ಹೀಗೆ ಮಾತಾಡಿ…. : ಋಗ್ವೇದದ ಸೂಚನೆ

ಘೃತಾತ್ ಸ್ವಧೀಯೋ ಮಧುನಶ್ಚ ವೋಚತ : “ತುಪ್ಪಕ್ಕಿಂತ ಮಧುರವಾಗಿ, ಜೇನಿಗಿಂತ ಸಿಹಿಯಾಗಿ ಮಾತಾಡು” ಅನ್ನುತ್ತದೆ ಋಗ್ವೇದ.

ಮಾತು ಹೇಗಿರಬೇಕು ಅಂದರೆ ಮೊಟ್ಟ ಮೊದಲನೆಯದಾಗಿ “ಯಾರನ್ನೂ ಘಾಸಿಗೊಳಿಸುವಂತೆ ಇರಬಾರದು” ಅಂದಿದ್ದೂ ಇದೇ ಋಗ್ವೇದವೇ.

ನಾವು ಬಹಳ ಬಾರಿ ನಮಗೆ ಅರಿವಿಲ್ಲದಂತೆ ತೀರ ಒರಟಾಗಿ ಮಾತಾಡಿಬಿಡುತ್ತೇವೆ. ನಮ್ಮ ಮನಸ್ಥಿತಿ ಹೇಗಿರುತ್ತದೆಯೋ ಹಾಗೆ ಮಾತಾಡುತ್ತೇವೆ. ಕೆಲವೊಮ್ಮೆ ಬೇಕೆಂದೇ ಒರಟಾಗಿ ಉತ್ತರಿಸುತ್ತೇವೆ. ಇದರ ಪರಿಣಾಮ, ನಮ್ಮ ಜೊತೆ ಸಂಭಾಷಿಸುವ ವ್ಯಕ್ತಿಯ ಮೇಲೆ ಆಗುತ್ತದೆ. ಅವರ ಮನಸ್ಸು ಕೂಡಾ ಕದಡುತ್ತದೆ. ಒಳಿತು ಹೇಗೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆಯೋ ಕೆಡುಕೂ ಹಾಗೇ ಹರಡುತ್ತದೆ. ಬೇಸರಗೊಂಡ ಆ ವ್ಯಕ್ತಿ ಮತ್ತೊಬ್ಬರೊಡನೆ ಅಷ್ಟೇ ಒರಟಾಗಿ ಮಾತಾಡುವ ಸಾಧ್ಯತೆ ಇರುತ್ತದೆ. ಕೊನೆಗೆ ಇದು ಚಕ್ರದಂತೆ ಸುತ್ತಿ ನಮ್ಮನ್ನೇ ತಲುಪಬಹುದು. ನಮ್ಮಿಂದಲೇ ಶುರುವಾದ ಈ ಕಹಿಮಾತಿನ ಸುತ್ತು ಮತ್ತೊಬ್ಬರ ಮೂಲಕ ನಮ್ಮನ್ನೇ ಬಂದು ಮುಟ್ಟಬಹುದು. ಇತರರ ಮೇಲಿನ ಕಾಳಜಿಯಿಂದಲ್ಲದೆ ಹೋದರೆ, ಕೊನೆಪಕ್ಷ ನಮ್ಮದೇ ಸ್ವಾರ್ಥಕ್ಕಾದರೂ ಮಾತಾಡುವಾಗ ನಿಗಾವಹಿಸುವುದು ಸೂಕ್ತ.

ಆದ್ದರಿಂದಲೇ ಋಗ್ವೇದ, “ಮಧುರವಾಗಿ, ಸಿಹಿಯಾಗಿ ಮಾತಾಡು” ಎಂದಿದೆ. ಇದನ್ನು ಅಕ್ಷರಶಃ ಪಾಲಿಸಲು ಈ ದಿನವೇ ಸುದಿನವಾಗಲಿ.

Leave a Reply