ಎಲ್ಲರಿಗೂ ಮೋಕ್ಷವೇಕೆ ಸಿಗುವುದಿಲ್ಲ? : ಬುದ್ಧನ ಉತ್ತರ

ಬುದ್ಧ ಒಂದು ಹಳ್ಳಿಯಲ್ಲಿ ತನ್ನ ಗಣದೊಡನೆ ಬೀಡು ಬಿಟ್ಟಿದ್ದ. ಅದನ್ನು ತಿಳಿದ ಹಳ್ಳಿಗನೊಬ್ಬ ಅವನಲ್ಲಿಗೆ ಬಂದ.

ಬುದ್ಧನಿಗೆ ನಮಸ್ಕರಿಸಿ ಹಳ್ಳಿಯವ ಕೇಳಿದ. “ಬುದ್ಧ, ಪ್ರತಿಯೊಬ್ಬ ವ್ಯಕ್ತಿಯೂ ಮೋಕ್ಷವನ್ನು ಪಡೆಯಬಲ್ಲ ಎಂದು ನೀನು ಪದೇ ಪದೇ ಹೇಳುತ್ತಿರುವೆ. ಆದರೆ ಎಲ್ಲರಿಗೂ ಏಕೆ ಮೋಕ್ಷ ಸಿಗುತ್ತಿಲ್ಲ?”

ಅದಕ್ಕೆ ಬುದ್ಧ, “ಒಂದು ಕೆಲಸ ಮಾಡು. ನಿನ್ನ ಹಳ್ಳಿಯ ಜನಗಳನ್ನು, ನಿಮಗೆ ಬದುಕಿನಲ್ಲಿ ನಿಜಕ್ಕೂ ಏನು ಬೇಕಾಗಿದೆಎಂದು ವಿಚಾರಿಸು. ಪ್ರತಿಯೊಬ್ಬನ ಹೆಸರನ್ನು ಮತ್ತು ಅವನ ಬೇಕು ಬೇಡಗಳನ್ನು ಪಟ್ಟಿ ಮಾಡಿ ಬರೆದು ತಾ” ಎಂದು ಸೂಚಿಸಿದ.

ಹಳ್ಳಿಯವ ಹಿಂದಿರುಗಿ, ಬುದ್ಧ ಹೇಳಿದಂತೆ ಪ್ರತಿಯೊಬ್ಬನನ್ನೂ ವಿಚಾರಿಸಿ ನೋಡಿದ. ಅದು ಚಿಕ್ಕ ಹಳ್ಳಿಯಾಘಿದ್ದರಿಂದ, ಸಮೀಕ್ಷೆ ಬೇಗನೇ ಮುಗಿದುಹೋಯಿತು. ಸಂಜೆಯೇ ಆ ಪಟ್ಟಿಯನ್ನು ಬುದ್ಧನ ಮುಂದಿಟ್ಟ.

“ಈ ಪಟ್ಟಿಯಲ್ಲಿ ಎಷ್ಟು ಮಂದಿಗೆ ಮೋಕ್ಷದ ಬಯಕೆ ಇದೆ ಎಂದು ಎಣಿಸಿ ಹೇಳು” ಅಂದ ಬುದ್ಧ.
ಎಣಿಸಿ ನೋಡಿದ ಹಳ್ಳಿಯವನಿಗೆ ನಿಜಕ್ಕೂಆಘಾತ – ನಿರಾಸೆಗಳುಂಟಾದವು. ಆ ಹಳ್ಳಿಯಲ್ಲಿ ಯಾರೊಬ್ಬರೂ ನನಗೆ ಮೋಕ್ಷ ಬೇಕೆಂದು ಹೇಳಿದ ದಾಖಲೆ ಇರಲಿಲ್ಲ.

ಬುದ್ಧ ಮುಗುಳ್ನಕ್ಕು ಹೇಳಿದ. “ಸೌಮ್ಯ! ಪ್ರತಿಯೊಬ್ಬ ವ್ಯಕ್ತಿಯೂ ಮೋಕ್ಷವನ್ನು ಪಡೆಯಬಲ್ಲ ಎಂದು ಈಗಲೂ ಹೇಳುತ್ತೇನೆ. ಆದರೆ ಪ್ರತಿಯೊಬ್ಬನೂ ಮೋಕ್ಷವನ್ನು ಬಯಸುತ್ತಾನೆ ಎಂದು ಈವರೆಗೂ ಹೇಳಿಲ್ಲ, ಮುಂದೆಯೂ ಹೇಳಲಾರೆ. ಯಾರು ಬಯಸುತ್ತಾರೋ, ಅವರಿಗೆ ಅದು ಸಿಗುತ್ತದೆ”

(ಸಂಗ್ರಹ ಮತ್ತು ಅನುವಾದ: ಅಲಾವಿಕಾ)

Leave a Reply