ಕೆಸರು ನೀರು ತಿಳಿಯಾಗಲು ಏನು ಮಾಡಬೇಕು? : ಬುದ್ಧ ಹೇಳಿದ್ದು….

ಗೌತಮ ಬುದ್ಧ ತನ್ನ ಶಿಷ್ಯರೊಂದಿಗೆ ದೇಶ ಸಂಚಾರಕ್ಕೆ ಹೊರಟಿದ್ದ. ಶಿಷ್ಯನೊಬ್ಬ ಯಾವುದೋ ಚಿಂತೆಯಲ್ಲಿದ್ದಂತೆ ಕಾಣಿಸುತ್ತಿತ್ತು. ಬುದ್ಧ ಬಾಯಿಬಿಟ್ಟು ಏನನ್ನೂ ಕೇಳಲಿಲ್ಲ. ಹಾಗೆಯೇ ದಾರಿಮಧ್ಯೆ ಕೆರೆಯೊಂದು ಕಾಣಿಸಿತು. ಆಗ ಬುದ್ಧ ‘ನನಗೆ ಬಹಳ ನೀರಡಿಕೆಯಾಗುತ್ತಿದೆ. ಆ ಕೆರೆಯಿಂದ ನೀರು ತಂದುಕೊಡಿ’ ಎಂದು ಆ ಶಿಷ್ಯನಿಗೆ ಹೇಳಿದ. ಆತ ಕೆರೆಯ ಬಳಿಗೆ ಹೋದ. ಅಷ್ಟರಲ್ಲಿ ಎತ್ತಿನಗಾಡಿಯೊಂದು ಕೆರೆಯನ್ನು ಹಾದು ಹೋಯಿತು. ಅದರ ಪರಿಣಾಮ ಕೆರೆಯ ನೀರು ಕೆಸರಾಯಿತು. ಇಷ್ಟು ಕೊಳಕು ನೀರನ್ನು ಕುಡಿಯಲಾಗುತ್ತದೆಯೇ ಎಂದು ಯೋಚಿಸಿದ ಆ ಶಿಷ್ಯ ವಾಪಸಾಗಿ ವಿಷಯ ಹೀಗೆಂದು ತಿಳಿಸಿದ. ಅರ್ಧ ಗಂಟೆಯ ನಂತರ ಬುದ್ಧ ಪುನಃ ನೀರು ತರುವಂತೆ ಹೇಳಿ ಕಳುಹಿಸಿದ.

ಆದರೆ ಕೆರೆಯ ನೀರು ಇನ್ನೂ ತಿಳಿಯಾಗಿರಲಿಲ್ಲ. ಆ ಶಿಷ್ಯ ಮತ್ತೆ ಖಾಲಿ ಕೈಯಲ್ಲಿ ವಾಪಸಾದ. ಬುದ್ಧ ಮತ್ತೆ ಅರ್ಧ ಗಂಟೆಯ ನಂತರ ನೀರು ಬೇಕೆಂದು ಕೇಳಿದ. ಶಿಷ್ಯ ಕೆರೆ ಬಳಿಗೆ ಬಂದ. ಅಷ್ಟರಲ್ಲಿ ನೀರು ಸಂಪೂರ್ಣವಾಗಿ ತಿಳಿಯಾಗಿತ್ತು. ಆತ ಒಂದು ಮಡಕೆಯಲ್ಲಿ ನೀರನ್ನು ಮೊಗೆದು ಬುದ್ಧನಿದ್ದಲ್ಲಿಗೆ ಹೋದ.

ನೀರು ತೆಗೆದುಕೊಂಡ ಬುದ್ಧ ಕೇಳಿದ ‘ಕೆಸರಾಗಿದ್ದ ನೀರನ್ನು ತಿಳಿಯಾಗಿಸಲು ನೀನೇನು ಮಾಡಿದೆ?’. ಅದಕ್ಕೆ ಶಿಷ್ಯ ‘ಇಲ್ಲ ನಾನೇನು ಮಾಡಲಿಲ್ಲ ಭಗವನ್. ಅದು ತನ್ನಿಂದ ತಾನೇ ತಿಳಿಯಾಯಿತು’ ಎಂದ.

ಆಗ ನಸುನಕ್ಕ ಬುದ್ಧ ಹೇಳಿದ, ‘ಹೌದು ನೀನೇನೂ ಮಾಡಲಿಲ್ಲ. ನೀರು ತಿಳಿಯಾಗುವವರೆಗೂ ನೀನು ಸಮಯ ನೀಡಿದೆ. ಅದನ್ನು ಮತ್ತಷ್ಟು ಕಲಕುವ ಕೆಲಸಕ್ಕೆ ಕೈ ಹಾಕಲಿಲ್ಲ. ನಮ್ಮ ಮನಸ್ಸು ಕೂಡ ಹಾಗೆಯೇ.
ಯಾವಾಗ ಮನಸ್ಸು ವಿಚಲಿತಗೊಳ್ಳುತ್ತದೆಯೋ, ಚಂಚಲಗೊಳ್ಳುತ್ತದೆಯೋ, ಅದನ್ನು ಹಾಗೆಯೇ ಬಿಟ್ಟುಬಿಡಬೇಕು. ಅದನ್ನು ಮತ್ತಷ್ಟು ಕಲಕುವುದು ಬೇಡ. ಸಮಯ ಕೊಟ್ಟು ನೋಡಿ, ಅದು ತನ್ನಷ್ಟಕ್ಕೆ ತಾನೇ ತಿಳಿಯಾಗುತ್ತದೆ. ಗಲಿಬಿಲಿಗೊಂಡ ಮನಸ್ಸಿನಲ್ಲಿ ಯಾವುದಾದರೂ ನಿರ್ಧಾರ ತೆಗೆದುಕೊಂಡಿರೋ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಮನಶ್ಶಾಂತಿ ಪಡೆಯುವುದು ಶ್ರಮದ ಕೆಲಸವಲ್ಲ, ಅದು ಅನಾಯಾಸ ಪ್ರಕ್ರಿಯೆ. ಏನೂ ಮಾಡುವುದು ಬೇಡ, ಸುಮ್ಮನಿದ್ದರೆ ಸಾಕು!’

(ಅರಳಿಮರ ಓದುಗರೊಬ್ಬರು ಫಾರ್ವರ್ಡ್ ಮಾಡಿದ್ದು)

Leave a Reply