ಬೇಡುವುದು ಮನುಷ್ಯನ ಅತಿ ದೊಡ್ಡ ದೌರ್ಬಲ್ಯ : ಓಶೋ, ‘ದ ಬುಕ್ ಆಫ್ ಮ್ಯಾನ್’ #5

ನಮಗೆ ಒಂದು ವಸ್ತುವಿನ ಮೇಲೆ ಆಸೆಯಾದರೆ ಅದಕ್ಕಾಗಿ ಕಷ್ಟಪಡಬೇಕು, ಶ್ರಮ ಪಡಬೇಕು. ಆಗ ಆ ವಸ್ತು ಒಂದು ವೇಳೆ ಸಿಗದಿದ್ದರೂ ನಮಗೆ ಹೋರಾಡಿದ ನೆಮ್ಮದಿ ಇರುತ್ತದೆ, ಮುಂದೆಯೂ ಹೋರಾಡಬೇಕು ಎನ್ನುವ ಛಲವಿರುತ್ತದೆ. ನಾವು ಯಾವುದಾದರೂ ವಸ್ತುವನ್ನು ಬೇಡಿ ಪಡೆದರೆ ಅದು ನಮ್ಮ ಬಳಿ ಇದ್ದರೂ ನಮ್ಮ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ~ ಓಶೋ ರಜನೀಶ್ | ದ ಬುಕ್ ಆಫ್ ಮ್ಯಾನ್ ; ಕನ್ನಡ ನಿರೂಪಣೆ : ಪ್ರಣವ ಚೈತನ್ಯ

ಬೇಡುವುದು ಮನುಷ್ಯನ ದೌರ್ಬಲ್ಯ. ಯಾವಾಗ ಮನುಷ್ಯನು ತನಗೆ ಬೇಕಾಗಿದ್ದನ್ನು ಕಷ್ಟ ಪಡದೆ ದೊರಕಿಸಿಕೊಳ್ಳಲು ಹೋಗುತ್ತಾನೋ ಆಗ ಅದು ಬೇಡಿಕೆಯಾಗುತ್ತದೆ. ಮನುಷ್ಯನು ಅನ್ನಕ್ಕಾಗಿ ಬೇಡುತ್ತಾನೆ, ದುಡ್ಡಿಗಾಗಿ ಬೇಡುತ್ತಾನೆ. ಹೀಗೆ ಬೇಡುತ್ತಾ ಬೇಡುತ್ತಾ ಅವನು ದುರ್ಬಲನಾಗುತ್ತಾನೆ. ಬೇರೆಯವರು ನಮ್ಮನ್ನು ನೋಡಬೇಕು ಎಂದು ನಾವು ಬಯಸುತ್ತೇವೆ. ನಮ್ಮ ಹಣ, ಐಶ್ವರ್ಯವನ್ನು ಬೇರೆಯವರು ನೋಡಬೇಕು ಎಂದು ನಾವು ಬಯಸಿದರೆ, ಅದು ಕೂಡ ಒಂದು ರೀತಿಯ ಬೇಡಿಕೆಯೇ. ಅಪೇಕ್ಷೆ ಪಡುವುದು ಕೂಡ ಒಂದು ರೀತಿಯ ಬೇಡಿಕೆ.

ಒಂದು ಬಾರಿ ಒಬ್ಬ ರಾಜಕುಮಾರನಿಗೆ ತನ್ನನ್ನು ಮದುವೆಯಾಗುತ್ತಿರುವ ರಾಜಕುಮಾರಿ ಒಂದು ಪಂಥವನ್ನು ಒಡ್ಡುತ್ತಾಳೆ, ಅವರ ಸಾಮ್ರಾಜ್ಯದಲ್ಲಿ ಒಂದು ಅತೀ ಸುಂದರವಾದ ಪಾರಿವಾಳವಿರುತ್ತದೆ, ಅದನ್ನು ನನಗೆ ಹೇಗಾದರು ತನಗೆ ತಂದು ಕೊಡಬೇಕು ಎಂದು ಹೇಳುತ್ತಾಳೆ. ಅದರಂತೆ  ಆ ರಾಜಕುಮಾರ ಪಾರಿವಾಳವನ್ನು ಹುಡುಕಿಕೊಂಡು ಹೋಗುತ್ತಾನೆ. ಅವನು ಆ ಪಾರಿವಾಳವನ್ನು ಎಷ್ಟು ಹುಡುಕಿದರೂ ಅವನಿಗೆ ಅದು ಸಿಗುವುದಿಲ್ಲ. ಕಡೆಗೆ ಸುಸ್ತಾಗಿ ಒಂದು ಕಾಡಿನಲ್ಲಿ ವಿಶ್ರಮಿಸಲು ಒಂದು ಮರದ ಕೆಳಗೆ ಕುಳಿತುಕೊಳ್ಳುತ್ತಾನೆ. ಆಗ ಅವನ ಮುಂದೆ ಒಬ್ಬ ವ್ಯಕ್ತಿ ತನ್ನ ಹೆಗಲ ಮೇಲೆ ಆ ಪಾರಿವಾಳವನ್ನು ಕೂರಿಸಿಕೊಂಡು ಹೋಗುತ್ತಿರುತ್ತಾನೆ. ಇದನ್ನು ನೋಡಿದ ರಾಜಕುಮಾರನು ಅವನಿಗೆ ನಿಲ್ಲಲು ಹೇಳಿ ಆ ಪಾರಿವಾಳವನ್ನು ನನಗೆ ಕೊಡು ಎಂದು ಗದರಿಸುತ್ತಾನೆ. ಅವನು ಆಗುವುದಿಲ್ಲ ಎಂದು ಹೇಳಿದಾಗ “ನಾನು ಈ ದೇಶದ ರಾಜಕುಮಾರ, ನನಗೇ ಕೊಡುವುದಿಲ್ಲ ಅನ್ನುತ್ತೀಯ?” ಎಂದು ಗುಡುಗುತ್ತಾನೆ.

ಆಗಲೂ ಆ ವ್ಯಕ್ತಿ ಒಪ್ಪುವುದಿಲ್ಲ. ಆಗ ಅವನ ಹಾಗು ರಾಜಕುಮಾರನ ಮಧ್ಯೆ ಯುದ್ದವಾಗುತ್ತದೆ, ಯುದ್ದದಲ್ಲೂ ರಾಜಕುಮಾರ ಸೋಲುತ್ತಾನೆ. ಕಡೆಗೆ ರಾಜಕುಮಾರ “ದಯವಿಟ್ಟು ನನಗೆ ಆ ಪಾರಿವಾಳವನ್ನು ಕೊಟ್ಟುಬಿಡು ಅದನ್ನು ತೆಗೆದುಕೊಂಡು ಹೋದರೆ ಮಾತ್ರ ನನ್ನ ರಾಜಕುಮಾರಿಯನ್ನು ಸಂತೋಷ ಪಡೆಸಲು ಸಾಧ್ಯ” ಎಂದು ಬೇಡುತ್ತಾನೆ. ಆಗ ಆ ಮನುಷ್ಯನು ರಾಜಕುಮಾರನ ಹತ್ತಿರಕ್ಕೆ ಬಂದು, “ನೀನು ನಿಜವಾಗಿಯು ರಾಜಕುಮಾರನ? ರಾಜನ ಪುತ್ರನಾಗಿ ಬೇಡುತ್ತಿದ್ದೀಯಲ್ಲ!” ಎಂದು ಹೇಳುತ್ತಾನೆ. ಆಗ ರಾಜಕುಮಾರನು “ನಾನು ನನ್ನ ಕೈಯಲ್ಲಾದ ಎಲ್ಲಾ ಪ್ರಯತ್ನವನ್ನು ಮಾಡಿದ ಮೇಲೆಯೇ ಬೇಡಲು ಶುರುಮಾಡಿದೆ” ಎಂದು ಹೇಳುತ್ತಾನೆ.

ಆಗ ಆ ಮನುಷ್ಯನು “ನೀನು ನಿನ್ನ ಪೂರ್ತಿಪ್ರಯತ್ನವನ್ನು ಮಾಡಲಿಲ್ಲ, ಶಕ್ತಿ ಹಾಗು ತಾಕತ್ತು ತೋರಿಸುವುದಷ್ಟೆ ಪ್ರಯತ್ನ ಎಂದು ಅಂದುಕೊಂಡಿದ್ದರೆ ಅದು ನಿನ್ನ ತಪ್ಪು, ನೀನು ನನ್ನ ಬಳಿ ಬಂದು ದರ್ಪ ತೋರಿಸುವ ಬದಲು ನಿದಾನವಾಗಿಯೇ ನನಗೆ ಸ್ವಲ್ಪ ಹಣವನ್ನು ತೋರಿಸಿದ್ದರೆ ನಾನು ಪಾರಿವಾಳವನ್ನು ನಿನ್ನ ಬಳಿಯೆ ಬಿಡುತಿದ್ದೆ. ಯಾರ ಬಳಿಯೂ ಎಂದಿಗೂ ಏನನ್ನೂ ಬೇಡಬೇಡ, ನಿನಗೆ ಬೇಕಾಗಿದ್ದು ಸಿಗುವವರೆಗೂ ಹೋರಾಡು. ನಿನಗೆ ಬೇಕಾದುದನ್ನು ಪಡೆದುಕೊಳ್ಳುವ ಸಲುವಾಗಿ ನೀನು ಮರಣ ಹೊಂದಿದರು ತೊಂದರೆಯಯಿಲ್ಲ, ನಿನ್ನ ಮನಸ್ಸಿಗೆ ನಾನು ಪ್ರಯತ್ನಿಸಿದೆ ಎನ್ನುವ ನೆಮ್ಮದಿ ಇರುತ್ತದೆ” ಎಂದು ಹೇಳುತ್ತಾ ಪಾರಿವಾಳವನ್ನು ರಾಜಕುಮಾರನಿಗೆ ಕೊಟ್ಟು ಸ್ವಲ್ಪ ಹಣವನ್ನು ಪಡೆದು ಹೋಗುತ್ತಾನೆ.

ಇದರಿಂದ ನಾವು ಅರಿತುಕೊಳ್ಳಬೇಕಾರುವುದು ಇಷ್ಟೆ; ನಮಗೆ ಒಂದು ವಸ್ತುವಿನ ಮೇಲೆ ಆಸೆಯಾದರೆ ಅದಕ್ಕಾಗಿ ಕಷ್ಟಪಡಬೇಕು, ಶ್ರಮ ಪಡಬೇಕು. ಆಗ ಆ ವಸ್ತು ಒಂದು ವೇಳೆ ಸಿಗದಿದ್ದರೂ ನಮಗೆ ಹೋರಾಡಿದ ನೆಮ್ಮದಿ ಇರುತ್ತದೆ, ಮುಂದೆಯೂ ಹೋರಾಡಬೇಕು ಎನ್ನುವ ಛಲವಿರುತ್ತದೆ. ನಾವು ಯಾವುದಾದರೂ ವಸ್ತುವನ್ನು ಬೇಡಿ ಪಡೆದರೆ ಅದು ನಮ್ಮ ಬಳಿ ಇದ್ದರೂ ನಮ್ಮ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಅನ್ನುತ್ತಾರೆ ಓಶೋ ರಜನೀಶ್, ತಮ್ಮ “ದಿ ಬುಕ್ ಆಫ್ ಮ್ಯಾನ್” ಕೃತಿಯಲ್ಲಿ.

ಹಿಂದಿನ ಕಂತು ಇಲ್ಲಿ ಓದಿ : https://aralimara.com/2019/06/25/osho-25/

Leave a Reply