಡೂ ಹೊದಿಕೆಗಳೇ. ಒಳಗಿನ ತಿರುಳು ಬೆರೆಯೇ ಇದೆ. ಆ ಒಳಗಿನ ತಿರುಳು ಜೀವಭಾವ. ಮೌನ ಭಿತ್ತಿ , ಮಾತು ಚಿತ್ರ. – ಬೇಂದ್ರೆ

*
ಇದನ್ನು ವಿವರಿಸೋದು ಹೇಗೆ?
ಆದರೂ ಹೇಳಲೇ ಬೇಕು.
ಕೇವಲ ಈ ತಿಳುವಳಿಕೆಯ ಬಗ್ಗೆ ಕೇಳುವುದರಿಂದಲೇ
ಹೃದಯ ಒಂದು ಹೊಸ ಪ್ರಯಾಣಕ್ಕೆ ಸಿದ್ಧವಾಗುತ್ತದೆ.

ಸೊಸಾನ್ ಗೆ ಗೊತ್ತು
ಇದನ್ನು ವಿವರಿಸೋದು ಎಷ್ಟು ಕಷ್ಟ ಅಂತ.
ಏಕೆಂದರೆ ವಿವರಿಸಬೇಕಾದರೆ
ಶಬ್ದಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಆಯ್ಕೆ ಎಂದೊಡನೆಯೇ ಅಲ್ಲಿ ಭೇಧ ಭಾವ ಶುರುವಾಗುತ್ತದೆ,
ಭೇಧ ಭಾವ ಶುರುವಾಗುತ್ತಿದ್ದಂತೆಯೇ
ಮನಸ್ಸಿನ ಪ್ರವೇಶವಾಗುತ್ತದೆ.

ಆದರೆ ಸೋಸಾನ್ ಅನನ್ಯ,
ಮೌನವನ್ನು ಶಬ್ದಗಳಲ್ಲಿ ಹಿಡಿದಿಡುವ
ಅವನ ರೀತಿ ಅನನ್ಯ.
ಸೊಸಾನ್ ನ ಈ ಕಲೆಯ ಬಗ್ಗೆ
ಬುದ್ಧನಿಗೂ ಅಸೂಯೆಯಾಗಬೇಕು.

ಸೊಸಾನ್ ನಿಜ ಅರ್ಥದಲ್ಲಿ ಮಾಸ್ಟರ್,
ಶಬ್ದ, ಮೌನ ಎರಡಕ್ಕೂ ಮಾಸ್ಟರ್.

ಅವನ ಮಾತುಗಳನ್ನ ಗಮನವಿಟ್ಟು ಕೇಳಿ,
ಕೇಳುವುದು ಮಾತ್ರವಲ್ಲ, ಅವುಗಳಲ್ಲಿ ಒಂದಾಗಿ.
ಬಾಯಿಪಾಠ ಮಾಡದಿರಿ, ಗಿಳಿಪಾಠ ಒಪ್ಪಿಸದಿರಿ,
ಅವನ ಶಬ್ದ, ಅವನ ಮೌನ
ನಿಮ್ಮ ರಕ್ತದಲ್ಲಿ ಒಂದಾಗಲಿ.

(ಮುಂದುವರಿಯುತ್ತದೆ….)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2020/04/12/osho-31/

Leave a Reply