ಯು ಜಿ ಕೃಷ್ಣಮೂರ್ತಿ, ಯೂಜಿ ಎಂದೇ ವಿಖ್ಯಾತರು. ತಮ್ಮ ನೇರ ಮತ್ತು ಸ್ಪಷ್ಟ ಮಾತುಗಳಿಂದಾಗಿ ಆಧ್ಯಾತ್ಮ ಮತ್ತು ತತ್ವಚಿಂತನೆಯ ಒಲವುಳ್ಳವರ ನಡುವೆ ವಿಶೇಷ ಸ್ಥಾನ ಪಡೆದವರು. ಇಂದು ಯೂಜಿ ಜನ್ಮದಿನ. ಈ ನಿಮಿತ್ತ ಅವರ ಕೆಲವು ಚಿಂತನೆಯ ಹೊಳಹುಗಳು ನಿಮಗಾಗಿ… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
‘ಅರಿವು’ ಎಂಥ ಶುದ್ಧ ಸ್ಥಿತಿ ಎಂದರೆ, ಅರಿವನ್ನು ಸಾಣೆ ಹಿಡಿಯುವ
ಎಲ್ಲ ಪ್ರಯತ್ನಗಳು ಅದನ್ನ
ಕಲುಷಿತಗೊಳಿಸುತ್ತ ಹೋಗುತ್ತವೆ.
ಸೆಕ್ಸ್ ನ ಉತ್ತುಂಗ ಸ್ಥಿತಿ ಮಾತ್ರ ಕೇವಲ ನಿಮ್ಮ ನೇರ ಅನುಭವದ ಸ್ಥಿತಿ.
ಬಾಕಿ ಎಲ್ಲ ಅನುಭವಗಳು ಇನ್ನೊಬ್ಬರವು, ಮತ್ತೊಬ್ಬರವು..
‘ಮನಸ್ಸು’ ಎಂಬ ಗೊಂದಲಕರ ಸ್ಥಿತಿ
ಎಷ್ಟು ಘಾತಕ ಸಂಗತಿಗಳನ್ನ ಸೃಷ್ಟಿಸಿದೆಯೆಂದರೆ,
ಆ ಎಲ್ಲದರಲ್ಲಿ ಅತ್ಯಂತ ಘಾತಕವಾದದ್ದು ‘ದೇವರು’.
ನೀವು ನಿಮ್ಮ ಹಾಗಿರುವುದು
ತುಂಬ ಸುಲಭ.
ಅದಕ್ಕಾಗಿ ನೀವು ಏನೂ ಮಾಡಬೇಕಿಲ್ಲ.
‘ಸಮಾಧಾನ’ ಕ್ಕಾಗಿ
ನೀವು ಮಾಡುವ ಪ್ರಯತ್ನಗಳೆಲ್ಲ
ಈಗಾಗಲೇ ನಿಮ್ಮೊಳಗಿರುವ
ಸಮಾಧಾನ ವನ್ನ ನಾಶ ಮಾಡುತ್ತವೆ.
‘ಆನಂದ’ ದ ಬಗೆಗಿನ ನಿಮ್ಮ ಹುಡುಕಾಟ
ನಿಮ್ಮ ದುಃಖವನ್ನ
ಇನ್ನಷ್ಟು ದೀರ್ಘಗೊಳಿಸುತ್ತದೆ.
ನೀವು ‘ಹುಡುಕಾಟ’ ವನ್ನ ನಿಲ್ಲಿಸಲು
ಹಿಂಜರಿಯುತ್ತೀರಿ.
ಇಂಥ ಒಂದು ಪ್ರಯತ್ನ
ನಿಮ್ಮನ್ನ ಸಾವಿನ ಅಂಚಿಗೆ
ಕರೆದೊಯ್ಯುತ್ತದೆ ಎನ್ನುವ
ಭಯ ನಿಮಗೆ.
ಜ್ಞಾನ ಎಂದರೆ ಬೇರೇನೂ ಅಲ್ಲ
ಪ್ರತಿಯೊಂದನ್ನ ಹೆಸರಿನಿಂದ ಗುರುತಿಸುವುದು.
ಒಬ್ಬ ವ್ಯಕ್ತಿಯ ಜೊತೆ
ನೀವು ಎಷ್ಟು ಆತ್ಮೀಯತೆಯಿಂದ ಇದ್ದರೂ,
ಅವರ ಮಾತುಗಳನ್ನ ಎಷ್ಟು ಕಿವಿಗೊಟ್ಟು ಕೇಳಿದರೂ,
ನೀವು ಕೇಳಿಸಿಕೊಳ್ಳುವುದು ಅವರ ಮಾತುಗಳನ್ನಲ್ಲ
ಬದಲಾಗಿ
ಆ ಮಾತುಗಳ ನಿಮ್ಮ ಅನುವಾದವನ್ನ.
ನಿಮ್ಮ ದೇಹಕ್ಕೆ ಜೀವಿಸುವುದು ಮತ್ತು
ಇನ್ನೊಂದು ಜೀವವನ್ನು
ಸೃಷ್ಟಿಸುವುದರಲ್ಲಿ ಮಾತ್ರ ಆಸಕ್ತಿ.
ದೇಹ, ನೋವು ಮತ್ತು ಸುಖ ಎರಡನ್ನೂ
ಒಂದೇ ತೆರನಾಗಿ ಗ್ರಹಿಸುತ್ತದೆ.
ಆದರೆ ನಿಮ್ಮ ಮನಸ್ಸು
ನೋವು ಬೇಡ ಎನ್ನುತ್ತದೆ,
ಸುಖ ಹೆಚ್ಚಾಗಲಿ ಎಂದು ಬಯಸುತ್ತದೆ.
ನಿಮ್ಮ ದುಃಖದ ಕಾರಣ ಇದು.
ನಿಮ್ಮ ತಂದೆ ತಾಯಿ ಪ್ರೇಮಿಸಿದ ಕಾರಣವಾಗಿ
ನೀವು ಹುಟ್ಟಿದ್ದೀರಿ ಮತ್ತು ಜೀವಿಸುತ್ತಿದ್ದೀರಿ.
ನಿಮ್ಮ ಬದುಕಿಗೆ ಇದರ ಹೊರತಾಗಿ ಬೇರೆ
ಯಾವ ಅರ್ಥವನ್ನೂ ಹುಡುಕ ಬೇಡಿ.
ಒಳ್ಳೆಯದು – ಕೆಟ್ಟದ್ದು
ಎನ್ನುವ ದ್ವಂದ್ವದಿಂದ ನೀವು ಮುಕ್ತರಾದಾಗ
ನಿಮ್ಮಿಂದ ಯಾವ ಕೆಟ್ಟದ್ದೂ ಸಂಭವಿಸುವುದಿಲ್ಲ.
ಈ ದ್ವಂದ್ವದಲ್ಲಿ ಸಿಲುಕಿರುವ ತನಕ
ನಿಮ್ಮಿಂದ ಕೆಟ್ಟದ್ದು ಘಟಿಸುವ
ಅಪಾಯವೇ ಹೆಚ್ಚು.
ಎಲ್ಲ ಅನುಭವಗಳು
ಅವು ಎಂಥ ಅಸಾಧಾರಣವಾಗಿದ್ದರೂ
ಎಲ್ಲವೂ ಇಂದ್ರಿಯಗಳ ಪರಿಧಿಯಲ್ಲೇ
ಬರುವಂಥವು.