‘ಶ್ರೀ ಕೃಷ್ಣ’… ವಿರೋಧಾಭಾಸಗಳ ಸುಂದರ ಸಂಯೋಜನೆ! : ಓಶೋ

ನನ್ನ ದೃಷ್ಟಿಯಲ್ಲಿ ಈ ಎಲ್ಲಾ ವಿರೋಧಾಭಾಸಗಳ ನಡುವೆ ಇರವುದು ಒಬ್ಬನೇ ಕೃಷ್ಣ. ಅದೇ ಅವನ ದೊಡ್ಡತನ ಹಾಗೂ ಅದೇ ಅವನ ವೈಭವ. ಹಾಗಾಗದೇ ಇದ್ದಲ್ಲಿ ಅವನು ಅರ್ಥಹೀನ, ಅಮುಖ್ಯನಾಗುತ್ತಾನೆ. ಅವನ ಮಹತ್ವ, ಅವನ ಹಿರಿಮೆ ಎಂದರೆ ಅವನು ಎಲ್ಲದರ ಒಟ್ಟು ಮೊತ್ತ, ಎಲ್ಲವೂ ಒಂದರಲ್ಲಿ ಒಂದು ಬೆಸೆದುಗೊಂಡಿದೆ, ಎಲ್ಲಾ ವಿರೋಧಾಭಾಸಗಳು ಒಂದರ ಕೈಯನ್ನು ಮತ್ತೊಂದು ಕೈ ಹಿಡಿದುಕೊಂಡಿದೆ, ಮತ್ತು ಅವನ ಎಲ್ಲಾ ವಿರೋಧಾಭಾಸಗಳ ನಡುವೆ ಒಂದು ದೊಡ್ಡ ಸಾಮರಸ್ಯವಿದೆ… ~ ಓಶೋ ರಜನೀಶ್ | ಕನ್ನಡಕ್ಕೆ: ಧ್ಯಾನ್ ಉನ್ಮುಖ್

ಕೃಷ್ಣನು ವಿರೋಧಾಭಾಸದ ಸಂಗಮವಾಗಿದ್ದು, ಎಲ್ಲಾ ವಿರೋಧಾಭಾಸಗಳ ಸುಂದರ ಸಂಯೋಜನೆಯಾಗಿದ್ದಾರೆ. ಕೃಷ್ಣ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದವನು  – ಮತ್ತು ಅದೇ ಅವನ ಭವ್ಯತೆ, ಅವನ ಮಹಿಮೆ. ಮತ್ತು ಅದೇ ಕೃಷ್ಣನ ಅನನ್ಯತೆ, ಅವನ ಪ್ರತ್ಯೇಕತೆ. ಓಶೋ ಹೇಳುತ್ತಾರೆ, “ಈ ವಿರೋಧಾಭಾಸಗಳು ನಿಜವಾಗಿಯೂ ವಿರೋಧಾತ್ಮಕವೆಂದು ನನಗೆ ಅನಿಸುವುದಿಲ್ಲ. ವಾಸ್ತವವಾಗಿ ಜೀವನದ ಎಲ್ಲಾ ಸತ್ಯಗಳು ವಿರೋಧಾಭಾಸಗಳ ಸಂಯೋಜನೆಯಾಗಿದೆ. ಇಡೀ ಜೀವನವು ವಿರೋಧಾಭಾಸಗಳನ್ನು ಆಧರಿಸಿದೆ, ಮತ್ತು ಆ ವಿರೋಧಾಭಾಸಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ; ಬದಲಿಗೆ, ಅವುಗಳಲ್ಲಿ ಸಂಪೂರ್ಣ ಸಹಯೋಗವಿದೆ, ಸಂಪೂರ್ಣ ಸಾಮರಸ್ಯವಿದೆ.

ಗೀತೆಯಲ್ಲಿನ ಕೃಷ್ಣ ಮತ್ತು ಭಾಗವತದ ಕೃಷ್ಣರ ನಡುವೆ ಬಹಳಷ್ಟು ವ್ಯತ್ಯಾಸವಿದೆ. ನಮ್ಮ ಬುದ್ಧಿಜೀವಿಗಳಿಗೆ  ಇಬ್ಬರು ಕೃಷ್ಣರನ್ನು ಸಮನ್ವಯಗೊಳಿಸುವುದು ಬಹಳ ಕಷ್ಟಕರ ವಿಷಯ. ಇಬ್ಬರೂ ತುಂಬಾ ಭಿನ್ನವಾಗಿ ಕಾಣುತ್ತಾರೆ, ಅಷ್ಟೇ ಅಲ್ಲದೇ ಪರಸ್ಪರ ವಿರುದ್ಧವಾಗಿಯೂ ಇದ್ದಾರೆ. ಗೀತೆಯಲ್ಲಿನ  ಕೃಷ್ಣನು ತುಂಬಾ ಗಂಭೀರ ಮತ್ತು ಅದ್ಭುತ ವ್ಯಕ್ತಿತ್ವ, ಭಾಗವಾತದ ಕೃಷ್ಣನು ಸಂಪೂರ್ಣವಾಗಿ  ಗಂಭೀರವಲ್ಲದ ಭಿನ್ನ ವ್ಯಕ್ತಿತ್ವ. ಇಬ್ಬರ ನಡುವೆ ಯಾವುದೇ ತಾಳಮೇಳವಿಲ್ಲ. ಆದ್ದರಿಂದ ನಾವು ಅವರನ್ನು ಪ್ರತ್ಯೇಕಿಸಿ ಮತ್ತು ಅವರನ್ನು ಇಬ್ಬರು ವಿಭಿನ್ನ ವ್ಯಕ್ತಿಗಳಾಗಿ ನೋಡುತ್ತೇವೆ.

ಒಂದೋ ನಾವು ಅವರನ್ನು ಪ್ರತ್ಯೇಕವಾಗಿ ನೋಡಬೇಕು ಅಥವಾ ನಾವು ಕೃಷ್ಣನನ್ನು ವಿಭಜಿತ ವ್ಯಕ್ತಿತ್ವವೆಂದು (split personality) ಪರಿಗಣಿಸಬೇಕು, ಕೃಷ್ಣನನ್ನು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ವ್ಯಕ್ತಿಯನ್ನಾಗಿ ನೋಡಬೇಕಾಗುತ್ತದೆ. ಸ್ಕಿಜೋಫ್ರೇನಿಯ ಒಂದು ಮಾನಸಿಕ ರೋಗವಾಗಿದ್ದು ಒಬ್ಬೇ ವ್ಯಕ್ತಿ ಎರಡು ವಿಭಿನ್ನ ವ್ಯಕ್ತಿತ್ವಗಳಲ್ಲಿ ವ್ಯವಹರಿಸುತ್ತಾನೆ. ಸ್ಕಿಜೋಫ್ರೇನಿಕ್‌ ವ್ಯಕ್ತಿಯು ಎಂಥ ಹುಚ್ಚನೆಂದರೆ ತನ್ನದೇ ಹೇಳಿಕೆಯ‌ ವಿರುದ್ಧವಾಗಿ ಮಾತನಾಡುತ್ತಾನೆ.ಅವನ ಉಲ್ಲಾಸ, ಖಿನ್ನತೆ,ಶಾಂತಿ, ಅಸ್ವಸ್ಥತೆ,ವಿವೇಕ, ಅವಿವೇಕ ಕಾಲಕಾಲಕ್ಕೆ ಬದಲಾಗುತ್ತ ಹೋಗುತ್ತದೆ.ಮುಂಜಾನೆಯ ವ್ಯಕ್ತಿಯೇ ಬೇರೆ ಮಧ್ಯಹ್ನಾದ ವ್ಯಕ್ತಿಯೇ ಬೇರೆ. ಹೀಗೆ ಕೃಷ್ಣನನ್ನೂ ಸಹ ಹಲವು ವ್ಯಕ್ತಿತ್ವಗಳ ಸ್ಕಿಜೋಫ್ರೇನಿಕ್‌ ರೋಗಿಯಾಗಿ ಪರಿಗಣಿಸಬೇಕಾಗುತ್ತದೆ. ಸಿಗ್ಮಂಡ್‌ ಫ್ರಾಯಿಡ್‌ ಆಗಲಿ, ಅವನ ಮನೋಚಿಕಿತ್ಸಕರಾಗಲಿ ನೋಡಿದ್ದಲ್ಲಿ ಕೃಷ್ಣನನ್ನು ಸ್ಕಿಜೋಫ್ರೇನಿಕ್‌ ಎಂದು ಘೋಷಿಸಿಬಿಡುತ್ತಾರೆ.

ಅದೇ ನೀವು ಇತಿಹಾಸಕಾರರನ್ನು ಕೇಳಿದರೆ ಗೀತೆಯಲ್ಲಿನ ಕೃಷ್ಣ ಬೇರೆ, ಭಾಗವತದಲ್ಲಿ ಬರುವ ಕೃಷ್ಣನೇ ಬೇರೆ ಎನ್ನುತ್ತಾರೆ. ಇಬ್ಬರು ಒಬ್ಬರೇ ಆಗಿರಲು ಸಾಧ್ಯವಿಲ್ಲ; ವಿಭಿನ್ನ ಕಾಲಘಟ್ಟದಲ್ಲಿ ಇದ್ದಂತಹ ಭಿನ್ನ ವ್ಯಕ್ತಿಗಳು ಎನ್ನುತ್ತಾರೆ. ಇದು ಇತಿಹಾಸಕಾರರ ಅಭಿಪ್ರಾಯ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಂತೆ ವರ್ತಿಸಲಾರ. ಹಾಗಾಗಿ ಗೀತೆಯಲ್ಲಿ ಬರುವ ಕೃಷ್ಣ ಬೇರೆ, ಭಾಗವತದಲ್ಲಿ ಇರುವ ಕೃಷ್ಣನೇ ಬೇರೆ, ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಇದ್ದಿರಬಹುದು.  ಲಭ್ಯವಿರುವ ವಿಸ್ತಾರವಾದ ಸಾಹಿತ್ಯವನ್ನು ಬಳಸಿ ಡಜನ್‌ ಗಟ್ಟಲೆ ವಿಭಿನ್ನ ವ್ಯಕ್ತಿತ್ವದ ಕೃಷ್ಣರನ್ನು ಸೃಷ್ಟಿಸಲೂಬಹುದು.

ಆದರೆ ನಾನು ನಿಮಗೆ ಹೇಳುತ್ತೇನೆ , ನಾನು ಫ್ರಾಯ್ಡ್ ಮತ್ತು ಫ್ರಾಯ್ಡಿಯನ್ನರ ಅಭಿಪ್ರಾಯವನ್ನು ಸ್ವೀಕರಿಸಲು ಹೋಗುವುದಿಲ್ಲ; ಕೃಷ್ಣನು ಸ್ಕಿಜೋಫ್ರೇನಿಕ್ ವ್ಯಕ್ತಿಯಾಗಿರಬಹುದೆಂದು ಎಂದು ನಾನು ಒಪ್ಪಲು ಸಿದ್ಧನಿಲ್ಲ. ಸ್ಕಿಜೋಫ್ರೇನಿಕ್ ವ್ಯಕ್ತಿತ್ವದಲ್ಲಿ ದ್ವಂದ್ವವಿದೆ, ಅವನ ಮನಸ್ಸು ಛಿದ್ರಗೊಂಡಿದೆ ಆದ್ದರಿಂದ ಅಂತಹ  ವ್ಯಕ್ತಿ ಕೃಷ್ಣ ಹೊಂದಿದ ಆನಂದವನ್ನು ಹೊಂದಲು ಸಾಧ್ಯವಿಲ್ಲ ಎಂಬ ಸರಳ ಕಾರಣಕ್ಕಾಗಿ ಹೇಳುತ್ತೇನೆ. ಮಲ್ಟಿ ಸೈಕಿಕ್ ಆಗಿರುವ ಮಾನಸಿಕ ಅಸ್ವಸ್ಥ ವ್ಯಕ್ತಿಯು ಆ ಶಾಂತಿಯನ್ನು, ಆ ಮೌನವನ್ನು, ಕೃಷ್ಣನು ಹೊಂದಿರಬಹುದಾದ ಅಗಾಧ ಪ್ರಶಾಂತತೆಯನ್ನು ಹೊಂದಲು ಸಾಧ್ಯವೇ ಇಲ್ಲ. ನಾನು ಇತಿಹಾಸಕಾರನನ್ನೂ ಸಹ ಒಪ್ಪದಿರಲು ಕಾರಣವಿದೆ, ಏಕೆಂದರೆ ಅವರ ಅಭಿಪ್ರಾಯವು ಫ್ರಾಯ್ಡಿಯನ್ ಅಭಿಪ್ರಾಯದಂತೆ ಅದೇ ಕಾರಣಗಳನ್ನು ಆಧರಿಸಿದೆ. ಒಬ್ಬ ವ್ಯಕ್ತಿಯು ವೈರುಧ್ಯದಿಂದ ಕೂಡಿದ ಪಾತ್ರಗಳನ್ನು ನಿರ್ವಹಿಸಬಹುಬಲ್ಲ ಎಂಬುದನ್ನು ಅವರು ಸಹ ನಂಬಲು ಸಿದ್ಧರಿಲ್ಲ. ಆದ್ದರಿಂದ ಒಂದೇ ಹೆಸರಿನ ಹಲವಾರು ವ್ಯಕ್ತಿಗಳು ವಿಭಿನ್ನ ಸಮಯಗಳಲ್ಲಿ ಅಥವಾ ಬಹುಶಃ ಅದೇ ಸಮಯದಲ್ಲಿ ಇರಬಹುದು ಎಂಬ  ತೀರ್ಮಾನಕ್ಕೆ ಬರುತ್ತಾರೆ. ಹೇಗೆ ಮನೋವಿಶ್ಲೇಷಕರು ಒಂದೇ ಮನಸ್ಸನ್ನು ಒಡೆದು, ಭಿನ್ನ ವ್ಯಕ್ತಿತ್ವವಾಗಿ ನೋಡುತ್ತಾರೋ ಹಾಗೇಯೇ ಇತಿಹಾಸಕಾರರು ಒಬ್ಬ ವ್ಯಕ್ತಿಯನ್ನು ಹಲವು ವ್ಯಕ್ತಿಗಳಾಗಿ ನೋಡುತ್ತಾರೆ.

ನನ್ನ ದೃಷ್ಟಿಯಲ್ಲಿ ಈ ಎಲ್ಲಾ ವಿರೋಧಾಭಾಸಗಳ ನಡುವೆ ಇರವುದು ಒಬ್ಬನೇ ಕೃಷ್ಣ. ಅದೇ ಅವನ ದೊಡ್ಡತನ ಹಾಗೂ ಅದೇ ಅವನ ವೈಭವ. ಹಾಗಾಗದೇ ಇದ್ದಲ್ಲಿ ಅವನು ಅರ್ಥಹೀನ, ಅಮುಖ್ಯನಾಗುತ್ತಾನೆ. ಅವನ ಮಹತ್ವ, ಅವನ ಹಿರಿಮೆ ಎಂದರೆ ಅವನು ಎಲ್ಲದರ ಒಟ್ಟು ಮೊತ್ತ, ಎಲ್ಲವೂ ಒಂದರಲ್ಲಿ ಒಂದು ಬೆಸೆದುಗೊಂಡಿದೆ, ಎಲ್ಲಾ ವಿರೋಧಾಭಾಸಗಳು ಒಂದರ ಕೈಯನ್ನು ಮತ್ತೊಂದು ಕೈ ಹಿಡಿದುಕೊಂಡಿದೆ, ಮತ್ತು ಅವನ ಎಲ್ಲಾ ವಿರೋಧಾಭಾಸಗಳ ನಡುವೆ ಒಂದು ದೊಡ್ಡ ಸಾಮರಸ್ಯವಿದೆ. ಅವನು ಕೊಳಲನ್ನು ನುಡಿಸಬಲ್ಲ ಮತ್ತು ಅವನು ನರ್ತಿಸಬಲ್ಲ ಅಷ್ಟೇ ಸರಾಗವಾಗಿ ತನ್ನ ಸುದರ್ಶನ ಚಕ್ರದಿಂದ ಶತ್ರುಗಳನ್ನು ಕೊಲ್ಲಲುಬಲ್ಲ,ತನ್ನದೇ ರಥದ ಚಕ್ರವನ್ನು ಆಯುಧದಂತೆ ಬಳಸಬಲ್ಲ. ಈ ಎರಡು ಪಾತ್ರಗಳ ನಡುವೆ ಯಾವುದೇ ವಿರೋಧಭಾಸವಿಲ್ಲ.ಅವನು ಗೋಪಿಕೆಯರೊಂದಿಗೆ ತುಂಟಾಟವಾಡಬಲ್ಲ, ಗೋಪಿಕೆಯರು ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಬಟ್ಟೆಯೊಂದಿಗೆ ಪರಾರಿ ಆಗಬಲ್ಲ, ಗೀತೆಯಲ್ಲಿ ಮಹತ್ತರ ಹೇಳಿಕೆಗಳನ್ನು ಉದ್ಘೋಷಿಸಲು ಬಲ್ಲ. ಅವನು ಚೋರನು ಹೌದು ಮತ್ತು ಯೋಗಿಯು ಹೌದು.ಕೃಷ್ಣ ಒಬ್ಬನೇ ಆದರು ಹತ್ತು ಹಲವು ಪಾತ್ರಗಳನ್ನು ನಿಭಾಯಿಸಬಲ್ಲ-ಇದೇ ಅವನ ವೈಶಿಷ್ಟತೆ, ಇದೇ ಅವನ ಮಹತ್ವ. ಇದೇ ಅವನ ಅನನ್ಯತೆ, ಅವನ ಪ್ರತ್ಯೆಕತೆ. ಇದನ್ನು ನೀವ ರಾಮ, ಬುದ್ಧ,ಮಹಾವೀರ ಅಥವಾ ಕ್ರಿಸ್ತನಲ್ಲಾಗಲಿ ನೋಡಲು ಸಾಧ್ಯವಿಲ್ಲ.

ಕೃಷ್ಣ ವಿರೋಧಾಬಾಸಗಳ ಸಮ್ಮಿಲನ, ವಿರೋಧಭಾಸಗಳ ಸುಂದರ ಸಂಶ್ಲೇಷಣೆ. ನಾ ಹೀಗೆ ಹೇಳಲು ಕಾರಣವಿದೆ ಆ ವಿರೋಧಾಭಾಸಗಳು ಒಂದಕ್ಕೊಂದು ಪುರಕವೇ ಹೊರತು ವಿರುದ್ಧವಲ್ಲ. ಇಂತಹ ವಿರೋಧಾಭಾಸಗಳ ಸಂಗಮವೇ ಜೀವನದ ಸತ್ಯವಾಗಿದೆ, ವಿರೋಧಾಭಾಸಗಳ ಸಂಶ್ಲೇಷಣೆಯಾಗಿದೆ. ಇಡೀ ಜೀವನ ವಿರೋಧಾಭಾಸಗಳನ್ನಾಧರಿಸಿದೆ, ಈ ವಿರೋಧಾಭಾಸಗಳ ನಡುವೆ ಯಾವುದೇ ಸಂಘರ್ಷವಿಲ್ಲ; ಬದಲಾಗಿ ಅವುಗಳ ನಡುವೆ ಸಂಪೂರ್ಣ ಸಾಮರಸ್ಯವಿದೆ.

ಇಂದಿನ ಮಗುವೇ ಬೆಳೆದು ವೃದ್ಧನಾಗುವುದು- ಅದೇ ವ್ಯಕ್ತಿ ಈ ಎರಡು ಹಂತಗಳ ನಡುವೆ ಯಾವುದೇ ವಿರೋಧಭಾಸವಿಲ್ಲ. ಮಗುವಾಗಿದ್ದಾಗ ಹೇಳಬಲ್ಲಿರ ನೀವು ಯಾವಗ ಯುವಕನಾಗುವುದೆಂದು? ನಿಮ್ಮಿಂದ ಸಾಧ್ಯವಿಲ್ಲ.ವೃಧ್ಯಾಪ ಹಾಗೂ ಯೌವ್ವನದ ನಡುವೆ ಗೆರೆ ಎಳೆಯುವುದು ಅಸಾಧ್ಯ. ಭಾಷಯೆ ದೃಷಿಕೋನದಲ್ಲಿ ವಿರುದ್ಧವಾಗಿರಬಹುದು. ನಿಜವಾಗಿಯೂ ವಿರೋಧಭಾಸವೇ  ? ನಿಮ್ಮ ಯವ್ವನ ಕೊನೆಗೊಂಡು ವೃಧ್ಯಾಪ ಆರಂಭಗೊಂಡ ದಿನಾಂಕ ಹೇಳಬಲ್ಲಿರಾ ? ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ . ಪ್ರತಿ ಯುವಕನು ವೃದ್ಧನಾಗಲೇ ಬೇಕು, ಅದರೆ ಅದಕ್ಕೆಂತಲೇ ನಿರ್ದಿಷ್ಟ ದಿನವಿಲ್ಲ.ಪ್ರತಿ ದಿನವು ಯುವಕ ವೃದ್ಧನಾಗುತ್ತಿದ್ದಾನೆ. ವೃದ್ಧ ಈಗಾಗಲೇ ಯವ್ವನ ಅನುಭವಿಸಿಯಾಗಿದೆ.ಬೇರೆ ವ್ಯತ್ಯಾಸವಿಲ್ಲ.

ನಾವು ಶಾಂತಿ ಮತ್ತು ಅಶಾಂತಿ ಎರಡು ವಿಭಿನ್ನ ವಿಷಯಗಳು ಎಂದು ನಾವು ಭಾವಿಸುತ್ತೇವೆ. ಆದರೆ ಅವು ನಿಜವಾಗಿಯೂ ಅವು ಬೇರೆಯೇ? ನಿಘಂಟಿನಲ್ಲಿ , ಶಾಂತಿ-ಅಶಾಂತಿ, ಸುಖ-ದುಖಃ, ಸಾವು-ಬದುಕು ವಿರುದ್ಧ ಪದಗಳಾಗಿರಬಹುದು, ಅದರೆ ವಾಸ್ತವದಲ್ಲಿ ಶಾಂತಿಯೇ ಅಶಾಂತಿಯಾಗಿ ಮಾರ್ಪಡುತ್ತದೆ, ಸುಖವೇ ದುಖಃವಾಗಿ ರೂಪಾಂತರಗೊಳ್ಳುತ್ತಿದೆ,ಬದುಕೇ ಸಾವಾಗಿ ಅಂತ್ಯಗೊಳ್ಳುತ್ತಿದೆ. ನಿಜ ಜೀವನದಲ್ಲಿ ಬೆಳಕೇ ಕತ್ತಲಾಗುತ್ತಿದೆ, ಹಗಲು ರಾತ್ರಿಯಾಗುತ್ತಿದೆ. ನಿಜ ಜೀವನದಲ್ಲಿ ಪ್ಲಸ್ ಮತ್ತು ಮೈನಸ್ ವಿರುದ್ಧವಲ್ಲ. ನಿಜ ಜೀವನದಲ್ಲಿ ಎಲ್ಲಾ ವಿರೋಧಾಭಾಸಗಳು ಪೂರಕಗಳಾಗಿವೆ, ಏಕಶಕ್ತಿಯ ಭಿನ್ನ ಅಭಿವ್ಯಕ್ತಿ.

ಜೀವನದ ಈ ಶಾಶ್ವತ ಸಾಮರಸ್ಯ, ಅದರ ಸರ್ವೋಚ್ಚತೆ,ಅದರ ಭವ್ಯವಾದ ಸಂಗೀತ, ಅದರ ಮಹತ್ವವನ್ನು ನಾವು ಅರಿತರೆ ಮಾತ್ರ ನಾವು ಕೃಷ್ಣನನ್ನು ಅರ್ಥಮಾಡಿಕೊಳ್ಳಬಹುದು. ಅದಕ್ಕಾಗಿಯೇ ನಾವು ಅವನನ್ನು ದೇವರ ಸಂಪೂರ್ಣ ಅವತಾರ ಎಂದು ಕರೆಯುತ್ತೇವೆ. ಅವನು ಜೀವನದ ಸಮಗ್ರತೆಯ ಸಂಕೇತವಾಗಿದ್ದಾನೆ; ಅವನು ಜೀವನದ ಸಮಗ್ರತೆಯನ್ನು ಪ್ರತಿನಿಧಿಸುತ್ತಾನೆ.

Leave a Reply