Wislawa Szymborska | ಕನ್ನಡಕ್ಕೆ: ಚಿದಂಬರ ನರೇಂದ್ರ
ಮೀನುಗಾರರಿಗೆ
ಸಮುದ್ರದಲ್ಲಿ ಒಂದು ಬಾಟಲಿ ಸಿಕ್ಕಿತು
ಆ ಬಾಟಲಿಯಲ್ಲಿ ಒಂದು ಚೀಟಿ.
“ ಯಾರಾದರೂ ನನ್ನ ಕಾಪಾಡಿ !
ನಾನು ಇಲ್ಲಿರುವೆ
ಸಮುದ್ರ , ನನ್ನ ಈ ನಿರ್ಜನ ದ್ವೀಪದಲ್ಲಿ
ಬಿಸಾಕಿ ಹೋಗಿದೆ
ಸಮುದ್ರದ ದಂಡೆಯಲ್ಲಿ ನಿಂತು
ರಕ್ಷಣೆಗಾಗಿ ಎದುರು ನೋಡುತ್ತಿದ್ದೇನೆ.
ಬೇಗ ಬೇಗ !
ನಾನಿಲ್ಲಿದ್ದೀನಿ ! “
ಹೀಗೆ ಬರೆದಿತ್ತು ಆ ಚೀಟಿಯಲ್ಲಿ.
“ ಇದರಲ್ಲಿ ದಿನಾಂಕ ಬೇರೆ ಬರೆದಿಲ್ಲ
ನನ್ನ ಪ್ರಕಾರ ಈಗಾಗಲೇ ಬಹಳ ತಡ ಆಗಿರಬಹುದು
ಎಷ್ಟು ವರ್ಷದ್ದೋ ಏನೋ “
ಮೊದಲ ಮೀನುಗಾರ
ತನ್ನ ಸಂಶಯ ಹಂಚಿಕೊಂಡ.
“ ಯಾವ ಸಮುದ್ರ? ಯಾವ ಜಾಗ ?
ಒಂದೂ ನಿಖರವಾಗಿಲ್ಲ”
ಎರಡನೇ ಮೀನುಗಾರನ ಸಮಸ್ಯೆ.
“ ಬಹುಶಃ ಬಹಳ ಹೊತ್ತು ಆಗಿರಲಾರದು
ಇಲ್ಲೇ ಎಲ್ಲೋ ಹತ್ತಿರದ ದ್ವೀಪವೇ ಇರಬೇಕು “
ಮೂರನೇ ಮೀನುಗಾರನ ಆಶಯ.
ಮೂವರ ಮುಖದಲ್ಲೂ ಸಂದಿಗ್ಧ
ಆಮೇಲೆ ಯಾರೂ ಮಾತೇ ಆಡಲಿಲ್ಲ.
ಸಾರ್ವತ್ರಿಕ ಸತ್ಯಗಳ ಸಮಸ್ಯೆಯೇ ಇದು.