ದೂರ್ವಾಸರು ದೇವೇಂದ್ರನಿಗೆ ಶಾಪ ಕೊಟ್ಟಿದ್ದು, ದೇವಾಸುರರು ಒಗ್ಗೂಡಿ ಸಮುದ್ರ ಮಂಥನ ನಡೆಸಿದ್ದು, ಮೊದಲು ಹಾಲಾಹಲ ಉಕ್ಕಿದ್ದು, ಆಮೇಲೆ ಅಮೃತ ಸಿಕ್ಕಿದ್ದು…. ಈ ಎಲ್ಲದರ ನಡುವೆ ಲಕ್ಷ್ಮಿ ಕಳೆದುಹೋಗಿದ್ದು ಮತ್ತು ಪುನಃ ದೊರಕಿದ್ದು! ಅಕ್ಷಯತೃತೀಯೆಗೆ ಸಂಬಂಧಿಸಿದ ಈ ಕಥೆ ಓದಿ… | ಇಂದು (ಏಪ್ರಿಲ್ 26) ಅಕ್ಷಯ ತೃತೀಯಾ
ಸಮುದ್ರ ಮಂಥನದ ಕಥೆ ಬಹಳ ಸ್ವಾರಸ್ಯಕರವಾದುದು. ಸಾಂಕೇತಿಕವಾಗಿ ಇದು ಒಳಿತು – ಕೆಡುಕುಗಳ ಪರಿಣಾಮವನ್ನೂ ಕರ್ಮಫಲಗಳನ್ನೂ ಹೇಳುತ್ತದೆ. ಹಾಗೆಯೇ, ಸೃಷ್ಟಿಯ ಸಮತೋಲನ ಕಾಯಲು ದುಷ್ಟ – ಶಿಷ್ಟ ಶಕ್ತಿಗಳೆರಡರ ಸಮತೋಲನ ಸಾಧ್ಯವಾಗಬೇಕು ಎಂದೂ ಸಾರುತ್ತದೆ. ಸಮುದ್ರ ಮಂಥನ ಅಥವಾ ಸಾಗರ ಮಥನದ ಹಿನ್ನೆಲೆ ಹೀಗಿದೆ:
ಮಹಾ ಕೋಪಿಷ್ಠನೆಂದೇ ಹೆಸರಾಗಿದ್ದ ದೂರ್ವಾಸ ಮುನಿ ವರ್ಷಗಟ್ಟಲೆ ಯಾಗ ನಡೆಸಿ ವಿಶೇಷವಾದ ಶಕ್ತಿಯೊಂದನ್ನು ಪಡೆಯುತ್ತಾನೆ. ಆ ಶಕ್ತಿಯನ್ನು ದೇವರಾಜ ಇಂದ್ರನಿಗೆ ನೀಡಿ ದೇವತೆಗ: ಬಲವರ್ಧನೆ ಮಾಡಲು ಬಯಸುತ್ತಾನೆ.
ಅದರಂತೆ ದೇವೇಂದ್ರನಿಗೆ ಕರೆ ಹೋಗುತ್ತದೆ. ದೂರ್ವಾಸರ ಬಳಿ ದೇವರಾಜ ತೆರಳುತ್ತಿರುವಾಗ ಅಸುರರು ಕಪಟದಿಂದ ಅವನ ತಲೆ ಕೆಡಿಸುತ್ತಾರೆ. ನಡೆದುಕೊಂಡು ಹೋಗಬೇಡ, ಐರಾವತದ ಮೇಲೆ ಕುಳಿತು ಛತ್ರಿ ಚಾಮರಗಳೊಂದಿಗೆ ಹೋಗು ಅನ್ನುತ್ತಾರೆ. ಅದರಂತೆ ದೇವರಾಜ ದೂರ್ವಾಸರ ಬಳಿ ಹೋದಾಗ, ವಿನಮ್ರತೆಯ ಬದಲು ದರ್ಪ ತೋರುತ್ತಿರುವ ಇಂದ್ರನ ಮೇಲೆ ಅವರು ಕೋಪಗೊಳ್ಳುತ್ತಾರೆ. ನಿನ್ನ ಮದಕ್ಕೆ ಕಾರಣವಾದ ಸಂಪತ್ತು ನಷ್ಟವಾಗಿ ಹೋಗಲಿ. ನೀನು ಮಾತ್ರವಲ್ಲ, ಇಡಿಯ ದೇವಗಣವೇ ದಾರಿದ್ರ್ಯಕ್ಕೀಡಾಗಲಿ ಎಂದು ಶಪಿಸುತ್ತಾನೆ.
ದೂರ್ವಾಸರ ಶಾಪ ಫಲಿಸಿ ಶ್ರೀ ಅಂದರೆ ಲಕ್ಷ್ಮಿ ದೇವತೆಗಳನ್ನು, ಸ್ವತಃ ಮಹಾವಿಷ್ಣುವನ್ನೂ ತೊರೆದುಹೋಗುತ್ತಾಳೆ. ಲಕ್ಷ್ಮಿ ಇಲ್ಲದೆ ಸಂಪತ್ತೂ ಇಲ್ಲ. ಲಕ್ಷ್ಮಿಯನ್ನು ಮರಳಿ ಕರೆಸುವುದು ಹೇಗೆ? ಸಾಗರಮಥನದಿಂದ! ಈ ಮಥನದ ಪರಿಣಾಮ ಅಮೃತವೂ ದೊರೆಯುತ್ತದೆ. ದೇವತೆಗಳು ಮತ್ತಷ್ಟು ಬಲಶಾಲಿಗಳಾಗುತ್ತಾರೆ!!
ಹೀಗೆ ಆಲೋಚನೆ ಸಾಗುತ್ತದೆ.
ಆದರೆ ಸಮುದ್ರ ಮಂಥನಕ್ಕೆ ಈಗ ಬಲಹೀನರಾಗಿರುವ ದೇವತೆಗಳ ಸಾಮರ್ಥ್ಯ ಸಾಲದು. ಆದ್ದರಿಂದ ಅವರು ಅಸುರ ರಾಜ ಬಲಿ ಚಕ್ರವರ್ತಿಯ ಬಳಿ ಸಹಾಯ ಕೇಳುತ್ತಾರೆ. ಶುಕ್ರಾಚಾರ್ಯರು ಅಮೃತದಲ್ಲಿ ಸಮಪಾಲು ಸಿಗಬೇಕು ಎಂದು ತಾಕೀತು ಮಾಡಿ ಸಹಾಯ ನೀಡಲು ಒಪ್ಪುತ್ತಾರೆ.
ಹೀಗೆ ಶುರುವಾದ ಸಾಗರ ಮಥನದಿಂದ ಹೊಮ್ಮಿದ ಉತ್ಪನ್ನಗಳು ಮತ್ತು ಯಾವುದು ಯಾರಿಗೆ ದೊರಕಿತು ನೋಡೋಣ:
ಚಂದ್ರ : ಮಹಾದೇವ ಶಿವನ ಜಟೆಯನ್ನಲಂಕರಿಸಿದ
ಉಚ್ಛೈಶ್ರವಸ್ – ಏಳು ಮುಖಗಳ ದಿವ್ಯಾಶ್ವ : ಅಸುರರ ಪಾಲಾಯಿತು
ಐರಾವತ : ದೇವರಾಜ ಇಂದ್ರನ ವಾಹನವಾಯಿತು
ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಶಾರಂಗ ಧನು : ಅಸುರರ ಪಾಲಾಯಿತು
ಕಾಮಧೇನು : ಬ್ರಹ್ಮರ್ಷಿ ವಸಿಷ್ಠರಿಗೆ ಕೊಡಲ್ಪಡುತ್ತದೆ
ಲಕ್ಷ್ಮೀ ದೇವಿ : ಮಹಾವಿಷ್ಣುವಿನ ಪತ್ನಿಯಾಗುತ್ತಾಳೆ
ಕೌಸ್ತುಭ ಮಣಿ : ನಾರಾಯಣನ ಕೊರಳನ್ನು ಅಲಂಕರಿಸುತ್ತದೆ
ಅಪ್ಸರೆಯರು ಮತ್ತು ಕಲ್ಪವೃಕ್ಷ : ದೇವಲೋಕ ಸೇರುತ್ತವೆ
ಹಾಲಾಹಲ : ಮಹಾದೇವ ಶಿವ ಕಾಲಕೂಟ ವಿಷವಾದ ಹಾಲಾಹಲವನ್ನು ನುಂಗಿ ಗಂಟಲಲ್ಲಿ ಇರಿಸಿಕೊಳ್ಳುತ್ತಾನೆ
ಧನ್ವಂತರಿ : ಅಮೃತ ಕುಂಬ ಹಿಡಿದು ಪ್ರಕಟಗೊಳ್ಳುವ ಧನ್ವಂತರಿ ದೇವತೆಗಳ ವೈದ್ಯನಾಗುತ್ತಾನೆ.
ಅಮೃತ : ಧನ್ವಂತರಿಯಿಂದ ಅಸುರರು ಅಮೃತ ಕುಂಭವನ್ನು ಅಪಹರಿಸುತ್ತಾರೆ. ಗರುಡ ಅದನ್ನು ಮರಳಿ ತರುತ್ತಾನೆ. ವಿಷ್ಣು ಮೋಹಿನಿ ರೂಪ ಧರಿಸಿ ಅಸುರರನ್ನು ಭ್ರಮೆಗೆ ಕೆಡವಿ ದೇವತೆಗಳಿಗೆ ಮಾತ್ರ ಅಮೃತವನ್ನು ವಿತರಿಸುತ್ತಾನೆ. ದೇವತೆಗಳು ಅಮರರಾಗುತ್ತಾರೆ.
ಮಹಾದೇವ ಅಸುರರಿಗೆ ಮೃತಸಂಜೀವಿನಿ ಬೋಧಿಸಿ ದೇವಾಸುರರಿಬ್ಬರಿಗೂ ನ್ಯಾಯ ದೊರೆಯುವಂತೆ ಮಾಡುತ್ತಾನೆ.
ಅಮೃತ ಕುಂಭವನ್ನು ಮೊದಲು ಅಸುರರು ಅಪಹರಿಸಿದಾಗ, ವಿಷ್ಣುವಾಹನ ಗರುಡ ಅದನ್ನು ಅವರಿಂದ ಕಸಿದು ಮರಳಿ ತರುತ್ತಾನಷ್ಟೆ? ಹಾಗೆ ತರುವಾಗ ಅದರ ಕೆಲವು ಹನಿಗಳು ಭೂಲೋಕದ ಮೇಲೆ ಬೀಳುತ್ತವೆ. ಹೀಗೆ ಕುಂಭದಿಂದ ಅಮೃತದ ಹನಿಗಳು ಬಿದ್ದ ಸ್ಥಳಗಳು ‘ಕುಂಭ ಭೂಮಿ’ಯೆಂದು ಕರೆಯಲ್ಪಡುತ್ತವೆ. ಪ್ರಯಾಗ, ಉಜ್ಜೈನಿ, ಹರಿದ್ವಾರ ಮತ್ತು ನಾಸಿಕ – ಇವೇ ಆ ನಾಲ್ಕು ಕುಂಭ ಭೂಮಿಗಳು. ಮಾನವರ ಚಿತ್ತಶುದ್ಧಿಗೊಳಿಸುವ ಈ ಪವಿತ್ರ ತಾಣಗಳಲ್ಲಿ 6 ವರ್ಷಗಳಿಗೆ ಅರ್ಧ ಕುಂಭ ಮೇಳ ಹಾಗೂ 12 ವರ್ಷಗಳಿಗೊಮ್ಮೆ ಪೂರ್ಣ ಕುಂಭ ಮೇಳ ನಡೆಯುತ್ತದೆ. ಅಮೃತ ಕುಂಭದಿಂದ ಭೂಮಿಯ ಮೇಲೆ ಹನಿಗಳು ಬಿದ್ದ ದಿನವೇ ‘ಅಕ್ಷಯ ತೃತೀಯಾ’.
ಈ ದಿನ ಲಕ್ಷ್ಮಿಯು ದೇವತೆಗಳಿಗೆ ಮರಳಿ ದೊರೆತಳು. ದೂರ್ವಾಸರ ಶಾಪದಿಂದ ಸಂಪತ್ತು ಮರಳಿ ದೊರೆಯಿತು. ಆದ್ದರಿಂದ ಈ ದಿನ ‘ಲಕ್ಷ್ಮಿಯನ್ನು ಮನೆಗೆ ಕರೆಸುವ’ – ಅಂದರೆ ಸಂಪತ್ತು, ವಿಶೇಷವಾಗಿ ಚಿನ್ನ ಖರೀದಿ ಮಾಡುವ ಪರಿಪಾಠ ಬೆಳೆದುಬಂದಿದೆ.
ದೂರ್ವಾಸರು ಲೋಕಕಲ್ಯಾಣಾರ್ಥ ಯಾಗ ನಡೆಸುವಾಗ ಪಾರ್ವತಿ, “ದೇವತೆಗಳಿಗೂ, ಅಸುರರಿಗೂ, ಮಾನವರಿಗೂ ಇದರ ಫಲ ದೊರೆಯುವಂತಾಗಲಿ” ಎಂದು ಕಾಮನೆ ಮಾಡಿಕೊಂಡಿರುತ್ತಾಳೆ. ಜಗಜ್ಜನನಿಯೂ ಮಹಾಕಾಳಿಯೂ ಆದ ಪಾರ್ವತಿ ನಿಷ್ಪಕ್ಷಪಾತವಾಗಿ ಮಾಡಿಕೊಂಡ ಈ ಕಾಮನೆ ನೆರವೇರಲೆಂದೇ ನಿಯತಿ ಈ ಇಡಿಯ ನಾಟಕ ರಚಿಸಿ, ಮೂವರಿಗೂ ಯಾಗ ಫಲ ದೊರೆಯುವಂತೆ ಮಾಡುತ್ತದೆ. ಅದರಂತೆ ದೇವತೆಗಳಿಗೆ ಅಮೃತ ದೊರೆತರೆ, ಅಸುರರಿಗೆ ಮೃತಸಂಜೀವಿನಿ ವಿದ್ಯೆ ದೊರೆಯುತ್ತದೆ. ಮಾನವರಿಗೆ ಕುಂಭ ಭೂಮಿಯ ರೂಪದಲ್ಲಿ ಪಾಪಶುದ್ಧಿಯ ಪುಣ್ಯನದಿಗಳು ಪ್ರಾಪ್ತಿಯಾಗುತ್ತವೆ!
ಮಾನ್ಯರೆ,
ಪ್ರತಿ 6 ವರ್ಷಗಳಿಗೆ ಒಮ್ಮೇನೇ ಅರ್ಧ ಕುಂಭ ಮೇಳ ಅನ್ನೋದೆ ಯಾಕೆ ನಡೆಯುತ್ತೆ? ಹೇಳಿ
ಮಾನ್ಯರೆ,
ಪ್ರತಿ 6 ವರ್ಷಗಳಿಗೆ ಇಮ್ಮೇನೇ ಅರ್ಧ ಕುಂಭ ಮೇಳ ಅನ್ನೋದೆ ಯಾಕೆ ನಡೆಯುತ್ತೆ? ಹೇಳಿ
ಲಕ್ಷ್ಮಿ ಎಂದೆಂದಿಗೂ ಮಹಾವಿಷ್ಣುವಿನ ಬಳಿಯೇ ಇರುತ್ತಾಳೆ. ಈ ಕಥೆಯಲ್ಲಿ ಬಂದಿರುವುದು ತಪ್ಪು.
ತಾವು ಸರಿ ಹೇಳಿದ್ದೀರಿ. ಭ್ರುಗು ಮಹರ್ಷಿ ವಿಷ್ಣು ಎದೆಯನ್ನ ಕಾಲಿನಿಂದ ಒದ್ದಾಗಾ, ವಿಷ್ಣುವು ಭ್ರುಗುವಿಗೆ ಶಾಪ ಕೊಡದೆ ಒದ್ದ ಕಾಲಿಗೆ ನೋವಾಯಿತೇನೋ ಎಂದು ಅದನ್ನು ಸಾವರಿಸುತ್ತನೆ, ಆಗ ಲಕ್ಷ್ಮಿಯು ತಾನು ವಾಸಿಸು ವ ಸ್ತಳವನ್ನು ಒದ್ದರೂ ಕ್ಕೋಪಗೊಳ್ಳದ ವಿಷ್ಣುವಿನ ಮೇಲೆ ಕೋಪಗೊಂಡು, ವಿಷ್ಣುವನ್ನು ತೊರೆದು, ಭೂಮಿಗೆ ತೆರಳುತ್ತಾಳೆ