ಅಂತರಂಗದ ಗೆಲುವೇ ಗೆಲುವು, ಬಹಿರಂಗದ ಗೆಲುವಲ್ಲ : ಸುಭಾಷಿತ

“ವ್ಯಕ್ತಿಯು ಶತ್ರುವಿಗಾಗಲಿ, ಬೆಂಕಿಗಾಗಲಿ, ಹಾವಿಗಾಗಲಿ, ಸಿಡಿಲಿಗಾಗಲಿ ಅಷ್ಟೇನೂ ಹೆದರಬೇಕಾಗಿಲ್ಲ. ಇವೆಲ್ಲಕ್ಕಿಂತ ಅವನು ಹೆದರಬೇಕಾದದ್ದು ತನ್ನ (ಬಾಹ್ಯ ಹಾಗೂ ಒಳಗಣ) ಇಂದ್ರಿಯಗಳಿಗೆ” ಅನ್ನುತ್ತಾನೆ ಅಶ್ವಘೋಷ

ಭೇತವ್ಯಂ ನ ತಥಾ ಶತ್ರೋಃ ನಾಗ್ನೇರ್ನಾಹೇರ್ನ ಚಾಶನೇಃ |
ಇಂದ್ರಿಯೇಭ್ಯೋ ಯಥಾ ಸ್ವೇಭ್ಯಃ ತೈರಜಸ್ರಂ ಹಿ ಹನ್ಯತೇ || ಅಶ್ವಘೋಷ, ಸೌಂದರನಂದ ಕೃತಿ ||

ಅರ್ಥ: “ವ್ಯಕ್ತಿಯು ಶತ್ರುವಿಗಾಗಲಿ, ಬೆಂಕಿಗಾಗಲಿ, ಹಾವಿಗಾಗಲಿ, ಸಿಡಿಲಿಗಾಗಲಿ ಅಷ್ಟೇನೂ ಹೆದರಬೇಕಾಗಿಲ್ಲ. ಇವೆಲ್ಲಕ್ಕಿಂತ ಅವನು ಹೆದರಬೇಕಾದದ್ದು ತನ್ನ (ಬಾಹ್ಯ ಹಾಗೂ ಒಳಗಣ) ಇಂದ್ರಿಯಗಳಿಗೆ. ಏಕೆಂದರೆ ಇಂದ್ರಿಯಗಳು ಹಾಗೂ ಅವನ್ನು ತೃಪ್ತಿಪಡಿಸುವ ಅರಿಷಡ್ವರ್ಗಗಳು ಸದಾ ಒಂದಿಲ್ಲೊಂದು ಸಮಸ್ಯೆ ಉಂಟುಮಾಡುತ್ತಲೇ ಇರುತ್ತವೆ. ಪಾಪಕಾರ್ಯಗಳಿಗೆ ಪ್ರಚೋದನೆ ನೀಡುತ್ತಲೇ ಇರುತ್ತವೆ”

ಮನುಷ್ಯನ ಶತ್ರುಗಳು ಯಾರು ಅನ್ನುವ ಪ್ರಶ್ನೆಗೆ ಹೊರಗೆಲ್ಲೋ ಉತ್ತರ ಹುಡುಕಬೇಕಿಲ್ಲ. ನಮ್ಮೊಳಗೆ ನಾವು ನೋಡಿಕೊಂಡರೆ ಸಾಕು. ನಮ್ಮ ಲೋಭ ಮೋಹಗಳು, ಸ್ವಾರ್ಥ ಮತ್ಸರಗಳು ನಮ್ಮನ್ನು ಹಾಳು ಮಾಡುವಷ್ಟು ಹೊರಗಿನ ಯಾರೂ, ಯಾವ ಶಕ್ತಿಗಳೂ ನಮ್ಮನ್ನು ಹಾಳು ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಮೊದಲು ನಾವು ನಮ್ಮೊಳಗಿನ ಶತ್ರುಗಳನ್ನು ಗೆದ್ದುಕೊಳ್ಳುವುದು ಅತ್ಯಗತ್ಯ. 

ಹಾಗೆಂದು, ಈ ಶತ್ರುಗಳೊಡನೆ ಯುದ್ಧ ಮಾಡುವುದು ಸುಲಭದ ಮಾತಲ್ಲ. ಇದು ನಮ್ಮ ಮೇಲೇನಾವು ಹೂಡುವ ಯುದ್ಧ. ಈ ಯುದ್ಧದಲ್ಲಿ ನಾವು ನಮ್ಮನ್ನೇ ಮಣಿಸಿಕೊಳ್ಳಬೇಕು. ಅಹಂಕಾರವನ್ನು ನಾಶಪಡಿಸಿಕೊಳ್ಳಬೇಕು. ಲೋಭ ಮೋಹಗಳನ್ನು ಕೊಲ್ಲಬೇಕು. ಈ ಪ್ರಕ್ರಿಯೆಯಲ್ಲಿ ನಮಗೆ ನಾವು ನಮ್ಮ ಕೈಯಾರೆ ನಮ್ಮ ಅಸ್ತಿತ್ವವನ್ನು ಕೊಂದುಕೊಳ್ಳುತ್ತಿದ್ದೇವೆ ಅನ್ನಿಸತೊಡಗುತ್ತದೆ. ನಮ್ಮ ಗುರುತನ್ನು ಕಳೆದುಕೊಂಡುಬಿಡುವ ಅಭದ್ರತೆ ಕಾಡತೊಡಗುತ್ತದೆ. ಇವುಗಳಿಗೆ ಅಂಜಿ ನಮ್ಮ ಪ್ರಯತ್ನ ಕೈಬಿಟ್ಟರೆ ಮುಗಿಯಿತು. ಮತ್ತೆ ನಾವು ಅಂಥಾ ಪ್ರಯತ್ನಕ್ಕೆ ಕೈಹಾಕಲಾರೆವು. 

ಆದ್ದರಿಂದ, ಛಲ ಬಿಡದೆ ಒಳಗಿನ ದೌರ್ಬಲ್ಯಗಳನ್ನು, ಶತ್ರುಗಳನ್ನು ಮಟ್ಟಹಾಕಬೇಕು. ಆಗ ಮಾತ್ರ ನಾವು ನಿಜಕ್ಕೂ ಗೆದ್ದಂತಾಗುವುದು. 

Leave a Reply