“ಧ್ಯಾನ ಒಂದು ತಂತ್ರ ಮಾತ್ರ” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.5

ಬುದ್ಧಿ-ಮನಸ್ಸು ಕೆಟ್ಟದ್ದು ಅಂತಲ್ಲ, ತನ್ನ ಪಾಡಿಗೆ ತಾನಿದ್ದಾಗ ಎಲ್ಲವೂ ಒಳ್ಳೆಯದ್ದೇ.ಆದರೆ ಬುದ್ಧಿ- ಮನಸ್ಸಿನದು ಎಲ್ಲದರಲ್ಲೂ ಮೂಗು ತೂರಿಸುವ ಸ್ವಭಾವ, ನೀವು ಇವುಗಳ ಮಾಸ್ಟರ್ ಆದಾಗ ಬಾಕಿ ಎಲ್ಲ ತಮ್ಮ ತಮ್ಮ ಜಾಗಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತವೆ.| ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

Strive to no goals |ಭಾಗ 6.5

ತಾವೋ ಗೆ (ಸಹಜ ಪ್ರಕೃತಿಗೆ) ಶರಣಾದಾಗ
ನಿಮ್ಮ ನಡೆ ಚಂದ, ಸ್ವಚ್ಛಂದ ಮತ್ತು ನಿರಾತಂಕ .
ವಿಚಾರಗಳ ಸುಳಿಯಲ್ಲಿ ಬಂಧಿಯಾದಾಗ
ಸತ್ಯ ಕಣ್ಮರೆ, ಎಲ್ಲ ಮಸುಕು, ಅಸ್ಪಷ್ಟ
ಮತ್ತು
ಎಲ್ಲವನ್ನೂ ತೂಗಿ ನೋಡುವ ಹುಕಿ ಕಾರಣವಾಗಿ
ಹೆಚ್ಚಿದ ಕಿರಿಕಿರಿ, ಕಳವಳ ಮತ್ತು ಬಳಲಿಕೆ.

ತಾರತಮ್ಯ ಮತ್ತು ಭೇದ
ಯಾವ ಲಾಭವನ್ನ ತಾನೇ ಸಾಧ್ಯ ಮಾಡಬಲ್ಲವು ?

~

ನಿಮ್ಮನ್ನು ವಿಚಾರಗಳು ತುಂಬಿಕೊಂಡಿರುವಾಗ,
ನಿಮ್ಮ ಬುದ್ಧಿಗೆ ಮಂಕು, ದೃಷ್ಟಿ ಮಸುಕು.
ಆದರೆ ಉಪಾಯವಿಲ್ಲ.
ಅವು ತಮ್ಮ ಪಾಡಿಗೆ ತಾವಿರಲಿ
ನೀವು ಅವುಗಳ ವ್ಯವಹಾರದಲ್ಲಿ ತಲೆ ಹಾಕಬೇಡಿ.
ವಿಚಾರಗಳು ನದಿಯಂತೆ
ಒಂದೇ ಸಮನೇ ಹರಿಯುತ್ತವೆ.
ನೀವು ದಂಡೆಯ ಮೇಲೆ ಕುಳಿತು
ವಿಶ್ರಾಂತಿಯಲ್ಲಿ ಒಂದಾಗಿ.

ಆಕಾಶದಲ್ಲಿ ಮೋಡಗಳಿವೆ,
ಭೂಮಿಯ ಮೇಲೆ ಗಿಡ, ನದಿ, ಸಮುದ್ರಗಳಿವೆ,
ಅಂದ ಮೇಲೆ ಮನಸ್ಸಿನಲ್ಲಿ ವಿಚಾರಗಳಿದ್ದರೆ
ಏನು ತೊಂದರೆ?
ವಿಚಾರಗಳ ಧಾರೆಯನ್ನ ಗುರುತಿಸಿ, ಒಪ್ಪಿಕೊಂಡಾಗ,
ತಕ್ಷಣ ನಿಮ್ಮಲ್ಲಿ ಬದಲಾವಣೆಗಳು
ಕಾಣಲು ಆರಂಭಿಸುವವು.
ವಿಚಾರಗಳ ನದಿ ಮುಂದುವರಿಯಲು
ಅವು ಬಳಸುವುದು ನಿಮ್ಮ ಶಕ್ತಿಯನ್ನ.
ನೀವು ಈ ಪ್ರವಾಹದ ಬಗ್ಗೆ ಅನಾಸಕ್ತರಾಗಿ
ಹಿಂದೆ ಸರಿದಾಗ,
ನಿಮ್ಮ ಶಕ್ತಿ ಸಹ ಹಿಂದೆ ಸರಿಯುವುದು.
ಆಗ ಈ ಧಾರೆ ನಿಧಾನವಾಗಿ ಬತ್ತುತ್ತ ಹೋಗಿ,
ಮುಂದೆ ಯಾವ ಸ್ಥಿತಿ ನಿರ್ಮಾಣವಾಗುವುದೆಂದರೆ
ನೀವು ಬಯಸಿದಾಗ ಮಾತ್ರ
ಆಲೋಚನೆಗಳು ನಿಮ್ಮಲ್ಲಿ ಮೂಡುವವು.
ಅನವಶ್ಯಕ ವಿಚಾರಗಳು
ಯಾವುದು ನಿಮ್ಮ ಬುದ್ಧಿಯನ್ನು ಮಂಕಾಗಿಸಿತ್ತೋ
ಯಾವುದು ನಿಮ್ಮ ದೃಷ್ಟಿಯನ್ನ ಮಸುಕಾಗಿಸಿತ್ತು
ಆ ವಿಚಾರಗಳ ಭಾರ ಕಡಿಮೆಯಾಗುವುದು.

ನೀವು ನಡೆಯ ಬಯಸಿದಾಗ
ಕಾಲುಗಳನ್ನ ಬಳಸುತ್ತೀರಿ,
ಆಲೋಚನೆ ಮಾಡ ಬಯಸಿದಾಗ ವಿಚಾರಗಳನ್ನ,
ಸಂಭಾಷಣೆಗಾಗಿ ಮನಸ್ಸು- ಬುದ್ಧಿಯನ್ನ
ಉಪಯೋಗ ಮಾಡುತ್ತೀರಿ.
ಆದರೆ ನೀವು ಆರಾಮಾಗಿ
ಮರದ ಕೆಳಗೆ ಕುಳಿತು ವಿಶ್ರಾಂತಿ ಬಯಸುವಾಗ,
ಯಾಕೆ ಸುಮ್ಮನೇ ಕಾಲುಗಳನ್ನ ಬಳಸುತ್ತೀರಿ?
ನೋಡಿದವರು ಏನಂದಾರು?
ಆದರೂ ನಿಮ್ಮ ಮನಸ್ಸಿನಲ್ಲಿ ಕಾಲುಗಳ ಚಲನೆ
ಮುಂದುವರೆಯುತ್ತಲೇ ಇದೆ.

ಬುದ್ಧಿ-ಮನಸ್ಸು ಕ್ರಿಯೆಯ ಮೂಲ.
ಅವಶ್ಯಕತೆಯಿರುವಾಗ ಮಾತ್ರ ಬಳಕೆ
ಉಪಯೋಗಕ್ಕೆ ಬರುವಂಥದ್ದು.
ನಾನು ಈಗ ನಿಮ್ಮೊಡನೆ ಮಾತನಾಡುತ್ತಿದ್ದೆನೆಂದರೆ,
ನನ್ನ ಬುದ್ಧಿ-ಮನಸ್ಸು ಕಾರ್ಯ ನಿರ್ವಹಿಸುತ್ತಿವೆ.
ಹೀಗಲ್ಲದೆ ಬೇರೆ ಹೇಗೆ ಸಾಧ್ಯ?
ಸೊಸಾನ್ ಎಂಥ ‘ನೋ ಮೈಂಡ್’ ಮನುಷ್ಯನಾದರೂ
ಅವ ನಿಮಗೆ ಏನೋ ಹೇಳುತ್ತಿದ್ದಾನೆಂದರೆ,
ಅವನ ಬುದ್ಧಿ-ಮನಸ್ಸು ಕೆಲಸ ಮಾಡುತ್ತಿವೆ
ಎಂದೇ ಅರ್ಥ.
ಆದರೆ ಈ ಹೇಳುವ ಕೆಲಸ ಮುಗಿದ ತಕ್ಷಣದಲ್ಲಿಯೇ
ಬುದ್ಧಿ-ಮನಸ್ಸು ಗಳು ಮಾಯವಾಗುತ್ತವೆ,
ಹೇಗೆ ಚಲನೆ ಮುಗಿದ ಕೂಡಲೇ
ಕಾಲುಗಳು ಮಾಯವಾಗುತ್ತವೆಯೋ ಹಾಗೆ.
ಯಾವಾಗ ಚಲನೆ ಇಲ್ಲವೋ ಆಗ
ಕಾಲುಗಳೂ ಇಲ್ಲ.

ನೀವು ಹಸಿವಾದಾಗ ತಿನ್ನುತ್ತೀರಿ,
ಸಂವಹನ ಮಾಡ ಬಯಸುವಾಗ
ವಿಚಾರಗಳನ್ನ ಬಳಸುತ್ತೀರಿ.
ಹಸಿವೆ ಇಲ್ಲದಾಗ ತಿನ್ನುವುದಕ್ಕಾಗುವುದಿಲ್ಲ,
ಆದರೆ ಕೆಲವರು ಬಬಲ್ ಗಂ ಜಗಿಯುತ್ತಾರೆ,
ಕೆಲವರು ಸಿಗರೇಟ್ ಸೇದುತ್ತಾರೆ,
ಆಹಾರಕ್ಕೆ ಪರ್ಯಾಯ ಎಂಬಂತೆ.
ಅವರಿಗೆ ಸತತವಾಗಿ ತಿನ್ನುವ ಬಯಕೆ ಆದರೆ
ದೇಹ ಇದನ್ನ ಸಹಿಸುವುದಿಲ್ಲ,
ಆದ್ದರಿಂದಲೇ ಅವರು ಬಬಲ್ ಗಂ, ಎಲೆಯಡಿಕೆ ಜಗಿಯುತ್ತಾರೆ
ಸ್ಮೋಕ್ ಮಾಡುತ್ತಾರೆ,
ಸತತವಾಗಿ ಮಾತನಾಡುತ್ತಾರೆ.
ಮನಸ್ಸಿನಲ್ಲಿ (mind) ಆಗುತ್ತಿರುವುದು ಕೂಡ
ಈ ವ್ಯವಹಾರವೇ.

ಬುದ್ಧಿ-ಮನಸ್ಸು ಕೆಟ್ಟದ್ದು ಅಂತಲ್ಲ,
ತನ್ನ ಪಾಡಿಗೆ ತಾನಿದ್ದಾಗ ಎಲ್ಲವೂ ಒಳ್ಳೆಯದ್ದೇ.
ಆದರೆ ಬುದ್ಧಿ- ಮನಸ್ಸಿನದು ಎಲ್ಲದರಲ್ಲೂ
ಮೂಗು ತೂರಿಸುವ ಸ್ವಭಾವ,
ನೀವು ಇವುಗಳ ಮಾಸ್ಟರ್ ಆದಾಗ
ಬಾಕಿ ಎಲ್ಲ ತಮ್ಮ ತಮ್ಮ ಜಾಗಗಳಲ್ಲಿ
ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತವೆ.

ಮೈಂಡ್ ಎಲ್ಲದರ ಮಾಲಿಕ ಆದಾಗ
ಸತತವಾಗಿ ತನ್ನ ಉದ್ದೇಶಗಳನ್ನು
ನಮ್ಮ ಮೇಲೆ ಹೇರುತ್ತ ಹೋಗುತ್ತದೆ,
ಹೇಗೆ ನಾಬ್ ಮುರಿದ ರೇಡಿಯೋ
ಸತತವಾಗಿ ಸದ್ದು ಮಾಡುತ್ತಲೆ ಹೋಗುತ್ತದೋ ಹಾಗೆ.

ನೀವು ನಿದ್ದೆ ಮಾಡುತ್ತಿರುವಾಗ, ಉಣ್ಣುತ್ತಿರುವಾಗ,
ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ,
ಪ್ರೇಮಿಸುತ್ತಿರುವಾಗ,
ಕಂಟ್ರೋಲ್ ನಾಬ್ ಮುರಿದ ರೇಡಿಯೋ ಇದ್ಯಾವುದೂ
ತನಗೆ ಸಂಬಂಧವೇ ಇಲ್ಲ ಎನ್ನುವಂತೆ
ಸತತವಾಗಿ ಸದ್ದು ಮಾಡುತ್ತಲೇ ಇರುತ್ತದೆ.
ಮತ್ತು ನೀವು ಈ ಕ್ಷೋಭೆಯನ್ನು
ಸಹಿಸುತ್ತಲೇ ಇರಬೇಕಾಗುತ್ತದೆ.
ಯಾವಾಗ ನಿಮಗೆ ಈ ನಾಬ್ ಮುರಿದ
ರೇಡಿಯೋವನ್ನ ಸುಮ್ಮನಿರಿಸುವುದು
ಸಾಧ್ಯವೇ ಇಲ್ಲವೆನ್ನುವುದು
ಪೂರ್ಣವಾಗಿ ಮನವರಿಕೆಯಾಗುತ್ತದೆಯೋ
ಆಗ ರೇಡಿಯೋದ ಸದ್ದನ್ನು
ನಿಮ್ಮ ಕಿವಿಗಳು ಕೇಳಿಸಿಕೊಳ್ಳುವುದಿಲ್ಲ.

ನಿಮ್ಮ ಮೈಂಡ್ ನಲ್ಲಿ ಆಗುತ್ತಿರುವ
ಸಮಸ್ಯೆಯೂ ಈ ತರಹದ್ದೇ.
ಮೈಂಡ್ ನ ಈ ಸತತ ಮೂಗು ತೂರಿಸುವ ಕೆಲಸವನ್ನು
ಬಂದ್ ಮಾಡುವ ನಾಬ್ ಎಲ್ಲಿದೆ
ಎನ್ನುವುದು ನಿಮಗೆ ಗೊತ್ತಿಲ್ಲದೆ ಇರುವುದು.
ಆದ್ದರಿಂದಲೇ ನೀವು ಈ ಕ್ಷೋಭೆಯನ್ನು
ಸಹಿಸುತ್ತಲೇ ಹೋಗುತ್ತೀರಿ.

ಆದರೆ ನಿಜ ಸ್ಥಿತಿ ಇರುವುದು ಹೀಗಲ್ಲ.
ಹೀಗಿದ್ದರೆ ಬುದ್ಧ ಸಾಧ್ಯವಾಗುತ್ತಿರಲಿಲ್ಲ.

ಬುದ್ಧಿ-ಮನಸ್ಸನ್ನು ಸ್ವಿಚ್ ಆಫ್ ಮಾಡಬಲ್ಲ
ನಾಬ್ ಎಲ್ಲಿದೆ ಎನ್ನುವುದನ್ನ ಗುರುತಿಸಬಹುದು,
ಅಕಸ್ಮಾತ್ ಈ ನಾಬ್ ಮುರಿದಿದ್ದರೆ ಬದಲಾಯಿಸಬಹುದು.
ಧ್ಯಾನ ಸಾಧ್ಯ ಮಾಡುವುದೇ
ಈ ನಾಬ್ ನ ಗುರುತಿಸುವುದನ್ನ.

ಧ್ಯಾನ ದಿಂದ ಯಾವ ಜ್ಞಾನೋದಯವೂ
ಸಾಧ್ಯವಾಗುವುದಿಲ್ಲ.
ಧ್ಯಾನ, ಬುದ್ಧಿ-ಮನಸ್ಸನ್ನು ಹತೊಟಿಗೆ ತರುವ
ನಾಬ್ ನ್ನು ಗುರುತಿಸಬಲ್ಲದು ಮಾತ್ರ,
ಈ ನಾಬ್ ನ ಬಳಕೆಯನ್ನು
ನಿಮಗೆ ಪರಿಚಯ ಮಾಡಿಸಬಲ್ಲದು ಮಾತ್ರ.

ಧ್ಯಾನ ಒಂದು ತಂತ್ರ ಮಾತ್ರ
ಮತ್ತು ಯಾವುದೇ ಒಂದು ತಂತ್ರ
ಕೇವಲ ಕೆಲವು ಕೆಲಸಕ್ಕೆ ಮಾತ್ರ ಸಹಾಯ ಮಾಡಬಲ್ಲದೇ ಹೊರತು
ಸಂಪೂರ್ಣ ಅಸ್ತಿತ್ವಕ್ಕಲ್ಲ.
ಯಾವ ಧ್ಯಾನವೂ, ಅಸ್ತಿತ್ವದ ಹಾದಿಯತ್ತ
ನಿಮ್ಮನ್ನ ನಡೆಸುವುದಿಲ್ಲ,
ಕೇವಲ ಕ್ರಿಯೆಗಳನ್ನ ಸರಾಗಗೊಳಿಸುತ್ತದೆ.
ಶೂ ಕಾಲಿಗೆ ಸರಿಯಾಗಿ ಫಿಟ್ ಆದಾಗ ಜ್ಞಾನೋದಯ ಆಗುವುದು.

ಜುವಾಂಗ್ ತ್ಸು ಹೇಳುವ ಹಾಗೆ;

ಯಾವಾಗ ಶೂ ಪಾದಕ್ಕೆ ಸರಿಯಾಗಿ ಫಿಟ್ ಆಗುವುದೋ
ಆಗ ಪಾದಗಳು ನೆನಪಲ್ಲಿ ಉಳಿಯುವುದಿಲ್ಲ.
ಯಾವಾಗ ಎಲ್ಲ ಕ್ರಿಯೆಗಳೂ ಪರಿಪೂರ್ಣವೋ
ಆಗ ದೇಹ ನೆನಪಲ್ಲಿ ಉಳಿಯುವುದಿಲ್ಲ,
ಕಣ್ಣಿಗೆ ಕಾಣುವ ಜಗತ್ತು ಮಾಯವಾಗುವುದು,
ಎಲ್ಲವೂ ತಾವು ಇದ್ದ ಹಾಗೆ ಸ್ವಂತ ಬೆಳಕಿನಲ್ಲಿ
ಬೆಳಗಲು ತೊಡಗುವವು,
ಆಗ ಜ್ಞಾನೋದಯ ನಿಮ್ಮನ್ನು ಅಪ್ಪಿಕೊಳ್ಳುವುದು.

(ಮುಂದುವರೆಯುವುದು…..)

ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2020/07/05/ming-11/

Leave a Reply