ಬೈದರೂ ಬುದ್ಧನೇಕೆ ನಗುತ್ತಿದ್ದ?

ಶಿಷ್ಯ ಆನಂದ ಕೇಳಿದ, “ಅವನು ಅಷ್ಟೆಲ್ಲ ಬೈದರೂ ನೀವ್ಯಾಕೆ ಸುಮ್ಮನಿದ್ದಿರಿ? ಸಾಲದ್ದಕ್ಕೆ ನಗುತ್ತಲೇ ಇದ್ದಿರಿ!?” 

ಬುದ್ಧ ತನ್ನ ಪರಿವಾರದೊಡನೆ ಕೂತಿದ್ದ.
ಅಲ್ಲಿಗೆ ಬಂದ ಆಗಂತುಕನೊಬ್ಬ ಹಿಂದುಮುಂದಿಲ್ಲದೆ ಬುದ್ಧನನ್ನು ವಾಚಾಮಗೋಚರವಾಗಿ ಬಯ್ಯತೊಡಗಿದ. ಕಡೆಗೆ ಸಾಕಾಗಿ ಅಲ್ಲಿಂದ ಹೊರಟುಹೋದ.

ಆತ ಅಲ್ಲಿಗೆ ಬರುವ ಮುನ್ನವೂ ಬಂದಾಗಲೂ ಬಯ್ಯುವಾಗಲೂ ಬೈದುಹೋದಮೇಲೂ ಮುಗುಳ್ನಗುತ್ತಲೇ ಇದ್ದ ಬುದ್ಧ. ಆ ನಗುವಿನಲ್ಲಿ ವ್ಯಂಗ್ಯವಾಗಲೀ ಉದಾಸೀನವಾಗಲೀ ಇರಲಿಲ್ಲ. ಅಲ್ಲಿ ವಿಷಾದದ ಲೇಪವೂ ಇರಲಿಲ್ಲ. 

ಇದನ್ನು ಕಂಡ ಶಿಷ್ಯ ಆನಂದ ಕೇಳಿದ, “ಅವನು ಅಷ್ಟೆಲ್ಲ ಬೈದರೂ ನೀವ್ಯಾಕೆ ಸುಮ್ಮನಿದ್ದಿರಿ? ಸಾಲದ್ದಕ್ಕೆ ನಗುತ್ತಲೇ ಇದ್ದಿರಿ!?”
ಬುದ್ಧ ಕೇಳಿದ, “ಯಾರಾದರೂ ಬಂದು ನಿನ್ನ ಚೀಲಕ್ಕೆ ಏನಾದರೂ ಹಾಕುತ್ತಾರೆ ಅಂತಿಟ್ಟುಕೋ. ಅದನ್ನು ನೀನು ಸ್ವೀಕರಿಸಿದರೆ ಏನಾಗುತ್ತದೆ?’
“ಚೀಲದ ತೂಕ ಜಾಸ್ತಿಯಾಗುತ್ತೆ ಮತ್ತು ನಾನದನ್ನು ಹೊರಲು ಭಾರವಾಗುತ್ತೆ”
“ಅದನ್ನು ಸ್ವೀಕರಿಸದೆ ಇದ್ದರೆ?”
“ಆ ಪದಾರ್ಥ ಅವನಲ್ಲೇ ಉಳಿಯುತ್ತೆ ಮತ್ತು ನನ್ನ ಪಾಡಿಗೆ ನಾನು ಎಂದಿನ ಖಾಲಿ ಚೀಲ ಹೊತ್ತು ನಡೆಯುತ್ತೇನೆ”.

“ನಾನು ಮಾಡಿದ್ದೂ ಅದನ್ನೇ. ಅವನ ಬೈಗುಳಗಳನ್ನು ನಾನು ಸ್ವೀಕರಿಸಲಿಲ್ಲ. ಅದರಿಂದ ನನ್ನಲ್ಲಿ ಯಾವ ಬದಲಾವಣೆಯೂ ಘಟಿಸಲಿಲ್ಲ” ಅಂದ ಬುದ್ಧ. 

Leave a Reply