ಈ ಮೃತ್ಯುವನ್ನು ದಾಟುವುದು ಎಂದರೇನು? ಈ ಸತ್ಯವನ್ನರಿತವರು ಸಾಯುವುದೇ ಇಲ್ಲವೆಂದೇ?
ಖಂಡಿತಾ ಹಾಗಲ್ಲ. ‘ಮೃತ್ಯುವನ್ನು ದಾಟುವುದು’ ಎಂದರೆ…. ~ ಸಾ.ಹಿರಣ್ಮಯಿ
ವೇದಾಹಮೇತಂ ಪುರುಷಂ ಮಹಾಂತಂ
ಆದಿತ್ಯವರ್ಣಂ ತಮಸಃ ಪರಸ್ತಾತ್
ತಮೇವ ವಿದಿತ್ವಾ ಅತಿಮೃತ್ಯುಮೇತಿ
ನಾನ್ಯಃ ಪಂಥಾ ಅಯನಾಯ ವಿದ್ಯತೇ || ಶ್ವೇತಾಶ್ವತರ ಉಪನಿಷತ್ತು 3.8 ||
ಅಜ್ಞಾನವೆಂಬ ಅಂಧಕಾರದ ಆಚೆಗಿರುವ (ಅದನ್ನು ಮೀರಿರುವ) ಪ್ರಕಾಶ ಸ್ವರೂಪವಾದ ಈ ಮಹಾಪುರುಷನನ್ನು ನಾನು ಅರಿತಿರುತ್ತೇನೆ. ಅವನನ್ನು ಅರಿತುಕೊಂಡ ಮನುಷ್ಯರು ಮೃತ್ಯುವನ್ನು ದಾಟುತ್ತಾರೆ. ಪರಮಪದಕ್ಕೆ ಇದಕ್ಕಿಂತ ಬೇರೆ ದಾರಿಯಿಲ್ಲ.
ಆತ್ಮವು ಎಲ್ಲವನ್ನೂ ಮೀರಿದ, ಮೀರಿಸುವ ಅವಸ್ಥೆ. ಆ ಸತ್ಯವನ್ನು ಎಲ್ಲಕ್ಕಿಂತಲೂ ದೊಡ್ಡದು ಎಂಬ ಅರ್ಥದಲ್ಲಿ ‘ಬ್ರಹ್ಮ’ ಎಂದು ಕರೆಯಲಾಗಿದೆ. ಇದು ಕೇವಲ ಕಲ್ಪನೆಯಲ್ಲ. ಆಂತರಿಕ ಶೋಧದಿಂದ ಅಧ್ಯಾತ್ಮ ಶಿಖರವನ್ನೇರಿ ಕಂಡುಕೊಂಡ ‘ದ್ರಷ್ಟಾರ’ರ ದಿವ್ಯಾನುಭವ.
ತಾವು ಕಂಡುಕೊಂಡ, ಅನುಭವಿಸಿದ ಸತ್ಯವನ್ನು ಹಿಂದಿನ ಋಷಿಗಳು ಕೇವಲ ತಮ್ಮಲ್ಲೇ ಇಟ್ಟುಕೊಂಡು ಸುಖಿಸದೆ, ಇತರರಿಗೂ ಹಂಚಿದರು. ಜ್ಞಾನವನ್ನು ಹೊಂದುವುದು ಮಾತ್ರವಲ್ಲ, ಹಂಚುವುದು ಕೂಡಾ ಮೋಕ್ಷದ ಹಾದಿಯಲ್ಲಿ ಪ್ರಯಾಣಿಸುವ ಮುಖ್ಯ ಪ್ರಕ್ರಿಯೆ ಎಂದು ಅವರು ಭಾವಿಸಿದ್ದರು. ಈ ನಿಟ್ಟಿನಲ್ಲಿ ಅವರು ಕಂಡುಕೊಂಡ ಅಂಧಕಾರವನ್ನು ಮೀರಿದ ಪರಮಪ್ರಕಾಶವನ್ನು ವಿವರಿಸಲು ಯತ್ನಿಸುತ್ತಾ; ಇದನ್ನು ಅರಿತವರು ‘ಮೃತ್ಯುವನ್ನು ದಾಟುತ್ತಾರೆ’ ಎಂದು ಘೋಷಿಸಿದರು. ಮೃತ್ಯುವನ್ನು ದಾಟಲು ಜ್ಞಾನವನ್ನು ಪಡೆಯದೆ ಬೇರೆ ದಾರಿಯೇ ಇಲ್ಲವೆಂದು ಹೇಳಿಬಿಟ್ಟರು.
ಈ ಮೃತ್ಯುವನ್ನು ದಾಟುವುದು ಎಂದರೇನು? ಈ ಸತ್ಯವನ್ನರಿತವರು ಸಾಯುವುದೇ ಇಲ್ಲವೆಂದೇ?
ಖಂಡಿತಾ ಹಾಗಲ್ಲ. ‘ಮೃತ್ಯುವನ್ನು ದಾಟುವುದು’ ಎಂದರೆ ಜನನ – ಮರಣ ಚಕ್ರವನ್ನು ಮೀರುವುದು. ಮೃತ್ಯುವನ್ನು ದಾಟುವುದು ಎಂದರೆ ಚಿರಂಜೀವಿಗಳಾಗುವುದು ಎಂದಲ್ಲ… ಮೋಕ್ಷ ಹೊಂದುವುದು.
ಮೋಕ್ಷ ಪಡೆದವರು ಮತ್ತೆ ಯಾವ ಯೋನಿಯಲ್ಲೂ ಹುಟ್ಟಿಬರುವುದಿಲ್ಲ. ಆದ್ದರಿಂದ ಅವರು ಮತ್ತೆ ಮತ್ತೆ ಸಾಯುವ ಪ್ರಮೇಯವೇ ಬರುವುದಿಲ್ಲ. ಈ ಹುಟ್ಟು – ಸಾವುಗಳ ನಡುವೆ ಮಿಥ್ಯಾಜಗತ್ತಿನ ಕಷ್ಟಸುಖಗಳನ್ನು ಸಹಿಸಿ; ಸುಖಿಸಿ, ನರಳಿ ಒದ್ದಾಡಬೇಕಾಗಿಯೂ ಬರುವುದಿಲ್ಲ.
ಆದ್ದರಿಂದ, ಜ್ಞಾನಿಗಳಾಗೋಣ. ಇಲ್ಲವಾದರೆ, ‘ನಾನ್ಯಃ ಪಂಥಾ ಅಯನಾಯ ವಿದ್ಯತೇ’ – ಕಷ್ಟಪರಂಪರೆಯನ್ನು ಮೀರಲು ನಮಗೆ ಅರಿವಿನ ವಿನಾ ಬೇರೆ ದಾರಿಯೇ ಇಲ್ಲ!