ಒಮ್ಮೆ ಒಬ್ಬ ಮನುಷ್ಯ ಕಾಡಿನಲ್ಲಿ ಹೋಗುತ್ತಿದ್ದೆ. ವಾಸನೆ ಹಿಡಿದ ಹುಲಿ, ಅವನನ್ನು ಹುಡುಕಿಕೊಂಡು ಬಂದಿತು.
ಅದನ್ನು ನೋಡುತ್ತಲೇ ಮನುಷ್ಯ ಭಯದಿಂದ ಓಡಲಾರಂಭಿಸಿದ. ಹುಲಿಯೂ ಅವನ ಬೆನ್ನಟ್ಟತೊಡಗಿತು.
ಮನುಷ್ಯ ಓಡುತ್ತ ಓಡುತ್ತ ಬೆಟ್ಟದ ಅಂಚಿಗೆ ಬಂದ. ಕೆಳಗೆ ಬಗ್ಗಿ ನೋಡಿದರೆ ಪ್ರಪಾತ! ಮುಂದೆ ಹುಲಿ, ಹಿಂದೆ ಧರೆ!!
ಏನೂ ತೋಚದೆ ಗಲಿಬಿಲಿಗೊಂಡ.
ಅಂಚಿನಲ್ಲೊಂದು ಮರವಿದ್ದು, ಅದರ ಕೊಂಬೆಗಳು ಕೆಳಗೆ ಚಾಚಿಕೊಂಡಿದ್ದವು.
ಆ ಮನುಷ್ಯ ಹಿಂದೆ ಮುಂದೆ ನೋಡದೆ ಕೆಳಗೆ ಧುಮುಕಿ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಜೋತಾಡತೊಡಗಿದ.
ಆದರೇನು ಮಾಡೋದು!? ಆ ಕೊಂಬೆಯೂ ಟೊಳ್ಳಾಗಿ ಮುರಿದು ಬೀಳುವುದರಲ್ಲಿದೆ!
ಮನುಷ್ಯ ಆತಂಕದಿಂದ ಭಗವಂತನನ್ನು ನೆನೆಯುತ್ತಾ, “ಓ ದೇವರೇ! ನನ್ನನ್ನು ಕಾಪಾಡು” ಎಂದು ಕೂಗಿಕೊಂಡ.
ತತ್’ಕ್ಷಣ ಪ್ರತ್ಯುತ್ತರ ಮೊಳಗಿತು.
“ಖಂಡಿತಾ ಕಾಪಾಡುತ್ತೇನೆ ಮನುಷ್ಯ. ಮೊದಲು ನೀನು ಹಿಡಿದಿರುವ ಆ ಕೊಂಬೆಯನ್ನು ಬಿಡು!”
(ಸಂಗ್ರಹ ಮತ್ತು ಅನುವಾದ : ಅಲಾವಿಕಾ)