ಶ್ರದ್ಧೆ ಫಲ ಕೊಡತ್ತೆ, ಆದರೆ ಯಾರಿಗೆ? : ಓಶೋ ಹೇಳಿದ ಕಥೆ

ಒಂದೂರಲ್ಲಿ ಒಬ್ಳಿಗೆ ಚೂರೂ ಹುಷಾರಿರೋದಿಲ್ಲ. ಅವ್ಳು ಒಬ್ಬೊಬ್ಳೇ ಇರೋದ್ರಿಂದ ಭಾಳ ಕಷ್ಟ ಆಗ್ತಿರತ್ತೆ. ಎಲ್ಲಿಂದ್ಲೋ ಇಬ್ರು ಲಕ್ಷಣವಾದ ಹೆಂಗಸ್ರು ಅವಳ ಮನೆಗೆ ಬರ್‍ತಾರೆ. ಅಂಚಿನ ಸೀರೆ, ದುಂಡು ಕುಂಕುಮ, ಕೈಲಿ ಜಪ ಸರ ಎಲ್ಲಾ ಇರ್‍ತವೆ. ಅವಳನ್ನ ಮಧುರವಾಗಿ ಮಾತಾಡ್ಸಿ, “ದೇವ್ರಿದಾನೆ, ಎಲ್ಲ ಸರಿ ಹೋಗತ್ತೆ. ಶ್ರದ್ಧೆ ಇಟ್ಕೋಮ್ಮಾ… ಅದು ಯಾವತ್ತೂ ನಿನ್ನ ಕೈಬಿಡೋದಿಲ್ಲ. ಫಲ ಕೊಟ್ಟೇ ಕೊಡತ್ತೆ” ಅಂತಾರೆ.
ಒಬ್ಬೊಬ್ರೇ ಇರ್‍ತಾರಲ್ಲ, ಅವ್ರು ಯಾವಾಗ್ಲೂ ಯಾರನ್ನಾದ್ರೂ ನಂಬೋಕೆ ಕಾಯ್ಕೊಂಡಿರ್‍ತಾರೆ. ಸರಿ… ಈ ಹೆಣ್ಣೂ ಹೂ ಅಂತ ಅವರು ಹೇಳ್ದಂಗೆ ಮಾಡ್ತಾಳೆ. ಆ ಇಬ್ರು ಹೆಂಗಸ್ರು ಆಕೇನ ಚೆನಾಗಿ ನೋಡ್ಕೊಳ್ತಾರೆ.
ಮುಸ್ಸಂಜೆ ಕಳೀತಿದ್ದ ಹಾಗೆ “ನಾವು ಪೂಜೆ ಮಾಡ್ಬೇಕು, ನೀನು ಮುಸುಕ ಹಾಕ್ಕೊಂಡು ಮಲ್ಕೋ. ತೆಗೀಬೇಡ. ಶ್ರದ್ಧೆ ಇರಲಿ” ಅಂತಾರೆ. ಈ ಹೆಣ್ಣು ಮಲಗ್ತಾಳೆ.
ಧೂಪ ದೀಪದ ಆರತಿ, ಆ ಹೆಂಗಸರ ಹಾಡುಗಳು…. ಗಮ್ಮತ್ತು ನಿದ್ದೆ ಆವರಿಸುತ್ತೆ.
ನಡು ರಾತ್ರೀಲಿ ಚಳಿ ಆಗಿ ಅವಳು ಕಣ್ಣು ಬಿಟ್ರೆ, ಸುತ್ತ ಕತ್ತಲು. ಬಾಗಿಲು ಹಾರುಹೊಡೆದಿರತ್ತೆ. ದೀಪ ಹಚ್ಚಿ ನೋಡಿದ್ರೆ….. ಮನೆ ಗುಡಿಸಿ ಗುಂಡಾಂತರ!
*
ನಿಜ. ಶ್ರದ್ಧೆ ಯಾವತ್ತೂ ಕೈಬಿಡೋದಿಲ್ಲ. ಫಲ ಕೊಟ್ಟೇಕೊಡತ್ತೆ. ಆದ್ರೆ ಯಾರಿಗೆ ಅನ್ನೋದು ಇಲ್ಲಿರೋ ಪ್ರಶ್ನೆ!

~ ಓಶೋ ಹೇಳಿದ ಕಥೆ | Earthen Lamps || ಸಂಗ್ರಹ ಮತ್ತು ಅನುವಾದ: ಅಲಾವಿಕಾ

Leave a Reply