UG ಜೊತೆ ಮಾತುಕತೆ #1

ಯೂಜಿ ವಿಲಕ್ಷಣ ಆಧ್ಯಾತ್ಮಿಕ ಗುರು. ಆದರೆ ಅವರು ತಮ್ಮನ್ನು ಗುರು ಎಂದು ಗುರುತಿಸಿಕೊಳ್ಳಲು ನಿರಾಕರಿಸಿದ್ದರು. ತಮ್ಮನ್ನು ತಾವು ಯಾವುದರ ಪಥದರ್ಶಕನೂ ಅಲ್ಲವೆಂದೇ ಹೇಳಿಕೊಳ್ಳುತ್ತಿದ್ದರು. ಆದರೆ ಯೂಜಿಯವರ ಮಾತುಗಳನ್ನು ಕೇಳಿದವರು. ಓದಿದವರು ಅವರಲ್ಲೊಬ್ಬ ಆಧ್ಯಾತ್ಮಿಕ – ತತ್ತ್ವಜ್ಞಾನಿ – ದಾರ್ಶನಿಕನನ್ನು ಕಾಣದೆ ಇರಲಾರರು, ಮತ್ತು ಗುರುವೆಂದು ಸ್ವೀಕರಿಸದೆ ಇರಲಾರರು. ಹೀಗೆ ತಮ್ಮ ವಿಚಾರಗಳಿಂದ ‘ಯುಜಿ’ ಎಂದೇ ದೇಶವಿದೇಶಗಳಲ್ಲಿ ಖ್ಯಾತಿ ಪಡೆದಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿಯವರೊಂದಿಗೆ ಅವರ ಅನುಯಾಯಿಗಳು/ಆಸಕ್ತರು ನಡೆಸಿ ಮಾತುಕತೆಯ ತುಣುಕುಗಳು ಇಲ್ಲಿವೆ. ಅರಳಿಬಳಗದ ಚಿದಂಬರ ನರೇಂದ್ರ ಈ ಸಂವಾದಗಳನ್ನು ಕನ್ನಡಕ್ಕೆ ತಂದಿದ್ದಾರೆ….

ಪ್ರಶ್ನೆ : ಜಗತ್ತಿನಲ್ಲಿ ಪ್ರಶ್ನೆಗಳು, ಸಮಸ್ಯೆಗಳು ಇರುವುದು ನಿಜವೆ ?

ಯೂಜಿ : ಎಲ್ಲ ಪ್ರಶ್ನೆಗಳ ಹುಟ್ಟು ನಮಗೆ ಗೊತ್ತಿರುವ ಅವುಗಳ ಉತ್ತರಗಳಲ್ಲಿವೆ. ನಿಜವಾಗಿ ಉತ್ತರಗಳು ಯಾರಿಗೂ ಬೇಕಿಲ್ಲ. ಈ ಪ್ರಶ್ನೆಗಳು ನಮ್ಮ ಬದುಕಿನ ಆಧಾರ ಸ್ಥಂಭ. ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕುಬಿಟ್ಟರೆ, ಪ್ರಶ್ನೆಗಳು ನಾಶವಾಗುತ್ತವೆ ಆಗ ನಮ್ಮ ಬದುಕಿನ ಅಡಿಪಾಯವೇ ಕುಸಿಯುತ್ತದೆ. ಅದು ಸಾವು. ನಮಗದು ಬೇಕಿಲ್ಲ. ಹಾಗೆಯೇ ಸಮಸ್ಯೆಗಳು, ನಾವು ಪರಿಹಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆವೆಯೇ ಹೊರತು ಸಮಸ್ಯೆಗಳ ಬಗ್ಗೆ ಅಲ್ಲ.

ನನ್ನ ಪ್ರಕಾರ ಜಗತ್ತಿನಲ್ಲಿ ಸಮಸ್ಯೆಗಳೇ ಇಲ್ಲ; ಇರುವುದು ಪರಿಹಾರಗಳು ಮಾತ್ರ. ಆದರೆ ಈ ಪರಿಹಾರಗಳು ಎಷ್ಟು ಸೂಕ್ತ ಎನ್ನುವುದರ ಬಗ್ಗೆ ನಮಗೆ ಖಾತ್ರಿ ಇಲ್ಲ. ಒಂದೊಮ್ಮೆ ಈ ಪರಿಹಾರಗಳು ಕೆಲಸ ಮಾಡಲಾರವು ಎಂದು ನಾವು ಕಂಡುಕೊಂಡರೂ ಹಾಗೆ ಹೇಳುವ ಧೈರ್ಯ ನಮಗಿಲ್ಲ. ಆಗ ಮನುಷ್ಯ ಮನುಷ್ಯರ ನಡುವಿನ ಸೆಂಟಿಮೆಂಟ್ ಅಡ್ಡ ಬರುತ್ತದೆ. ನಮಗೆ ಪರಿಹಾರಗಳನ್ನು ಹೇಳಿದ, ನಾವು ನಂಬಿದ ಮನುಷ್ಯ ಜನರನ್ನ ಮತ್ತು ಸ್ವತಃ ತನ್ನನ್ನ ಮೋಸಗೊಳಿಸಲಾರ ಎನ್ನುವ ನಮ್ಮ ನಂಬಿಕೆ ನಮಗೆ ಮೋಸ ಮಾಡುತ್ತದೆ. ಇಷ್ಟು ವರ್ಷ ನಾವು ನಂಬಿಕೊಂಡುಬಂದುದು ಸುಳ್ಳು ಎನ್ನುವ ಆಘಾತವನ್ನು ಸಹಿಸುವ ಛಾತಿ ನಮಗಿಲ್ಲದಾಗ ನಾವು ಆ ನಂಬಿಕೆಗಳನ್ನು mystic ಮಾಡಿ ಆಚರಣೆಗಳಲ್ಲಿ ತೊಡಗುತ್ತೇವೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ, ನಮಗೆ ತಲೆತಲಾಂತರಗಳಿಂದ ನಮ್ಮ (ಇರದಿರುವ) ಸಮಸ್ಯೆಗಳಿಗೆ ಹೇಳಲಾಗಿರುವ ಈ ಪರಿಹಾರಗಳೇ ನಮ್ಮ ಮುಖ್ಯ ಸಮಸ್ಯೆಗಳು. ಪ್ರಶ್ನೆಗಳು ಹುಟ್ಟುವುದು ನಮಗೆ ಗೊತ್ತು ಎನ್ನಲಾದ, ಅಥವಾ ನಾವು ಊಹೆ ಮಾಡಿಕೊಂಡ ಅಥವಾ ನಾವು ನಂಬಿದವರು ಹೇಳಿದ ಉತ್ತರಗಳಿಂದಾಗಿ. ಹಾಗೆ ನೋಡಿದರೆ ನಮಗೆ ಪ್ರಶ್ನೆಯನ್ನು ಮುಂದುವರೆಸುವಲ್ಲಿ ಇರುವಷ್ಟು ಆಸ್ಥೆ, ಉತ್ತರಗಳನ್ನು ಕಂಡುಕೊಳ್ಳುವಲ್ಲಿ ಇಲ್ಲ. ಒಂದು ಆತ್ಯಂತಿಕ ಎನ್ನುವ ಉತ್ತರ ಸಿಕ್ಕುಬಿಟ್ಟರೆ, ಆ ಉತ್ತರದ ಜೊತೆ ಪ್ರಶ್ನೆಯೂ ನಾಶವಾಗುತ್ತವೆ. ಪ್ರಶ್ನೆ ನಾಶವಾಯಿತೆಂದರೆ, ನಮ್ಮ ಅಸ್ತಿತ್ವದ ಉದ್ದೇಶವೇ ನಾಶ ಎಂದು ಭಾಸವಾಗುತ್ತದೆ. ಆದ್ದರಿಂದಲೇ ನಾವು ಪ್ರಶ್ನೆ ಕೇಳುವದನ್ನ ನಿಲ್ಲಿಸುವುದಿಲ್ಲ.

ಆದರೂ, ಜನರೊಡನೆ ನಾಗರೀಕವಾಗಿ ಬದುಕಲು ಈ ಜಗತ್ತು ನಮ್ಮ ಮೇಲೆ ಹೇರಿರುವ ನಿಜಗಳನ್ನ ತೋರಿಕೆಗಾಗಿಯಾದರೂ ನಾನು ಸಹಿಸುತ್ತೇನೆ.

ಪ್ರಶ್ನೆ : ಹೀಗೆ ವಿಚಾರ ಮಾಡುವುದು ಮತ್ತೆ ನಮ್ಮನ್ನ ಆದಿವಾಸಿಗಳನ್ನಾಗಿ ಮಾಡುವುದಿಲ್ಲವೆ ?

ಯೂಜಿ : ಹಹಹ (ನಗು) ಆ ಗುಹೆಯ ಮನುಷ್ಯನಿಗೆ ಇಡೀ ಜಗತ್ತನ್ನು ನಾಶ ಮಾಡಬಲ್ಲ ವಿಧಾನಗಳು ಗೊತ್ತಿರಲಿಲ್ಲ ಆದರೆ ಇವತ್ತು ನಮಗೆ ಅದು ಸಾಧ್ಯವಾಗಿದೆ. ಪ್ರಾಣಿಗಳು ಇತರ ಪ್ರಾಣಿಗಳನ್ನು ನಂಬಿಕೆ, ಸಿದ್ಧಾಂತಗಳಿಗಾಗಿ ಕೊಲ್ಲುವುದಿಲ್ಲ, ನಾವು ಕೊಲ್ಲುತ್ತೇವೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.