ಚಮಚೆ ಗಾತ್ರದ ಉಸಿರಿಗೂ ಕಷ್ಟಪಟ್ಟರು : ಆರೋಗ್ಯವಂತ ವ್ಯಕ್ತಿಯೊಬ್ಬ ಕೊನೆಗೂ ಕೊರೊನಾ ಗೆದ್ದ ವಿಜಯಗಾಥೆ

ಕೊರೊನಾ ಕಾಲದಲ್ಲಿ ಜೀವ ಎಷ್ಟು ದುಬಾರಿ ಎಂಬುದು ಅರ್ಥ ಆಗಬೇಕೆಂಬ ಕಾರಣಕ್ಕೆ ನ್ಯೂಯಾರ್ಕ್ ಟೈಮ್ಸ್ ನ ಈ ವರದಿಯನ್ನು ರಾಜಾರಾಮ್ ತಲ್ಲೂರು ಅನುವಾದಿಸಿದ್ದಾರೆ. ದಯಮಾಡಿ ಓದಿ.
“ಅವರು ಬದುಕ್ತಾರಾ?” ಫೋನಿಗೆ ಕಿವಿಯಾನಿಸಿಕೊಂಡು ತನ್ನ ಮನೆ ಹಿತ್ತಲಿನಲ್ಲಿ ತಿರುಗಾಡುತ್ತಿದ್ದ ಕಿಮ್ ಬೆಲ್ಲೊ ಪ್ರಶ್ನೆ.
 
ಜಗಲಿಯಲ್ಲಿ ಮೂರು ಮಕ್ಕಳು ಆಡುತ್ತಿರುವುದರಿಂದ ಅವರ ಕಿವಿಗೆ ಈ ಕರುಳು ಹಿಂಡುವ ಸುದ್ದಿ ಕೇಳಿಸುವುದು ಬೇಡವೆಂದು ಆಕೆ ಹಿತ್ತಲಿಗೆ ಬಂದು ವೈದ್ಯರೊಂದಿಗೆ ಮಾತನಾಡುತ್ತಿದ್ದರು. ಕಳೆದೆರಡು ವಾರದಿಂದ ಮಸಾಚುಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ವಿರುದ್ಧ ಚಿಕಿತ್ಸೆ ಪಡೆಯುತ್ತಿರುವ ಆಕೆಯ ಪತಿ ಜಿಮ್ ಅವರನ್ನು ವೆಂಟಿಲೇಟರ್ ನಲ್ಲೂ ಗುಣವಾಗದಿರುವುದರಿಂದ ಈಗ ಕೃತಕ ರಕ್ತ ಪರಿಚಲನೆ ಯಂತ್ರದ ಸಹಾಯದಲ್ಲಿ (ಹಾರ್ಟ್ ಅಂಡ್ ಲಂಗ್ ಮಷೀನ್) ಇರಿಸಲಾಗಿತ್ತು.
ವೈದ್ಯ ಡಾ| ಎಮ್ಮಿ ರುಬಿನ್ ಮೆತ್ತಗೆ “ಆಗಬಾರದೆಂದೇನಿಲ್ಲ ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯ” ಎಂದು ಕಿಮ್ ಗೆ ಉತ್ತರಿಸುತ್ತಾರೆ.
 
ರೋಗಿಯಾಗಿ ಮಲಗಿರುವ ಜಿಮ್ ಬೆಲ್ಲೊ ದೃಢಕಾಯದ ವಕೀಲರು. ನ್ಯೂ ಹ್ಯಾಂಪ್ಷೈರ್ ನಲ್ಲಿ ವೈಟ್ ಮೌಂಟೇನ್ ಗೆ ಮಾರ್ಚ್ ಮೊದಲ ವಾರದಲ್ಲಿ ಹೈಕಿಂಗ್ ಹೋಗಿ ಬಂದ ಬಳಿಕ ಅವರಿಗೆ 103 ಡಿಗ್ರಿ ಜ್ವರ ಬಂದಿತ್ತು. ಆರು ದಿನಗಳ ಬಳಿಕ ಜ್ವರ ಜಾಸ್ತಿ ಆಗಿ ಉಸಿರಾಟಕ್ಕೆ ಕಷ್ಟ ಆದಾಗ ಆಸ್ಪತ್ರೆಗೆ ದಾಖಲಾಗಿದ್ದರು.
 
ಆರಂಭಿಕವಾಗಿ ವೈದ್ಯರು ಮಾಡಬಹುದಾದ್ದನ್ನೆಲ್ಲ ಮಾಡಿದ ಬಳಿಕವೂ ಅವರ ಎದೆಯ ಎಕ್ಸರೇ ಬಿಂಬ ಮೂಳೆಯಂತೆ ಬಿಳಿ ತುಂಬಿ ಕಾಣಿಸುತ್ತಿತ್ತು. ಅಲ್ಲಿ ಇರಬೇಕಾದ ಗಾಳಿ ತುಂಬಿದ ಪುಟ್ಟ ಚೀಲದಂತಹ ಜಾಗಗಳು ಇರಲಿಲ್ಲ – “ನಾನು ಕಂಡ ಅತ್ಯಂತ ದುಃಸ್ಥಿತಿಯ ಎದೆಯ ಎಕ್ಸರೆ ಇದು” ಎಂಬುದು ವೈದ್ಯರ ತಂಡದಲ್ಲಿದ್ದ ಇನ್ನೊಬ್ಬ ವೈದ್ಯ ಡಾ|ಪೌಲ್ ಕರಿಯರ್ ಅವರ ಉದ್ಗಾರ.
ತೀವ್ರನಿಗಾ ವಿಭಾಗದಲ್ಲಿ ನಿದ್ದೆಕಾರಕ ನೀಡಿ, ಚಲಿಸದಂತೆ ಪಾರಲಿಟಿಕ್ ಔಷಧಿ ನೀಡಿ ಕೃತಕವಾಗಿ ನಿಷ್ಕ್ರಿಯಗೊಳಿಸಿ ಮಲಗಿಸಿದ್ದ ರೋಗಿಯನ್ನು ಸ್ವಲ್ಪ ಮುಟ್ಟಿ ದೇಹ ಚಲಿಸಿದರೂ ರೋಗಿಯ ಆಮ್ಲಜನಕದ ಮಟ್ಟ ಧಡ್ಡೆಂದು ಇಳಿಯುತ್ತಿತ್ತು. ಹಾಗೇನಾದರೂ ಆಗಿ ಹೃದಯ ಕೆಲಸ ನಿಲ್ಲಿಸಿದರೆ ಮತ್ತೆ ಉಸಿರಾಟ ಆರಂಭಿಸಲು ಕಷ್ಟ ಎಂಬ ಅರಿವು ವೈದ್ಯರ ತಂಡಕ್ಕಿತ್ತು.
ವೈದ್ಯರು ಮಾಡುವುದನ್ನೆಲ್ಲ ಮಾಡಿದ್ದರು. ಪ್ರಯೋಗದ ಹಂತದಲ್ಲಿರುವ ಔಷಧಿ, ಕವುಚಿ ಮಲಗಿಸಿ ಉಸಿರಾಟ ಸುಧಾರಿಸುವ ಪ್ರಯತ್ನ ಮತ್ತೀಗ ಜೀವರಕ್ಷಕ ಯಂತ್ರ.
ಕೊನೆಯದಾಗಿ “Hail Mary” ತಂತ್ರವೊಂದು ಬಾಕಿ ಇತ್ತು (ಇದು ರೋಗಿಯನ್ನು ಉಳಿಸುವ ಯಾವುದೇ ಕಟ್ಟ ಕಡೆಯ ಪ್ರಯತ್ನ- ದೇವರ ಮೇಲೆ ಭಾರ ಹಾಕುವುದು ಅಂತಾರಲ್ಲ ಹಾಗೆ). ಆದರೆ ಅದನ್ನು ಮಾಡಲು ಜೀವರಕ್ಷಕ ಯಂತ್ರವನ್ನು 30 ಸೆಕಂಡು ಕಾಲ ಆಫ್ ಮಾಡಬೇಕಿತ್ತು. ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ರೋಗಿಗಿರಲಿಲ್ಲ.
“ ಆ ಪ್ರಯತ್ನ ರೋಗಿಯನ್ನು ಉಳಿಸಬಹುದಾದರೂ ಆ ಪ್ರಯತ್ನದಿಂದಾಗಿಯೇ ರೋಗಿ ಸಾಯುವ ಸಾಧ್ಯತೆ ಇತ್ತು” ಅನ್ನುತ್ತಾರೆ ಡಾ|ಯುವಾಲ್ ರಾಝ್.
ಸ್ಕೀಯಿಂಗ್, ಸೈಕ್ಲಿಂಗ್, ಹೈಕಿಂಗ್, ದೂರದ ಓಟ ಇಷ್ಟೆಲ್ಲ ಚಟುವಟಿಕೆಗಳಿದ್ದೂ ಈಗ ಗಂಭೀರ ಸ್ಥಿತಿಯಲ್ಲಿ ಮಲಗಿದ್ದ ರೋಗಿಯಷ್ಟೇ ಹಠಾತ್ – ಮುನ್ಸೂಚನೆ ಇಲ್ಲದ ಏರಿಳಿತ ವೈದ್ಯರ ಪ್ರಯತ್ನಗಳಲ್ಲೂ ಇತ್ತು ಎಂಬುದೇ ಈ ಪರಿಣತ- ಸುಸಜ್ಜಿತ ವೈದ್ಯತಂಡವನ್ನೂ ಕೊರೊನಾ ಎಷ್ಟು ಕಂಗೆಡಿಸಿತ್ತು ಎಂಬುದಕ್ಕೆ ಸಾಕ್ಷಿ.
ಆಸ್ಪತ್ರೆಗೆ ಯಾವತ್ತೂ ಇಷ್ಟೊಂದು ಮಂದಿ ಉಸಿರಾಟ ಕಷ್ಟವಾಗುವ ರೋಗಿಗಳು ಒಂದೇಸಮನೆ ಏಕಕಾಲದಲ್ಲಿ ಬಂದದ್ದಿಲ್ಲ. ಇಂತಹ ಸ್ಥಿತಿಯನ್ನು ನಿಭಾಯಿಸುವ ಪರಿಣತಿ ಇರುವ ವೈದ್ಯರಿದ್ದರೂ, ಅವರಿಗೆ ಕೋವಿಡ್- 19 ರೋಗಿಯ ಸ್ಥಿತಿಯ ಏರಿಳಿತಗಳನ್ನು ಮುಂಚಿತವಾಗಿ ಊಹಿಸುವುದೇ ಸಾಧ್ಯವಾಗುತ್ತಿಲ್ಲ.
“ಈ ರೋಗ ಒಂದು ರೀತಿ ಹಠಾತ್ ಬೆಟ್ಟದಿಂದ ಬಿದ್ದಂತೆ, ಎಲ್ಲ ಪ್ರಯತ್ನಗಳ ಹೊರತಾಗಿಯೂ ಎಳೆಯ ರೋಗಿಗಳಲ್ಲೂ ಕೂಡ ಪರಿಸ್ಥಿತಿ ಹದಗೆಟ್ಟು ನಮ್ಮನ್ನೂ ಕಂಗೆಡಿಸುತ್ತದೆ” ಅನ್ನುತ್ತಾರೆ ಪರಿಣತ ತೀವ್ರನಿಗಾ ವೈದ್ಯ ಡಾ|ಪೆಗ್ಗಿ ಲಾಯ್.
ಈ ಸೋಂಕಿಗೆ ನಿಖರ ಔಷಧಿ ಇಲ್ಲದಿರುವುದರಿಂದ ವೈದ್ಯರೂ ಪ್ರಯೋಗಶೀಲರಾಗಿರಬೇಕಾಗುತ್ತದೆ. ರೋಗಿಯನ್ನು ದಡಮುಟ್ಟಿಸಲು ಅಪಾಯಗಳನ್ನು ಗಮನದಲ್ಲಿರಿಸಿಕೊಂಡೇ ಚಿಕಿತ್ಸೆಯಲ್ಲಿ, ಯಂತ್ರಗಳಲ್ಲಿ ಹೊಂದಾಣಿಕೆ ಮಾಡಬೇಕಾಗುತ್ತದೆ. “ಇಲ್ಲಿ ಕಷ್ಟ ಎಂದರೆ ನಮಗೆ ಅನುಸರಿಸಲು ಒಂದು ಖಚಿತ ಹಾದಿ ಇಲ್ಲ. ಏನು ಮಾಡಿದರೆ ರೋಗಿಯ ಸ್ಥಿತಿ ಏನಾದೀತೆಂಬುದು ಖಚಿತವಿರುವುದಿಲ್ಲ” ಎನ್ನುತ್ತಾರೆ ಡಾ| ಲಾಯ್.
ಮಾರ್ಚ್ 7ಕ್ಕೆ, ಮೌಂಟೇನ್ ಹೈಕಿಂಗ್ ಹೋಗಿಬಂದಿದ್ದ ಬೆಲ್ಲೊ ಅವರಿಗೆ ಹಠಾತ್ ಆಗಿ ಜ್ವರ ಬಂದಿತ್ತು. ಸ್ವಲ್ಪ ದಿನಗಳ ಬಳಿಕ ಕೆಮ್ಮು ಮತ್ತು ಎದೆ ಬಿಗಿತ ಆರಂಭವಾಗಿ ಅವರು ವೈದ್ಯರ ಬಳಿ ಹೋದಾಗ ವೈದ್ಯರು ನ್ಯುಮೋನಿಯಾಕ್ಕೆ ಆಂಟಿಬಯಾಟಿಕ್ಸ್ ಕೊಟ್ಟಿದ್ದರು. ಮಾರ್ಚ್ 13ರ ಹೊತ್ತಿಗೆ ಅವರಿಗೆ ಉಸಿರಾಟ ಕಷ್ಟ ಆಗುತ್ತಿತ್ತು. ಬೋಸ್ಟನ್ ಆಸ್ಪತ್ರೆಯ ಎಮರ್ಜನ್ಸಿ ವಿಭಾಗಕ್ಕೆ ಹೊದಾಗ ಅವರು ಅಲ್ಲಿ ವೆಂಟಿಲೇಟರ್ ಅಗತ್ಯ ಎಂದು ನಿರ್ಧರಿಸಿದರು.
“ನಾನು ಬದುಕದಿದ್ದರೆ?” ಪತಿಯ ಪ್ರಶ್ನೆಗೆ ಪತ್ನಿ ಧೈರ್ಯ ತುಂಬಿದರು. “ಆತ ಕಣ್ಣು ಮಿಟುಕಿಸಿದರು, ಮೊದಲ ಬಾರಿ ನಾವು ಭೇಟಿ ಆದಾಗ ಕಣ್ಣು ಮಿಟುಕಿಸಿದ್ದು ನೆನಪಾಯ್ತು” ಎಂದು ಪತ್ನಿ ನೆನಪಿಸಿಕೊಂಡರು.
ರಾತ್ರೋರಾತ್ರಿ ರೋಗಿಯನ್ನು ಮೆಸಾಚುಸೆಟ್ಸ್ ಜನರಲ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಆತ ವೆಂಟಿಲೇಟರ್ ಚಿಕಿತ್ಸೆ ಪಡೆದ ಮೊದಲ ಕೊರೊನಾ ಪೀಡಿತ. ಮೊದಲಿಗೆ ಕಂಡರೆ, ಸರಳವಾಗಿ ನಿಭಾಯಿಸಬಲ್ಲ ತೊಂದರೆ ಅನ್ನಿಸಿತು ಎನ್ನುತ್ತಾರೆ ರೋಗಿಗೆ ಮೊದಲು ಚಿಕಿತ್ಸೆ ಮಾಡಿದ ಡಾ|ಕರಿಯರ್.
ಎಲ್ಲ ಕೊರೊನಾ ರೋಗಿಗಳಂತೆ ಟಿಮ್ ಬೆಲ್ಲೊ ಅವರಿಗೂ ಹಠಾತ್ ಉಸಿರಾಟದ ತೊಂದರೆ ( ARDS) ಲಕ್ಷಣಗಳಿದ್ದವು. ಶ್ವಾಸಕೋಶ ತೀವ್ರ ಉರಿಯೂತಕ್ಕೀಡಾಗಿ ರಕ್ತಕ್ಕೆ ಆಮ್ಲಜನಕ ಪೂರೈಸಬೇಕಾದ ಪುಟ್ಟಪುಟ್ಟ ಗಾಳಿ ಚೀಲಗಳಲ್ಲಿ ದ್ರವ ತುಂಬಿ ಅವು ಬಲೂನುಗಳಂತೆ ಹಿಗ್ಗಿದ್ದವು.
ವೆಂಟಿಲೇಟರ್ ನಲ್ಲಿ ಆಮ್ಲಜನಕ, ಉಸಿರಾಟದ ದರ, ಉಸಿರಿನ ಪ್ರಮಾಣ, ಒತ್ತಡ ಸೆಟ್ಟಿಂಗ್ ಗಳನ್ನು ರೋಗಿಯ ಆವಶ್ಯಕತೆಗೆ ತಕ್ಕಂತೆ ಹೊಂದಿಸಲಾಯಿತು. ವೈದ್ಯರ ಕೆಲಸ ಗಾಳಿಹಾದಿಯನ್ನು ಎಷ್ಟು ಬೇಕೋ ಅಷ್ಟೇ ಹಿಗ್ಗಿಸಿ ಶ್ವಾಸಕೋಶಗಳು ಅತಿಯಾಗಿ ಹಿಗ್ಗಿ ಜಖಂಗೊಳ್ಳದಂತೆ ನೋಡಿಕೊಳ್ಳುವುದಾಗಿತ್ತು.
ಹೆಚ್ಚಾಗಿ ಶ್ವಾಸಕೋಶದೊಳಗೆ ಗಾಳಿ ಟ್ಯೂಬ್ ಇಳಿಸಲಾದ ರೋಗಿಗಳಿಗೆ ದೇಹ ಚಲನೆ ಇಲ್ಲದಿರುವಂತೆ ಅಮಲಿನ (ಸೆಡೇಟಿವ್) ಮತ್ತು ನಿಶ್ಚಲಗೊಳಿಸುವ (ಪಾರಲಿಟಿಕ್) ಔಷಧಿಗಳನ್ನು ನೀಡಿ ರೋಗಿ ತಾನೇ ಉಸಿರಾಡದಂತೆ ಏರ್ಪಡಿಸಲಾಗುತ್ತದೆ. ಆ ಕೆಲಸವನ್ನು ವೆಂಟಿಲೇಟರ್ ಯಂತ್ರ ಮಾಡುತ್ತದೆ.
ಮೊದಲ ದಿನದ ಅಂತ್ಯಕ್ಕೆ ರೋಗಿಗೆ ವೆಂಟಿಲೇಟರ್ 65%ಆಮ್ಲಜನಕ ಪೂರೈಸುತ್ತಿತ್ತು. ಪರಿಸ್ಥಿತಿಸುಧಾರಿಸುತ್ತಿತ್ತು. ಮರುದಿನ ಅದು 35%ಗೆ ಇಳಿಯಿತು.21%ಅಂದರೆ ವೆಂಟಿಲೇಟರ್ ನ ಕನಿಷ್ಠ ಸೆಟ್ಟಿಂಗ್ ಆದ್ದರಿಂದ ಇದು ರೋಗಿಯ ಮಟ್ಟಿಗೆ ಒಳ್ಳೆಯ ಚಿಹ್ನೆಯೇ ಆಗಿತ್ತು. ರೋಗಿ ಸುಧಾರಿಸುತ್ತಿದ್ದರು ಎನ್ನುತ್ತಾರೆ ಶ್ವಾಸಕೋಶಗಳ ತೀವ್ರ ನಿಗಾ ತಜ್ಞ ಡಾ|ಕರಿಯರ್.
ಆದರೆ, ಹಠಾತ್ ಪರಿಸ್ಥಿತಿ ಹದಗೆಟ್ಟು 100%ಆಮ್ಲಜನಕ ನೀಡುವ ಸ್ಥಿತಿ ಬಂತು.
ಮಾರ್ಚ್ 18ರ ರಾತ್ರಿ ಎರಡುಗಂಟೆಯ ಹೊತ್ತಿಗೆ ರೋಗಿಯನ್ನು ಕವುಚಿ ಮಲಗಿಸಿ ಶ್ವಾಸಕೋಶಗಳ ಮೇಲೆ ಹೃದಯದ ಒತ್ತಡ ಬೀಳದಂತೆ ಏರ್ಪಡಿಸುವ ಪ್ರೊನಿಂಗ್ ಪ್ರಕ್ರಿಯೆ ನಡೆಸಲಾಯಿತು. ಫಲಿತಾಂಶ ಚೆನ್ನಾಗಿತ್ತು. ಸುಧಾರಿಸಬಹುದೆಂದು ಡಾ|ಕರಿಯರ್ ನಿದ್ದೆ ಹೋದರು.
ಮರುದಿನ ರೋಗಿಯ ರಕ್ತದಲ್ಲಿ ಆಮ್ಲಜನಕದ ಮಟ್ಟ ತಗ್ಗತೊಡಗಿತು.
ವೈದ್ಯರು ಆಗ ಹೆಚ್ಚಿನೆಲ್ಲ ಆಸ್ಪತ್ರೆಗಳು ಬಳಸುತ್ತಿದ್ದ, ಅಧ್ಯಕ್ಷ ಟ್ರಂಪ್ ಶಿಫಾರಸು ಮಾಡಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಮಲೇರಿಯಾ ನಿರೋಧಕವ,ನ್ನೂ ಒಂದು ಸ್ಟಾಟಿನ್ ಅನ್ನೂ ನೀಡಲಾಯಿತು. ಆದರೆ ಅದು ಲಿವರ್ ಗೆ ಹಾನಿ ಮಾಡಿದ್ದರಿಂದ ಅದನ್ನು ಮುಂದುವರಿಸಲಿಲ್ಲ. ಕೊವಿಡ್- 19ಗೆ ಎಂದು ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತಿರುವ ರೆಮ್ಡೆಸಿವಿರ್ (Remdesivir)ಚಿಕಿತ್ಸೆಗೂ ಟಿಮ್ ಅವರನ್ನು ನೋಂದಾಯಿಸಲಾಯಿತು. ಆದರೆ ಅವರಿಗೆ ಸಿಕ್ಕಿದ್ದು ಔಷಧಿಯೊ ಅಥವಾ ಪ್ಲಾಸಿಬೊ ಗುಳಿಗೆಯೋ ಗೊತ್ತಿರಲಿಲ್ಲ.
ಆ ಮಧ್ಯಾಹ್ನ ಶ್ವಾಸಕೋಶಗಳ ಸ್ಥಿತಿ ಇನ್ನಷ್ಟು ಹದಗೆಟ್ಟದ್ದರಿಂದ ರೋಗನಿರೋಧಕ ಶಕ್ತಿ ತಗ್ಗಿಸುವ ಟೊಸಿಲಿಝುಮಾಬ್ (Tocilizumab) ನೀಡಲಾಯಿತು. ಏನೂ ಪ್ರಯೋಜನ ಆಗಲಿಲ್ಲ. ಕಡೆಯ ಪ್ರಯತ್ನ ಎಂಬಂತೆ ಎಂಟು ಜನ ವೈದ್ಯರ ತಂಡ ರೋಗಿಯನ್ನು ಅಂಗಾತ ಮಲಗಿಸಿ, ರೋಗಿಯ ಕತ್ತು ಮತ್ತು ಕಾಲುಗಳಿಗೆ ಟ್ಯೂಬ್ ಇಳಿಸಿ ರೋಗಿಯನ್ನು ಹೃದಯ-ಶ್ವಾಸಕೋಶ ಯಂತ್ರಕ್ಕೆ ಸಂಪರ್ಕಿಸಿದರು.ಎಕ್ಸ್ಟ್ರಾ ಕಾರ್ಪೋರಲ್ ಮೆಂಬ್ರೇನ್ ಆಕ್ಸಿಜನೇಷನ್ (ECMO) ಯಂತ್ರ ಇದು. ಅಂದರೆ ರೋಗಿಯ ದೇಹದ ರಕ್ತಪ್ರವಾಹವು ದೇಹದಿಂದ ಹೊರಗಿನ ಆಮ್ಲಜನಕ ಪೂರೈಸುವ ಯಂತ್ರವೊಂದಕ್ಕೆ ಹೋಗಿ ಅಲ್ಲಿಂದ ಆಮ್ಲಜನಕ ಸಹಿತವಾಗಿ ದೇಹಕ್ಕೆ ವಾಪಸ್ ಬರುವ ವ್ಯವಸ್ಥೆ. ಇದು ಹೆಚ್ಚಿನ ಆಸ್ಪತ್ರೆಗಳಲ್ಲಿ ಲಭ್ಯವಿರದ ಸೂಕ್ಷ್ಮ ಯಂತ್ರ.
“ಇದೇನೂ ನಿರಪಾಯಕಾರಿ ಚಿಕಿತ್ಸೆ ಅ.ಲ್ಲ ಅದರದೇ ಅಡ್ಡಪರಿಣಾಮಗಳೂ ಇರುತ್ತವೆ” ಎನ್ನುತ್ತಾರೆ ಆ ವಿಭಾಗದ ನಿರ್ದೇಶಕ ಡಾ|ರಾಝ್. ರೋಗಿಯಲ್ಲಿ ರಕ್ತಸ್ರಾವದ ತೊಂದರೆಗಳು, ಲಕ್ವಾದಂತಹ ಅಪಾಯಗಳಿರುವ ಚಿಕಿತ್ಸೆ ಇದು. ವೈದ್ಯರು ಸತತವಾಗಿ ರಕ್ತಪರಿಚಲನೆ ಹದವಾಗಿರುವಂತೆ ಮತ್ತು ಆ ಮೂಲಕ ರೋಗಿಯ ದೇಹಕ್ಕೆ ಹೆಚ್ಚಿನ ದ್ರವಾಂಶ ಪ್ರವೇಶಿಸಿ ರಕ್ತನಾಳಗಳು ವೈಫಲ್ಯಕ್ಕೀಡಾಗದಂತೆ ಬಲುಎಚ್ಚರ ವಹಿಸಬೇಕಾಗುತ್ತದೆ. ಈವತ್ತೂ ಅಮೆರಿಕದಲ್ಲಿ ಹಲವು ರೋಗಿಗಳು ಇನ್ನೂ ಈ ಯಂತ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ದತ್ತಾಂಶ ಸಂಪೂರ್ಣ ಇಲ್ಲದಿರುವುದರಿಮ್ದ ಇದರ ಯಶಸ್ಸಿನ ದರ ಈಗಲೇ ಹೇಳಲಾಗದು ಎನ್ನುತ್ತಾರೆ ಪರಿಣತರು.
“ಈ ಯಂತ್ರ ಏನನ್ನೂ ಗುಣಪಡಿಸುವುದಿಲ್ಲ. ಬೇರೆಲ್ಲ ಚಿಕಿತ್ಸೆ ನಡೆಯುವಾಗ ರೋಗಿಯನ್ನು ಜೀವಂತ ಇರಿಸುತ್ತದೆ” ಎನ್ನುತ್ತಾರೆ ವೈದ್ಯ ಡಾ|ರಾಝ್. ಬೆಲ್ಲೊ ಅವರ ಶ್ವಾಸಕೋಶ ಎಷ್ಟು ಪೆಡಸಾಗಿಬಿಟ್ಟಿತ್ತೆಂದರೆ, ಸಾಮಾನ್ಯ ಆರೋಗ್ಯವಂತರಲ್ಲಿ 100 ಇರಬೇಕಾದ ಅದರ ಹಿಗ್ಗುಸಾಮರ್ಥ್ಯ, ಉಸಿರಾಟಕ್ಕೆ ಕಷ್ಟ ಆಗುವವರಲ್ಲಿ 30ಕ್ಕೆ ಇಳಿದಿರುತ್ತದೆಯಾದರೆ ಬೆಲ್ಲೊ ಅವರಲ್ಲಿ ಒಂದಂಕಿಗೆ ಇಳಿದಿತ್ತು.
ಅವರ ಶ್ವಾಸಕೋಶ ಒಂದು ಟೇಬಲ್ ಸ್ಪೂನ್ ಗಾತ್ರದ ಉಸಿರನ್ನು ಮಾತ್ರ ತೆಗೆದುಕೊಳ್ಳುತ್ತಿತ್ತು. ಇದು ಸಾಮಾನ್ಯ ಉಸಿರಾಟದ ಎಷ್ಟೋಪಾಲು ಕಡಿಮೆ. ಅವರಿಗೆ ರಕ್ತ ತೆಳುಕಾರಕ ಕೊಟ್ಟದ್ದರಿಂದ ಟ್ಯೂಬಿನಲ್ಲಿ ರಕ್ತ ಒಸರಲಾರಂಭ ಆಯ್ತು. ಹಾಗಾಗಿ ರಕ್ತ ತೆಳುಕಾರಕ ನಿಲ್ಲಿಸಲಾಯಿತು ಎಂದು ವಿವರಿಸುತ್ತಾರೆ ಡಾ| ರಾಝ್.
ಎದೆಯ ಎಕ್ಸರೇ ಬಿಂಬಗಳು ಪರಿಸ್ಥಿತಿ ಹದಗೆಟ್ಟಿವೆ ಎಂದು ತೋರಿಸುತ್ತಿದ್ದವು. ಮಾರ್ಚ್ 13ರ ಎಕ್ಸರೇಯಲ್ಲಿ ದ್ರವ ಮತ್ತು ಉರಿಯೂತದ ಪ್ರಮಾಣ ಹೆಚ್ಚಿದ್ದರೂ ಶ್ವಾಸಕೋಶಗಳು ಕಾಣಿಸುತ್ತಿದ್ದವು. ಆದರೆ ಮಾರ್ಚ್ 18ರ ಎಕ್ಸರೇ ತೀರಾ ಹದಗೆಟ್ಟಿತ್ತು. ಅಲ್ಲೂ ಶ್ವಾಸಕೋಶದಲ್ಲಿ ಜಾಗ ಕಾಣಿಸುತ್ತಿತ್ತು. ಮಾರ್ಚ್ 20ಕ್ಕೆ ಅದು ಚಿಂತಾಜನಕ ಎನ್ನಿಸುವಷ್ಟು ಸಂಪೂರ್ಣ ಬೆಳಚಾಗಿತ್ತು.
ಮಾರ್ಕೆಟಿಂಗ್ ಉದ್ಯೋಗದಲ್ಲಿದ್ದ ಬೆಲ್ಲೊ ಅವರ ಪತ್ನಿಗೆ (48) ವಿಷಯ ತಿಳಿಸಲಾಯಿತು. ಆಕೆ ರಜೆ ಪಡೆದು ತನ್ನ ಮೂರು ಮಕ್ಕಳು ಹ್ಯಾಡ್ಲಿ (13) ಮತ್ತು ಅವಳಿ ಜವಳಿಗಳಾದ ರೈಲಿ ಹಾಗೂ ಟೇಲರ್ (11) ಅವರನ್ನು ನೋಡಿಕೊಂಡು ಮನೆಯಲ್ಲಿದ್ದರು. ಬೆಲ್ಲೊ ಅವರು ಸಮಾಜ ಸೇವಕಿಯೂ ಆಗಿದ್ದು ತೀವ್ರ ನಿಗಾದಲ್ಲಿ ಆಹಾರ ಮತ್ತಿತರ ಸೌಕರ್ಯಗಳನ್ನು ಒದಗಿಸಲು ದೇಣಿಗೆ ಸಂಗ್ರಹಿಸಿದ್ದರು. ಆಕೆಗೆ ಮತ್ತು ಹ್ಯಾಡ್ಲಿಗೆ ಲಘು ಶೀತ ಎದೆ ಬಿಗಿತದ ಲಕ್ಷಣಗಳಿದ್ದವು ಆದರೆ ಅವರಿಗೆ ಕೊರೊನಾ ತಪಾಸಣೆ ಬೇಡ ಎಂದು ವೈದ್ಯರು ತೀರ್ಮಾನಿಸಿದರು. ತೀವ್ರ ನಿಗಾ ವಿಭಾಗಕ್ಕೆ ಭೇಟಿ ನಿಷಿದ್ಧವಾದ್ದರಿಂದ ದಾದಿ ಕೆರ್ರಿ ವೊಕೆಲ್ ಅವರು ಬೆಲ್ಲೊ ಅವರನ್ನು ಫೋನ್ ಮೂಲಕ ಸಂಪರ್ಕ ಸಂಪರ್ಕಿಸುತ್ತಿದ್ದರು. ಹ್ಯಾಡ್ಲಿ “ನಾನು ಕೇಕ್ ಮಾಡಿದೆ. ಸರಿಯಾಗಿಲ್ಲ ಇನ್ನೊಮ್ಮೆ ಪ್ರಯತ್ನ ಮಾಡ್ತೇನೆ” ಎಂದು ಅಪ್ಪನಿಗೆ ಹೇಳಿದರೆ, ಟೇಲರ್ “ನಾನು ಹಿತ್ತಲಲ್ಲಿ ಫುಟ್ ಬಾಲ್ ಪ್ರಾಕ್ಟೀಸ್ ಮಾಡ್ತಿದ್ದೇನೆ” ಎನ್ನುತ್ತಿದ್ದ. ದಾರುಣ ಸ್ಥಿತಿಯಲ್ಲಿದ್ದ ಅಪ್ಪನ ಜೊತೆ ಮುಗ್ಧ ಮಕ್ಕಳ ಈ ಮಾತುಗಳು ದುಃಖ ತರಿಸುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ ದಾದಿ ಕೆರ್ರಿ.
ECMOದಲ್ಲಿ 9 ದಿನ ಕಳೆದ ಬಳಿಕವೂ ಚೇತರಿಕೆ ಇಲ್ಲ. ಮೈ ಅಡಿ ದಿಂಬು ದೇಹವನ್ನು ಸ್ವಲ್ಪ ಇರಿಸಲು ಅಲ್ಲಾಡಿಸಿದರೂ ಆಮ್ಲಜನಕದ ಮಟ್ಟ ಕುಸಿಯುತ್ತಿತ್ತು. ಡಾ|ರುಬಿನ್ ಅವರು ಬೆಲ್ಲೊ ಅವರನ್ನು ಕರೆಸಿ ಗಂಡನ ಗಂಭೀರ ಸ್ಥಿತಿಯನ್ನು ವಿವರಿಸಿದರು. ರೋಗಿ ಹೃದಯ ಸ್ಥಂಭನದ ಸ್ಥಿತಿಗೆ ಹೋದರೆ ಉಸಿರಾಟ ಚೇತರಿಕೆ ಪ್ರಯತ್ನ ಬೇಡ ಎಂಬ ಸೂಚನೆಗೆ ಸಹಿ ಪಡೆಯಲಾಯಿತು.
“ಸತ್ಯ ಹೇಳಿ” ಎಂದು ಡಾ| ರುಬಿನ್ ಅವರನ್ನು ಆಕೆ ಕೇಳಿದಾಗ ವೈದ್ಯರು “ಪ್ರಾಮಾಣಿಕವಾಗಿ, ನಮ್ಮ ವಿಶ್ಲೇಷಣೆಗಳ ಪ್ರಕಾರ ಅವರು ಸಾಯುವ ಸಾಧ್ಯತೆ ಹೆಚ್ಚು” ಎಂದು ಉತ್ತರಿಸಿದರಲ್ಲದೇ ನಮ್ಮ ಪ್ರಯತ್ನ ಮಾಡ್ತೇವೆ” ಎಂದು ಆಶ್ವಾಸನೆ ಇತ್ತರು. ಹತಾಶ ಬೆಲ್ಲೊ ಹೊರಗೆ ಹುಲ್ಲುಹಾಸಿನಲ್ಲಿ ಕುಸಿದು ಕುಳಿತಿದ್ದರು.
ಮರುದಿನ ಮಾರ್ಚ್ 28ಕ್ಕೆ ಬೆಲ್ಲೊ ಅವರ ಪಾರಲಿಟಿಕ್ ಔಷಧಿ ಪ್ರಮಾಣ ತಗ್ಗಿಸಿದಾಗ, ಅಚ್ಚರಿ ಎಂಬಂತೆ ಜಿಮ್ ಎಚ್ಚರಗೊಂಡರು, ಕಣ್ಣು ಬಿಡಿಸಲು ಪ್ರಯತ್ನಿಸಿದರು. ಕರೆದಾಗ ದಾದಿ ಕೆರ್ರಿ ಅವರ ಕೈಗಳನ್ನು ಒತ್ತಿಹಿಡಿದರು. ಸರಳ ಪ್ರಶ್ನೆಗಳಿಗೆ ತಲೆ ಅಲ್ಲಾಡಿಸಿ ಹೌದು ಅಲ್ಲ ಎಂದು ಉತ್ತರಿಸಿದರು. ಮಗ್ಗುಲು ಬದಲಿಸುತ್ತೇವೆ ಎಂದಾಗ ಥಂಬ್ಸ್ ಅಪ್ ತೋರಿಸಿ ಆಗಲಿ ಎಂದರು.
“ಅಬ್ಬ ಬದುಕಿದರು” ಅನ್ನಿಸಿತು ಎನ್ನುತ್ತಾರೆ ದಾದಿ ಕೆರ್ರಿ. ಇದನ್ನು ರೋಗಿಯ ಪತ್ನಿಗೆ ವಿವರಿಸಿದರು ಕೂಡ.
ಆ ಮಧ್ಯಾಹ್ನ ಅವರ ಗೋಲ್ಡನ್ ರಿಟ್ರೈವರ್ ನಾಯಿ ಬ್ರುನೊ ಬೆಲ್ಲೊ ಅವರ ಬೋಸ್ಟನ್ ಸೆಲ್ಟಿಕ್ಸ್ ಕ್ಯಾಪನ್ನು ಕಚ್ಚಿಕೊಂಡ ಫೋಟೋ ವನ್ನು ಡಾ| ರುಬಿನ್ ಅವರಿಗೆ ಕಳುಹಿಸಿದ ಬೆಲ್ಲೊ ಅವರ ಪತ್ನಿ “ನಿಮಗೆ ಸಾಧ್ಯವಿದ್ದದ್ದನ್ನೆಲ್ಲ ಮಾಡಿ” ಎಂದು ವಿನಂತಿಸಿದರು. ಡಾ|ರುಬಿನ್ ಆಗಲೆಂದು ಮಾರುತ್ತರ ಕಳಿಸಿದರು.
ಪಾರಲಿಟಿಕ್ ಔಷಧಿ ನಿಲ್ಲಿಸಿದ ಹಲವು ಗಂಟೆಗಳ ಬಳಿಕ, ಬೆಲ್ಲೊ ತಾನಾಗಿ ತನ್ನ ದೇಹವನ್ನು ಅತ್ತಿತ್ತ ಸರಿಸುವ ಪ್ರಯತ್ನ ಮಾಡಿದ್ದನ್ನು ದಾದಿಯರು ದೂರದಿಂದಲೇ ಕಂಡರು. ಹಾಗೆ ಮಾಡುವಾಗ ರಕ್ತದೊತ್ತಡ ಅಸಹಜವಾಗಿ ಹೆಚ್ಚಾಯಿತು. ನಾವು ಉಸಿರಾಡುವಾಗ ಅದು ಸಾಮಾನ್ಯ. ಆದರೆ ರೋಗಿಗೆ ಅದನ್ನೂ ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ಆಮ್ಲಜನಕದ ಪ್ರಮಾಣ ತಗ್ಗಿತು.
ದಾದಿ ಕೆರ್ರಿ ಮತ್ತು ಉಸಿರಾಟ ತೆರಪಿಸ್ಟ್ ಟೈಲರ್ ಟೆಕ್ಸೀರಿಯಾ ಒಳಗೆ ಧಾವಿಸಿ ಅವರ ಉಸಿರಾಟವನ್ನು ಸ್ಥಿರಗೊಳಿಸಿದರು. ಅವರ ಶ್ವಾಸಕೋಶಗಳ ಸ್ಥಿತಿ ಇನ್ನೂ ಕೆಟ್ಟದಿದ್ದುದರಿಂದ ಮತ್ತೆ ಪಾರಲಿಟಿಕ್ ಔಷಧಿ ನೀಡಿ ಅವರನ್ನು ಜೀವಂತ ಇರಿಸಲು ತೀರ್ಮಾನಿಸಲಾಯಿತು.
ಈ ಯಂತ್ರಕ್ಕೆ ಇನ್ನೊಂದು ಟ್ಯೂಬ್ ಸಿಕ್ಕಿಸಿ ಹೆಚ್ಚುವರಿ ದ್ರವವನ್ನು ಹೊರತೆಗೆಯುವ ಕೊನೆಯ ಆಯ್ಕೆ ಉಳಿದಿತ್ತು. ಅದಕ್ಕಾಗಿ ಆ ಯಂತ್ರವನ್ನು 30 ಸೆಕುಂಡ್ ಕಾಲ ಆಫ್ ಮಾಡಬೇಕಿತ್ತು. ಆದರೆ ರೋಗಿಯ ಸ್ಥಿತಿ ಕಂಡರೆ ಅದೂ ಕಷ್ಟ ಅನ್ನಿಸುವಂತಿತ್ತು ಎನ್ನುತ್ತಾರೆ ಡಾ|ರುಬಿನ್.
“ಆ ದಿನ ಮನೆಗೆ ಹೋಗುವಾಗ ನಾನು ಮನಸಾರೆ ಅತ್ತೆ. ನನದೂ ಅದೇ ಪ್ರಾಯದ ಮಕ್ಕಳು. ನಮಗವರನ್ನು ಬದುಕಿಸಲಾಗದು ಎಂದು ವ್ಯಥೆ ಆಯಿತು” ಎನ್ನುತ್ತಾರೆ ದಾದಿ ಕೆರ್ರಿ.
ಡಾ| ರುಬಿನ್ ಬೆಲ್ಲೊ ಅವರನ್ನು ಕರೆದು ಪತಿಯನ್ನು ಭೇಟಿ ಮಾಡುವಂತೆ ಹೇಳುತ್ತಾರೆ. ಸುರಕ್ಷಾ ಉಡುಗೆ ಧರಿಸಿ ಆಕೆ ಒಳಹೋಗುತ್ತಾರೆ. ಈ ಹಿಂದೆ ಆಕೆಗೆ ಒಮ್ಮೆ ಮಾತ್ರ ಇಂತಹ ಅವಕಾಶ ನೀಡಲಾಗಿತ್ತು. “ನಾನು ಮಾತನಾಡುತ್ತಲೇ ಇದ್ದರೆ ಅವರು ಸರಿ ಇರುತ್ತಾರೆ ಎಂದು ನನಗನ್ನಿಸಿತ್ತು ನಮಗೆ ನೀವು ಬೇಕು ಅದಕ್ಕಾಗಿಯಾದರೂ ಗೆದ್ದುಬನ್ನಿ ಎನ್ನಬೇಕೆಂದಿದ್ದೆ ಎನ್ನುತ್ತಾರವರು. ಅವರಿಗೆ 15ನಿಮಿಷ ನೀಡಲಾಗಿತ್ತು.
ಪತಿಯ ಬಳಿ ಹೋದ ಆಕೆ “ನಾನು ನಿಮ್ಮ ಕೈ ಒತ್ತಿ ಹಿಡಿದಿದ್ದೇನೆ, ತಲೆ ಮುಟ್ಟಿದ್ದೇನೆ” ಎಂದಿದ್ದರು.
ಅದಾಗಿ ಮೂರು ದಿನಗಳಲ್ಲಿ ಎಕ್ಸರೇ ಎಡ ಶ್ವಾಸಕೋಶ ಸುಧಾರಿಸಿದ್ದನ್ನು ತೋರಿಸಿತು. ಒಮ್ಮೆ ಸುಧಾರಣೆ ಶುರುವಾದದ್ದು ನಾಟಕೀಯ ಸುಧಾರಣೆ ಕಂಡಿತು ಎನ್ನುತ್ತಾರೆ ಡಾ|ಕರಿಯರ್.
ಎಪ್ರಿಲ್ 4 ಅಂದರೆ ECMO ಯಂತ್ರದಲ್ಲಿ 17ನೇ ದಿನ, ಶ್ವಾಸಕೋಶ ತೆರಪಿಸ್ಟ್ ಟಾಡ್ ಮೂವರ್ ಅವರು ಈ ಯಂತ್ರವನ್ನು ತೆಗೆಯಬಹುದು ಎಂದು ಸೂಚಿಸುತ್ತಾರೆ. ಮರುದಿನ ಯಂತ್ರ ಕಳಚಿ, ರೋಗಿಯನ್ನು ಕೇವಲ ವೆಂಟಿಲೇಟರ್ ನಲ್ಲಿ ಇರಿಸಲಾಯಿತು. ಆಮ್ಲಜನಕ ಸರಬರಾಜಿನ ಪ್ರಮಾಣವೂ ಕಡಿಮೆ ಮಾಡಲಾಯಿತು ಮತ್ತು ಪಾರಲಿಟಿಕ್ ಔಷಧಿ ಪ್ರಮಾಣವನ್ನೂ ಕಡಿಮೆ ಮಾಡುತ್ತಾ ಹೋಗಲಾಯಿತು.
ಒಂದೆರಡು ದಿನ ಕಳೆದು, ಫಿಸಿಕಲ್ ತೆರಪಿಸ್ಟರು ಕಾಲಿಗೆ ವ್ಯಾಯಾಮ ಕೊಡುವುದನ್ನು ರೋಗಿಯ ಪತ್ನಿಗೆ ವೀಡಿಯೊ ಮೂಲಕ ತೋರಿಸಲಾಯಿತು. ಪತಿಗೆ “ಐ ಲವ್ ಯೂ ನನಗೊಂದು ಫ್ಲಯಿಂಗ್ ಕಿಸ್ ಕೊಡಿ” ಎಂದು ಆಕೆ ಅತ್ತರು. ಬೆಲ್ಲೊ ಬಾಯಿಯೊಳಗೆ ಟ್ಯೂಬುಗಳಿರುತ್ತಲೇ ಪತ್ನಿಗೊಂದು ಫ್ಲಯಿಂಗ್ ಕಿಸ್ ನೀಡಿದರು.
ಎಪ್ರಿಲ್ 11ರಂದು ಅಂದರೆ ಆಸ್ಪತ್ರೆ ಸೇರಿ ಒಂದು ತಿಂಗಳ ಬಳಿಕ, ಬೆಲ್ಲೊ ತನ್ನ ಮೂವರು ಮಕ್ಕಳೊಂದಿಗೆ ಪತಿಯನ್ನು ವಿಡಿಯೊ ಚ್ಯಾಟ್ ಮೂಲಕ ಕಂಡರು. ಮಕ್ಕಳೂ ಅಪ್ಪನಿಗೆ ಹೋರಾಡಿ ಎಂದು ಧೈರ್ಯ ತುಂಬಿದರು. ಮಾತಾಡಲು ಬಾಯಿಯಲ್ಲಿ ಟ್ಯೂಬುಗಳು ತುಂಬಿದ್ದರಿಂದ ಸಾಧ್ಯವಾಗದ ಬೆಲ್ಲೊ ಮಕ್ಕಳನ್ನು ಕಂಡು ಖುಷಿಯಾಗಿದ್ದರು.
ವೈದ್ಯರಿಗೆ ಕೊನೆಗೂ ರೋಗಿ ಬದುಕಿ ಬಂದದ್ದು ಹೇಗೆ ಎಂಬ ಬಗ್ಗೆ ಖಚಿತ ತೀರ್ಮಾನ ಇರಲಿಲ್ಲ. ವೆಂಟಿಲೇಷನ್ ಗೆ ಹೋದ ಮೇಲೆ ಕೆಲವರ ಸ್ಥಿತಿ ಬಿಗಡಾಯಿಸಿದರೆ ಕೆಲವರು ಸುಧಾರಿಸಿಕೊಳ್ಳುತ್ತಾರೆ. ಔಷಧಿ ಕೆಲಸ ಮಾಡೀತೇ ಎಂಬುದೂ ಗೊತ್ತಿರಲಿಲ್ಲ. ಅಥವಾ ಪತ್ನಿ ಪತಿಯನ್ನು ಭೇಟಿ ಮಾಡಿದ್ದು ಉಪಯೋಗ ಆಯಿತೇ ಗೊತ್ತಿಲ್ಲ ಎನ್ನುತ್ತಾರೆ ಡಾ|ಕರಿಯರ್.
“ರೋಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾಗ ಆಕೆ ಮೂರು ತಾಸು ಅಲ್ಲಿ ಹಾಸಿಗೆಯ ಬಳಿ ಇದ್ದರು. ಅಂಥ ಸ್ಥಿತಿ ಬಹಳ ಸಾರಿ ಉಪಯುಕ್ತ. ಅದನ್ನು ಅಲ್ಲಗಳೆಯುವಂತಿಲ್ಲ” ಎನ್ನುತ್ತಾರೆ ಡಾ|ಕರಿಯರ್.
ಎಪ್ರಿಲ್ 14 ರಂದು ವೆಂಟಿಲೇಷನ್ ನಿಂದ ಹೊರಬಂದ ಬೆಲ್ಲೊ 32 ದಿನಗಳ ಬಳಿಕ ಹೊರಗಿನ ಸಹಾಯ ಇಲ್ಲದೆ ಉಸಿರಾಟ ಆರಂಭಿಸಿದ್ದರು.
ಈ ಬಾರಿ ಫೇಸ್ ಟೈಮ್ ಗೆಂದು ಕುಟುಂಬ ವಿಡಿಯೊಚಾಟ್ ಗೆ ಬಂದಾಗ ಅಪ್ಪನ ಬಾಯಲ್ಲಿ ಬಂದ ಮೊದಲ ಶಬ್ದ “ಐ ಲವ್ ಯೂ”
ಐಸಿಯು ನಿಂದ ಅವರು ವೀಲ್ ಚೇರ್ ನಲ್ಲಿ ಹೊರಬಂದಾಗ, ಅವರ ಚಿಕಿತ್ಸೆ ಮಾಡಿದ ಎಲ್ಲ ಸಿಬ್ಬಂದಿ ಚಪ್ಪಾಳೆ ತಟ್ಟಿ ಅವರನ್ನು ಅಭಿನಂದಿಸಿದರು. ಅವರು ಎಲ್ಲರಿಗೂ ಕೈ ಬೀಸಿದರು. ಈಗ ರಿಹ್ಯಾಬಿಲಿಟೇಷನ್ ಕೇಂದ್ರದಲ್ಲಿ ಸುಧಾರಿಸಿಕೊಳ್ಳುತ್ತಿರುವ ಅವರು “ನಾನು ಬದುಕುಳಿಯಲು ಅವರೆಲ್ಲ ಕಾರಣ” ಎಂದರು. ಆಹಾರ ಸೇವನೆ, ನಡೆದಾಟ ಸಾಧ್ಯವಾಗುತ್ತಿದ್ದು, ತನ್ನ ಪತ್ನಿಯ ಬಗ್ಗೆ ತನಗೆ ಹೆಮ್ಮೆ ಇದೆ. ಕುಟುಂಬದ ಜೊತೆ ಬೇಗ ಸೇರಿಕೊಳ್ಳುವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಮೊನ್ನೆ ಶುಕ್ರವಾರ (ಏಪ್ರಿಲ್ 24) ಅವರು ಮನೆಗೆ ಹಿಂದಿರುಗಿದರು.
 

Leave a Reply