‘ಅನ್ ಅಲ್ ಹಕ್’ ಎಂದರೇನು? : ಸೂಫಿ ಶಬ್ ಸ್ತರಿಯ ವಿವರಣೆ

ಅದ್ವೈತ ದಾರ್ಶನಿಕ ಸಈದುದ್ದೀನ್ ಮಹಮ್ಮೂದ್ ಒಬ್ಬ ಶ್ರೇಷ್ಠ ಸೂಫಿ ಸಂತ. ಈತ ಹುಟ್ಟಿ ಬೆಳೆದಿದ್ದು ತಬರೀಜ್ ಬಳಿಯ ಶಬ್ ಸ್ತರ್ ಎಂಬಲ್ಲಿ. ಆದ್ದರಿಂದ ಈತ ‘ಶಬ್ ಸ್ತರಿ’ ಎಂದೇ ಖ್ಯಾತ. ಸೂಫಿ ಮನ್ಸೂರ್ ಅಲ್ ಹಲ್ಲಾಜನ ನಂತರ ‘ಅನ್ ಅಲ್ ಹಕ್’ (ನಾನೇ ಭಗವಂತ / ನಾನೇ ಸತ್ಯ) ಪರಿಕಲ್ಪನೆಯನ್ನು ಪ್ರಚುರಪಡಿಸುವಲ್ಲಿ ಶಬ್ ಸ್ತರಿ ಮುಖ್ಯ ಪಾತ್ರ ವಹಿಸಿದ್ದ  ~ ಚೇತನಾ ತೀರ್ಥಹಳ್ಳಿ

ಮ್ಮೆ ಶಬ್ ಸ್ತರಿಯನ್ನು ಒಬ್ಬನು “ಅನ್ ಅಲ್ ಹಕ್ – ಇದು ಯಾರ ಹೇಳಿಕೆ? ಆ ಹರಕು ಬಾಯಿಯ ಮನ್ಸೂರ ಹೇಳುತ್ತಿದ್ದನೆಂದು ನೀನೂ ಹೇಳುವುದಾ?” ಎಂದು ಕಾಲೆಳೆಯುತ್ತಾನೆ.

ಅದಕ್ಕೆ ಶಬ್ ಸ್ತರಿ ಕೊಟ್ಟ ಉತ್ತರ ಹೀಗಿದೆ:

ಅನ್ ಅಲ್ ಹಕ್ ಎನ್ನುವುದು ಎಲ್ಲ ರಹಸ್ಯಗಳನ್ನೂ ಬಿಚ್ಚಿಟ್ಟಂತೆ. ಭಗವಂತನಿಂದಲ್ಲದೆ ಈ ಮಾತು ಬೇರೆ ಯಾರಿಂದ ತಾನೆ ಬರಬಲ್ಲದು?

ಈ ಜಗತ್ತಿನ ಸಂಪೂರ್ಣ ಕಣ ಮನ್ಸೂರನಿಗೆ ಸಮಾನ. ಈ ಕಣಗಳು ಉನ್ಮತ್ತವಾಗಿದೆ ಎಂದಾದರೂ ತಿಳಿದುಕೋ. ಅಥವಾ ನಶೆಗೆ ಒಳಗಾಗಿವೆ ಎಂದರೂ ಸರಿಯೇ. ಜಗತ್ತು ಯಾವಾಗಲೂ ಇಂಥ ಮಾತುಗಳನ್ನೇ ಆಡುವುದು. ಈ ತಿಳಿವಳಿಕೆಯ ಮೇಲೆಯೇ ಜಗತ್ತು ನಿಂತಿರುವುದು. ಈ ತಿಳಿವಿನ ಮಾತುಗಳ ಆಳ ಹೊಕ್ಕು ಅಧ್ಯಯನ ಮಾಡು. ನಿನ್ನನ್ನು ನೀನು ಹತ್ತಿಯಂತೆ ಹಿಂಜಿಕೊಂಡಾಗ ಈ ಮಾತುಗಳು ನಿನ್ನಿಂದಲೂ ಹೊಮ್ಮುತ್ತವೆ.

ಹಮ್ಮುಬಿಮ್ಮುಗಳ ಹತ್ತಿಯನ್ನು ನಿನ್ನ ಕಿವಿಯಿಂದ ತೆಗೆದುಬಿಡು. ಅದ್ವೈತದ ಧ್ವನಿಯನ್ನು ಆಲಿಸು. ಪರಮಾತ್ಮನ ಕಡೆಯಿಂದಲಂತೂ ಯಾವಾಗಲೂ ಈ ದನಿ ಬರುತ್ತಲೇ ಇರುತ್ತದೆ. ನೀನು ಯಾಕೆ ಯಾವಾಗಲೂ ಪ್ರಳಯದ ನಿರೀಕ್ಷೆಯಲ್ಲಿಯೇ ಇರುತ್ತೀಯ? ನೀನು ಎಮನ್ ಕಣಿವೆಗೆ ಹೋಗು. ಅಲ್ಲಿ ಪ್ರತಿಯೊಂದು ಮರವೂ ನಿನಗೆ ಇದನ್ನೇ ಹೇಳುತ್ತದೆ. ‘ನಾನೇ ದೇವರು’ ಎಂದು ಕಣಿವೆಯ ಮರಗಳು ನಿನಗೆ ಹೇಳುತ್ತವೆ.

ಕೇಳಿಲ್ಲಿ… ತನ್ನನ್ನು ತಾನು ‘ತಾನು’ ಎಂದು ಕರೆದುಕೊಳ್ಳುವುದು ದೇವರಿಗೆ ಮಾತ್ರ ಒಪ್ಪುತ್ತದೆ. ಇದರೊಳಗೆ ‘ಅದು’ ಎಂಬ ಶಬ್ದ ಅಡಗಿದೆ. ಆದರೆ ಸಂದೇಹ ಮತ್ತು ಅಹಂಕಾರದ ಸುಳಿವೂ ಇಲ್ಲ.

ಭಗವಂತನ ಮುಂದೆ ದ್ವೈತದ ಚಿಹ್ನೆಯೂ ಕಾಣದು. ಅವನ ಸರಕಾರದಲ್ಲಿ ನಾನು, ನಾವು ಮತ್ತು ನೀನು ಮೊದಲಾದವು ಯಾವುವೂ ಇಲ್ಲ. ನಾನು – ನೀನು ಇವುಗಳಲ್ಲಿ ಯಾವ ಭೇದವೂ ಇಲ್ಲ. ಏಕತ್ವದಲ್ಲಿ ಯಾವ ಭೇದವೂ ಇರುವುದಿಲ್ಲ. ಯಾರ ಹೃದಯದಲ್ಲಿ ಈ ವಿಷಯಗಳು ಕಣ್ಮರೆಯಾಗಿವೆಯೋ ಆತನ ಅಂತರಾತ್ಮನಿಂದ ‘ಅನ್ ಅಲ್ ಹಕ್’ ಎಂಬ ವಾಣಿ ಹೊಮ್ಮುತ್ತದೆ,

ಅವನು ಯಾವಾಗಲೂ ಇರುವ ವಸ್ತುವಿನಿಂದ ಸಂಬಂಧ ಸ್ಥಾಪಿಸಿಕೊಳ್ಳುತ್ತಾನೆ. ಅವನ ಪಾಲಿಗೆ ತನ್ನವರು – ಇತರರು ಎನ್ನದೆ ಎಲ್ಲರೂ ಒಂದೇ ಆಗುತ್ತಾರೆ.

ಅವನಲ್ಲಿ ಇಂಥಾ ಒಳಗೊಳಿಸಿಕೊಳ್ಳುವ ಗುಣ ಕಾಣೆಯಾಗುವುದು ಹೃದಯದಲ್ಲಿ ಅಹಂಕಾರ ನೆಲೆಸಿದ್ದಾಗ ಮಾತ್ರ. ಈ ಅಹಂಕಾರವನ್ನು ತೊರೆದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ.  

 

 

1 Comment

Leave a Reply